ಭಾರತೀಯ ಸೇನೆಯಲ್ಲಿ 24 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಮಲೆನಾಡಿನ ಇಬ್ಬರು ಯೋಧರಾದ ವಿಜಯ್ ಕುಮಾರ್ ಮತ್ತು ಶಿವಾಜಿ ನಾಯ್ಕ್ ತವರಿಗೆ ಮರಳಿದ್ದಾರೆ. ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಇವರಿಗೆ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಅದ್ಧೂರಿ ಸ್ವಾಗತ ಕೋರಿದರು. ಇವರ ಸಾಧನೆಯನ್ನೊಮ್ಮೆ ಓದಿ.
ಭಾರತ ಮಾತೆಯ ರಕ್ಷಣೆಗಾಗಿ ಹಿಮ ಪರ್ವತದ ಚಳಿ, ಮಳೆ, ಬಿಸಿಲೆನ್ನದೆ ಗಡಿಯಲ್ಲಿ ನಿಂತು ಬರೋಬ್ಬರಿ 24 ವರ್ಷಗಳ ಕಾಲ ದೇಶ ಸೇವೆ ಸಲ್ಲಿಸಿ ನಿವೃತ್ತರಾಗಿ ತವರಿಗೆ ಮರಳಿದ ಮಲೆನಾಡಿನ ಇಬ್ಬರು ಹೆಮ್ಮೆಯ ವೀರ ಯೋಧರಿಗೆ ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಭಾವಪೂರ್ಣ ಹಾಗೂ ಅದ್ಧೂರಿ ಸ್ವಾಗತ ಕೋರಲಾಯಿತು.
25
ಬೆಂಗಳೂರು-ತಾಳಗುಪ್ಪ ರೈಲಿನಲ್ಲಿ ತಡರಾತ್ರಿ ಆಗಮನ
ಬೆಂಗಳೂರು-ತಾಳಗುಪ್ಪ ರೈಲಿನಲ್ಲಿ ತಡರಾತ್ರಿ ಆಗಮಿಸಿದ ಹವಾಲ್ದಾರ್ ವಿಜಯ್ ಕುಮಾರ್ ಮತ್ತು ಎನ್‌ಸಿಒ ಶಿವಾಜಿ ನಾಯ್ಕ್ ಅವರನ್ನು ಕುಟುಂಬಸ್ಥರು, ಸ್ನೇಹಿತರು, ಮಾಜಿ ಯೋಧರು ಹಾಗೂ ನೂರಾರು ದೇಶಭಕ್ತರು ಹೂಮಾಲೆ ಹಾಕಿ, ಡೊಳ್ಳು ಕುಣಿತ, ಪಟಾಕಿ ಸಿಡಿಸಿ, 'ಭಾರತ್ ಮಾತಾ ಕೀ ಜೈ' ಘೋಷಣೆಗಳನ್ನು ಕೂಗುತ್ತಾ, ಸಿಹಿ ಹಂಚಿ ಸಂಭ್ರಮದಿಂದ ಬರಮಾಡಿಕೊಂಡರು.
35
ಸಾಹಸಮಯ ಸೇವೆ ಸಲ್ಲಿಸಿದ ಹವಾಲ್ದಾರ್ ವಿಜಯ್ ಕುಮಾರ್:
ಭೋಪಾಲ್‌ನಲ್ಲಿ ಕಠಿಣ ತರಬೇತಿ ಪಡೆದು ಸೈನ್ಯಕ್ಕೆ ಸೇರ್ಪಡೆಗೊಂಡ ಹವಾಲ್ದಾರ್ ವಿಜಯ್ ಕುಮಾರ್ ಅವರು ಪಂಜಾಬ್, ಅಸ್ಸಾಂನ ಗುವಾಹಟಿ, ಬಬೀನಾ, ಜಮ್ಮುವಿನ ಗಡಿ ನಿಯಂತ್ರಣ ರೇಖೆಯ ಮೆಂಧರ್ ಸೆಕ್ಟರ್, ನವದೆಹಲಿ, ಅರುಣಾಚಲ ಪ್ರದೇಶ ಹಾಗೂ ಜಾನ್ಸಿಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ದೇಶದ ಭದ್ರತೆಯಲ್ಲಿ ಅತ್ಯಂತ ಪ್ರಮುಖವೆನಿಸಿದ 'ಆಪರೇಷನ್ ಸಿಂಧೂರ್' ಕಾರ್ಯಾಚರಣೆಯ ವೇಳೆ ಕಥುವಾ ಗಡಿಯಲ್ಲಿ ಅತ್ಯಾಧುನಿಕ ಡ್ರೋನ್ ಕಾರ್ಯಾಚರಣೆಯ ಮಹತ್ವದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ ಹೆಗ್ಗಳಿಕೆ ಇವರದ್ದಾಗಿದೆ.
ರಾಷ್ಟ್ರೀಯ ರೈಫಲ್ಸ್‌ನಲ್ಲಿ ಸೇವೆ ಸಲ್ಲಿಸಿದ್ದ ಶಿವಾಜಿ ನಾಯ್ಕ್:
ಮೂಲತಃ ನ್ಯಾಮತಿ ತಾಲೂಕಿನವರಾದ ಶಿವಾಜಿ ನಾಯ್ಕ್ ಅವರು ಭಾರತೀಯ ಸೇನೆಯಲ್ಲಿ ಎನ್‌ಸಿಒ (NCO) ಆಗಿ 24 ವರ್ಷಗಳ ಸುದೀರ್ಘ ಸೇವೆ ಪೂರೈಸಿದ್ದಾರೆ. ಜಮ್ಮು-ಕಾಶ್ಮೀರದ ಉಗ್ರರ ಉಪಟಳವಿರುವ ಕಣಿವೆಯಲ್ಲಿ ರಾಷ್ಟ್ರೀಯ ರೈಫಲ್ಸ್ (Rashtriya Rifles) ಪಡೆಯ ಮೂಲಕ ಕಾರ್ಯಾಚರಣೆ ನಡೆಸಿದ್ದಲ್ಲದೆ, ಬಾಂಬೆ, ರಾಜಸ್ಥಾನದಲ್ಲಿ ನಡೆದ ಇಂಡೋ-ರಷ್ಯನ್ ಜಂಟಿ ಸಮರಾಭ್ಯಾಸ, ಪಠಾಣ್‌ಕೋಟ್ ಮತ್ತು ಗುವಾಹಟಿಗಳಲ್ಲಿ ದೇಶಕ್ಕಾಗಿ ನಿಷ್ಠೆಯಿಂದ ದುಡಿದಿದ್ದಾರೆ.
55
ಯೋಧರು ನಮ್ಮ ಹೆಮ್ಮೆ - ಸೂಡಾ ಅಧ್ಯಕ್ಷ ಮಧುಸೂದನ್:
ರೈಲ್ವೆ ನಿಲ್ದಾಣಕ್ಕೆ ಆಗಮಿಸಿ ಯೋಧರನ್ನು ಗೌರವಿಸಿ ಮಾತನಾಡಿದ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ (ಸೂಡಾ) ಅಧ್ಯಕ್ಷ ಮಧುಸೂದನ್, 'ದೇಶದ ಗಡಿಯನ್ನು ಕಾಯುವ ಯೋಧರು ನಮ್ಮ ಹೆಮ್ಮೆ. ಪ್ರಾಣದ ಹಂಗು ತೊರೆದು ದೇಶ ರಕ್ಷಣೆ ಮಾಡಿದ ಸೈನಿಕರನ್ನು ಸಮಾಜದಲ್ಲಿ ಸದಾ ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ' ಎಂದು ಬಣ್ಣಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಕಾಂತೇಶ್ ಈಶ್ವರಪ್ಪ, ಡಿ.ಎಸ್. ಶಿವಕುಮಾರ್, ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್ ಸೇರಿದಂತೆ ಸ್ಥಳೀಯ ಗಣ್ಯರು, ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು ಯೋಧರಿಗೆ ಶುಭ ಹಾರೈಸಿದರು.