ಲಕ್ಕುಂಡಿ ಗ್ರಾಮದಲ್ಲಿ 800 ಗ್ರಾಂ ಚಿನ್ನ ಪತ್ತೆಯಾಗಿದೆ ಎಂದು ಹೇಳಲಾಗಿದ್ದು, ಆದರೆ ಕೇವಲ 466 ಗ್ರಾಂ ಮಾತ್ರ ಲಭ್ಯವಿದೆ. ಈ ವ್ಯತ್ಯಾಸವು ರಾಜಕೀಯ ಒತ್ತಡ ಮತ್ತು ಜಿಲ್ಲಾಡಳಿತದ ವೈಫಲ್ಯದ ಬಗ್ಗೆ ಗಂಭೀರ ಆರೋಪಗಳಿಗೆ ಕಾರಣವಾಗಿದೆ. ನಿಧಿ ಎಂದು ಘೋಷಿಸಿ ಹಣ ಪಡೆಯುವ ಕುತಂತ್ರದ ಶಂಕೆ ವ್ಯಕ್ತವಾಗಿದೆ.
ಲಕ್ಕುಂಡಿ ಗ್ರಾಮದಲ್ಲಿ 800 ಗ್ರಾಂ ಚಿನ್ನ ಪತ್ತೆಯಾಗಿದೆ ಎಂದು ಜಿಪಂ ಮಾಜಿ ಅಧ್ಯಕ್ಷ ಸಿದ್ದು ಪಾಟೀಲ ಅವರು ದೂರವಾಣಿ ಮೂಲಕ ಸಿಎಂಗೆ ಮಾಹಿತಿ ನೀಡಿದ್ದಾರೆ. ಈಗ ಆ ಚಿನ್ನ 466 ಗ್ರಾಂ ಇದೆ ಅಂತ ಹೇಳಲಾಗುತ್ತಿದೆ. ಹಾಗಾದರೆ ಇನ್ನುಳಿದ ಚಿನ್ನ ಎಲ್ಲಿ ಹೋಯಿತು ಎಂದು ಡಿಎಸ್ ರಾಜ್ಯ ವಕ್ತಾರ ವಿ.ಆರ್. ಗೋವಿಂದಗೌಡರ್ ಪ್ರಶ್ನೆ ಮಾಡಿದ್ದಾರೆ.
24
ಸಿದ್ದು ಪಾಟೀಲ ಯಾಕೆ ಹಾಜರಿದ್ದರು?
ಚಿನ್ನ ಪತ್ತೆಯಾದ ಬಗ್ಗೆ ಸಿಎಂ ಹಾಗೂ ಸಚಿವರಿಗೆ ತಿಳಿಸುವುದಕ್ಕೂ ಮೊದಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ತಿಳಿಸಬಹುದಿತ್ತು. ಅಧಿಕಾರಿಗಳು ಚಿನ್ನ ಪರಿಶೀಲನೆ ಮಾಡುವ ವೇಳೆ ಸಿದ್ದು ಪಾಟೀಲ ಯಾಕೆ ಹಾಜರಿದ್ದರು? ಪುರಾತತ್ವ ಇಲಾಖೆ ಅಧಿಕಾರಿ ರಮೇಶ್ ಮೂಲಿಮನಿ ಮೇಲೆ ಒತ್ತಡ ತಂದು ನಿಧಿ ಅಂತ ಹೇಳಿಸಿದ್ದಾರೆ. ನಿಧಿ ಅಂತ ಸಾಬೀತಾದರೆ ಬಯಲು ವಸ್ತು ಸಂಗ್ರಹಾಲಯಕ್ಕೆ ಸರ್ಕಾರದಿಂದ ಹಣ ಬರುತ್ತದೆ ಎನ್ನುವ ಕಾರಣಕ್ಕೆ ನಿಧಿ ಅಂತ ಹೇಳುತ್ತಿದ್ದಾರೆ.
34
ಗಂಭೀರವಾಗಿ ಆರೋಪ
ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಚಿನ್ನ 100 ವರ್ಷಕ್ಕೂ ಹಳೆಯದ್ದು ಅಂತ ಹೇಳುತ್ತಾರೆ. ತನಿಖೆ ನಡೆಯದೇ 100 ವರ್ಷದ್ದು ಅಂತ ಯಾವ ಆಧಾರದ ಮೇಲೆ ಹೇಳುತ್ತಾರೆ. ಪಂಚನಾಮೆ ನಡೆಸಿ ಪಂಚರ ಸಹಿ ಮಾಡಲಾಗಿದೆ. ಆದರೆ, ಮನೆ ಮಾಲೀಕರ ಸಹಿ ಪಡೆದಿಲ್ಲ. ತರಾತುರಿಯಲ್ಲಿ ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡುತ್ತಿದ್ದಾರೆ.
ಬಯಲು ವಸ್ತು ಸಂಗ್ರಹಾಲಯಕ್ಕೆ ಹಣ ತರಿಸುವ ಉದ್ದೇಶದಿಂದ ಈ ರೀತಿ ಕುತಂತ್ರ ಮಾಡುತ್ತಿದ್ದಾರೆ ಅಂತ ಗಂಭೀರವಾಗಿ ಆರೋಪಿಸಿದರು.
ಲಕ್ಕುಂಡಿ ಗ್ರಾಮದ ರೈತ ಶರಣಪ್ಪ ಕಮತರ ಎಂಬವರ ಜಮೀನನ್ನು ಉತ್ಖನನಕ್ಕಾಗಿ ಸ್ವಾಧೀನ ಮಾಡಿಕೊಂಡಿದ್ದಾರೆ. ಕಳೆದ 18 ವರ್ಷದಿಂದ ಆ ಜಮೀನು ಪಾಳು ಬಿದ್ದಿದೆ. ಮೊದಲ ಒಂದು ವರ್ಷ ಬೆಳೆ ಪರಿಹಾರ ನೀಡಿ ನಂತರ ಒಂದು ರುಪಾಯಿ ಹಣ ನೀಡಿಲ್ಲ. ಇದೇ ಪರಿಸ್ಥಿತಿ ರಿತ್ತಿ ಕುಟುಂಬಕ್ಕೂ ಆಗುವ ಸಾಧ್ಯತೆ ಇದೆ. ಈ ಪ್ರಕರಣದಲ್ಲಿ ಸಾಕಷ್ಟು ಗೊಂದಲವಿದ್ದು, ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.