ವಿಜಯಪುರ-ಯಶವಂತಪುರ ರೈಲಿನ ಇಂಜಿನ್ ವೈಫಲ್ಯ; ಬಸವ ಎಕ್ಸ್‌ಪ್ರೆಸ್ ತಡೆದು ಕಲ್ಲು ತೂರಾಟ

Published : Sep 05, 2026, 07:11 PM IST

ವಿಜಯಪುರದಿಂದ ಯಶವಂತಪುರಕ್ಕೆ ಹೊರಟಿದ್ದ ರೈಲು ತಾಂತ್ರಿಕ ದೋಷದಿಂದ ಸುಮಾರು 5 ಗಂಟೆಗಳ ಕಾಲ ನಿಂತಿತ್ತು. ಇದರಿಂದಾಗಿ, CAR/DAR ಪೊಲೀಸ್ ಪರೀಕ್ಷೆಗೆ ತೆರಳುತ್ತಿದ್ದ ನೂರಾರು ಅಭ್ಯರ್ಥಿಗಳು ಪರೀಕ್ಷೆ ತಪ್ಪುವ ಆತಂಕದಿಂದ ರೈಲ್ವೆ ಇಲಾಖೆ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿದರು.

PREV
15
ವಿಜಯಪುರದಿಂದ ಯಶವಂತಪುರಕ್ಕೆ ಹೊರಟಿದ್ದ ರೈಲು

ವಿಜಯಪುರದಿಂದ ಯಶವಂತಪುರಕ್ಕೆ ಹೊರಟಿದ್ದ ರೈಲು (ಸಂಖ್ಯೆ 16548) ವಿಜಯಪುರ ರೈಲು ನಿಲ್ದಾಣದಿಂದ ಮಧ್ಯಾಹ್ನ 2:50ಕ್ಕೆ ನಿರ್ಗಮಿಸಿ, ಸುಮಾರು 3-4 ಕಿಲೋಮೀಟರ್ ಚಲಿಸುತ್ತಿದ್ದಂತೆಯೇ ತಾಂತ್ರಿಕ ದೋಷದಿಂದ ಇಂಜಿನ್ ವೈಫಲ್ಯ ಕಂಡಿದೆ. ಮರುದಿನ ಬೆಳಗ್ಗೆ 5:00 ಗಂಟೆಗೆ ಯಶವಂತಪುರಕ್ಕೆ ತಲುಪಬೇಕಿದ್ದ ಈ ರೈಲು, ಇಂಜಿನ್ ಸಮಸ್ಯೆಯಿಂದಾಗಿ ಸತತ 5 ಗಂಟೆಗಳ ಕಾಲ ಒಂದೇ ಸ್ಥಳದಲ್ಲಿ ನಿಂತು ಪ್ರಯಾಣಿಕರಿಗೆ ತೀವ್ರ ತೊಂದರೆಯುಂಟುಮಾಡಿತು.

25
ಸಿಟಿ ಆರ್ಮ್ಡ್ (CAR) ಹಾಗೂ ಡಿಸ್ಟ್ರಿಕ್ಟ್ ಆರ್ಮ್ಡ್ (DAR) ಮೀಸಲು ಪೊಲೀಸ್ ಪಡೆ ಹುದ್ದೆಗಳ ಪರೀಕ್ಷೆ

ಈ ರೈಲಿನಲ್ಲಿ ಮರುದಿನ ಬೆಳಗ್ಗೆ 10:00 ಗಂಟೆಗೆ ನಡೆಯಲಿದ್ದ ಸಿಟಿ ಆರ್ಮ್ಡ್ (CAR) ಹಾಗೂ ಡಿಸ್ಟ್ರಿಕ್ಟ್ ಆರ್ಮ್ಡ್ (DAR) ಮೀಸಲು ಪೊಲೀಸ್ ಪಡೆ ಹುದ್ದೆಗಳ ಪರೀಕ್ಷೆಗೆ ಹಾಜರಾಗಬೇಕಿದ್ದ ಸುಮಾರು 500 ರಿಂದ 1000 ಪರೀಕ್ಷಾರ್ಥಿಗಳು ಪ್ರಯಾಣಿಸುತ್ತಿದ್ದರು. ಪರೀಕ್ಷಾರ್ಥಿಗಳು ಬೆಳಿಗ್ಗೆ 9:30 ರೊಳಗೆ ಬೆಂಗಳೂರು ಹಾಗೂ ತುಮಕೂರಿನ ಪರೀಕ್ಷಾ ಕೇಂದ್ರ ತಲುಪುವುದು ಕಡ್ಡಾಯವಾಗಿದ್ದರಿಂದ, ರೈಲಿನ ವಿಳಂಬದಿಂದ ಆಕ್ರೋಶಗೊಂಡ ಅಭ್ಯರ್ಥಿಗಳು ಕೆಳಗಿಳಿದು ರೈಲ್ವೆ ಇಲಾಖೆ ಅಧಿಕಾರಿಗಳ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿದರು.

35
ಕಲ್ಲು ತೂರಾಟ

ಈ ವೇಳೆ ಪಕ್ಕದ ಹಳಿಯಲ್ಲಿ ಬಾಗಲಕೋಟೆ, ಸೊಲ್ಲಾಪುರ ಹಾಗೂ ಮೈಸೂರು ಮಾರ್ಗವಾಗಿ ಸಂಚರಿಸುತ್ತಿದ್ದ ಬಸವ ಎಕ್ಸ್‌ಪ್ರೆಸ್ ರೈಲನ್ನು ತಡೆದು, ಕೆಲ ಯುವಕರು ಚಲಿಸುತ್ತಿದ್ದ ರೈಲಿನ ಮುಂದೆ ನಿಂತು, ಅವಾಚ್ಯ ಶಬ್ದಗಳಿಂದ ನಿಂದಿಸಿ ಕಲ್ಲು ತೂರಾಟ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

45
ರೈಲು ಚಲಿಸುವಂತೆ ವ್ಯವಸ್ಥೆ

ಸ್ಥಳಕ್ಕೆ ಆಗಮಿಸಿದ ರೈಲ್ವೆ ಪೊಲೀಸರು ಯುವಕರನ್ನು ಸಮಾಧಾನಪಡಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಇದೇ ಸಮಯದಲ್ಲಿ ರೈಲ್ವೆ ಅಧಿಕಾರಿಗಳು ವಿಜಯಪುರ-ಬೆಂಗಳೂರು ರೈಲಿಗೆ ಹಿಂಬದಿಯಿಂದ ಮತ್ತೊಂದು ಇಂಜಿನ್ ಜೋಡಿಸಿ ರೈಲು ಚಲಿಸುವಂತೆ ವ್ಯವಸ್ಥೆ ಮಾಡಿದರು.

55
ರೈಲ್ವೆ ಇಲಾಖೆಯೇ ಹೊಣೆ

ರೈಲು ಚಲಿಸಲು ಪ್ರಾರಂಭಿಸುತ್ತಿದ್ದಂತೆ ಪರೀಕ್ಷಾರ್ಥಿಗಳು ಮತ್ತೆ ಪ್ರಯಾಣಕ್ಕೆ ಅಣಿಯಾದರಾದರೂ, ಮರುದಿನದ ಪರೀಕ್ಷೆಗೆ ಒಂದು ವೇಳೆ ವಿಳಂಬವಾದರೆ ಅದಕ್ಕೆ ಸಂಪೂರ್ಣವಾಗಿ ರೈಲ್ವೆ ಇಲಾಖೆಯೇ ಹೊಣೆ ಎಂದು ಆರೋಪಿಸಿದರು. ಈ ಘಟನೆಯಿಂದಾಗಿ ಸ್ಥಳದಲ್ಲಿ ಕೆಲ ಕಾಲ ತೀವ್ರ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು.

Read more Photos on
click me!

Recommended Stories