
ಹುಬ್ಬಳ್ಳಿ (ಜು.24) : ಹುಬ್ಬಳ್ಳಿ ನಗರದಲ್ಲಿ ಶಿಕ್ಷಕ ದಂಪತಿಯ ಮನೆಯಲ್ಲಿ ಅಡುಗೆ ಮಾಡಲು ಬಳಸುವ ಗ್ಯಾಸ್ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿದ್ದು, ಮನೆಯಲ್ಲಿ ಕತ್ತಲಾಗಿದ್ದರಿಂದ ಮೊಬೈಲ್ ಟಾರ್ಚ್ ಆನ್ ಮಾಡುತ್ತಿದ್ದಂತೆಯೇ ಬೆಂಕಿ ಹೊತ್ತಿಕೊಂಡು ಮನೆಯಲ್ಲಿದ್ದ ದಂಪತಿ ಹಾಗೂ ಇಬ್ಬರು ಮಕ್ಕಳಿಗೆ ಗಂಭೀರ ಗಾಯವಾಗಿತ್ತು. ಆದರೆ, ಈ ಪ್ರಕರಣಕ್ಕೆ ಗಾಯಾಳು ಮಹಿಳೆಯ ತಂಗಿ, ತಮ್ಮ ಅಕ್ಕನ ಗಂಡನೇ ಕೊಲೆ ಯತ್ನ ಮಾಡಿದ್ದು, ಅವರನ್ನು ಬಂಧನ ಮಾಡಿ ತನಿಖೆ ಮಾಡುವಂತೆ ಆಗ್ರಹ ಮಾಡಿದ್ದಾರೆ.
ಹುಬ್ಬಳ್ಳಿ ನಗರ ಶಕ್ತಿ ಕಾಲನಿಯಲ್ಲಿ ಸಿಲಿಂಡರ್ ಸೋರಿಕೆಯಾಗಿ ಬ್ಲಾಸ್ಟ್ ಆದ ಅವಘದಲ್ಲಿ ನಾಲ್ಕು ಜನರಿಗೆ ಗಾಯವಾಗಿದೆ. ಶಿಕ್ಷಕ ಮಹಾಂತೇಶ ಬಳ್ಳಾರಿ, ಅವರ ಪತ್ನಿ ದೈಹಿಕ ಶಿಕ್ಷಣ ಶಿಕ್ಷಕಿ ಗಂಗಮ್ಮ ಬಳ್ಳಾರಿ, ಮಕ್ಕಳಾದ ಮನೋರಂಜನ್ ಮತ್ತು ಕಾರುಣ್ಯ ಎನ್ನುವವರು ಗಾಯಾಳು ಆಗಿದ್ದಾರೆ. ಗಂಗಮ್ಮ ಬಳ್ಳಾರಿ ಎನ್ನುವವರ ಸ್ಥಿತಿ ಗಂಭೀರವಾಗಿದೆ. ನೆನ್ನೆ ರಾತ್ರಿ ಅವಘಡ ಸಂಭವಿಸಿದ್ದು, ಹುಬ್ಬಳ್ಳಿ ಅಶೋಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸಿಲಿಂಡರ್ ಸೋರಿಕೆ ಅವಘಡ ಪ್ರಕರಣದ ಗಾಯಳುಗಳಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಈ ಬಗ್ಗೆ ಕಿಮ್ಸ್ ನಿರ್ದೇಶಕ ಡಾ.ಈಶ್ವರ ಹೊಸಮನಿ ಮಾಧ್ಯಮಗಳೊಂದಿಗೆ ಮಾತನಾಡಿ, ಎಲ್‌ಪಿಜಿ ಅನಿಲ ಸೋರಿಕೆಯಿಂದ ಬೆಂಕಿ ಅವಘಡ ಆಗಿದೆ. ಮೊಬೈಲ್ ಟಾರ್ಚ್ ಆನ್ ಮಾಡಿದ್ದರಿಂದ ದುರ್ಘಟನೆ ಆಗಿದೆ. ಸಿಲಿಂಡರ್‌ಗೆ ಹತ್ತಿರವೇ ಇದ್ದ ಗಂಗಮ್ಮಗೆ ಹೆಚ್ಚಿನ ಗಾಯವಾಗಿದೆ. ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಪತಿ ಮಹಾಂತೇಶ ಶೇ.15 ರಷ್ಟು ಗಾಯವಾಗಿದೆ ಎಂದು ಮಾಹಿತಿ ನೀಡಿದರು.
ಇನ್ನು ಘಟನೆ ವಿವರಕ್ಕೆ ಬಂದರೆ ನಿನ್ನೆ ಮನೆಯವರೆಲ್ಲ ಸೇರಿ ಹೊರಗಡೆ ಹೋಗಿದ್ದರು. ಮರಳಿ ಮನೆಗೆ ಬಂದು ಮಲ್ಕೊಂಡಿದ್ದಾರೆ. ನಂತರ ಸ್ವಲ್ಪ ಕತ್ತಲಾದಾಗ ಎದ್ದು ಟಾರ್ಚ್ ಆನ್ ಮಾಡಿದ್ದಾರೆ. ಆನ್ ಮಾಡುತ್ತಲೇ ಮನೆಯೆಲ್ಲಾ ಬೆಂಕಿ ಆವರಿಸಿಕೊಂಡಿದೆ. ಗಾಯಾಳುಗಳಿಗೆ ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಸುಟ್ಟ ಗಾಯಗಳ ತಜ್ಞರು ಬಂದು ಅವರಿಗೆ ಚಿಕಿತ್ಸೆ ಆರಂಭ ಮಾಡಲಾಗಿದೆ.
ಅಕ್ಕನ ಕೊಲೆ ಯತ್ನ ಎಂದು ಆರೋಪ:
ಬೆಂಕಿಯಿಂದ ಗಂಭೀರ ಗಾಯಗೊಂಡ ಗಂಗಮ್ಮಳ ಸಹೋದರಿ ಅಕ್ಷತಾ ಕೊಲೆ ಆರೋಪ ಮಾಡಿದ್ದಾರೆ. ಮಹಾಂತೇಶನೇ ನನ್ನ ಅಕ್ಕಳನ್ನ ಕೊಲೆ ಮಾಡಲು ಪ್ರಯತ್ನ ಮಾಡಿದ್ದಾನೆ. ಆಸ್ತಿಗಾಗಿ ನನ್ನ ಅಕ್ಕಳನ್ನ ಕೊಲೆ ಪ್ರಯತ್ನ ಮಾಡಲಾಗಿದೆ.
ಮೊಬೈಲ್ ಟಾರ್ಚ್‌ನಿಂದ ಬೆಂಕಿ ಹತ್ತಿದ್ದರೆ ಮೊಬೈಲ್ ಬ್ಲಾಸ್ಟ್ ಆಗಬೇಕಿತ್ತು. ಜೊತೆಗೆ ಇಡೀ ಮನೆಯ ಎಲ್ಲ ವಸ್ತುಗಳು ಛೀದ್ರವಾಗಬೇಕಿತ್ತು. ಇಲ್ಲಿ ಮಹಾಂತೇಶನಿಗೆ ಏನೂ ಆಗಿಲ್ಲ, ನನ್ನ ಅಕ್ಕಳಿಗೆ ಗಂಭೀರ ಗಾಯವಾಗಿದೆ. ಮನೆಯಲ್ಲಿನ ಒಂದು ವಸ್ತು ಸಹ ಅಲುಗಾಡಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ನಮ್ಮ ಅಕ್ಕ ಗಂಗಮ್ಮ ಮತ್ತು ಮಾವ ಮಹಾಂತೇಶ್ ಇಬ್ಬರಿಗೂ ಮೊದಲಿನಿಂದಲೂ ಜಗಳ ನಡೆಯುತ್ತಿತ್ತು. ನಮ್ಮ ಅಕ್ಕನಿಗೆ ಅನೇಕ ಬಾರಿ ಆಕೆಯ ಪತಿ ಹಿಂಸೆ ನೀಡಿದ್ದಾನೆ. ನಮ್ಮ ಅಕ್ಕ ನಿನ್ನೆ ಎಲ್ಲೂ ಹೊರಗಡೆ ಹೋಗಿಲ್ಲ, ಮನೇಲೆ ಇದ್ದರು. ಮಾವ ಹಾಗೂ ಆತನ ಕುಟುಂಬಸ್ಥರಿಂದ ಕೊಲೆ ಪ್ರಯತ್ನ ನಡೆದಿದೆ.
ಇದೀಗ ಕೊಲೆ ಯತ್ನ ಪ್ರಕರಣವನ್ನ ತಿರುಚುವ ಸಂಚು ಮಾಡುತ್ತಿದ್ದಾರೆ. ಈ ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸಬೇಕು. ಪೊಲೀಸ್ ಇಲಾಖೆ ಪ್ರಕರಣ ದಾಖಲಿಸಿಕೊಂಡು ಸೂಕ್ತ ತನಿಖೆ ನಡೆಸಿದರೆ ಮಾತ್ರ ಸತ್ಯಾಸತ್ಯತೆ ಹೊರಬರಲಿದೆ ಎಂದು ಆಗ್ರಹ ಮಾಡಿದ್ದಾರೆ.
ಮೊಬೈಲ್ ಟಾರ್ಚ್ ಆನ್ ಮಾಡುತ್ತಿದ್ದಂತೆ ಬೆಂಕಿ:
ರಾತ್ರಿ ವೇಳೆ ಮನೆಯಲ್ಲಿ ಕರೆಂಟ್ ಹೋಗಿದ್ದರಿಂದ ಮಹಾಂತೇಶ್ ಬಳ್ಳಾರಿ ಅವರು ಮೊಬೈಲ್ ಟಾರ್ಚ್ ಆನ್ ಮಾಡಿದ್ದಾರೆ. ಮನೆಯಲ್ಲಿ ಅನಿಲ ತುಂಬಿಕೊಂಡಿದ್ದು, ಟಾರ್ಚ್ ಆನ್ ಮಾಡ್ತಿದ್ದಂತೆಯೇ ದಿಢೀರನೇ ಬೆಂಕಿ ಹೊತ್ತಿಕೊಂಡಿದೆ. ಘಟನೆಯಲ್ಲಿ ಗಂಡ ಹೆಂಡತಿ ಹಾಗೂ ಇಬ್ಬರು ಮಕ್ಕಳು ಗಾಯಗೊಂಡಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಭೇಟಿ:
ಮಹಾಂತೇಶ್ ಅವರು ಶಿಕ್ಷಕರಾಗಿದ್ದು, ವಿಶ್ವೇಶ್ವರ ನಗರದ ಸಂಕಾರಿ ಪ್ರೌಢಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಪತ್ನಿ ಗಂಗಮ್ಮ ನಾಗಶಟ್ಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. ಈ ಘಟನೆ ಹಿನ್ನೆಲೆಯಲ್ಲಿ ಕಿಮ್ಸ್ ಆಸ್ಪತ್ರೆಗೆ ಸಭಾಪತಿ ಬಸವರಾಜ್ ಹೊರಟ್ಟಿ ಭೇಟಿ ನೀಡಿ ಗಾಯಳುಗಳ ಆರೋಗ್ಯ ವಿಚಾರಿಸಿದ್ದಾರೆ. ಆಕಸ್ಮಿಕವಾಗಿ ದುರ್ಘಟನೆ ನಡೆದಿದೆ. ಗಂಡ ಹೆಂಡತಿ ಇಬ್ಬರೂ ಶಿಕ್ಷಕರಾಗಿದ್ದರು. ನಾಲ್ವರು ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದೆ. ಎಲ್ಲರೂ ಆದಷ್ಟು ಬೇಗ ಗುಣಮುಖರಾಗಲಿ ಎಂದು ಬಸರಾಜ ಹೊರಟ್ಟಿ ಹೇಳಿದರು.