ಹಾಸನದ ಮುಸ್ಲಿಂ ದಂಪತಿ ಕಲಹ, 2 ದಿನದಿಂದ ಪತ್ನಿಯನ್ನು ಕೂಡಿ ಹಾಕಿ ಪತಿ ಎಸ್ಕೇಪ್, ಹೊರಬರಲು ಅಂಗಲಾಚಿದ ಮಹಿಳೆ!

Published : Feb 05, 2026, 01:24 PM IST

ಹಾಸನದ ಕೆ.ಆರ್.ಪುರಂ ಬಡಾವಣೆಯಲ್ಲಿ, ಪತಿಯು ತನ್ನನ್ನು ಮತ್ತು ಮಗುವನ್ನು ಮನೆಯೊಳಗೆ ಕೂಡಿಹಾಕಿ ನಾಪತ್ತೆಯಾಗಿದ್ದಾನೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ. ಎರಡನೇ ಮದುವೆಯ ನಂತರ ಕಿರುಕುಳ ನೀಡುತ್ತಿದ್ದಾನೆ ಎಂದು ಅವರು ಹೇಳಿದರೆ, ಪತಿಯ ಕುಟುಂಬಸ್ಥರು ಈ ಆರೋಪವನ್ನು ನಿರಾಕರಿಸಿದ್ದಾರೆ.

PREV
16
ಪತ್ನಿಯನ್ನು ಮನೆಯಲ್ಲಿ ಕೂಡಿಹಾಕಿ ಪತಿ ನಾಪತ್ತೆ

ಹಾಸನ ನಗರದ ಕೆ.ಆರ್.ಪುರಂ ಬಡಾವಣೆಯಲ್ಲಿ ಮುಸ್ಲಿಂ ದಂಪತಿ ನಡುವೆ ಉಂಟಾಗಿರುವ ಕಲಹ ಪ್ರಕರಣ ಸ್ಥಳೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಗಂಡ-ಹೆಂಡತಿಯ ನಡುವಿನ ವೈಯಕ್ತಿಕ ಜಗಳ ಈಗ ಪತ್ನಿಯನ್ನು ಮನೆಯಲ್ಲಿ ಕೂಡಿಹಾಕಿ ಪತಿ ನಾಪತ್ತೆಯಾಗಿದ್ದಾನೆ. ಎರಡು ದಿನದಿಂದ ಹೊರ ಬರಲು ಮಹಿಳೆ ಅಂಗಲಾಚುತ್ತಿದ್ದಾಳೆ. ಕೆ.ಆರ್ ಪುರಂ ದೊಡ್ಡ ಬಿಲ್ಡಿಂಗ್ ಬಳಿ ಘಟನೆ ನಡೆದಿದ್ದು, ಮಹಿಳಾ ಧ್ವನಿ ಸಂಘದ ಅಧ್ಯಕ್ಷೆ ಅನ್ನಪೂರ್ಣಗೌಡ ಆಕೆಯ ರಕ್ಷಣೆಗೆ ನಿಂತಿದ್ದಾರೆ.

26
ಮನೆಯೊಳಗೆ ಕೂಡಿ ಹಾಕಿ ಗಂಡ ಪರಾರಿ

ಮಹಿಳೆ ನಿಧಾ ನಾಝ್ ನೀಡಿರುವ ಹೇಳಿಕೆಯ ಪ್ರಕಾರ, ಗಂಡ ಮೊಹಮದ್ ಉಮೇರ್ ತನ್ನನ್ನು ಮನೆಯೊಳಗೆ ಕೂಡಿ ಹಾಕಿ ಪರಾರಿಯಾಗಿದ್ದಾನೆ ಎಂದು ಆರೋಪಿಸಿದ್ದಾರೆ. “ಕಳೆದ ಎರಡು ದಿನಗಳಿಂದ ನಾನು ನನ್ನ ಪುಟ್ಟ ಮಗುವಿನೊಂದಿಗೆ ಮನೆಯೊಳಗೆ ಒಂಟಿಯಾಗಿ ಇದ್ದೇನೆ. ಗಂಡ ಮನೆಯೊಳಗೆ ಬಾಗಿಲು ಹಾಕಿ ಹೊರಗೆ ಹೋಗಿದ್ದಾನೆ. ಯಾರೂ ಸಹಾಯಕ್ಕೆ ಬರಲಿಲ್ಲ” ಎಂದು ಮಹಿಳೆ ಕಣ್ಣೀರಿಟ್ಟಿದ್ದಾರೆ.

36
ಎರಡನೇ ಮದುವೆ ಬಳಿಕ ಕಿರುಕುಳ

ಇನ್ನು, ಗಂಡ ಎರಡನೇ ಮದುವೆ ಮಾಡಿಕೊಂಡಿದ್ದು, ಆ ಬಳಿಕವೇ ಮೊದಲ ಪತ್ನಿಯಾಗಿರುವ ತನ್ನ ಮೇಲೆ ಮಾನಸಿಕ ಹಾಗೂ ಶಾರೀರಿಕ ಕಿರುಕುಳ ನೀಡುತ್ತಿದ್ದಾನೆ ಎಂಬುದು ನಿಧಾ ನಾಝ್ ಆರೋಪ. “ನಮ್ಮ ಮದುವೆಗೆ ಹತ್ತು ವರ್ಷಗಳು ಕಳೆದಿವೆ. ಆದರೂ ನನಗೆ ಗೌರವವಿಲ್ಲ. ಎರಡನೇ ಮದುವೆಯಾದ ನಂತರ ನನ್ನ ಬದುಕು ನರಕವಾಗಿದೆ” ಎಂದು ಆಕೆ ಆರೋಪಿಸಿದ್ದಾಳೆ.

46
ಬಾಲ್ಕನಿಯಲ್ಲೇ ಮಾತು

ಎರಡು ದಿನದಿಂದ ಹೊರಗಡೆಯಿಂದ ಊಟ ತರಿಸಿಕೊಳ್ಳುತ್ತಿದ್ದೇನೆ. ತಮ್ಮ ಬಂದು ಬಾಲ್ಕನಿಯಲ್ಲಿ ಊಟ ಕೊಟ್ಟು ಹೋಗುತ್ತಾನೆ. ಹಿಂದೆ ಕೂಡ ಪೊಲೀಸ್ ಠಾಣೆಯಲ್ಲಿ ದೂರು ನೀಡಿದಾಗ ನನ್ನ ಮೇಲೆಯೇ ಆರೋಪ ಮಾಡಿದ್ದರು. ಹೀಗಾಗಿ ಯಾವ ಪ್ರಯೋಜನವೂ ಆಗಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

56
ಪತಿ ಕಡೆಯವರ ಪ್ರತಿಕ್ರಿಯೆ

ಆದರೆ ಪತಿ ಮೊಹಮದ್ ಉಮೇರ್ ಕುಟುಂಬದವರು ಈ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. “ಮನೆಯೊಳಗೆ ಯಾರನ್ನೂ ಕೂಡಿ ಹಾಕಿಲ್ಲ. ಮಹಿಳೆ ಅನಾವಶ್ಯಕವಾಗಿ ನಾಟಕ ಮಾಡುತ್ತಿದ್ದಾಳೆ. ಆಕೆ ಸ್ವಯಂ ಇಚ್ಛೆಯಿಂದ ಗಂಡನನ್ನು ಬಿಟ್ಟು ತವರು ಮನೆಗೆ ಹೋಗಿದ್ದಳು. ಈಗ ಮತ್ತೆ ಬಂದು ಗಲಾಟೆ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾಳೆ” ಎಂದು ಪತಿ ಕಡೆಯವರು ಹೇಳಿಕೆ ನೀಡಿದ್ದಾರೆ. ಇನ್ನು, “ಮಹಿಳೆಯೇ ಮಧ್ಯರಾತ್ರಿ ಮನೆ ಬಳಿ ಬಂದು ಗೇಟ್ ತೆರೆದುಕೊಂಡು ಒಳಗೆ ಹೋಗಿದ್ದಾಳೆ. ಇದಕ್ಕೆ ಸಂಬಂಧಿಸಿದ ವಿಡಿಯೋ ನಮ್ಮ ಬಳಿ ಇದೆ. ಮನೆಗೆ ಬರಲು ನಾವು ಈ ಹಿಂದೆ ಹಲವಾರು ಬಾರಿ ಕರೆದಿದ್ದರೂ, ಆಕೆ ಬರಲಿಲ್ಲ” ಎಂದು ಪತಿ ಕಡೆಯವರು ಆರೋಪಿಸಿದ್ದಾರೆ.

66
ಪೊಲೀಸ್ ತನಿಖೆ

ನ್ಯೂ ಸ್ಟಾರ್ ಚಿಕನ್ & ಮಟನ್ ಬಿಲ್ಡಿಂಗ್ ಮೇಲಿನ ಮನೆಯಲ್ಲಿ ಮಹಿಳೆಗೆ ದಿಗ್ಬಂಧನ ಹಿನ್ನೆಲೆಯಲ್ಲಿ ಇದೀಗ ಮಹಿಳೆಯ ರಕ್ಷಣೆಗೆ ಮಹಿಳಾ ಧ್ವನಿ ಸಂಘದ ಅಧ್ಯಕ್ಷೆ ಅನ್ನಪೂರ್ಣಗೌಡ ನಿಂತಿದ್ದಾರೆ. ಘಟನೆ ಹಾಸನ ಬಡಾವಣೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಎರಡೂ ಪಾರ್ಟಿಗಳ ಹೇಳಿಕೆಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ವಿಡಿಯೋ ಸಾಕ್ಷ್ಯಗಳು ಹಾಗೂ ಇತರೆ ದಾಖಲೆಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Read more Photos on
click me!

Recommended Stories