
ಕಲ್ಯಾಣಪ್ಪನ ಅಮರ ಕ್ರಾಂತಿ, ಡಾ. ಕುರುಂಜಿ ವೆಂಕಟ್ರಮಣ ಗೌಡರ ಶಿಕ್ಷಣ ಕ್ರಾಂತಿ, ಕೊಳಂಬೆಯವರ ಸಾಹಿತ್ಯ ಕ್ರಾಂತಿ, ಮೊಳಹಳ್ಳಿ ಶಿವರಾಯರ ಸಹಕಾರ ಕ್ರಾಂತಿ, ದೇರಾಜೆಯವರ ಯಕ್ಷಗಾನ ಕ್ರಾಂತಿ.... ಇಂಥ ಹೆಮ್ಮೆಯ ನೆಲ ಸುಳ್ಯ ತಾಲೂಕು. ಸಾಮಾಜಿಕ, ಶೈಕ್ಷಣಿಕ, ಕ್ರೀಡೆ, ಸಹಕಾರ, ಧಾರ್ಮಿಕ ಮತ್ತು ಸಾಂಸ್ಕೃತಿಕ ಲೋಕಕ್ಕೆ ಅಮೋಘ ಕೊಡುಗೆಯನ್ನು ಕೊಟ್ಟ ನಾಡಿದು. ಬಂಟ ಮಲೆ, ಪೂಮಲೆಗಳ ಸಹಿತ ಮಲೆ ಮಲೆಗಳ ಬೆಟ್ಟದ ಸತ್ವ ಬಯಲಿಗೆ ಬಂದ ಊರಿದು. ಬೆರಗು ಬರೆದು ಎತ್ತರಕ್ಕೆ ಹೋದ ಪ್ರತಿಭೆಗಳ ಪಾದದ ಕಸುವು ಇಲ್ಲಿದೆ.
ಅದು 1957ರ ದ್ವಿತೀಯ ಮಹಾ ಚುನಾವಣೆಯ ಸಂದರ್ಭ. ಕರ್ನಾಟಕದಲ್ಲಿ ಇದು ಶಾಸನ ಸಭೆಗೆ ಪ್ರಥಮ ಚುನಾವಣೆಯಾಗಿತ್ತು. ಆಗ ಪುತ್ತೂರು ದ್ವಿ ಸದಸ್ಯ ಕ್ಷೇತ್ರ. ಒಂದು ಜನರಲ್ ಆಗಿದ್ದರೆ, ಮತ್ತೊಂದು ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದ ಸಂಗಡ. ಕೂಜುಗೋಡು ವೆಂಕಟ್ರಮಣ ಗೌಡರು ಜನರಲ್ ಸ್ಥಾನದಿಂದಲೂ ಸುಬ್ಬಯ್ಯ ನಾಯ್ಕರು ಮೀಸಲು ಸ್ಥಾನದಿಂದಲೂ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆದ್ದು ಬಂದು ಕರ್ನಾಟಕ ರಾಜ್ಯ ಶಾಸಕರಾಗಿ ಇಲ್ಲಿಯ ಧ್ವನಿಯಾಗಿ ಶಾಸನ ಸಭೆ ಪ್ರವೇಶಿಸಿದರು.
1952ರಿಂದ ಪ್ರಥಮ ಪಂಚವಾರ್ಷಿಕ ಯೋಜನೆಯ ಮೂಲಕ ಸುಳ್ಯವು ಪರಿಶೀಲನಾರ್ಥವಾಗಿ ಬ್ಲಾಕ್ ಮಟ್ಟದ ಅಭಿವೃದ್ಧಿ ಕಾರ್ಯಗಳಿಗೊಳಪಟ್ಟಿತು. ಸರಿಸುಮಾರಾಗಿ ಗ್ರಾಮಾಂತರ ಪ್ರದೇಶಗಳ ಅಭಿವೃದ್ಧಿಗೂ ಚಾಲನೆ ದೊರೆಯಲು ಆರಂಭವಾಯಿತು. ರಸ್ತೆಗಳಾಯಿತು, ಶಾಲೆಗಳಾಯಿತು. ಆಸ್ಪತ್ರೆಗಳು, ಸಣ್ಣ ಸಣ್ಣ ಸೇತುವೆಗಳು ನಿರ್ಮಿಸಲ್ಪಟ್ಟವು. ಮಲೆನಾಡಾಗಿದ್ದ, ಮಳೆ ನಾಡೂ ಆಗಿದ್ದ ಸುಳ್ಯ ಅಂದೆಲ್ಲಾ ಮಲೇರಿಯಾ ರೋಗದಿಂದ ಜರ್ಝರಿತಗೊಂಡಿದ್ದರೂ ನವಚೇತನ ಪಡೆಯಲು ಕೆ.ವಿ.ಗೌಡರ ಶ್ರದ್ಧಾಯುಕ್ತವಾದ ಸಾಧನೆ ಸಫಲವಾಯಿತೆಂಬುದು ಈಗ ಇತಿಹಾಸ.
ಪುತ್ತೂರು ದ್ವಿಸದಸ್ಯ ಕ್ಷೇತ್ರವಾಗಿದ್ದಾಗ ಸುಳ್ಯಕ್ಕೆ ಪ್ರಾತಿನಿಧ್ಯ ಮತ್ತು ಅವಕಾಶಗಳು ಬಹಳ ಕಡಿಮೆಯಿತ್ತು. ಕಾರಣ ಪುತ್ತೂರಿನ ಹೆಸರಿನಿಂದ ಇಬ್ಬರು ಶಾಸಕರು! ಆದರೆ ಸುಳ್ಯಕ್ಕೆ ಪ್ರತ್ಯೇಕ ಮೀಸಲು ಕ್ಷೇತ್ರವಾದೊಡನೆ ಇಲ್ಲಿಗೆ ಸ್ವಂತ ಅಸ್ತಿತ್ವ ಬಂತೆಂಬುದೂ ಸತ್ಯ. 1962ರಲ್ಲಿ ತೃತೀಯ ಮಹಾ ಚುನಾವಣೆ ಸಂದರ್ಭ ಸುಳ್ಯವು ಏಕಸದಸ್ಯ ಕ್ಷೇತ್ರವಾಗಿ ಪರಿವರ್ತಿತಗೊಂಡಿತು. ಸುಳ್ಯ ಸೇರಿದಂತೆ ರಾಜ್ಯದಲ್ಲಿ 31 ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ ಹಾಗೂ 2 ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರವಾಗಿದ್ದು, ಅದು ಈಗಲೂ ಊರ್ಜಿತದಲ್ಲಿದೆ.
ಅದು 1950 ರ ಕಾಲಘಟ್ಟ. ಸುಳ್ಯವು ನಾಲ್ಕೈದು ಹೆಂಚಿನ ಮನೆಗಳಿದ್ದ ಊರಷ್ಟೇ. ಈಗಿನ ಗಾಂಧಿನಗರ ಕೆಲಸಿಕಟ್ಟೆಯಾಗಿತ್ತು. ಶ್ರೀರಾಂಪೇಟೆ ಅಂದರೆ ಕೆಳಗಿನ ನಾವೂರುಬೈಲು, ಸಬ್ ರಿಜಿಸ್ಟ್ರಿ ಕಛೇರಿ, ಕಾಸರಗೋಡು ವೃತ್ತಕ್ಕೆ ಸೇರಿದ ಸುಳ್ಯ ಪೊಲೀಸ್ ಸ್ಟೇಷನ್, ಸುಳ್ಯ ರೂರಲ್ ಆಸ್ಪತ್ರೆ - ಇವುಗಳು ಹೆಂಚಿನ ಛಾವಣಿಯದ್ದಾಗಿತ್ತು. ಸುಬ್ರಾಯ ಪ್ರಭುಗಳ ಮನೆ, ಕೋಡೋತ್‌ನವರ ಈಗ ಕೃಷ್ಣ ಸ್ಟೋರ್ ಇರುವ ಕಟ್ಟಡ, ತೋಟ ರಾಮಣ್ಣ ಗೌಡರ ಮನೆ ಮಾತ್ರ ಹೆಂಚಿನ ಮನೆಗಳಾಗಿತ್ತು. ಮಿಕ್ಕವುಗಳೆಲ್ಲ ಅಲ್ಲಲ್ಲಿ ಮುಳಿಹುಲ್ಲಿನ ಗುಡಿಸಲುಗಳು.
ಮಹಾಚುನಾವಣೆಯ ನಂತರ ಸುಳ್ಯಕ್ಕೆ ಜೀವ ಬಂತು. ಎಲ್ಲಾ ವಿಭಾಗಗಳಲ್ಲೂ ಅಭಿವೃದ್ಧಿಯ ಹೆಜ್ಜೆ ಇಡಲಾಯಿತು. ಸುಳ್ಯ ಕ್ಷೇತ್ರಾಭಿವೃದ್ಧಿ ಅಧಿಕಾರಿ ಕಛೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ಸಂಗೋಪನಾ ಆಸ್ಪತ್ರೆ, ಲೋಕೋಪಯೋಗಿ ಕಛೇರಿ, ವಿದ್ಯುತ್ ಇಲಾಖಾ ಕಛೇರಿ, ಸಹಕಾರಿ ಸಂಘ, ಪ್ರೌಢಶಾಲೆಗಳು, ರಬ್ಬರ್ ಕೃಷಿಗೆ ಸಂಬಂಧಪಟ್ಟಂತೆ ಜಿಲ್ಲಾ ಮಟ್ಟದ ಮೂರು ಕಛೇರಿಗಳು.. ಹೀಗೆ ಸಾರ್ವಜನಿಕ ಕಚೇರಿಗಳು ಮತ್ತು ಕೆಲಸಗಳು ನಡೆಯುತ್ತಾ ಸುಳ್ಯ ಅಭಿವೃದ್ಧಿಯೆಡೆಗೆ ಮುಖ ಮಾಡಿದ್ದು ಹರ್ಷ ತಂದಿತು.
ಉತ್ತರ ಕರ್ನಾಟಕ ಭಾಗದ ಪ್ರತಿನಿಧಿಗಳು ಆಡಳಿತ ವ್ಯವಸ್ಥೆಯಲ್ಲಿ ಹೆಚ್ಚಾಗಿ ಭಾಗವಹಿಸುತ್ತಿರುವಾಗ ಈ ಪ್ರದೇಶದ ಜನರಲ್ಲೂ ರಾಜಕೀಯ ಪ್ರಜ್ಞೆ ಪ್ರವರ್ಧಮಾನಗೊಂಡಿತು. ಜಿಲ್ಲಾ ಮಟ್ಟದಲ್ಲಿ ಮತ್ತು ತಾಲೂಕು ಮಟ್ಟದಲ್ಲಿ ಈ ಭಾಗದ ಜನರನ್ನು ಗಮನಿಸುತ್ತಿಲ್ಲವೆಂಬುದನ್ನು ಮನಗಂಡು ಮಲೆನಾಡು, ಅದರಲ್ಲೂ ಮೀಸಲು ಕ್ಷೇತ್ರಕ್ಕೆ ಪ್ರತ್ಯೇಕ ತಾಲೂಕು ಕೊಡಬೇಕೆಂಬ ಬೇಡಿಕೆ ಶುರುವಾಯಿತು.
1952 ರಿಂದ ಸತತ ಮೂರನೇ ಬಾರಿಗೂ ಪುತ್ತೂರು ಕ್ಷೇತ್ರದಿಂದ ಆರಿಸಿ ಬಂದು ಶಾಸಕರಾಗಿದ್ದ ಕೂಜುಗೋಡು ವೆಂಕಟ್ರಮಣ ಗೌಡರು ಸುಳ್ಯ ತಾಲೂಕಿನ ಪ್ರಸ್ತಾವಕ್ಕೆ ಪೂರ್ಣ ಬೆಂಬಲ ನೀಡಿದರು. ಕುರುಂಜಿ ವೆಂಕಟ್ರಮಣ ಗೌಡ, ಅಡ್ಕಾರು ರಾಮಣ್ಣ ಗೌಡ, ಬೆಟ್ಟ ಈಶ್ವರ ಭಟ್, ಜಾಕೆ ಪರಮೇಶ್ವರ ಗೌಡ, ಪಡ್ಡಂಬೈಲು ವೆಂಕಟ್ರಮಣ ಗೌಡ, ರಾಮಕೃಷ್ಣ ರೈ, ಕೋಡ್ತುಗುಳಿ ಚಿನ್ನಪ್ಪ ಗೌಡ, ಕೇನ್ಯ ಸುಬ್ಬಯ್ಯ ಶೆಟ್ಟಿ, ನೆಟ್ಟಾರು ವೆಂಕಟ ಸುಬ್ಬರಾವ್, ಮುಂಡೋಡಿ ಬೆಳ್ಯಪ್ಪ ಗೌಡ, ಪನ್ನೆ ಕಿಟ್ಟಣ್ಣ ರೈ, ಐತ್ತಪ್ಪ ನಾಯ್ಕ್, ದೇಂಗೋಡಿ ಸುಬ್ಬಣ್ಣ ಗೌಡ.. ಸಹಿತ ಹಲವು ಮುತ್ಸದ್ಧಿಗಳು ಪೂರಕ ಪ್ರಯತ್ನಗಳಿಗೆ ಸಾಕ್ಷಿಗಳಾದರು.
ಪನಾಡ ನಾಯಕರೆಲ್ಲ ತಾಲೂಕು ರಚನೆಯ ಕಾರ್ಯದಲ್ಲಿ ಶ್ರಮ ವಹಿಸತೊಡಗಿದರು. 1961ರಿಂದ ಸತತ 1965ರವರೆಗೂ ವ್ಯಯಿಸಿದ ಶ್ರಮ ವ್ಯರ್ಥವಾಗಲಿಲ್ಲ. ಇಲ್ಲಿಗೂ ತಾಲೂಕು ಮಂಜೂರಾಯಿತು.1965ರ ಡಿಸೆಂಬರ್ ಎರಡನೇ ವಾರದ ಕೊನೆಗೆ ಹೊಸ ಸುಳ್ಯ ತಾಲೂಕು ರಚನೆಗೆ ಮುಖ್ಯಮಂತ್ರಿ ನಿಜಲಿಂಗಪ್ಪನವರ ಸಹಿ ಬಿತ್ತು. ಆದರೆ ಸಮಸ್ಯೆ ಅಲ್ಲಿಗೆ ಮುಗಿಯಲಿಲ್ಲ. ತಾಲೂಕು ಕೇಂದ್ರ ಬೆಳ್ಳಾರೆ, ಪಂಜ, ಸುಬ್ರಹ್ಮಣ್ಯ ಆಗಬೇಕು ಎಂದು ಬೇರೆ ಬೇರೆ ತರಹದ ಬೇಡಿಕೆಯೂ ಕೇಳಿಬರತೊಡಗಿತ್ತು. ಸುಳ್ಯವೇ ತಾಲೂಕು ಕೇಂದ್ರವೆಂದು ಖಚಿತಪಟ್ಟಾಗ ಬೆಳ್ಳಾರೆ, ಪಂಜಗಳ ಆಸಕ್ತರು ಇದನ್ನು ವಿರೋಧಿಸಿ ರಿಟ್ ಹೋಗಲು ಸಿದ್ಧರಾದರೂ, ಸಕಾಲಕ್ಕೆ ಅವರಿಗೆ ಆರ್ಡರ್ ನಂಬರ್, ತಾರೀಕು ಮೊದಲಾದವುಗಳು ಸಿಗದಿದ್ದುದರಿಂದ ಆ ಯತ್ನ ಫಲಿಸಲಿಲ್ಲ!
ಹಾಗೆ 1965ರ ಡಿಸೆಂಬರ್ 17ರಂದು ಸುಳ್ಯದ ಅಂದಿನ ಬಿಡಿಒ ಕಛೇರಿಯ ಎದುರು ಹಾಕಿದ ಚಪ್ಪರದಲ್ಲಿ ಮೈಸೂರು ರಾಜ್ಯದ ಮುಖ್ಯಮಂತ್ರಿಗಳಾದ ಎಸ್. ನಿಜಲಿಂಗಪ್ಪನವರು ಹೊಸ ತಾಲೂಕಿನ ಉದ್ಘಾಟನೆ ನೆರವೇರಿಸಿದರು. ಹಾಗೆ ಲೋಕಾರ್ಪಣೆಗೊಂಡ ಸುಳ್ಯ ತಾಲೂಕೆಂಬ ಭೌಗೋಳಿಕ ನಾಡಿಗೆ ಸಾರ್ಥಕ ಅರವತ್ತು ತುಂಬಿದೆ. ಒಂದಷ್ಟು ಗ್ರಾಮಗಳು ಸುಳ್ಯ ತಾಲೂಕಿನಿಂದ ಕಳಚಿಕೊಂಡು ನೂತನ ತಾಲೂಕಾದ ಕಡಬದ ತೆಕ್ಕೆಗೆ ಸೇರಿಕೊಂಡಿದೆ. ಆದರೆ ಸುಳ್ಯದ ಗಾತ್ರ ಬದಲಾಗಿದ್ದರೂ ಪಾತ್ರ ಬದಲಾಗಿಲ್ಲ.
ಸುಳ್ಯ ತಾಲೂಕಿಗೊಂದು ಭೌತಿಕ ಆಕೃತಿಯಿದೆ. ಈಗ ಇದು ಇತ್ತ ಕೊಡಗು ಗಡಿಯಿಂದ ಅತ್ತ ಪುತ್ತೂರು ತಾಲೂಕು ಗಡಿಯ ಕನಕಮಜಲುವರೆಗೆ, ಇತ್ತ ಕೇರಳ ಗಡಿಯ ಬಡ್ಡಡ್ಕ, ಮಂಡೆಕೋಲು, ಕೋಲ್ಚಾರಿನಿಂದ ಅತ್ತ ಕೊಡಗು ಗಡಿಯ ಕಲ್ಮಕಾರು ವರೆಗೆ ಮೈ ಚಾಚಿ ಮಲಗಿದೆ.
ಆರು ದಶಕದಲ್ಲಿ ಸುಳ್ಯ ತಾಲೂಕು ಬಹಳಷ್ಟು ಅಭಿವೃದ್ಧಿಯನ್ನು, ಬೆಳವಣಿಗೆಯನ್ನೂ ಕಂಡಿದೆ. ಎಲ್ಲಾ ಕ್ಷೇತ್ರಗಳಲ್ಲೂ ಪ್ರಗತಿಯ ಚಕ್ರಗಳೂ ಉರುಳಿವೆ. ಇಲ್ಲಿನವರು ಕಲೆ, ಸಾಹಿತ್ಯ ಸಂಗೀತಗಳಿಗೆ ಮನಸೋತವರು. ಸಾಮಾಜಿಕ ವ್ಯವಸ್ಥೆಯಲ್ಲಿ ಗುಪ್ತ ಪ್ರೀತಿ ಮತ್ತು ಆರಾಧನೆಗಳನ್ನು ಇಟ್ಟುಕೊಂಡು ಗೌಜಿ ಗದ್ದಲ ಮಾಡದೆ ಅದನ್ನು ಪೋಷಿಸುತ್ತಾ ಬಂದವರು. ತಾವು ಮರೆಯಲ್ಲಿದ್ದುಕೊಂಡು ನಾಡಿನ ಸಾಂಸ್ಕೃತಿಕತೆಯನ್ನು ಸಂಪನ್ನಗೊಳಿಸಿದವರು.
ಎಲ್ಲ ವ್ಯವಸ್ಥೆಗಳಲ್ಲೂ ಇಲ್ಲಿನವರು ಸಾಧನೆ ಮೆರೆದಿದ್ದರೆ. ವಿವಿಧ ಪಕ್ಷಗಳ ನಾಯಕರು ಶಾಸಕರಾಗಿ, ಸಂಸದರಾಗಿ, ವಿಧಾನ ಪರಿಷತ್ ಸದಸ್ಯರಾಗಿ ಜನ ಪ್ರಾತಿನಿಧ್ಯಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಈ ತಾಲೂಕಿನ ಹೆಮ್ಮೆಯ ಪುತ್ರ ಡಿ.ವಿ.ಸದಾನಂದ ಗೌಡರು ರಾಜ್ಯದ ಮುಖ್ಯ ಮಂತ್ರಿಯೂ, ಕೇಂದ್ರ ಸರಕಾರದ ಮಂತ್ರಿಯೂ ಆಗಿ ಸೇವೆ ಸಲ್ಲಿಸಿದ್ದಾರೆ. ರಾಮ ಮೂರ್ತಿ ಬೆಳಗಜೆ, ಗಿರೀಶ್ ಭಾರಧ್ವಾಜ್ ಅವರಂತಹ ಸಾಧಕರು ದೇಶದ ಪರಮೋನ್ನತ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಗೆ ಭಾಜನರಾಗಿದ್ದಾರೆ. ಡಾ. ಕುರುಂಜಿ ವೆಂಕಟ್ರಮಣ ಗೌಡರ ಶಿಕ್ಷಣ ಕ್ರಾಂತಿ, ಡಾ.ಯು.ಪಿ.ಶಿವಾನಂದರ ಮಾಧ್ಯಮ ಕ್ರಾಂತಿ ಜಗತ್ತಿನಲ್ಲಿ ಸುಳ್ಯಕ್ಕೆ ಸ್ಥಾನ ಕಲ್ಪಿಸಿದೆ.