ರೈಲಿನಲ್ಲಿ ಮಹಿಳಾ ಪ್ರಯಾಣಿಕರ ನೆರವಿಗೆ ಬಂದಿದೆ 'ಮೇರಿ ಸಹೇಲಿ'

First Published | Oct 29, 2020, 2:31 PM IST

ಮಯೂರ ಹೆಗಡೆ

ಹುಬ್ಬಳ್ಳಿ(ಅ.29): ರೈಲ್ವೆ ಮೂಲಕ ದೂರ ಪ್ರಯಾಣಿಸುವ ಮಹಿಳೆಯರ ಭದ್ರತೆಗಾಗಿ ರೂಪಿಸಿರುವ ‘ಮೇರಾ ಸಹೇಲಿ’ ಯೋಜನೆಯನ್ನು ನೈಋತ್ಯ ರೈಲ್ವೆ ವಲಯ ಆರಂಭಿಸಿದೆ. ಇದರ ಭಾಗವಾಗಿ ಆರ್‌ಪಿಎಫ್ ಮಹಿಳಾ ಸಿಬ್ಬಂದಿ ಖುದ್ದಾಗಿ ಬೋಗಿಗಳಿಗೆ ಪ್ರಯಾಣಿಸುವ ಒಂಟಿ ಮಹಿಳೆಯರ ಮಾಹಿತಿ ಪಡೆದು ರಕ್ಷಣೆ ಒದಗಿಸುವ ಕೆಲಸ ಮಾಡುತ್ತಿದೆ.
 

ರೈಲಿನಲ್ಲಿ ಪ್ರಯಾಣಿಸುವ ಮಹಿಳೆಯರ ಸುರಕ್ಷತೆಗಾಗಿ ಹಾಗೂ ಅವರಲ್ಲಿ ಆತ್ಮವಿಶ್ವಾಸ ಮೂಡಿಸುವ ಉದ್ದೇಶದಿಂದ ಆಗ್ನೇಯ ರೈಲ್ವೆ ಜಾರಿಗೆ ತಂದ ಮೈ ಸಹೇಲಿ ಅಥವಾ ಮೇರಾ ಸಹೇಲಿ ಯೋಜನೆಯನ್ನು ಇದೀಗ ನೈಋತ್ಯ ರೈಲ್ವೆ ಕೂಡ ಅನುಷ್ಠಾನಕ್ಕೆ ತಂದಿದೆ. ರೈಲಿನಲ್ಲಿ ಒಂಟಿ ಮಹಿಳೆಯರು ಪ್ರಯಾಣಿಸುತ್ತಿದ್ದರೆ ಅಥವಾ ಕೆಲ ಮಹಿಳೆಯರು ಮಾತ್ರ ಸಂಚರಿಸುತ್ತಿದ್ದರೆ ಅಂತವರ ರಕ್ಷಣೆಗಾಗಿ ಜಾರಿಗೊಳಿಸಿದ ಯೋಜನೆ ಇದು. ನೈಋತ್ಯ ರೈಲ್ವೆ ವಲಯದ ಹುಬ್ಬಳ್ಳಿ ವಿಭಾಗ ಮಂಗಳವಾರದಿಂದ ಇದನ್ನು ಕಾರ್ಯರೂಪಕ್ಕೆ ತಂದಿದೆ.
ಸದ್ಯಕ್ಕೆ ನಾಲ್ಕು ದೂರ ಪ್ರಯಾಣದ ರೈಲುಗಳಲ್ಲಿ ಇದನ್ನು ಜಾರಿಗೊಳಿಸಲಾಗಿದೆ. ವಿಶಾಕಪಟ್ಟಣಂ-ಮುಂಬೈ ನಡುವೆ ಸಂಚರಿಸುವ ಲೋಕಮಾನ್ಯ ತಿಲಕ್ ಟರ್ಮಿನಸ್ ಎಕ್ಸಪ್ರೆಸ್, ವಾಸ್ಕೋಡಗಾಮಾ-ದೆಹಲಿ ನಡುವಿನ ಹಜರತ್ ನಿಜಾಮುದ್ದಿನ್ ಎಕ್ಸಪ್ರೆಸ್, ವಿಜಯವಾಡ-ಮಹಾರಾಷ್ಟ್ರ ನಡುವಿನ ಅಮರಾವತಿ ಎಕ್ಸಪ್ರೆಸ್ ಹಾಗೂ ಹುಬ್ಬಳ್ಳಿ- ಮೈಸೂರು ನಡುವಿನ ಶರಾವತಿ ಎಕ್ಸಪ್ರೆಸ್ ರೈಲಿನಲ್ಲಿ ‘ಮೇರಾ ಸಹೇಲಿ’ ನೆರವಿಗೆ ಬರುತ್ತಿದೆ.
Tap to resize

ಆರ್‌ಪಿಎಫ್ ಹುಬ್ಬಳ್ಳಿ ಡಿವಿಜನಲ್ ಸೆಕ್ಯೂರಿಟಿ ಕಮೀಷನರ್ ವಲ್ಲೇಶ್ವರಂ ಮಾತನಾಡಿ, ‘ಮೇರಾ ಸಹೇಲಿ ಯೋಜನೆಗಾಗಿ ಆರ್‌ಪಿಎಫ್ ಮಹಿಳಾ ಸಬ್‌ಇನ್‌ಸ್ಪೆಕ್ಟರ್ ನೇತೃತ್ವದಲ್ಲಿ ಇದಕ್ಕೆ ತಂಡ ರಚಿಸಲಾಗಿದೆ. ರೈಲಿಗೆ ತೆರಳುವ ಮೂವರು ಮಹಿಳಾ ಕಾನ್‌ಸ್ಟೇಬಲ್‌ಗಳು ಒಂಟಿ ಮಹಿಳೆಯರು ಕೆಲ ಮಹಿಳೆಯರು ಮಾತ್ರ ಸಂಚರಿಸುತ್ತಿದ್ದರೆ ಅವರನ್ನು ಗುರುತಿಸಿ ಮಾತನಾಡಿಸಿ ಪ್ರಯಾಣದ ವಿವರ ಪಡೆಯಲಿದ್ದಾರೆ. ಪ್ರಮುಖವಾಗಿ ಸುರಕ್ಷತೆಯ ಅಭಯ ನೀಡುತ್ತಾರೆ.
ಸಮಸ್ಯೆ ಏನಾದರೂ ಇದ್ದರೆ ಕೇಳುತ್ತಾರೆ. ಅಲ್ಲದೆ, ಅವರ ಮೊಬೈಲ್ ಸಂಖ್ಯೆ ಪಡೆದು ಎಲ್ಲ ಜಂಕ್ಷನ್‌ಗಳಿಗೆ ನೀಡುತ್ತಾರೆ. ಪ್ರಮುಖ ಜಂಕ್ಷನ್‌ಗಳಲ್ಲಿರುವ ಆರ್‌ಪಿಎಫ್ ಠಾಣೆಗಳಿಗೂ ಈ ಸಂಖ್ಯೆ ತಲುಪುತ್ತದೆ. ಆಯಾ ಜಂಕ್ಷನ್‌ಗಳಲ್ಲಿರುವ ಮಹಿಳಾ ಪೊಲೀಸ್ ಸಿಬ್ಬಂದಿ ರೈಲು ತಲುಪಿದೊಡನೆ ಮಹಿಳೆ ಇರುವಲ್ಲಿ ತೆರಳಿ ಪ್ರಯಾಣದ ಕುರಿತು, ಸಮಸ್ಯೆ ಕುರಿತು ಕೇಳಿ ಪಡೆಯುತ್ತಾರೆ ಎಂದರು.
ಮಹಿಳೆಯರ ರಕ್ಷಣೆಗೆ ಈ ಕ್ರಮ ಹೆಚ್ಚು ನೆರವಾಗಲಿದೆ. ಮಹಿಳಾ ಪೊಲೀಸರು ಖುದ್ದಾಗಿ ಬೋಗಿಗೆ ತೆರಳಿ ಮಹಿಳೆಯಿಂದ ಮಾಹಿತಿ ಪಡೆಯುವುದರಿಂದ ಬೋಗಿಯಲ್ಲಿ ಇರುವ ಇತರರಲ್ಲಿ ದುರುದ್ದೇಶ ಇದ್ದರೂ ಕೊಂಚ ಹಿಂದೇಟು ಹಾಕುತ್ತಾರೆ. ಅಲ್ಲದೆ, ಒಂಟಿ ಮಹಿಳೆಯರಿಗೆ ಮೇರಾ ಸಹೇಲಿ ಆತ್ಮವಿಶ್ವಾಸ ಮೂಡಿಸುತ್ತದೆ’ ಎಂದು ವಲ್ಲೇಶ್ವರಂ ತಿಳಿಸಿದರು.
ಈ ಬಗ್ಗೆ ಮಾತನಾಡಿದ ನೈಋತ್ಯ ರೈಲ್ವೆ ಪ್ರಧಾನ ಸಾರ್ವಜನಿಕ ಸಂಪರ್ಕಾಧಿಕಾರಿ ಎ. ವಿಜಯಾ, ಇದರಿಂದ ನೈಋತ್ಯ ರೈಲ್ವೆಯಲ್ಲಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರಿಗೆ ಹೆಚ್ಚಿನ ಭದ್ರತೆ ಲಭಿಸಲಿದೆ. ಭಯವಿಲ್ಲದೆ ಮಹಿಳೆಯರು ಪ್ರಯಾಣ ಮಾಡುವಂತಾಗಲು ಮೇರಾ ಸಹೇಲಿ ಜಾರಿಗೊಂಡಿದೆ. ಆಗ್ನೇಯ, ನೈಋತ್ಯ ರೈಲ್ವೆ ಬಳಿಕ ಮುಂದಿನ ದಿನಗಳಲ್ಲಿ ಇನ್ನೆರಡು ವಲಯಗಳಲ್ಲೂ ಇದು ಆರಂಭವಾಗಲಿದೆ ಎಂದರು.
ಸದ್ಯ ನಾಲ್ಕು ದೂರ ಪ್ರಯಾಣದ ರೈಲುಗಳಲ್ಲಿ ಮೇರಾ ಸಹೇಲಿ ಆರಂಭವಾಗಿದೆ. ತೊಂದರೆಗೆ ಒಳಗಾದ ಮಹಿಳೆಯರೆ ಆಯಾ ಜಂಕ್ಷನ್‌ಗಳ ಪೊಲೀಸ್ ಠಾಣೆಗೆ ಬರುವುದು, ಆತಂಕಕ್ಕೆ ಒಳಗಾಗುವುದು ತಪ್ಪಲಿದೆ. ಮುಖ್ಯವಾಗಿ ಸುರಕ್ಷತಾ ಭಾವ, ಆತ್ಮವಿಶ್ವಾಸ ಮೂಡಿಸುವುದು ಇದರ ಉದ್ದೇಶ ಎಂದು ಆರ್‌ಪಿಎಫ್ ಹುಬ್ಬಳ್ಳಿ ಡಿವಿಜನಲ್ ಸೆಕ್ಯೂರಿಟಿ ಕಮೀಷನರ್ ವಲ್ಲೇಶ್ವರಂ ಅವರು ತಿಳಿಸಿದ್ದಾರೆ.

Latest Videos

click me!