Published : Nov 01, 2025, 11:57 AM ISTUpdated : Nov 01, 2025, 12:10 PM IST
ಕನ್ನಡ ರಾಜ್ಯೋತ್ಸವದಂದು ಬೆಳಗಾವಿಯಲ್ಲಿ ಎಂಇಎಸ್ ಕರಾಳ ದಿನ ಆಚರಿಸಿದೆ. ಈ ವೇಳೆ, ನಾಡದ್ರೋಹಿ ಸಂಘಟನೆಯ ಮುಖಂಡ ಶುಭಂ ಶಳಕೆ ಜೊತೆ ಮಾಳಮಾರುತಿ ಠಾಣೆ ಸಿಪಿಐ ಜೆಎಂ ಕಾಲಿಮಿರ್ಚಿ ಸೆಲ್ಫಿ ತೆಗೆದುಕೊಂಡಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಬೆಳಗಾವಿ: ಇಡೀ ರಾಜ್ಯ ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿರುವ ವೇಳೆ ನಾಡದ್ರೋಹಿ ಸಂಘಟನೆ ಎಂಇಎಸ್ ಬೆಳಗಾವಿಯಲ್ಲಿ ಕರಾಳ ದಿನ ಆಚರಿಸುತ್ತಿದೆ. ಜಿಲ್ಲಾಧಿಕಾರಿಗಳು ನಿರ್ಬಂಧ ವಿಧಿಸಿದ್ದರೂ ಎಂಇಎಸ್ ನಗರದಲ್ಲಿ ಮೆರವಣಿಗೆ ನಡೆಸುತ್ತಿದೆ. ಈ ನಾಡದ್ರೋಹಿ ಸಂಘಟನೆಯ ನಾಯಕನ ಜೊತೆ ಸಿಪಿಐ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದು, ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
26
ಸಿಪಿಐ ಜೆಎಂ ಕಾಲಿಮಿರ್ಚಿ
ಮಾಳಮಾರುತಿ ಪೊಲೀಸ ಠಾಣೆ ಸಿಪಿಐ ಜೆಎಂ ಕಾಲಿಮಿರ್ಚಿ ಅವರ ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯ ಸಿಪಿಐ ಜೆಎಂ ಕಾಲಿಮಿರ್ಚಿ ಸಂಭಾಜಿ ಮೈದಾನದಲ್ಲಿ ಎಂಇಎಸ್ ಪುಂಡ ಶುಭಂ ಶಳಕೆ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಇಷ್ಟು ಮಾತ್ರವಲ್ಲದೇ ಎಂಇಎಸ್ ಕಾರ್ಯಕರ್ತರ ಫೋಟೋಗಳನ್ನಿ ಸಿಪಿಐ ಕಾಲಿಮಿರ್ಚಿ ಕ್ಲಿಕ್ಕಿಸಿದ್ದಾರೆ.
36
ಶುಭಂ ಶಳಕೆ
ಕನ್ನಡ ರಾಜ್ಯೋತ್ಸವದ ವಿರುದ್ಧ ಕರಾಳ ದಿನಾಚರಣೆ ಮಾಡ್ತಿದ್ದವರ ಜೊತೆಗೆ ಸರ್ಕಾರಿ ಅಧಿಕಾರಿ ಸೆಲ್ಪಿ ಕ್ಲಿಕ್ಕಿಸಿಕೊಂಡಿದ್ದಾರೆ. ಶುಭಂ ಶಳಕೆ ಭಾಷಾ ಸಾಮರಸ್ಯ, ಶಾಂತಿ ಭಂಗ, ಕಾನೂನು ಸುವ್ಯವಸ್ಥೆ ಸೇರಿ ಹಲವು ಪ್ರಕರಣ ಆರೋಪಿ ಆಗಿದ್ದಾನೆ. ಸಿಪಿಐ ಅವರ ನಡೆ ಗಮನಿಸಿದ್ರೆ ನಾಡದ್ರೋಹಿಗಳ ಜೊತೆ ಪೊಲೀಸರು ಕೈ ಜೋಡಿಸಿದ್ರಾ ಎಂಬ ಅನುಮಾನ ಮೂಡಿದೆ.
ಇಂದು ಅನುಮತಿ ಇಲ್ಲದಿದ್ದರೂ ಎಂಇಎಸ್ ಕಾರ್ಯಕರ್ತರು ರಾಜಾರೋಷವಾಗಿ ಕರಾಳ ದಿನಾಚರಣೆ ಮಾಡುತ್ತಾರೆ. ಸಂಭಾಜಿ ಮೈದಾನದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿರುವ ನಾಡದ್ರೋಹಿಗಳು ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗಿ, ಬೆಳಗಾವಿ ಮತ್ತು ನಿಪ್ಪಾಣಿ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಕಿರುಚಿದ್ದಾರೆ.
ಇನ್ನು ನಿಷೇಧದ ನಡುವೆಯೂ ಬೆಳಗಾವಿ ಪ್ರವೇಶಕ್ಕೆ ಮುಂದಾಗಿದ್ದ ಶಿವಸೇನೆ ಪುಂಡರನ್ನು ಪೊಲೀಸರು ಗಡಿಯಲ್ಲಿಯೇ ತಡೆದಿದ್ದಾರೆ. ಸುಮಾರು 50 ಪುಂಡರ ಗುಂಪಿನೊಂದಿಗೆ ಸಂಜಯ್ ಪವಾರ್ ಹಾಗೂ ವಿಜಯ ದೇವನೆ ಬೆಳಗಾವಿ ಪ್ರವೇಶಕ್ಕೆ ಮುಂದಾಗಿದ್ದರು. ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ನಾಯಕರಿಗೆ ಜಿಲ್ಲಾಡಳಿತ ಬೆಳಗಾವಿ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ಹೇರಿದೆ.
ಅನುಮತಿ ಇಲ್ಲದೇ ಮೆರವಣಿಗೆ ನಡೆಸಿದ ನಾಡದ್ರೋಹಿಗಳ ವಿರುದ್ಧ ಕಠಿಣ ಕ್ರಮವಾಗಲಿದೆ. ನಾನು ಲಖಿತವಾಗಿಯೂ ಅನುಮತಿ ನೀಡಿಲ್ಲ, ಮೌಖಿಕವಾಗಿಯೂ ಅನುಮತಿ ನೀಡಿಲ್ಲ. ಅನುಮತಿ ನೀಡಿಲ್ಲ ಅಂದ್ರೂ ಮೆರವಣಿಗೆ ಮಾಡಿದ್ದಾರೆ. ಹೀಗಾಗಿ ಎಲ್ಲ ಸಂಘಟಕರ ವಿರುದ್ಧವೂ ದೂರು ದಾಖಲಿಸಿಕೊಳ್ತಿವಿ, ಕಠಿಣ ಕ್ರಮ ಜರುಗಿಸುತ್ತೇವೆ. ಯಾವುದೇ ಅಹಿತಕರ ಘಟನೆ ಆಗಬಾರದು ಅನ್ನೋ ಕಾರಣಕ್ಕೆ ಭದ್ರತೆ ನೀಡಲಾಗಿದೆ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ನಗರ ಪೊಲೀಸ್ ಆಯುಕ್ತ ಭೂಷಣ್ ಬೋರಸೆ ಹೇಳಿದ್ದಾರೆ. ಇದೇ ವೇಳೆ ಎಂಇಎಸ್ ಪುಂಡನ ಜೊತೆಗೆ ಪೊಲೀಸ್ ಅಧಿಕಾರಿಯ ಸೆಲ್ಫಿ ತೆಗೆದುಕೊಂಡಿರುವ ಕುರಿತು ಮಾಹಿತಿ ಪಡೆಯುತ್ತೇನೆ ಎಂದರು.