ತಾಲೂಕಿನ ಇರಕಲ್ಲಗಡಾ ಗ್ರಾಮದಲ್ಲಿ ಮಂಗಳವಾರ ರೈತರ ನೂತನ ಸಂತೆ ಮಾರುಕಟ್ಟೆ ಉದ್ಘಾಟಿಸಿ ಮಾತನಾಡಿದರು.
ನಿಜವಾದ ಗಣರಾಜ್ಯೋತ್ಸವ ಇವತ್ತಾಗಿದೆ. ಏಕೆಂದರೆ ಕೃಷಿಕರ ವಸ್ತು ಪ್ರದರ್ಶನ ಹಾಗೂ ರೈತರ ಸಂತೆ ಕಾರ್ಯಕ್ರಮ ರೈತರಿಗೆ ಚೈತನ್ಯ ತುಂಬುತ್ತವೆ. ರೈತರ ಆದಾಯ ದ್ವಿಗುಣಗೊಳಿಸುವಲ್ಲಿಯೂ ಸಹಕಾರಿಯಾಗುತ್ತದೆ. ಶತ, ಶತಮಾನದಿಂದಲೂ ರೈತರು ಸೈಕಲ್‌ನಲ್ಲಿಯೇ ಓಡಾಡುತ್ತಿದ್ದಾರೆ. ಆದರೆ, ದಲ್ಲಾಳಿಗಳು ಮಾತ್ರ ಶ್ರೀಮಂತರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ರೈತರು ಬೆಳೆದ ಬೆಳೆಗಳನ್ನು ಮಧ್ಯವರ್ತಿಗಳಿಲ್ಲದೇ ನೇರವಾಗಿ ತಾವೇ ಗ್ರಾಹಕರಿಗೆ ಮಾರಾಟ ಮಾಡಬೇಕು ಹಾಗೂ ತಮ್ಮ ಬೆಳೆಗಳನ್ನು ಸಂಸ್ಕರಣೆ ಮಾಡಬೇಕು. ಅಲ್ಲದೇ ತಾವೇ ಬೆಲೆ ನಿಗದಿ ಮಾಡಿ, ಬ್ರಾಂಡ್ ತಯಾರಿಸಬೇಕು. ಹೀಗದಾಗ ಮಾತ್ರ ಎಲ್ಲರೂ ರೈತರ ಮನೆಗೆ ಬಂದು ಬೆಳೆಗಳನ್ನು ಖರೀದಿ ಮಾಡುತ್ತಾರೆ. ಇದರಿಂದ ರೈತರು ಆರ್ಥಿಕವಾಗಿಯೂ ಸಬಲರಾಗುತ್ತಾರೆ. ಈ ಬಗ್ಗೆ ರೈತರಿಗೆ ತರಬೇತಿ ನೀಡಲಾಗುತ್ತಿದ್ದು, ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಕೊಪ್ಪಳ ಜಿಲ್ಲೆಯಲ್ಲಿ 20 ಕೃಷಿ ಸಂಜೀವಿನಿ ವಾಹನಗಳನ್ನು ಖರೀದಿ ಮಾಡಿದ್ದೇವೆ. ಇದು ಪ್ರಯೋಗಾಲಯವನ್ನು ಕೂಡ ಒಳಗೊಂಡಿದೆ. 113 ಸಂಖ್ಯೆಗೆ ಕರೆ ಮಾಡಿದರೆ ವಾಹನವು ರೈತರ ಜಮೀನಿಗೆ ತೆರಳಿ, ಬೆಳೆಗೆ ಯಾವ ರೋಗ ಬಂದಿದೆ ಎಂಬುವುದನ್ನು ತಿಳಿಸಿ, ರೋಗಕ್ಕೆ ಪರಿಹಾರ ಹಾಗೂ ಸಲಹೆಯನ್ನು ನೀಡಲಾಗುತ್ತದೆ. ಪ್ರತಿ ವಾಹನಕ್ಕೆ 20 ಲಕ್ಷದಂತೆ ಒಟ್ಟು 20 ವಾಹನಗಳಿಗೆ 4 ಕೋಟಿ ವೆಚ್ಚವಾಗಿದೆ. ರೈತರಿಗೆ 1.50 ಲಕ್ಷ ಸ್ವಾಭಿಮಾನಿ ಕಾರ್ಡ್ ವಿತರಿಸಿದ್ದೇವೆ. ಕೊಪ್ಪಳದಲ್ಲಿ ಪ್ರತಿಭಾವಂತರಿದ್ದಾರೆ. ಹಾಗಾಗಿ ಪ್ರಧಾನಿ ಹಾಗೂ ಮುಖ್ಯಮಂತ್ರಿಗಳು ಕಂಡ ಕನಸನ್ನು ಇಲ್ಲಿನ ಜನರು ನನಸು ಮಾಡುತ್ತಿದ್ದಾರೆ ಎಂದರು.
ಶಾಸಕ ಪರಣ್ಣ ಮುನವಳ್ಳಿ ಪ್ರಾಸ್ತಾವಿಕ ಮಾತನಾಡಿ, ನಮಗೆಲ್ಲ ಇಂದು ಸಂತೋಷ ತಂದಿದೆ. ಎಲ್ಲ ಸಂತೆಗಳಲ್ಲಿ ವ್ಯಾಪಾರಸ್ಥರು ರಸ್ತೆ ಮೇಲೆ ತಮ್ಮ ಬೆಳೆಗಳನ್ನು ಮಾರಾಟ ಮಾಡುತ್ತಿದ್ದರು. ಈಗ ಮಾರುಕಟ್ಟೆಆರಂಭವಾಗಿದ್ದು, ಇದು ಸಂತೋಷದ ಸಂಗತಿಯಾಗಿದೆ. ಕೃಷಿಕರ ಪರವಾಗಿ ಸರ್ಕಾರಕ್ಕೆ ಹಾಗೂ ಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಸಂಸದ ಸಂಗಣ್ಣ ಕರಡಿ, ಜಿಪಂ ಅಧ್ಯಕ್ಷ ಕೆ.ರಾಜಶೇಖರ ಹಿಟ್ನಾಳ, ಶಾಸಕ ರಾಘವೇಂದ್ರ ಹಿಟ್ನಾಳ, ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಜಿಪಂ ಉಪಾಧ್ಯಕ್ಷೆ ಬೀನಾ ಗೌಸ್, ಸದಸ್ಯರಾದ ರಾಮಣ್ಣ ಚೌಡ್ಕಿ ಹಾಗೂ ಗವಿಸಿದ್ದಪ್ಪ ಕರಡಿ, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್ ಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ ಸೇರಿದಂತೆ ತಾಪಂ, ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು.