ಗದಗ ಜಿಲ್ಲೆಯ ಲಕ್ಕುಂಡಿಯ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿರುವ ಉತ್ಖನನದಲ್ಲಿ ಅಪರೂಪದ ಮೂರು ಹೆಡೆಯ ನಾಗರ ಹಾವಿನ ಶಿಲ್ಪ ಪತ್ತೆಯಾಗಿದೆ. ಹಸಿರು ಬಳಪದ ಕಲ್ಲಿನಲ್ಲಿ ಕೆತ್ತಲಾದ ಈ ಶಿಲ್ಪದಲ್ಲಿ 'ನಾಗಮಣಿ'ಯಂತಹ ರಚನೆಯಿದೆ.
ಗದಗ (ಜ.29): ಐತಿಹಾಸಿಕ ದೇವಾಲಯಗಳ ತವರೂರಾದ ಗದಗದ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯವು ದಿನಕ್ಕೊಂದು ಅಚ್ಚರಿಯನ್ನು ಹೊರಹಾಕುತ್ತಿದೆ. ಇಲ್ಲಿನ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿರುವ ಉತ್ಖನನದ 12ನೇ ದಿನವಾದ ಇಂದು (ಗುರುವಾರ) ಅತ್ಯಂತ ಅಪರೂಪದ ಹಾಗೂ ವಿಸ್ಮಯಕಾರಿ 3 ತಲೆಯುಳ್ಳ ನಾಗರ ಹಾವಿನ ಶಿಲ್ಪವೊಂದು ಪತ್ತೆಯಾಗಿದ್ದು, ಇತಿಹಾಸ ತಜ್ಞರ ಹುಬ್ಬೇರಿಸಿದೆ.
27
ಮೂರು ಹೆಡೆಯ ನಾಗರ ಶಿಲ್ಪ ಮತ್ತು ನಾಗಮಣಿ
ಸಾಮಾನ್ಯವಾಗಿ ದೇವಾಲಯಗಳ ಕೆತ್ತನೆಯಲ್ಲಿ ಒಂದೇ ಹೆಡೆಯ ನಾಗರ ಕಲ್ಲುಗಳು ಕಂಡುಬರುವುದು ಸಹಜ. ಈ ಹಿಂದಿನ ಉತ್ಖನನದಲ್ಲೂ ಅಂತಹ ಶಿಲೆಗಳು ಸಿಕ್ಕಿದ್ದವು. ಆದರೆ, ಇದೇ ಮೊದಲ ಬಾರಿಗೆ ಬರೋಬ್ಬರಿ ಮೂರು ಹೆಡೆಗಳುಳ್ಳ ಸರ್ಪದ ಶಿಲ್ಪವೊಂದು ಪತ್ತೆಯಾಗಿದೆ. ವಿಶೇಷವೆಂದರೆ, ಹಸಿರು ಬಳಪದ ಕಲ್ಲಿನ (Green Soapstone) ಮೇಲೆ ಅತಿ ಸೂಕ್ಷ್ಮವಾಗಿ ಕೆತ್ತಲಾಗಿರುವ ಈ ಶಿಲ್ಪದಲ್ಲಿ 'ನಾಗಮಣಿ'ಯನ್ನು ಹೋಲುವ ರಚನೆಯೂ ಕಂಡುಬಂದಿರುವುದು ಕುತೂಹಲಕ್ಕೆ ಕಾರಣವಾಗಿದೆ. ಈ ಶಿಲ್ಪವು ಅಂದಿನ ಕಾಲದ ಶಿಲ್ಪಿಗಳ ನೈಪುಣ್ಯತೆಗೆ ಸಾಕ್ಷಿಯಂತಿದೆ.
37
ಅಡಿಕೆ ಆಕಾರದ ನಿಗೂಢ ಶಿಲೆ:
ಉತ್ಖನನದ ಎ-ಬ್ಲಾಕ್ (A-Block) ಗುಂಡಿಯಲ್ಲಿ ಅಗೆಯುವ ಕಾರ್ಯ ಆರಂಭವಾಗುತ್ತಿದ್ದಂತೆಯೇ ಅಡಿಕೆ ಆಕಾರದ ವಿಶಿಷ್ಟ ಶಿಲೆಯೊಂದು ಲಭ್ಯವಾಗಿದೆ. ಇದು ಯಾವುದಾದರೂ ವಿಗ್ರಹದ ಕಿರೀಟದ ಭಾಗವಿರಬಹುದು ಅಥವಾ ಕಳಶದಂತಹ ಶಿಲೆಯ ಮೇಲ್ಭಾಗದ ಭಗ್ನ ಅವಶೇಷವಾಗಿರಬಹುದು ಎಂದು ಊಹಿಸಲಾಗಿದೆ. ಇದರ ಕುರಿತು ಪುರಾತತ್ವ ಇಲಾಖೆಯ ಅಧಿಕಾರಿಗಳು ಹೆಚ್ಚಿನ ಪರಿಶೀಲನೆ ನಡೆಸುತ್ತಿದ್ದಾರೆ.
ಕೋಟೆ ವೀರಭದ್ರೇಶ್ವರ ದೇವಸ್ಥಾನದ ಅಂಗಳದಲ್ಲಿ 10x10 ಸ್ಕ್ವೇರ್ ಮೀಟರ್ ಸುತ್ತಳತೆಯಲ್ಲಿ ಒಟ್ಟು ನಾಲ್ಕು ಬ್ಲಾಕ್‌ಗಳಾಗಿ ವಿಂಗಡಿಸಿ ಈ ಉತ್ಖನನ ನಡೆಸಲಾಗುತ್ತಿದೆ. ಸದ್ಯ ನಾಲ್ಕು ಬ್ಲಾಕ್‌ಗಳ ಮಧ್ಯದ ಎರಡು ಗೋಡೆಗಳನ್ನು ತೆರವುಗೊಳಿಸಲಾಗಿದ್ದು, ಗೋಡೆಯಲ್ಲಿದ್ದ ಬೃಹತ್ ಬಂಡೆಗೆ ಕಟ್ಟಿಗೆಯ ಆಧಾರ ನೀಡಲಾಗಿದೆ. ಆಳಕ್ಕೆ ಇಳಿದಂತೆಲ್ಲಾ ಮಣ್ಣಿನ ಪದರಗಳು ಬದಲಾಗುತ್ತಿದ್ದು, ಕಾರ್ಯವನ್ನು ಅತ್ಯಂತ ಸೂಕ್ಷ್ಮವಾಗಿ ನಡೆಸಲಾಗುತ್ತಿದೆ.
ಈವರೆಗೆ ಶಿವಲಿಂಗ ಪೀಠ, ನಾಗರ ಕಲ್ಲು, ಪ್ರಾಣಿಗಳ ಮೂಳೆಗಳು ಸೇರಿದಂತೆ 40ಕ್ಕೂ ಹೆಚ್ಚು ಪ್ರಾಚೀನ ಅವಶೇಷಗಳು ಸಿಕ್ಕಿವೆ.
57
7 ತಲೆಯ ಘಟಸರ್ಪ
ಇತ್ತೀಚೆಗೆ ಗ್ರಾಮದ ಎಲ್ಲೆಡೆ ಶೋಧ ಕಾರ್ಯವನ್ನು ಮಾಡಿದಾಗ 7 ತಲೆಯ ಹಾಗೂ ತಲೆಮೇಲೆ ನಾಗಮಣಿ ಹೊಂದಿರುವಂತಹ ಘಟಸರ್ಪ ಮಾದರಿಯ ಶಿಲ್ಪಗಳೂ ಪತ್ತೆಯಾಗಿದ್ದವು. ಇನ್ನು ಬಾವಿಯಲ್ಲಿಯೂ ದೇವಾಲಯಗಳ ಶಿಲಾ ಕಂಬಗಳು ಮತ್ತು ವಿವಿಧ ಮಾದರಿಯ ಉಬ್ಬು ಶಿಲೆಗಳು ಕೂಡ ಪತ್ತೆ ಆಗಿದ್ದವು. ಇವುಗಳನ್ನೂ ಪುರಾತತ್ವ ಇಲಾಖೆ ವಶಕ್ಕೆ ಪಡೆದಿತ್ತು.
67
ಚಿನ್ನದ ಗಣಿ ಮತ್ತು ಗುಹೆಗಳ ನಂಟು?
ಲಕ್ಕುಂಡಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು ಕೇವಲ ಶಿಲ್ಪಕಲೆಗಷ್ಟೇ ಅಲ್ಲ, ಐಶ್ವರ್ಯಕ್ಕೂ ಹೆಸರಾಗಿದ್ದವು ಎಂಬ ಪ್ರತೀತಿ ಇದೆ. ಇತ್ತೀಚೆಗೆ ಲಕ್ಕುಂಡಿ ಸಮೀಪದ ಕಣವಿ ಹೊಸೂರು ಗುಡ್ಡದ ಸಾಲಿನಲ್ಲಿ ಬಂಗಾರದ ಗಣಿಯನ್ನು ಹೋಲುವಂತಹ ಪುರಾತನ ಗುಹೆಗಳು ಪತ್ತೆಯಾಗಿದ್ದವು. ಬ್ರಿಟಿಷರ ಕಾಲದಲ್ಲೂ ಇಲ್ಲಿ ಚಿನ್ನದ ಶೋಧ ನಡೆದಿತ್ತು ಎನ್ನಲಾದ ಬಾವಿಗಳು ಮತ್ತು ಸುರಂಗ ಮಾರ್ಗಗಳು ಕುತೂಹಲ ಮೂಡಿಸಿದ್ದವು. ಲಕ್ಕುಂಡಿಯಲ್ಲಿ ಟಂಕಸಾಲೆ (ನಾಣ್ಯ ಮುದ್ರಣಾಲಯ) ಇತ್ತು ಎಂಬ ಐತಿಹಾಸಿಕ ಉಲ್ಲೇಖಗಳೂ ಇವೆ.
77
ಕಲ್ಯಾಣ ಚಾಲುಕ್ಯರ ಕಾಲದ ವೈಭವ ಹೊರಬರುವ ಸಾಧ್ಯತೆ
ಇದೀಗ ವೀರಭದ್ರೇಶ್ವರ ದೇವಾಲಯದಲ್ಲಿ ನಡೆಯುತ್ತಿರುವ ಉತ್ಖನನದಲ್ಲಿ ನಾಗಮಣಿ ಹಾಗೂ ವಿಶಿಷ್ಟ ಶಿಲ್ಪಗಳು ಸಿಗುತ್ತಿರುವುದು, ಈ ಪ್ರದೇಶದಲ್ಲಿ ಅಡಗಿರಬಹುದಾದ ಮತ್ತಷ್ಟು ಐತಿಹಾಸಿಕ ಸಂಪತ್ತು ಅಥವಾ ಗುಪ್ತ ನಿಧಿಯ ಮೇಲಿನ ಕುತೂಹಲವನ್ನು ಇಮ್ಮಡಿಗೊಳಿಸಿದೆ.
ಮುಂದಿನ ದಿನಗಳಲ್ಲಿ ಇನ್ನೂ ಆಳಕ್ಕೆ ಉತ್ಖನನ ನಡೆದರೆ ಕಲ್ಯಾಣ ಚಾಲುಕ್ಯರ ಕಾಲದ ಅಥವಾ ಅದಕ್ಕೂ ಹಿಂದಿನ ಬದುಕು, ಸಂಸ್ಕೃತಿ ಮತ್ತು ವೈಭವದ ಮೇಲೆ ಬೆಳಕು ಚೆಲ್ಲುವಂತಹ ಮಹತ್ವದ ಆಧಾರಗಳು ಸಿಗುವ ನಿರೀಕ್ಷೆಯಿದೆ.