ಚಿಕ್ಕಮಗಳೂರು: ಮಲೆನಾಡಲ್ಲಿ ಹೆಜ್ಜೆ ಗುರುತು ಬಿಟ್ಟು ಹೋದ ಸಿದ್ದೇಶ್ವರ ಶ್ರೀಗಳು..!

First Published | Jan 3, 2023, 8:53 PM IST

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಜ.03):  ನಡೆದಾಡುವ ದೇವರು, ಶತಮಾನದ ಸಂತ, ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಹಾಗೂ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಗೂ ಅವಿನಾಭಾವ ಸಂಬಂಧವಿದ್ದು, 2004ರಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಭೇಟಿ ನೀಡಿ ಇಲ್ಲಿನ ಪರಿಸರ ಸೌಂದರ್ಯಕ್ಕೆ ಮನಸೋತ್ತಿದ್ದರು ಹಾಗೂ ಪರಿಸರದ ನಡುವೆ ಹೆಜ್ಜೆ ಹಾಕುವ ಮೂಲಕ ತಮ್ಮ ಹೆಜ್ಜೆ ಗುರುತು ಬಿಟ್ಟು ಹೋಗಿದ್ದಾರೆ. 
 

ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸಿದ್ದೇಶ್ವರ ಶ್ರೀಗಳು ನಿನ್ನೆ(ಸೋಮವಾರ) ಸಂಜೆ ಲಿಂಗೈಕ್ಯರಾಗಿದ್ದು, ಚಿಕ್ಕಮಗಳೂರಿಗೆ ಬಂದು ಪ್ರವಚನ ನೀಡಿದ್ದ ಆ ಸವಿಗಳಿಗೆಯನ್ನು ಜಿಲ್ಲೆಯ ಜನತೆ ನೆನೆಯುತ್ತಿದ್ದಾರೆ. ಅವರು ಉಳಿಸಿ ಹೋಗಿರುವ ಹೆಜ್ಜೆ ಗುರುತುಗಳನ್ನು ಜನತೆ ಇಂದು(ಮಂಗಳವಾರ) ನೆನೆದು ಬಾವುಕರಾದರು.

ಸಿದ್ದೇಶ್ವರ ಸ್ವಾಮೀಜಿ 2004ರಲ್ಲಿ ಡಿಎಸ್ಸಿಜಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ಒಂದು ತಿಂಗಳು ದಿನನಿತ್ಯ ಪ್ರವಚನ ನೀಡಿದ್ದರು. ಸಾವಿರಾರು ಜನರು ಅವರ ಪ್ರವಚನವನ್ನು ಆಲಿಸಿದ್ದರು. ಮಾನವೀಯ ಮೌಲ್ಯ ಮತ್ತು ಬದುಕಿನ ಬಗ್ಗೆ ಸುದೀರ್ಘ ಪ್ರವಚನ ನೀಡಿದ್ದರು. ಜೂನಿಯರ್ ಕಾಲೇಜು ಅಧ್ಯಾಪಕ ಗಣಾಚಾರಿ ಅವರ ತಂಡ ಅವರನ್ನು ಚಿಕ್ಕಮಗಳೂರಿಗೆ ಕರೆಸಿ ಪ್ರವಚನ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಸಿದ್ದೇಶ್ವರ ಸ್ವಾಮೀಜಿ ಚಿಕ್ಕಮಗಳೂರಿಗೆ ಇದೇ ಮೊದಲು ಮತ್ತು ಕೊನೆಯ ಭೇಟಿಯಾಗಿತ್ತು.

Tap to resize

ನಿಸರ್ಗದ ಮಡಿಲಿನಲ್ಲಿ ಸದಾ ಬದುಕಬೇಕು ಎಂದು ಹೇಳುತ್ತಿದ್ದ ಶ್ರೀಗಳು ಚಿಕ್ಕಮಗಳೂರಿನಲ್ಲಿ ಒಂದು ತಿಂಗಳ ಕಾಲ ನಗರದ ಹೊರವಲಯದಲ್ಲಿರುವ ಕೈಮರ ಎನ್ಎಂಡಿಸಿ ಬಳಿ ಇರುವ ಆದಿಚುಂಚನಗಿರಿ ಪ್ರದೇಶದಿಂದ ಮುಳ್ಳಯ್ಯನಗಿರಿ ಪರ್ವತ ಶ್ರೇಣಿಯಲ್ಲಿ ದಿನನಿತ್ಯ ವಾಕಿಂಗ್ ಮಾಡುತ್ತಿದ್ದರು. ಸ್ಥಳೀಯ ಉತ್ಸಾಹಿ ಯುವಕರು ಇವರ ಜೊತೆ ಹೆಜ್ಜೆಹಾಕುತ್ತಿದ್ದರು. ಬೆಟ್ಟವನ್ನು ಸಲೀಸಾಗಿ ಹತ್ತುತ್ತಿದ್ದ ಶ್ರೀಗಳು ಈ ಪ್ರದೇಶ ಅತ್ಯಂತ ಪುಣ್ಯದ ಪ್ರದೇಶವೆಂದು ಹೇಳಿ ಮುಳ್ಳಯ್ಯನಗಿರಿ ಸರ್ಪದ ಹಾದಿಯಲ್ಲಿ ಟ್ರಕ್ಕಿಂಗ್ ಮಾಡಿದ್ದಾರೆ. ರಾತ್ರಿ ವೇಳೆಯಲ್ಲಿ ಬೆಟ್ಟದಲ್ಲಿ ನಡೆಯುವ ಸಂದರ್ಭದಲ್ಲಿ ಟಾರ್ಚ್ಲೈಟ್ ಇಲ್ಲದೆ ನಡೆಯುವಂತೆ ಹೇಳುತ್ತಿದ್ದರು. ಕತ್ತಲಿನಲ್ಲಿ ನಡೆದರೇ ಎಂತಹ ಕಷ್ಟವನ್ನು ಕೂಡ ಎದುರಿಸಬಹುದು ಎನ್ನುವ ಪಾಠವನ್ನು ಹೇಳಿಕೊಟ್ಟಿದ್ದರು. 

ಅಂದು ಅವರ ಜೊತೆ ಒಡನಾಟ ಹೊಂದಿದವರು ಆ ಸವಿ ನೆನಪುಗಳನ್ನು ಮೆಲಕು ಹಾಕುತ್ತಾರೆ. ಚಿಕ್ಕಮಗಳೂರು ಜಿಲ್ಲೆಗೆ ಆಗಮಿಸಿದ್ದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಜೊತೆ ನಗರದ ಉಪ್ಪಳಿಯ ತೇಜೇಶ್ಕುಮಾರ್, ಯುವಕರಾದ ಇಂದ್ರೇಶ್, ಪ್ರಕಾಶ್, ಆರಾಧ್ಯ, ಕಿರಣ್, ಹೇಮಂತ್, ಪ್ರಗತಿಪರ ರೈತ ಚಂದ್ರಶೇಖರ್ ನಾರಾಯಣಪುರ, ಎಐಟಿ ಪ್ರಾಂಶುಪಾಲ ಸುಬ್ಬರಾಯ, ಜೆ.ಪಿ. ಕೃಷ್ಣೇಗೌಡ ಸೇರಿದಂತೆ ಅನೇಕರು ಅವರೊಂದಿಗಿದ್ದರು

ಆಧ್ಯಾತ್ಮ ಲೋಕದ ಅನಘ್ಯ ರತ್ನವಾಗಿದ್ದ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳ ಅಗಲಿ ಕೆಗೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಸ್ವಾಮೀಜಿಯವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸಿದ್ದೇಶ್ವರ ಸ್ವಾಮೀಜಿಯವರು ಸಾಧನೆ ಮತ್ತು ಬೋಧನೆಯ ಮೂಲಕ ಆಧ್ಯಾತ್ಮ ಲೋಕದಲ್ಲಿ ಎಲ್ಲರಿಗೂ ಚಿರಪರಿಚಿತರಾಗಿದ್ದರೂ. ಅವರ ಅರ್ಥಪೂರ್ಣವಾದ ಪ್ರವಚನಗಳ ಮೂಲಕ ಜನಮನವನ್ನು ಗೆದ್ದವರಾಗಿದ್ದರೂ. ಸಾಧ್ವಿಕ ಸಂವೃದ್ದಿ ಸಮಾಜ ನಿರ್ಮಾಣ ಮಾಡಬೇಕೆಂಬ ಅವರ ನುಡಿಗಳು ಜನರ ಮನದಲ್ಲಿ ಹೊಸಬೆಳಕನ್ನು ಮೂಡಿಸಿದ್ದವು. ಒಬ್ಬ ಶ್ರೇಷ್ಠ ಸಂತನನ್ನು ಕಳೆದುಕೊಂಡ ದುಖಃ ಎಲ್ಲರಲ್ಲೂ ಆವರಿಸಿದ್ದು, ದುಖಃ ಸಹಿಸಿಕೊಳ್ಳುವ ಶಕ್ತಿ ಭಗವಂತ ಎಲ್ಲರಿಗೂ ಅನುಗ್ರಹಿಸಲಿ ಎನ್ನುವ ಸಂದೇಶವನ್ನು ಶ್ರೀಗಳು ವ್ಯಕ್ತಪಡಿಸಿದ್ದಾರೆ.

Latest Videos

click me!