ಕೊಪ್ಪಳದಲ್ಲಿ ವರುಣನ ಅವಕೃಪೆ: ಮಳೆರಾಯನ ಆರ್ಭಟಕ್ಕೆ ಬದುಕು ತತ್ತರ, ಸಂಕಷ್ಟದಲ್ಲಿ ಜನತೆ

First Published | Oct 15, 2020, 1:15 PM IST

ಸೋಮರಡ್ಡಿ ಅಳವಂಡಿ

ಕೊಪ್ಪಳ(ಅ.15): 2435 ಹೆಕ್ಟೇರ್‌ ಬೆಳೆ ನಾಶವಾಗಿದೆ. 650 ಮನೆಗಳು ಬಿದ್ದಿವೆ. 150 ಕಿಮೀ ರಸ್ತೆ ಹಾಳಾಗಿದ್ದು, ಹತ್ತಾರು ಸೇತುವೆಗಳು, ಬ್ಯಾರೇಜ್‌ಗಳು ಕೊಚ್ಚಿ ಹೋಗಿವೆ. ಇದು, ಜಿಲ್ಲಾಡಳಿತ ನೀಡಿದ ಪ್ರಾಥಮಿಕ ವರದಿಯಿಂದಲೇ ಗೊತ್ತಾಗಿರುವ ಹಾನಿ. ಇದರ ವಾಸ್ತವಿಕ ಲೆಕ್ಕಾಚಾರ ಇನ್ನಷ್ಟು ದುಪ್ಪಟ್ಟಿರಬಹುದು. ಕಂದಾಯ ಇಲಾಖೆ ಮತ್ತು ಕೃಷಿ ಇಲಾಖೆ ಈಗಾಗಲೇ ಜಂಟಿಯಾಗಿ ಸಮೀಕ್ಷೆ ಕೈಗೊಂಡಿವೆ.
 

ಪ್ರಸಕ್ತ ವರ್ಷ ಕಳೆದ ನಾಲ್ಕಾರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿರುವ ಹಾನಿಯ ಲೆಕ್ಕಾಚಾರ ಬೆಚ್ಚಿ ಬೀಳಿಸುವಂತಿದೆ. ಇದು ಇನ್ನು ಹೆಚ್ಚಾಗುತ್ತೆಯೇ ಹೊರತು ಕಡಿಮೆಯಾಗುವ ಯಾವ ಲಕ್ಷಣಗಳೂ ಇಲ್ಲ. ಮಳೆ ಸುರಿಯುತ್ತಲೇ ಇರುವುದು ಹಾಗೂ ಅ. 17ರ ವರೆಗೂ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡದಿರುವುದರಿಂದ ಹಾನಿಯ ಪ್ರಮಾಣವನ್ನು ಈಗಲೇ ಊಹಿಸಲು ಸಾಧ್ಯವಿಲ್ಲ. ಆದರೂ ಈಗಾಗಲೇ ಜಿಲ್ಲಾಡಳಿತ ಜಿಲ್ಲಾದ್ಯಂತ ಕಟ್ಟೆಚ್ಚರ ಘೋಷಣೆ ಮಾಡಿದೆ. ತಹಸೀಲ್ದಾರ್‌ ಮೂಲಕ ಆಯಕಟ್ಟಿನ ಸ್ಥಳಗಳಲ್ಲಿ ಮತ್ತು ನದಿ ಕೊಳ್ಳಗಳ ಪ್ರದೇಶ ವ್ಯಾಪ್ತಿಯಲ್ಲಿ ಜಾಗೃತಿ ಕೈಗೊಳ್ಳಲು ಮುಂದಾಗಿದೆ.
ಕೊಪ್ಪಳ ತಾಲೂಕಿನಲ್ಲಿ ಅಕ್ಟೋಬರ್‌ ತಿಂಗಳಲ್ಲಿಯೇ 153 ಮಿಲಿಮೀಟರ್‌ ಮಳೆಯಾಗಿದ್ದರೆ, ಕುಷ್ಟಗಿ 134 ಮಿಮೀ, ಕುಕನೂರು ತಾಲೂಕಿನಲ್ಲಿ 150 ಮಿಲಿಮೀಟರ್‌ ಮಳೆಯಾಗಿದೆ. ಜಿಲ್ಲೆಯಲ್ಲಿ ಇದುವರೆಗೂ ವಾಡಿಕೆ ಮಳೆ 530 ಮಿಲಿಮೀಟರ್‌ ಆಗಬೇಕಾಗಿದ್ದರೂ ಇದುವರೆಗೂ 772 ಮಿಲಿಮೀಟರ್‌ ಆಗಿದೆ. ಸರಾ​ಸ​ರಿ ಮಳೆಗಿಂತ ಶೇ. 70ರಷ್ಟುಮಳೆ ಅಧಿಕವಾಗಿದೆ.
Tap to resize

ಜಿಲ್ಲೆಯಲ್ಲಿ ಇದುವರೆಗೂ 160 ಹೆಕ್ಟೇರ್‌ ಕೃಷಿ ಬೆಳೆಗಳಾದ ಹತ್ತಿ, ಮೆಕ್ಕೆಜೋಳ, ಸೂರ್ಯಕಾಂತಿ, ಭತ್ತ ಹಾನಿಯಾಗಿದೆ. 2275 ಹೆಕ್ಟೇರ್‌ ತೋಟಗಾರಿಕಾ ಬೆಳೆಗಳಾದ ಬಾಳೆ, ಮೆಣಸಿನ ಕಾಯಿ, ಈರುಳ್ಳಿ ಸೇರಿದಂತೆ ಮೊದಲಾದ ಬೆಲೆಗಳು ಹಾನಿಯಾಗಿವೆ.
ಜಿಲ್ಲೆಯಲ್ಲಿ ಇದುವರೆಗೂ 650 ಮನೆಗಳು ಬಿದ್ದಿವೆ ಎಂದು ಅಂದಾಜಿಸಲಾಗಿದೆ. ಇದು ಕೇವಲ ಮೌಖಿಕ ಲೆಕ್ಕಾಚಾರವಾಗಿದ್ದು, ಗ್ರಾಮ ಪಂಚಾಯಿತಿವಾರು ಅಧಿಕಾರಿಗಳಿಂದ ಸ್ಥಳೀಯ ಮಟ್ಟದ ಸಮೀಕ್ಷೆ ಬಳಿಕವೇ ಇದರ ನಿಖರ ಅಂಕಿಸಂಖ್ಯೆಯ ಮಾಹಿತಿ ಗೊತ್ತಾಗಬೇಕು. ಅಲ್ಲದೆ ಮಳೆ ನಿಂತ ಮೇಲೆಯೂ ಮನೆಗಳು ಬೀಳುತ್ತಲೇ ಇರುತ್ತವೆ. ಆದ್ದರಿಂದ ಇನ್ನೂ ಇದರ ಸಂಖ್ಯೆ ನಾಲ್ಕಾರುಪಟ್ಟು ಹೆಚ್ಚಳವಾಗುವುದರಲ್ಲಿ ಅನುಮಾನವೇ ಇಲ್ಲ. ಸಾಮಾನ್ಯವಾಗಿ ಮಣ್ಣಿನ ಮನೆಗಳು ಮಳೆಯಾಗವ ವೇಳೆಯಲ್ಲಿ ಬೀಳುವುದಕ್ಕಿಂತ ಮಳೆ ನಿಂತ ಮೇಲೆ ಬೀಳುವುದು ಹೆಚ್ಚು. ಮಳೆಯಲ್ಲಿ ನೆನೆದು ನಂತರ ಅವುಗಳು ನಿಧಾನಕ್ಕೆ ಕುಸಿ​ಯು​ತ್ತ​ವೆ. ಈಗಲೂ ಆಗಿರುವುದು ಹಾಗೆಯೇ ಮಳೆ ನಿಂತ ಮೇಲೆಯೇ ಬೀಳುತ್ತಿವೆ. ಆದರೂ ಇದುವರೆಗೂ ಯಾವುದೇ ಜೀವ ಹಾನಿಯಾಗಿರುವ ವರದಿಯಾಗಿಲ್ಲ.
ಜಿಲ್ಲಾದ್ಯಂತ ಅಕ್ಟೋಬರ್‌ 17ರ ವರೆಗೂ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಮಾನ ಇಲಾಖೆಯ ವರದಿಯನ್ನಾಧರಿಸಿ ಜಿಲ್ಲಾಡಳಿತ ನೀಡಿದ್ದು, ಜಿಲ್ಲಾದ್ಯಂತ ಕಚ್ಚೇಚ್ಚರ ಘೋಷಣೆ ಮಾಡಲಾಗಿದೆ.
ಹವಾಮಾನ ಇಲಾಖೆಯ ಪ್ರಕಾರ ಭಾರಿ ಮಳೆ ಮತ್ತು ಗಾಳಿ ಎರಡು ಇದ್ದು, ಯಾವುದೇ ಕಾರಣಕ್ಕೂ ಮುನ್ನೆಚ್ಚರಿಕೆ ಕೈಗೊ​ಳ್ಳ​ದೆ ಯಾರು ಮನೆಯಿಂದ ಆಚೆ ಹೋಗದಂತೆ ಸೂಚಿಸಲಾಗಿದೆ.
ತುರ್ತು ಅಗತ್ಯಕ್ಕೆ ಮಾತ್ರ ಮನೆಯಿಂದ ಆಚೆ ಹೋಗಬೇಕು. ಅಲ್ಲದೆ ಹೊಲಕ್ಕೆ ಹೋಗುವುದು ಸೇರಿದಂತೆ ನಾನಾ ಕಡೆ ಹೋಗುವ ವೇಳೆಯಲ್ಲಿ ಸಾಧ್ಯವಾದಷ್ಟು ಮಕ್ಕಳನ್ನು ಮನೆಯಲ್ಲಿ ಬಿಟ್ಟು ಹೋಗಲು ಸಲಹೆ ನೀಡ​ಲಾ​ಗಿ​ದೆ.
ಇದಲ್ಲದೆ ಹಳ್ಳಕೊಳ್ಳಲ್ಲಿ ಪ್ರವಾಹ ಬರು​ವ ಸಾಧ್ಯತೆ ಇದೆ. ಆದ್ದ​ರಿಂದ ಹಳ್ಳವನ್ನು ದಾಟುವ ವೇಳೆ ಎಚ್ಚ​ರ​ವಿ​ರ​ಲಿ ಎಂದು ಮನವರಿಕೆ ಮಾಡಿಕೊಡಲಾಗಿದೆ. ಈ ಕುರಿತು ಈಗಾಗಲೇ ತಹಸೀಲ್ದಾರ್‌ ಅವರ ಮೂಲಕ ತಾಲೂಕಿನಾದ್ಯಂತ ಮುನ್ನೆಚ್ಚರಿಕೆ ನೀಡಲು ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ.
ಅತೀಯಾದ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಲ್ಲಿ ಅನಾಹುತ ಆಗುವ ಸಾಧ್ಯತೆ ಇರುತ್ತದೆ. ಅಲ್ಲದೆ ಯಾರಾದರೂ ಪ್ರವಾಹಕ್ಕೆ ಸಿಲುಕಿದರೆ ಸೇರಿದಂತೆ ಯಾವುದೇ ಸಮಸ್ಯೆಗೆ ಸಿಲುಕಿದರೂ ಸಹಾಯಕ್ಕಾಗಿ ತಕ್ಷಣ 08539-225001 ಸಂಖ್ಯೆಗೆ ಸಂಪರ್ಕಿಸುವಂತೆ ಕೋರಲಾಗಿದೆ.
ವಾಡಿಕೆ ಮಳೆ 530 ಮಿಲಮೀಟರ್‌, ಬಿದ್ದ ಮಳೆ 772 ಮಿಲಿಮೀಟರ್‌, ಬಿದ್ದ ದಾಖಲೆ ಮಳೆ 154 ಮಿಲಿಮೀಟರ್‌, 160 ಹೆಕ್ಟೇರ್‌ ಕೃಷಿ ಬೆಳೆ ಹಾನಿ, 2275 ಹೆಕ್ಟೇರ್‌ ತೋಟಗಾರಿಕಾ ಬೆಳೆ ಹಾನಿ, 150 ಕಿ.ಮೀಟರ್‌ ರಸ್ತೆ ಹಾನಿ, ನಾಲ್ಕಾರು ಸೇತುವೆ, ಬ್ಯಾರೇಜ್‌ ಹಾಳು, 650 ಮನೆಗಳು ಬಿದ್ದಿವೆ

Latest Videos

click me!