ಹೊಸನಗರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಸ್ಲೀಪರ್ ಬಸ್ಸಿನಲ್ಲಿ ಮಧ್ಯರಾತ್ರಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣ ಸುಟ್ಟು ಕರಕಲಾಗಿದೆ. ಚಾಲಕನ ಸಮಯಪ್ರಜ್ಞೆಯಿಂದ ಬಸ್ಸನ್ನು ಮರಕ್ಕೆ ಡಿಕ್ಕಿ ಹೊಡೆಸಿ ನಿಲ್ಲಿಸಿದ್ದರಿಂದ ಸುಮಾರು 40 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹೊಸನಗರದಿಂದ ಬೆಂಗಳೂರಿಗೆ ಸುಮಾರು 40 ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಖಾಸಗಿ ಸ್ಲೀಪರ್ ಬಸ್ಸಿನಲ್ಲಿ ಮಧ್ಯರಾತ್ರಿ ಭೀಕರ ಬೆಂಕಿ ಕಾಣಿಸಿಕೊಂಡು, ಇಡೀ ಬಸ್ ಸುಟ್ಟು ಕರಕಲಾದ ಘಟನೆ ನಡೆದಿದೆ.
27
ಅದೃಷ್ಟವಶಾತ್ ಚಾಲಕನ ಅದ್ಭುತ ಸಮಯಪ್ರಜ್ಞೆಯಿಂದಾಗಿ ದೊಡ್ಡ ಮಟ್ಟದ ಪ್ರಾಣಾಪಾಯ ತಪ್ಪಿದೆ. ಹೊಸನಗರದಿಂದ ಶಿವಮೊಗ್ಗ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದ 'ಶ್ರೀ ಅನ್ನಪೂರ್ಣೇಶ್ವರಿ' ಸಂಸ್ಥೆಯ ಬಸ್ಸಿನಲ್ಲಿ ಅರಸಾಳು ಮತ್ತು ಸೂಡೂರು ಗ್ರಾಮಗಳ ಮಧ್ಯದ 9ನೇ ಮೈಲಿಗಲ್ಲು ಬಳಿ ಈ ಅವಘಡ ಸಂಭವಿಸಿದೆ.
37
ಚಲಿಸುತ್ತಿದ್ದ ಬಸ್ಸಿನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಾಗ ತಕ್ಷಣ ಎಚ್ಚೆತ್ತ ಚಾಲಕ, ಬಸ್ಸನ್ನು ನಿಯಂತ್ರಿಸಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆಸಿ ನಿಲ್ಲಿಸಿದ್ದಾರೆ. ಈ ಸಮಯಪ್ರಜ್ಞೆಯಿಂದಾಗಿ ಪ್ರಯಾಣಿಕರಿಗೆ ಎಮರ್ಜೆನ್ಸಿ ಡೋರ್ ಮೂಲಕ ಹೊರಬರಲು ಸಾಧ್ಯವಾಯಿತು.
ಬಸ್ಸಿನಲ್ಲಿದ್ದ 40 ಪ್ರಯಾಣಿಕರ ಪೈಕಿ ಎಂಟು ಜನರಿಗೆ ಸುಟ್ಟ ಗಾಯಗಳಾಗಿದ್ದು, ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ ಪ್ರಯಾಣಿಕರಿಗೆ ಸ್ಥಳೀಯ ಆಸ್ಪತ್ರೆಗಳಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.
57
ಬೆಂಕಿ ಇಡೀ ಬಸ್ಸಿಗೆ ಕ್ಷಣಾರ್ಧದಲ್ಲಿ ವ್ಯಾಪಿಸಿದ್ದರಿಂದ, ಪ್ರಯಾಣಿಕರ ಬಟ್ಟೆ-ಬರೆ ಹಾಗೂ ಬೆಲೆಬಾಳುವ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.
67
ಘಟನೆ ಸಂಭವಿಸುತ್ತಿದ್ದಂತೆಯೇ ಸ್ಥಳೀಯರು ಮತ್ತು ಆ ಮಾರ್ಗದಲ್ಲಿ ಸಂಚರಿಸುತ್ತಿದ್ದ ಸಾರ್ವಜನಿಕರು ಧಾವಿಸಿ ಪ್ರಯಾಣಿಕರ ರಕ್ಷಣೆಗೆ ನೆರವಾಗಿದ್ದಾರೆ.
77
ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಈ ಕುರಿತು ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.