ಕೊರೋನಾ ಎಫೆಕ್ಟ್: ಕರಾಟೆ ಪಟು ಇದೀಗ ಬೀದಿಬದಿ ವ್ಯಾಪಾರಿ..!

First Published Nov 4, 2020, 10:14 AM IST

ಶಿವಾನಂದ ಗೊಂಬಿ    

ಹುಬ್ಬಳ್ಳಿ(ನ.04): ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಪಟುಗಳನ್ನು ಸಿದ್ಧಪಡಿಸುತ್ತಿದ್ದ, ರಾಷ್ಟ್ರೀಯ ಮಟ್ಟದ ಕರಾಟೆ ಪಟು, ತೀರ್ಪುಗಾರ ಇದೀಗ ಬೀದಿಬದಿಯ ವ್ಯಾಪಾರಿಯಾಗಿದ್ದು ಹೊಸ ಬದುಕು ರೂಪಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ.
 

ಇದು ಕೊರೋನಾ ಎಫೆಕ್ಟ್. ಕೊರೋನಾದಿಂದಾಗಿ ರಾಷ್ಟ್ರಮಟ್ಟದ ಕರಾಟೆ ಪಟು ನಾಗರಾಜ ಮಿಸ್ಕಿನ ಇದೀಗ ಬೀದಿ ಬದಿಯಲ್ಲಿ ಬಟ್ಟೆ ವ್ಯಾಪಾರದಲ್ಲಿ ತೊಡಗಿ ಹೊಸ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
undefined
ಈ ಕರಾಟೆ ಕ್ಲಾಸ್‌ಗಳಿಂದ ಬದುಕು ಸಾಗಿಸುತ್ತಿದ್ದ ನಾಗರಾಜ ಬದುಕು ಕ್ಲಾಸ್‌ಗಳು ಬಂದ್‌ ಆಗಿದ್ದರಿಂದ ದುಸ್ತರವಾಯಿತು. ಲಾಕ್‌ಡೌನ್‌ ಸಮಯದಲ್ಲಿ ಸರ್ಕಾರ ಹಾಗೂ ಸಂಘ-ಸಂಸ್ಥೆಗಳು ನೀಡಿದ ಆಹಾರದ ಕಿಟ್‌ಗಳಿಂದಲೇ 3 ತಿಂಗಳು ಕುಟುಂಬ ನಿರ್ವಹಿಸಿದ್ದಾರೆ.
undefined
ಅನ್‌ಲಾಕ್‌ ಆದರೂ ಕರಾಟೆ ಕ್ಲಾಸ್‌ಗೆ ಮೊದಲಿನಂತೆ ಮಕ್ಕಳು ಬರುತ್ತಿಲ್ಲ. ಹೀಗಾದರೆ ಬದುಕು ಸಾಗಿಸುವುದು ಕಷ್ಟವಾಗುತ್ತದೆ ಎಂದುಕೊಂಡು ತಮ್ಮ ಸ್ನೇಹಿತರ ನೆರವಿನಿಂದ ಮುಂಬೈಯಿಂದ ಹೋಲ್‌ಸೆಲ್‌ ದರದಲ್ಲಿ ರೆಡಿಮೆಡ್‌ ಬಟ್ಟೆ ತರಿಸಿ ರಸ್ತೆ ಬದಿಯಲ್ಲಿ ಮಾರಾಟ ಮಾಡಲು ಶುರು ಮಾಡಿದ್ದಾರೆ.
undefined
ಕಳೆದ 2ತಿಂಗಳಿಂದ ಬಟ್ಟೆ ವ್ಯಾಪಾರ ನಡೆಸುತ್ತಿದ್ದು, ಸದ್ಯ ಶೆಡ್‌ ನಿರ್ಮಿಸಿ ಅಲ್ಲಿ ಬಟ್ಟೆ ವ್ಯಾಪಾರ ನಡೆಸಲು ನಿರ್ಧರಿಸಿದ್ದಾರೆ. ಹಾಗಂತ ಕರಾಟೆ ತರಬೇತಿ ನೀಡುವುದನ್ನೇನೂ ಬಿಡುವುದಿಲ್ಲ. ಇನ್ಮುಂದೆ ಬಟ್ಟೆ ವ್ಯಾಪಾರದೊಂದಿಗೆ ಕರಾಟೆ ತರಬೇತಿಯನ್ನೂ ನೀಡುತ್ತೇನೆ ಎಂದ್ಹೇಳುತ್ತಾರೆ ನಾಗರಾಜ.
undefined
ನಗರದ ಹೊಸೂರು ನಿವಾಸಿ ನಾಗರಾಜ ಮಿಸ್ಕಿನ (42) ಎಸ್ಸೆಸ್ಸೆಲ್ಸಿವರೆಗೆ ಓದಿದವರು. ಎಸ್ಸೆಸ್ಸೆಲ್ಸಿ ನಂತರ ಮುಂದೆ ಓದಲು ಬಡತನ ಅಡ್ಡಿಯಾಗಿ ಅಷ್ಟಕ್ಕೆ ಬಿಟ್ಟರು. ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದ ನಾಗರಾಜ, ಆಗ ಓದಲೆಂದು 2 ಕೊಟ್ಟು ‘ಕರಾಟೆ ಕಲೆ’ ಎಂಬ ಪುಸ್ತಕ ಖರೀದಿಸಿದ್ದಾರೆ. ಅದರಲ್ಲಿದ್ದ ಮಾಹಿತಿ ಓದಿ ತಾವು ಕರಾಟೆ ಕಲಿಯಬೇಕೆಂಬ ಆಸಕ್ತಿ ಮೂಡಿದೆ. ಕೆಲ ದಿನ ಆ ಪುಸ್ತಕವನ್ನೇ ನೋಡಿ ಕರಾಟೆ ಕಲಿಯುವ ಪ್ರಯತ್ನ ಮಾಡಿದ್ದಾರೆ. ಸ್ವಲ್ಪ ಪ್ರ್ಯಾಕ್ಟಿಸ್‌ ಆದ ಬಳಿಕ ಕರಾಟೆ ಕ್ಲಾಸ್‌ಗೆ ಹೋಗಿ ತರಬೇತಿ ಪಡೆದಿದ್ದಾರೆ. ನಿರಂತರ 4ವರ್ಷ ಕಠಿಣ ಪರಿಶ್ರಮ ಮಾಡಿ ಬ್ಲ್ಯಾಕ್‌ ಬೇಲ್ಟ್‌ ಪಡೆದಿದ್ದಾರೆ. ಇದರ ಜೊತೆ ಜೊತೆಗೆ 1997ರಲ್ಲಿ ಕರಾಟೆಯಿಂದಲೇ ಬದುಕು ಕಟ್ಟಿಕೊಳ್ಳಬೇಕೆಂದು ನಿರ್ಧರಿಸಿ ಕರಾಟೆ ತರಬೇತಿ ಕೇಂದ್ರವನ್ನು ಪ್ರಾರಂಭಿಸಿದ್ದಾರೆ.
undefined
ಕರಾಟೆ ತರಬೇತಿಯಿಂದಲೇ ಬದುಕು ಕಟ್ಟಿಕೊಂಡವರು ನಾಗರಾಜ. ಮಕ್ಕಳಿಗೆ ತರಬೇತಿ ನೀಡುತ್ತಲೇ ತಾವೂ ವಿವಿಧ ಬಗೆಯ ಕರಾಟೆ ಸ್ಪರ್ಧೆಗಳಲ್ಲಿ ಭಾಗವಹಿಸಿ ನೂರಾರು ಪ್ರಶಸ್ತಿ, ಫಲಕ, ಬಹುಮಾನ ಬಾಚಿಕೊಂಡಿದ್ದಾರೆ. ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಸೈ ಎನಿಸಿಕೊಂಡವರು. ಸದ್ಯ ರಾಷ್ಟ್ರೀಯ ಮಟ್ಟದ ಕರಾಟೆ ಪಟು, ನ್ಯಾಷನಲ್‌ ಲೇವಲ್‌ ಸರ್ಟಿಫೈಡ್‌ ಕೋಚ್‌ ಹಾಗೂ ನ್ಯಾಷನಲ್‌ ಲೇವಲ್‌ ಬಿ.ಗ್ರೇಡ್‌ ಜಡ್ಜ್‌ ಎಂದು ಗುರುತಿಸಿಕೊಂಡಿದ್ದಾರೆ. ಈವರೆಗೆ 5 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳನ್ನು ತಯಾರು ಮಾಡಿದ್ದಾರೆ. ಇವರ ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಹತ್ತಾರು ಪ್ರಶಸ್ತಿ ಬಾಚಿಕೊಂಡಿದ್ದಾರೆ. ಆಸ್ಪೈರ್‌ ಸ್ಪೋಟ್ಸ್‌ ಅಕಾಡೆಮಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಅಕಾಡೆಮಿ ಏಳೆಂಟು ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.
undefined
ಪ್ರತಿದಿನ 250ಕ್ಕೂ ಅಧಿಕ ಮಕ್ಕಳಿಗೆ ಕರಾಟೆ ತರಬೇತಿ ನೀಡುತ್ತಿದ್ದೆ. ಅದರಿಂದ ನನ್ನ ಕುಟುಂಬ ನಿರ್ವಹಿಸುತ್ತಿದ್ದೆ. ಆದರೆ ಕೊರೋನಾದಿಂದಾಗಿ ಕ್ಲಾಸ್‌ಗಳೆಲ್ಲ ಬಂದ್‌ ಆಗಿದ್ದರಿಂದ ಬದುಕು ನಡೆಸುವುದು ಕಷ್ಟವಾಯಿತು. ಹೀಗಾಗಿ ಸ್ನೇಹಿತರ ನೆರವಿನಿಂದ ಬಟ್ಟೆವ್ಯಾಪಾರ ನಡೆಸುತ್ತಿದ್ದೇನೆ. ಇನ್ಮೇಲೆ ಕರಾಟೆಯೊಂದಿಗೆ ಬಟ್ಟೆವ್ಯಾಪಾರ ನಡೆಸುತ್ತೇನೆ ಎಂದು ಕರಾಟೆ ತರಬೇತುದಾರ ನಾಗರಾಜ ಮಿಸ್ಕಿನ ಹೇಳುತ್ತಾರೆ.
undefined
click me!