ಕೆ.ಆರ್. ಪುರಂ ರೈಲ್ವೆ ನಿಲ್ದಾಣದ ಸಮೀಪದ ಲೌರಿ ರೋಡ್ ಅಂಡರ್ ಬ್ರಿಡ್ಜ್ ಜೂನ್ 4 ರಿಂದ 9 ರವರೆಗೆ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಅವಧಿಯಲ್ಲಿ, ವಾಹನ ಸವಾರರು ಕೆ.ಆರ್. ಪುರಂ ಕೇಬಲ್-ಸ್ಟೇಯ್ಡ್ ಸೇತುವೆಯನ್ನು ಪರ್ಯಾಯ ಮಾರ್ಗವಾಗಿ ಬಳಸಲು ಬೆಂಗಳೂರು ಸಂಚಾರಿ ಪೊಲೀಸರು ಸೂಚಿಸಿದ್ದಾರೆ.
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮೆಟ್ರೋ ಕಾಮಗಾರಿ, ರಸ್ತೆ ನವೀಕರಣ ಅಥವಾ ರೈಲ್ವೆ ಮೇಲ್ಸೇತುವೆಗಳ ದುರಸ್ತಿ ಕಾರ್ಯಗಳಿಂದಾಗಿ ನಿರಂತರವಾಗಿ ಸಂಚಾರ ಮಾರ್ಗಗಳಲ್ಲಿ ಬದಲಾವಣೆಗಳಾಗುತ್ತಿರುತ್ತವೆ. ಇದೀಗ ಕೃಷ್ಣರಾಜಪುರಂ (ಕೆ.ಆರ್. ಪುರಂ) ರೈಲ್ವೆ ನಿಲ್ದಾಣದ ಸಮೀಪವಿರುವ ಪ್ರಮುಖ ಕೊಂಡಿಯಾದ 'ಲೌರಿ ರೋಡ್ ಅಂಡರ್ ಬ್ರಿಡ್ಜ್'ನಲ್ಲಿ (Lowry Road Under Bridge) ನೈಋತ್ಯ ರೈಲ್ವೆಯು ಅತ್ಯಗತ್ಯ ತಾಂತ್ರಿಕ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ.
ಇಲ್ಲಿನ ರೈಲ್ವೆ ಸೇತುವೆಯ ಹಳೆಯ ಸ್ಲ್ಯಾಬ್‌ಗಳನ್ನು ಬದಲಾಯಿಸುವ ಮಹತ್ವದ ಇಂಜಿನಿಯರಿಂಗ್ ಕೆಲಸ ನಡೆಯಲಿರುವುದರಿಂದ, ಈ ಭಾಗದ ಪ್ರಮುಖ ರಸ್ತೆಗಳಲ್ಲಿ ಜೂನ್ 4ರಿಂದ ಭಾರಿ ಸಂಚಾರ ನಿರ್ಬಂಧಗಳನ್ನು ಹೇರಲಾಗಿದೆ. ವಾಹನ ಸವಾರರ ಸುಗಮ ಸಂಚಾರಕ್ಕಾಗಿ ಬೆಂಗಳೂರು ಸಂಚಾರಿ ಪೊಲೀಸರು ಪರ್ಯಾಯ ಮಾರ್ಗಗಳ ಪ್ರಕಟಣೆಯನ್ನು ಹೊರಡಿಸಿದ್ದಾರೆ.
24
ಜೂನ್ 4 ರಿಂದ 9 ರವರೆಗೆ ಲೌರಿ ಅಂಡರ್ ಬ್ರಿಡ್ಜ್ ಸಂಪೂರ್ಣ ಬಂದ್
ಬೆಂಗಳೂರು ವಿಭಾಗದ ನೈಋತ್ಯ ರೈಲ್ವೆ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಜೂನ್ 4 ರಿಂದ ಜೂನ್ 9 ರವರೆಗೆ ಲೌರಿ ಅಂಡರ್ ಬ್ರಿಡ್ಜ್ ಮುಖಾಂತರ ಸಾಗುವ ರಸ್ತೆಯನ್ನು ಸಂಪೂರ್ಣವಾಗಿ ಮುಚ್ಚಲಾಗುತ್ತದೆ. ಈ 6 ದಿನಗಳ ಅವಧಿಯಲ್ಲಿ ಯಾವುದೇ ರೀತಿಯ ವಾಹನಗಳ ಸಂಚಾರಕ್ಕೆ ಇಲ್ಲಿ ಅವಕಾಶವಿರುವುದಿಲ್ಲ.
34
ವಾಹನ ಸವಾರರಿಗೆ ಒದಗಿಸಲಾದ ಪರ್ಯಾಯ ಮಾರ್ಗಗಳು ಹೀಗಿವೆ:
ಕೆ.ಆರ್.ಪುರಂ, ರಾಮಮೂರ್ತಿ ನಗರ ಮತ್ತು ಐಟಿಐ ಕಾಲೋನಿ ಕಡೆಗೆ ಹೋಗುವವರಿಗೆ: ಲೌರಿ ಅಂಡರ್ ಬ್ರಿಡ್ಜ್ ಮೂಲಕ ಈ ಪ್ರದೇಶಗಳಿಗೆ ತೆರಳುತ್ತಿದ್ದ ಸವಾರರು ಜೂನ್ 4 ರಿಂದ 9 ರವರೆಗೆ ಈ ಮಾರ್ಗದ ಬದಲಾಗಿ ಕೆ.ಆರ್. ಪುರಂ ಕೇಬಲ್-ಸ್ಟೇಯ್ಡ್ ಸೇತುವೆಯನ್ನು (Cable-Stayed Bridge) ಪರ್ಯಾಯ ಮಾರ್ಗವಾಗಿ ಬಳಸಬೇಕಾಗುತ್ತದೆ.
ಐಟಿಪಿಎಲ್ (ITPL) ಮತ್ತು ವೈಟ್‌ಫೀಲ್ಡ್ ಕಡೆಗೆ ಸಾಗುವವರಿಗೆ
ಇದೇ ಅವಧಿಯಲ್ಲಿ ಲೌರಿ ಅಂಡರ್ ಬ್ರಿಡ್ಜ್ ಮಾರ್ಗವಾಗಿ ಐಟಿಪಿಎಲ್ ಹಾಗೂ ವೈಟ್‌ಫೀಲ್ಡ್ ಕಡೆಗೆ ಹೋಗುವ ರಸ್ತೆಯೂ ಬಂದ್ ಆಗಿರುತ್ತದೆ. ಈ ಭಾಗದ ಪ್ರಯಾಣಿಕರು ಸಹ ಕೆ.ಆರ್. ಪುರಂ ಕೇಬಲ್ ಸೇತುವೆಯ ಮೇಲಿಂದಲೇ ಸಂಚರಿಸಲು ಸೂಚಿಸಲಾಗಿದೆ.
ಜೂನ್ 7 ಮತ್ತು 8 ರಂದು ಐಟಿಪಿಎಲ್ ಮುಖ್ಯ ರಸ್ತೆಯಲ್ಲೂ ವ್ಯತ್ಯಯ
ಲೌರಿ ಅಂಡರ್ ಬ್ರಿಡ್ಜ್ ಬಂದ್ ಆಗುವುದರ ಜೊತೆಗೆ, ಕೆ.ಆರ್. ಪುರಂ-ಐಟಿಪಿಎಲ್ ಮುಖ್ಯ ರಸ್ತೆಯಲ್ಲೂ ಒಂದು ದಿನದ ಮಟ್ಟಿಗೆ ಸಂಚಾರ ನಿಯಂತ್ರಣ ಹೇರಲಾಗಿದೆ. ಜೂನ್ 7ರ ಸಂಜೆ 6:00 ಗಂಟೆಯಿಂದ ಜೂನ್ 8ರ ಬೆಳಗ್ಗೆ 6:00 ಗಂಟೆಯವರೆಗೆ (ಒಟ್ಟು 12 ಗಂಟೆಗಳು) ನಿಯಂತ್ರಣ ಇರಲಿದೆ.
ಐಟಿಪಿಎಲ್/ವೈಟ್‌ಫೀಲ್ಡ್ ಕಡೆಗೆ ಹೋಗುವ ಮುಖ್ಯ ರಸ್ತೆಯ ಮಾರ್ಗವನ್ನು ತಾತ್ಕಾಲಿಕವಾಗಿ ಮುಚ್ಚಲಾಗುತ್ತದೆ. ಈ ಅವಧಿಯಲ್ಲಿ ವಾಹನ ಸವಾರರು ರೋಡ್ ಅಂಡರ್ ಬ್ರಿಡ್ಜ್ (RUB) ಬಳಿ ರೈಲ್ವೆ ಇಲಾಖೆಯು ಒದಗಿಸಿರುವ ವಿಶೇಷ 'ತಿರುವು ರಸ್ತೆ'ಯನ್ನು (Diversion Road) ಬಳಸಿಕೊಂಡು ತಮ್ಮ ಪ್ರಯಾಣ ಮುಂದುವರಿಸಬಹುದು.
ಅತ್ಯಗತ್ಯ ರೈಲ್ವೆ ಸುರಕ್ಷತಾ ಕಾಮಗಾರಿ ಇದಾಗಿರುವುದರಿಂದ ಸಂಚಾರ ವಿಳಂಬ ಅನಿವಾರ್ಯವಾಗಿದೆ. ಉಂಟಾಗಲಿರುವ ತಾತ್ಕಾಲಿಕ ಅನಾನುಕೂಲತೆಗೆ ರೈಲ್ವೆ ಅಧಿಕಾರಿಗಳು ಹಾಗೂ ಬೆಂಗಳೂರು ಸಂಚಾರಿ ಪೊಲೀಸರು ವಿಷಾದ ವ್ಯಕ್ತಪಡಿಸಿದ್ದು, ನಾಗರಿಕರು ಸಿಬ್ಬಂದಿಯೊಂದಿಗೆ ಸಹಕರಿಸಬೇಕಾಗಿ ಕೋರಿದ್ದಾರೆ.