ಇಲ್ಲಿ ಜಾತ್ರೆ ನಡೆಯುತ್ತಿಲ್ಲ, ಸೆಲೆಬ್ರಿಟಿ ಬರುತ್ತಿಲ್ಲ: ಆದ್ರೆ ಓಂ-112 ಹೋರಿ ಅಂತಿಮ ದರ್ಶನಕ್ಕೆ ಹರಿದುಬಂದ ಜನಸಾಗರ

Published : Jan 16, 2026, 04:06 PM IST

ಹಾವೇರಿ ಜಿಲ್ಲೆಯ ಕರ್ಜಗಿ ಗ್ರಾಮದ ಪ್ರಸಿದ್ಧ 'ಓಂ-112' ಹೋರಿ ಅನಾರೋಗ್ಯದಿಂದ ನಿಧನವಾಗಿದೆ. ಹೋರಿ ಬೆದರಿಸುವ ಸ್ಪರ್ಧೆಗಳ ಅಪ್ರತಿಮ ವೀರನಾಗಿದ್ದ ಈ ಹೋರಿಯ ಅಂತಿಮ ದರ್ಶನಕ್ಕಾಗಿ ಸಾವಿರಾರು ಅಭಿಮಾನಿಗಳು ಸೇರಿ, ಹೂವಿನಿಂದ ಅಲಂಕರಿಸಿದ ವಾಹನದಲ್ಲಿ ಭವ್ಯ ಮೆರವಣಿಗೆ ನಡೆಸಿದರು.

PREV
16
ಹೋರಿಯ ಅಂತಿಮ ದರ್ಶನ

ಹಾವೇರಿ (ಜ.16): ಸಾಮಾನ್ಯವಾಗಿ ಸಿನಿಮಾ ತಾರೆಗಳು ಅಥವಾ ಜನನಾಯಕರು ನಿಧನರಾದಾಗ ಸಾವಿರಾರು ಜನ ಸೇರುವುದು ಸಹಜ. ಆದರೆ, ಹಾವೇರಿ ಜಿಲ್ಲೆಯ ಕರ್ಜಗಿ ಗ್ರಾಮದಲ್ಲಿ ಕಂಡುಬಂದ ದೃಶ್ಯ ಮಾತ್ರ ಇಡೀ ರಾಜ್ಯದ ಗಮನ ಸೆಳೆದಿದೆ. ಇಲ್ಲಿ ಜನ ಸೇರಿದ್ದು ಯಾವುದೇ ಸ್ಟಾರ್ ನಟನಿಗಲ್ಲ, ಬದಲಾಗಿ ನಾಡಿನ ಹೆಮ್ಮೆಯ ಕಲಿ, ಸಾವಿರಾರು ಅಭಿಮಾನಿಗಳ ಪ್ರೀತಿಯ 'ಓಂ-112' (Om-112) ಎಂಬ ಹೋರಿಯ ಅಂತಿಮ ದರ್ಶನಕ್ಕಾಗಿ!

26
ಹೋರಿ ಬೆದರಿಸುವ ಸ್ಪರ್ಧೆಯ ಅಪ್ರತಿಮ ವೀರ

ಕರ್ಜಗಿ ಗ್ರಾಮದ ಜಗದೀಶ್ ಮಾಣೆಗರ ಅವರಿಗೆ ಸೇರಿದ ಈ ಹೋರಿ, ರಾಜ್ಯಮಟ್ಟದ ಹೋರಿ ಬೆದರಿಸುವ ಸ್ಪರ್ಧೆಗಳಲ್ಲಿ ತನ್ನದೇ ಆದ ಛಾಪು ಮೂಡಿಸಿತ್ತು. ಅಖಾಡಕ್ಕೆ ಇಳಿದರೆ ಸಾಕು, ಸಿಡಿಲ ಮರಿಯಂತೆ ನುಗ್ಗಿ ಎದುರಾಳಿಗಳನ್ನು ಬೆಚ್ಚಿಬೀಳಿಸುತ್ತಿದ್ದ ಈ ಹೋರಿಯನ್ನು ಅಭಿಮಾನಿಗಳು ಪ್ರೀತಿಯಿಂದ 'ಪೈಲ್ವಾನ್' ಎಂದೇ ಕರೆಯುತ್ತಿದ್ದರು. ಹಲವು ವರ್ಷಗಳಿಂದ ನಡೆದ ನೂರಾರು ಸ್ಪರ್ಧೆಗಳಲ್ಲಿ ಚಿನ್ನದ ಸರ, ಬೈಕ್ ಸೇರಿದಂತೆ ಹತ್ತಾರು ದೊಡ್ಡ ಬಹುಮಾನಗಳನ್ನು ಗೆದ್ದು ಮಾಲೀಕನಿಗೆ ಕೀರ್ತಿ ತಂದಿತ್ತು.

36
ಸಾವಿರಾರು ಜನರ ಸಮ್ಮುಖದಲ್ಲಿ ಅಂತಿಮ ಯಾತ್ರೆ

ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ 'ಓಂ-112' ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸುತ್ತಮುತ್ತಲ ಹತ್ತಾರು ಹಳ್ಳಿಗಳ ಜನರು ಕರ್ಜಗಿ ಗ್ರಾಮಕ್ಕೆ ಧಾವಿಸಿ ಬಂದರು. 

46
ಹೋರಿಯ ಮೆರವಣಿಗೆ

ಹೋರಿಯ ಅಂತಿಮ ಯಾತ್ರೆಯನ್ನು ಎಷ್ಟು ಭವ್ಯವಾಗಿ ಮಾಡಲಾಯಿತೆಂದರೆ, ಡ್ರೋಣ್ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಗಳು ಇತಿಹಾಸಕ್ಕೆ ಸಾಕ್ಷಿಯಾಗುವಂತಿದ್ದವು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಹೂವಿನಿಂದ ಅಲಂಕರಿಸಿದ ವಾಹನದಲ್ಲಿ ಹೋರಿಯ ಮೆರವಣಿಗೆ ನಡೆಸಲಾಯಿತು.

56
ಜಮೀನಿನಲ್ಲೇ ಅಂತ್ಯಕ್ರಿಯೆ

ಮೆರವಣಿಗೆಯ ಉದ್ದಕ್ಕೂ ಅಭಿಮಾನಿಗಳು ಕಣ್ಣೀರು ಹಾಕುತ್ತಾ ತಮ್ಮ ನೆಚ್ಚಿನ 'ಪೈಲ್ವಾನ್'ಗೆ ವಿದಾಯ ಹೇಳಿದರು. ಮಾಲೀಕ ಜಗದೀಶ್ ಮಾಣೆಗರ ಅವರು ತಮ್ಮ ಸ್ವಂತ ಮಗನನ್ನು ಕಳೆದುಕೊಂಡಂತೆ ದುಃಖಿತರಾಗಿದ್ದರು.

66
ಪ್ರಾಣಿ ಪ್ರೇಮ

ಅಂತಿಮವಾಗಿ ಮಾಲೀಕನ ಜಮೀನಿನಲ್ಲಿಯೇ ಸಕಲ ವಿಧಿವಿಧಾನಗಳೊಂದಿಗೆ ಹೋರಿಯ ಅಂತ್ಯಕ್ರಿಯೆ ನೆರವೇರಿಸಲಾಯಿತು. ಮೂಕಪ್ರಾಣಿಯೊಂದರ ಮೇಲೆ ಮನುಷ್ಯರಿಟ್ಟಿರುವ ಈ ಅಪಾರ ಪ್ರೀತಿ ಮತ್ತು ಅಭಿಮಾನ, ಮನುಷ್ಯತ್ವ ಮತ್ತು ಪ್ರಾಣಿ ಪ್ರೇಮಕ್ಕೆ ಹಿಡಿದ ಕೈಗನ್ನಡಿಯಾಗಿದೆ.

Read more Photos on
click me!

Recommended Stories