ಕಲಬುರಗಿಯಲ್ಲಿ, ಎಸ್‌ಸಿ-ಎಸ್‌ಟಿ ಪ್ರಕರಣವೊಂದರಲ್ಲಿ (SC-ST Case) ಅನುಕೂಲಿ ಮಾಡಿಕೊಡುವಂತೆ ಸರ್ಕಾರಿ ಅಭಿಯೋಜಕರಿಗೆ (Public prosecutor) ಲಂಚ ನೀಡಲು ಯತ್ನಿಸಿದ ತಂದೆ-ಮಗನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಲಂಚ ನೀಡಲು ಬಂದವರೇ ಸಿಕ್ಕಿಬಿದ್ದ ಈ ಅಪರೂಪದ ಘಟನೆ ಚರ್ಚೆಗೆ ಗ್ರಾಸವಾಗಿದೆ.
ಕಲಬುರಗಿ (ಜೂ.15): ಸಾಮಾನ್ಯವಾಗಿ ಸರ್ಕಾರಿ ನೌಕರರು ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬೀಳುವುದನ್ನು ನಾವು ಕೇಳಿದ್ದೇವೆ. ಆದರೆ, ಕಲಬುರಗಿಯಲ್ಲಿ ಒಂದು ಅಪರೂಪದ ಮತ್ತು ಅಚ್ಚರಿಯ ಪ್ರಕರಣ ನಡೆದಿದೆ. ಇಲ್ಲಿ ಲಂಚ ಪಡೆಯುವವರ ಬದಲು, ಲಂಚ ನೀಡಲು ಬಂದವರೇ ಲೋಕಾಯುಕ್ತ ಪೊಲೀಸರ ಅತಿಥಿಯಾಗಿದ್ದಾರೆ!
25
ನಡೆದಿದ್ದೇನು?
ಸಂಜೀವ್ ಪಾಟೀಲ್ ಮತ್ತು ಸುರೇಶ್ ಪಾಟೀಲ್ ಎಂಬ ತಂದೆ-ಮಗನೇ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದವರು. ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವ ಎಸ್‌ಸಿ-ಎಸ್‌ಟಿ (SC-ST) ಕಾಯ್ದೆಯಡಿ ದಾಖಲಾಗಿರುವ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅನುಕೂಲ ಮಾಡಿಕೊಡುವಂತೆ ಕೋರಿ ಇವರು ಸರ್ಕಾರಿ ಅಭಿಯೋಜಕರಿಗೆ (Public Prosecutor) ಲಂಚ ನೀಡಲು ಮುಂದಾಗಿದ್ದರು.
35
ಅಭಿಯೋಜಕರ ಪ್ರಾಮಾಣಿಕತೆ:
ಹಿರಿಯ ಸರ್ಕಾರಿ ಅಭಿಯೋಜಕರಾದ ಪ್ರಾಣೇಶ ಭರತನೂರ ಅವರಿಗೆ ಈ ತಂದೆ-ಮಗ 5,000 ರೂಪಾಯಿ ಲಂಚ ನೀಡಲು ಪ್ರಯತ್ನಿಸಿದ್ದರು. ಎಷ್ಟೇ ಬೇಡವೆಂದರೂ ಒತ್ತಾಯಪೂರ್ವಕವಾಗಿ ಲಂಚ ನೀಡಲು ಮುಂದಾದಾಗ, ಭರತನೂರ ಅವರು ಕೂಡಲೇ ಲೋಕಾಯುಕ್ತ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಒಬ್ಬ ಸರ್ಕಾರಿ ಅಧಿಕಾರಿಯಾಗಿ ಭ್ರಷ್ಟಾಚಾರಕ್ಕೆ ಮಣಿಯದೆ, ಲಂಚ ನೀಡಲು ಬಂದವರ ವಿರುದ್ಧವೇ ದೂರು ನೀಡುವ ಮೂಲಕ ಪ್ರಾಣೇಶ ಭರತನೂರ ಅವರು ಮಾದರಿಯಾಗಿದ್ದಾರೆ.
ಅಭಿಯೋಜಕರ ದೂರಿನ ಅನ್ವಯ ತಕ್ಷಣ ಕಾರ್ಯಪ್ರವೃತ್ತರಾದ ಲೋಕಾಯುಕ್ತ ಪೊಲೀಸರು, ಲಂಚದ ಹಣದೊಂದಿಗೆ ಬಂದಿದ್ದ ಸಂಜೀವ್ ಪಾಟೀಲ್ ಮತ್ತು ಸುರೇಶ್ ಪಾಟೀಲ್ ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಸದ್ಯ ತಂದೆ ಮತ್ತು ಮಗ ಇಬ್ಬರನ್ನೂ ಬಂಧಿಸಿರುವ ಪೊಲೀಸರು, ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
55
ಜನರಿಂದ ಭ್ರಷ್ಟಾಚಾರವನ್ನೂ ಸಹಿಸೊಲ್ಲ
ಸಾಮಾನ್ಯವಾಗಿ ಲಂಚಕ್ಕಾಗಿ ಪೀಡಿಸುವ ಅಧಿಕಾರಿಗಳ ನಡುವೆ, ಲಂಚ ನೀಡಲು ಬಂದವರನ್ನೇ ಪೊಲೀಸರಿಗೆ ಹಿಡಿದುಕೊಟ್ಟ ಈ ಘಟನೆ ಈಗ ಕಲಬುರಗಿಯಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ. ಭ್ರಷ್ಟಾಚಾರ ಕೇವಲ ಅಧಿಕಾರಿಗಳಿಂದ ಮಾತ್ರವಲ್ಲ, ಸಾರ್ವಜನಿಕರಿಂದಲೂ ಆರಂಭವಾಗುತ್ತದೆ ಮತ್ತು ಅಂತಹವರಿಗೆ ಇದು ಒಂದು ದೊಡ್ಡ ಎಚ್ಚರಿಕೆಯಾಗಿದೆ.