ರೈತರ(Farmers) ಸಮೂಹವೊಂದು ಗಂಗಾವತಿಯಿಂದ 916 ಕಿ.ಮೀ. ದೂರದ ಮನ್ನಾರ್‌ಗುಡಿಗೆ(Manarkudi) ಯಂತ್ರಗಳನ್ನು ಕಳುಹಿಸುತ್ತಿದೆ. ಇದರಿಂದ ರೈಲ್ವೆಗೆ 10.5 ಲಕ್ಷ ಆದಾಯ ದೊರೆತಿದ್ದು ರೈತರಿಗೂ ಅನುಕೂಲಕರ, ವೇಗದ ಮತ್ತು ದಕ್ಷ ಸಾರಿಗೆ ಸೇವೆ ಲಭಿಸಿದೆ.
ಈ ಭಾಗದ ರೈತರು, ಕೈಗಾರಿಕೆಗಳಿಗೆ ತಮ್ಮ ಸರಕುಗಳನ್ನು ದೇಶಾದ್ಯಂತ ಸಾಗಿಸಲು ನೆರವಾಗುವ ನಿಟ್ಟಿನಲ್ಲಿ ಹುಬ್ಬಳ್ಳಿ ವಿಭಾಗವು ಗಂಗಾವತಿಯಲ್ಲಿ ಹೊಸ ಸರಕು ಲೋಡಿಂಗ್ ಸೌಲಭ್ಯವನ್ನು ಅಭಿವೃದ್ಧಿಪಡಿಸಿದೆ. ಕಳೆದ ಡಿಸೆಂಬರ್ ಅಂತ್ಯಕ್ಕೆ ಒಟ್ಟು 10 ರೇಕ್ ಅಕ್ಕಿಯನ್ನು (ಒಟ್ಟು 13,169 ಟನ್) ಗಂಗಾವತಿಯಿಂದ ಗುವಾಹಟಿ ಸಮೀಪದ ಆಜರಾ, ತ್ರಿಪುರಾದ ಜಿರನೀಯಾ, ಪಶ್ಚಿಮ ಬಂಗಾಳದ ತಾರಕೇಶ್ವರ್ ಮತ್ತು ಸಾಂಕರಾಯಿಲ್ ಮೊದಲಾದ ಸ್ಥಳಗಳಿಗೆ ಸಾಗಣೆ ಮಾಡಲಾಗಿದೆ.
ರೈತರು, ಕೈಗಾರಿಕೆಗಳು ಮತ್ತು ವರ್ತಕರೊಂದಿಗೆ ನಿರಂತರ ಸಂಪರ್ಕ ಸಾಧಿಸಿ ಗಂಗಾವತಿಯಿಂದ ಈ ಸರಕು ಸಾಗಣೆಯಾಗುವಲ್ಲಿ ವ್ಯವಹಾರ ಅಭಿವೃದ್ಧಿ ಘಟಕವು ಪ್ರಮುಖ ಪಾತ್ರವನ್ನು ವಹಿಸಿದೆ.
ಗಂಗಾವತಿ ಮತ್ತು ಖಜ್ಜಿಡೋಣಿಯಲ್ಲಿ ಅಭಿವೃದ್ಧಿಪಡಿಸಿರುವ ಹೊಸ ಸರಕು ಟರ್ಮಿನಲ್ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಹುಬ್ಬಳ್ಳಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅರವಿಂದ ಮಾಲಖೇಡೆ ಕೈಗಾರಿಕೆಗಳಿಗೆ ಕರೆ ನೀಡಿದ್ದಾರೆ. ಕಾರಟಗಿಯಲ್ಲಿಯೂ ಒಂದು ಹೊಸ ಗೂಡ್ಸ್ ಟರ್ಮಿನಲ್(Goods Terminal) ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.