ಲಕ್ಕುಂಡಿ ನಿಧಿ ಸಿಕ್ಕ ಬೆನ್ನಲ್ಲೇ..., ಮುತ್ತು, ರತ್ನ, ಹವಳ, ನೀಲಮಣಿಗಳೂ ಪತ್ತೆ! ಬಡಿಗೇರ ಬಸಪ್ಪ ಫುಲ್ ಖುಷ್!

Published : Jan 13, 2026, 02:27 PM IST

ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ, ಪ್ರಜ್ವಲ್ ರಿತ್ತಿ ನಿಧಿ ಹಸ್ತಾಂತರಿಸಿದ ಬೆನ್ನಲ್ಲೇ, ಬಸಪ್ಪ ಬಡಿಗೇರ ಎಂಬ ಹವ್ಯಾಸಿ ಪ್ರಾಚ್ಯವಸ್ತು ಸಂಗ್ರಹಕಾರರಿಗೆ ಮುತ್ತು, ಹವಳ, ನೀಲಮಣಿ ಹಾಗೂ ಅಪರೂಪದ ಕಪ್ಪು ಸ್ಪಟಿಕದಂತಹ ಪುರಾತನ ಮಣಿಗಳು ಸಿಕ್ಕಿವೆ.

PREV
15
ಮುತ್ತು, ಹವಳ, ನೀಲಮಣಿಗಳು ಪತ್ತೆ

ಗದಗ (ಜ.13): ಐತಿಹಾಸಿಕ ನಗರಿ ಲಕ್ಕುಂಡಿಯಲ್ಲಿ ಬಾಲಕ ಪ್ರಜ್ವಲ್ ರಿತ್ತಿ ಕುಟುಂಬಕ್ಕೆ ಸಿಕ್ಕಿದ 65 ಲಕ್ಷ ರೂ. ಮೌಲ್ಯದ ನಿಧಿಯನ್ನು ಸರ್ಕಾರಕ್ಕೆ ಹಸ್ತಾಂತರಿಸಿದ ಘಟನೆ ಮಾಸುವ ಮುನ್ನವೇ, ಅದೇ ಗ್ರಾಮದ ಮತ್ತೊಬ್ಬ ವ್ಯಕ್ತಿ ಬಸಪ್ಪ ಬಡಿಗೇರ ಅವರಿಗೆ ಮುತ್ತು, ಹವಳ, ನೀಲಮಣಿ ಹಾಗೂ ಸ್ಪಟಿಕ ಮಣಿಗಳು ಸಿಕ್ಕಿರುವುದು ಕಂಡುಬಂದಿದೆ.

25
ಲಕ್ಕುಂಡಿಯ ಮಣ್ಣಿನಲ್ಲಿ ಹುದುಗಿರುವ ಪುರಾತನ ವಸ್ತುಗಳು

ಹೌದು, ಈ ಬಸಪ್ಪ ಬಡಿಗೇರ ಅವರು ಲಕ್ಕುಂಡಿ ಗ್ರಾಮದ ಹವ್ಯಾಸಿ ವಿಶೇಷ ಮಣಿಗಳ ಸಂಗ್ರಹಕಾರ ಆಗಿದ್ದಾರೆ. ಪ್ರತಿಬಾರಿ ಮಳೆ ಬಂದಾಗಲೂ ಭೂಮಿಯ ಮೇಲ್ಪದರದ ಮಣ್ಣು ಸವೆದು ಹೋಗಿ, ಹೊರಗೆ ಬರುವ ವಿಶೇಷ ವಸ್ತುಗಳನ್ನು ಸಂಗ್ರಹಿಸುವ ಈ ಬಸಪ್ಪನವರ ಹವ್ಯಾಸ ಈಗ ಇಡೀ ಜಿಲ್ಲೆಯ ಗಮನ ಸೆಳೆದಿದೆ. ಕಳೆದ ನಾಲ್ಕು ದಶಕಗಳಿಂದ ಲಕ್ಕುಂಡಿಯ ಮಣ್ಣಿನಲ್ಲಿ ಹುದುಗಿರುವ ಪುರಾತನ ವಸ್ತುಗಳನ್ನು ಶೋಧಿಸಿ, ಅವುಗಳನ್ನು ಸಂರಕ್ಷಿಸುವ ಮೂಲಕ ಬಸಪ್ಪ ಅವರು 'ಆಧುನಿಕ ಪ್ರಾಚ್ಯವಸ್ತು ಅನ್ವೇಷಕ'ನಾಗಿ ಗುರುತಿಸಿಕೊಂಡಿದ್ದಾರೆ.

35
ಹೊಲ-ಗದ್ದೆ ಮತ್ತು ಹಳೆಯ ಕೆರೆ ಅಂಗಳದಲ್ಲಿ ಶೋಧ

ಬಸಪ್ಪ ಬಡಿಗೇರ ಅವರಿಗೆ ಪ್ರಾಚ್ಯವಸ್ತುಗಳನ್ನು ಸಂಗ್ರಹಿಸುವುದು ಕೇವಲ ಹವ್ಯಾಸವಲ್ಲ, ಅದು ಅವರ ಬದುಕಿನ ಅವಿಭಾಜ್ಯ ಅಂಗ. ಗ್ರಾಮದಲ್ಲಿ ಜೋರು ಮಳೆ ಬಂದು ಹೋದಾಗಲೆಲ್ಲಾ ಬಸಪ್ಪ ಅವರು ಹೊಲ-ಗದ್ದೆ ಮತ್ತು ಹಳೆಯ ಕೆರೆಗಳ ಆವರಣದಲ್ಲಿ ಶೋಧ ಕಾರ್ಯ ಆರಂಭಿಸುತ್ತಾರೆ. ಮಳೆಗೆ ಮಣ್ಣು ಕೊಚ್ಚಿ ಹೋದಾಗ ಮೇಲೆ ಕಾಣಿಸಿಕೊಳ್ಳುವ ಪುರಾತನ ವಸ್ತುಗಳನ್ನು ಅವರು ಅತ್ಯಂತ ಜಾಗರೂಕತೆಯಿಂದ ಸಂಗ್ರಹಿಸುತ್ತಾರೆ.

45
ಅಪರೂಪದ ಕರಿಪುಕ್ಕ

ಇವರ ಸಂಗ್ರಹದಲ್ಲಿ ಮುತ್ತು, ಹವಳ, ನೀಲಮಣಿ, ಸ್ಪಟಿಕ, ಬಿಳಿ ಹವಳ ಹಾಗೂ ಅಪರೂಪದ ಕರಿಪುಕ್ಕಾ ಸೇರಿದಂತೆ ಅನೇಕ ಪುರಾತನ ಮಣಿಗಳು ಮತ್ತು ಹರಳುಗಳಿವೆ. ಇತ್ತೀಚೆಗೆ ಅಂದರೆ ಕೇವಲ ಒಂದು ತಿಂಗಳ ಹಿಂದೆಯಷ್ಟೇ ಬಸಪ್ಪ ಅವರಿಗೆ ಅತ್ಯಂತ ಅಪರೂಪದ 'ಕಪ್ಪು ಸ್ಪಟಿಕ' ದೊರೆತಿತ್ತು. ಈ ಹಿಂದೆಯೂ ತಮಗೆ ಸಿಕ್ಕಿದ್ದ ಅಮೂಲ್ಯ ಪ್ರಾಚ್ಯವಸ್ತುಗಳನ್ನು ಇವರು ಸರ್ಕಾರಕ್ಕೆ ಹಸ್ತಾಂತರಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

55
ಪ್ರಾಚ್ಯಾವಶೇಷಗಳ ಅನ್ವೇಷಣೆ

ಬಸಪ್ಪ ಅವರ ಈ ನಿಸ್ವಾರ್ಥ ಸೇವೆಯನ್ನು ಗುರುತಿಸಿ 2024ರಲ್ಲಿ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ನಡೆದ 'ಪ್ರಾಚ್ಯಾವಶೇಷಗಳ ಅನ್ವೇಷಣೆ' ಕಾರ್ಯಕ್ರಮದಲ್ಲಿ ಇವರು ಸಂಗ್ರಹಿಸಿದ್ದ ವಸ್ತುಗಳನ್ನು ಅಧಿಕೃತವಾಗಿ ಹಸ್ತಾಂತರಿಸಲಾಗಿತ್ತು. ಲಕ್ಕುಂಡಿಯ ಮಣ್ಣಿನ ಅಡಿಯಲ್ಲಿ ಅಪಾರ ಪ್ರಮಾಣದ ಚಿನ್ನ ಮತ್ತು ಐತಿಹಾಸಿಕ ಕುರುಹುಗಳಿವೆ ಎಂಬ ನಂಬಿಕೆಗೆ ಬಸಪ್ಪ ಅವರಿಗೆ ಸಿಗುತ್ತಿರುವ ಈ ವಸ್ತುಗಳೇ ಸಾಕ್ಷಿಯಾಗಿವೆ.

ಯಾವುದೇ ಫಲಾಪೇಕ್ಷೆಯಿಲ್ಲದೆ, ಕೇವಲ ಇತಿಹಾಸದ ಮೇಲಿನ ಪ್ರೀತಿಯಿಂದ ಮಣ್ಣಿನಲ್ಲಿ ಅಡಗಿರುವ ಗತವೈಭವವನ್ನು ಹೊರತೆಗೆಯುತ್ತಿರುವ ಬಸಪ್ಪ ಬಡಿಗೇರ ಅವರ ಕಾರ್ಯಕ್ಕೆ ಈಗ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.

Read more Photos on
click me!

Recommended Stories