ಯಲ್ಲಾಪುರದಲ್ಲಿ ಅಪರೂಪದ 'ಕರಿ ಚಿರತೆ'ಗೂ ವಾಹನ ಡಿಕ್ಕಿ; ಸ್ಥಳದಲ್ಲೇ ಪ್ರಾಣಬಿಟ್ಟ ಸ್ಪೀಡ್ ಹಂಟರ್!

Published : Nov 18, 2026, 11:56 AM IST

ಯಲ್ಲಾಪುರ ತಾಲೂಕಿನ ಮಾಗೋಡ ಕ್ರಾಸ್ ಬಳಿ ರಸ್ತೆ ದಾಟುತ್ತಿದ್ದ ಅಪರೂಪದ ಕರಿ ಚಿರತೆಗೆ ವಾಹನ ಡಿಕ್ಕಿ ಹೊಡೆದು ಮೃತಪಟ್ಟಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಡಿನಿಂದ ನಾಡಿಗೆ ಬರುತ್ತಿರುವ ವನ್ಯಜೀವಿಗಳು ಈ ರೀತಿ ಬಲಿಯಾಗುತ್ತಿರುವುದು ಬೇಸರ ಮೂಡಿಸಿದೆ.

PREV
14
ಅಪರೂಪದ ಕರಿ ಚಿರತೆ ಇನ್ನಿಲ್ಲ

ಉತ್ತರ ಕನ್ನಡ (ನ.18): ಸಾಮಾನ್ಯ ಚಿರತೆಗಳಿಗಿಂತ ತೀರಾ ಅಪರೂಪವಾಗಿ ಕಾಣಸಿಗುವ ಕರಿ ಚಿರತೆಯೊಂದು (Black Panther) ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾಗೋಡ ಕ್ರಾಸ್ ಬಳಿ ನಡೆದಿದೆ.

24
ಘಟನೆಯ ವಿವರ:

ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಅಪರಿಚಿತ ವಾಹನವೊಂದು ಈ ಅಪರೂಪದ ಕರಿ ಚಿರತೆಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಗಂಭೀರವಾಗಿ ಗಾಯಗೊಂಡ ಚಿರತೆ ಸ್ಥಳದಲ್ಲೇ ಪ್ರಾಣ ಬಿಟ್ಟಿದೆ. ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಸ್ಥಳೀಯರು ರಸ್ತೆ ಬದಿಯಲ್ಲಿ ಕರಿ ಚಿರತೆಯ ಮೃತದೇಹ ಬಿದ್ದಿರುವುದನ್ನು ಗಮನಿಸಿ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

34
ಅರಣ್ಯ ಇಲಾಖೆ ಅಧಿಕಾರಿಗಳ ಭೇಟಿ:

ವಿಷಯ ತಿಳಿಯುತ್ತಿದ್ದಂತೆಯೇ ಯಲ್ಲಾಪುರ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಮೃತ ಕರಿ ಚಿರತೆಯ ಕಳೇಬರವನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು, ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಅಪಘಾತ ಎಸಗಿ ಪರಾರಿಯಾಗಿರುವ ಅಪರಿಚಿತ ವಾಹನದ ಪತ್ತೆಗಾಗಿ ತನಿಖೆ ಕೈಗೊಳ್ಳಲಾಗಿದೆ.

44
ಕಾಡಿನಿಂದ ನಾಡಿನತ್ತ ಚಿರತೆಗಳ ಲಗ್ಗೆ:

ಇತ್ತೀಚಿನ ದಿನಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಚಿರತೆಗಳು ಕಾಡಿನಿಂದ ನಾಡಿನೆಡೆಗೆ ಹೆಚ್ಚಾಗಿ ಲಗ್ಗೆ ಇಡುತ್ತಿವೆ. ಆಹಾರ ಮತ್ತು ನೀರಿನ ಕೊರತೆ ಅಥವಾ ಆವಾಸಸ್ಥಾನದ ಒತ್ತಡದಿಂದಾಗಿ ಜನವಸತಿ ಪ್ರದೇಶಗಳು ಹಾಗೂ ಹೆದ್ದಾರಿಗಳ ಸಮೀಪದಲ್ಲೇ ಚಿರತೆಗಳು ಪದೇ ಪದೇ ಕಾಣಿಸಿಕೊಳ್ಳುತ್ತಿವೆ. ಇದರಿಂದ ಒಂದೆಡೆ ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದರೆ, ಇನ್ನೊಂದೆಡೆ ವಾಹನಗಳ ಡಿಕ್ಕಿಗೆ ಸಿಲುಕಿ ಅಪರೂಪದ ವನ್ಯಜೀವಿಗಳು ಬಲಿಯಾಗುತ್ತಿರುವುದು ವನ್ಯಜೀವಿ ಪ್ರೇಮಿಗಳಲ್ಲಿ ತೀವ್ರ ಬೇಸರ ತಂದಿದೆ.

Read more Photos on
click me!

Recommended Stories