ಕೊಪ್ಪಳ: ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ

First Published | Jan 27, 2021, 12:59 PM IST

ಕೊಪ್ಪಳ(ಜ.27): ಕೋವಿಡ್‌ ಸಂಕಷ್ಟದ ವೇಳೆಯಲ್ಲಿ ಅಳೆದು, ತೂಗಿ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವವನ್ನು ಅತ್ಯಂತ ಸರಳವಾಗಿ ಆಚರಣೆ ಮಾಡಲು ಗವಿಮಠ ಹಾಗೂ ಜಿಲ್ಲಾಡಳಿತ ತೀರ್ಮಾನ ಮಾಡಿರುವ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿಯೇ ಜಾತ್ರಾ ಮಹೋತ್ಸವ ಮಂಗಳವಾರ ವಿದ್ಯುಕ್ತವಾಗಿ ಚಾಲನೆಗೊಂಡಿದೆ.

ಕಳಸಾರೋಹಣ ಮತ್ತು ಬಸವಪಟ ಆರೋಹಣದ ಮೂಲಕವೇ ಗವಿಮಠದಲ್ಲಿ ಜಾತ್ರೆಯ ಧಾರ್ಮಿಕ ವಿಧಿ ವಿಧಾನಗಳು ಪ್ರಾರಭವಾಯಿತು. ಯಾವುದೇ ವಾದ್ಯ, ವೃಂದ ಮೆರವಣಿಗೆಯ ಅಬ್ಬರ ಇಲ್ಲದ ಸರಳವಾಗಿ ಧಾರ್ಮಿಕ ಆಚರಣೆಯನ್ನು ಮಾಡಲಾಯಿತು.
ಭಕ್ತರು ಶ್ರೀ ಗವಿಮಠದ ಕರ್ತೃ ಗದ್ದುಗೆಯ ಸುತ್ತ 5 ಸುತ್ತ ಪ್ರದಕ್ಷಿಣೆ ಹಾಕಿ ಶ್ರೀಗವಿಸಿದ್ಧೇಶ್ವರನ ಜಯಘೋಷಗಳೊಂದಿಗೆ ಕರ್ತೃಗದ್ದುಗೆಯ ದ್ವಾರದ ಎದುರಿಗಿರುವ ಶಿಲಾಸ್ತಂಭಕ್ಕೆ ಬಸವ ಪಟಕಟ್ಟುವುದರ ಮೂಲಕ ಪ್ರತಿ ವರ್ಷದ ಸಂಪ್ರದಾಯ ಮಾಡಲಾಯಿತು.
Tap to resize

ಪ್ರತಿವರ್ಷವೂ ಜಾತ್ರೆಯಲ್ಲಿ ತಾಯಂದಿರ ಕಾರ್ಯಕ್ರಮದ ಬಳಿಕವೇ ಉಳಿದೆಲ್ಲಾ ಕಾರ್ಯಕ್ರಮಗಳನ್ನು ಪ್ರಾರಂಭಿಸುವ ಸಂಪ್ರದಾಯದಂತೆ ತಾಯಿ ಅನ್ನಪೂರ್ಣೇಶ್ವರ ತಾಯಿಗೆ ಉಡಿ ತುಂಬಲಾಯಿತು.
ಶ್ರೀ ಅನ್ನಪೂರ್ಣೆಶ್ವರಿ ದೇವಿಗೆ ಬಾಳೆ ಕಂಬ, ತೆಂಗಿನ ಗರಿ, ಕಬ್ಬಿನ ಗಳ, ತಳಿರು ತೋರಣಗಳಿಂದ ಹಂದರವನ್ನು ನಿರ್ಮಿಸಿ, ಉಡಿ ತುಂಬಲಾಯಿತು. ಈ ಕಾರ್ಯಕ್ರಮ ಮುಗಿಯುತ್ತಿದ್ದಂತೆ ನಗರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಮಹಿಳೆಯರು ತಾಯಿ ಅನ್ನಪೂರ್ಣೇಶ್ವರಿಗೆ ಉಡಿ ತುಂಬುತ್ತಾರೆ. ಇದಲ್ಲದೆ ತಮ್ಮ ತಮ್ಮಲ್ಲಿಯೂ ಉಡಿತುಂಬಿಕೊಳ್ಳುವ ಸಂಪ್ರದಾಯ ಮಾಡಲಾಯಿತು.
ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಸಂಜೆ 4.20ಕ್ಕೆ ಪಂಚ ಕಳಸೋತ್ಸವ ನಡೆಯಿತು.
ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಜ. 30ರಿಂದ ಮೂರು ದಿನಗಳ ಕಾಲ ಬೃಹತ್‌ ರಕ್ತದಾನ ಶಿಬಿರ ನಡೆಯುತ್ತದೆ. ಮಹಾವಿದ್ಯಾಲಯದಲ್ಲಿ ಶಿಬಿರ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ಹಮ್ಮಿಕೊಳ್ಳಲಾಗಿದೆ.
ಕಳೆದ ವರ್ಷದ ಜಾತ್ರಾಮಹೋತ್ವದಲ್ಲಿ 602 ಜನರು ರಕ್ತದಾನ ಮಾಡಿದ್ದು, ಈ ವರ್ಷವೂ ಕೋವಿಡ್‌ಇರುವುದರಿಂದ ರಕ್ತದ ಬೇಡಿಕೆ ಅಧಿಕವಾಗಿರುವುದರಿಂದ ಅರ್ಹರು ಅಧಿಕ ಸಂಖ್ಯೆಯಲ್ಲಿ ರಕ್ತದಾನ ಮಾಡುವಂತೆ ಕೋರಲಾಗಿದೆ.
ಗವಿಮಠದ ಆವರಣದಲ್ಲಿ ಪ್ರತಿ ವರ್ಷದಂತೆ ಕಳೆಗಟ್ಟಿಲ್ಲವಾದರೂ ವಿದ್ಯುದ್‌ದೀಪಾಲಂಕಾರ ಕಂಗೊಳಿಸುವಂತೆ ಆಗಿದೆ. ಮೈದಾನವನ್ನು ಸ್ವಚ್ಛ ಮಾಡಲಾಗಿದ್ದು, ದಾಸೋಹಕ್ಕೂ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ.
ಕಳಾಸರೋಹಣ, ಬಸವಪಟ ಹಾರಿಸುವ ಮೂಲಕ ಚಾಲನೆ

Latest Videos

click me!