ಹುಟ್ಟೂರಲ್ಲಿ ಸಿಎಂ: ಹುಬ್ಬಳ್ಳಿ-ಧಾರವಾಡವನ್ನ ಉತ್ತುಂಗಕ್ಕೆ‌ ಕೊಂಡೊಯ್ಯುತ್ತೇನೆ ಎಂದ ಬೊಮ್ಮಾಯಿ

First Published Jul 29, 2021, 1:02 PM IST

ಹುಬ್ಬಳ್ಳಿ(ಜು.29): ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ಬಸವರಾಜ ಬೊಮ್ಮಾಯಿ ಅವರು ತಮ್ಮ ಹುಟ್ಟೂರು ಹುಬ್ಬಳ್ಳಿಗೆ ಇಂದು(ಗುರುವಾರ) ಆಗಮಿಸಿದ್ದಾರೆ. ನಗರದ ವಿಮಾನ ನಿಲ್ದಾಣದಿಂದ ನೇರವಾಗಿ ನವನಗರದಲ್ಲಿರುವ ಅವರ ತಂದೆ ಹಾಗೂ ತಾಯಿ ಸಮಾಧಿ ಸ್ಥಳಕ್ಕೆ ಭೇಟಿ ಗೌರವ ಸಲ್ಲಿಸಿದ್ದಾರೆ.
 

ಹುಬ್ಬಳ್ಳಿಯ ಕೇಶವ ಕುಂಜಕ್ಕೆ ಭೇಟಿ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ

ಆರ್‌ಎಸ್‌ಎಸ್‌ನ ಉತ್ತರ ಪ್ರಾಂತ ಕಾರ್ಯಾಲಯದಲ್ಲಿ ಮುಖಂಡ ಮಂಗೇಶ ಭೇಂಡೆ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಬೊಮ್ಮಾಯಿ

ಈ ಸಂದರ್ಭದಲ್ಲಿ ಮಾಜಿ ಸಚಿವ ಶಿವರಾಮ್‌ ಹೆಬ್ಬಾರ. ಲಿಂಗರಾಜ್ ಪಾಟೀಲ, ಸಂಘದ ಹಿರಿಯ ಕಾರ್ಯಕರ್ತರು, ಬಿಜೆಪಿ ಧಾರವಾಡ ವಿಭಾಗ ಸಂಘಟನಾ ಕಾರ್ಯದರ್ಶಿ ಜಯತೀರ್ಥ ಕಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಹುಬ್ಬಳ್ಳಿ ನನ್ನ ಪ್ರೀತಿಯ ಊರು,  ನನ್ನ ಎಲ್ಲ ಶಿಕ್ಷಣ ಇಲ್ಲಿಯೇ ಮುಗಿದಿದೆ‌. ಮುಖ್ಯಮಂತ್ರಿಯಾಗಿ ನಾನು‌ ಹುಬ್ಬಳ್ಳಿಗೆ ಬರುತ್ತೇನೆ ಅಂದು-ಕೊಂಡಿರಲಿಲ್ಲ. ಹುಬ್ಬಳ್ಳಿ ರಾಜ್ಯದ ಎರಡನೇ ಅತಿದೊಡ್ಡ ನಗರವಾಗಿದೆ.  ಹುಬ್ಬಳ್ಳಿ- ಧಾರವಾಡವನ್ನ ಉತ್ತುಂಗಕ್ಕೆ‌ ಕೊಂಡೊಯ್ಯುತ್ತೇನೆ ಅಂತ ಇದೇ ಸಂದರ್ಭದಲ್ಲಿ ಭರವಸೆಯನ್ನ ಕೊಟ್ಟಿದ್ದಾರೆ. 

ಜಗದೀಶ್ ಶೆಟ್ಟರ್ ಸಂಪುಟ ಸೇರುವುದಿಲ್ಲ ಎಂಬ ಹೇಳಿಕೆ‌ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಜೊತೆ ಫೋನ್‌ನಲ್ಲಿ ಮಾತನಾಡಿದ್ದೇನೆ. ಅವರ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಅವರನ್ನು ಖುದ್ದಾಗಿ ಭೇಟಿಯಾಗಿ ಮಾತನಾಡುತ್ತೇನೆ. ಜಗದೀಶ್ ಶೆಟ್ಟರ್ ನಾನು ಆತ್ಮೀಯ ಸ್ನೇಹಿತರು, ಬೇರೆ ಪಕ್ಷದಲ್ಲಿ ಇದ್ದಾಗಲೂ ಉತ್ತಮ ಬಾಂಧವ್ಯ ಇದೆ. ನಾವು ಇನ್ನೂ ರಾಜಕೀಯಕ್ಕೆ ಬಂದಿರಲಿಲ್ಲ, ಆಗಿನಿಂದಲೂ ಒಳ್ಳೆಯ ಸ್ನೇಹಿತರಾಗಿದ್ದೆವು ಅಂತ ಬೊಮ್ಮಾಯಿ ಅವರು ಹೇಳಿದ್ದಾರೆ.

ನಾಳೆ ಬೆಳಿಗ್ಗೆ ದೆಹಲಿಗೆ ತೆರಳುತ್ತೇನೆ. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಅನೇಕ ನಾಯಕರನ್ನು ಭೇಟಿ ಮಾಡಿ, ಶುಭಕೋರಿ ಆಶೀರ್ವಾದ ಪಡೆಯಲಿದ್ದೇನೆ. ಈ ವೇಳೆ ಸಚಿವ ಸಂಪುಟ ರಚನೆ ಬಗ್ಗೆ ಯಾವುದೇ ಚರ್ಚೆ ನಡೆಸುವುದಿಲ್ಲ. ನಂತರ 2-3 ದಿನ ಬಿಟ್ಟು ದೆಹಲಿಗೆ ಮತ್ತೆ ತೆರಳಿ ಸಚಿವ ಸಂಪುಟ ರಚನೆ ಬಗ್ಗೆ ಚರ್ಚೆ ನಡೆಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಕೃಷ್ಣಾ ಮೇಲ್ದಂಡೆ ಯೋಜನೆ ಬಗ್ಗೆ ಸಂಪೂರ್ಣ ಅರಿವು ಇದೆ. ಅದು ನನ್ನ ಪ್ರಥಮ ಆದ್ಯತೆ ಕೂಡ ಆಗಿದೆ. ಈ ಯೋಜನೆ ಪೂರ್ಣವಾದರೆ, ಕೃಷಿ ಹಾಗೂ ಆರ್ಥಿಕ ಅಭಿವೃದ್ಧಿಗೆ ಅನುಕೂಲವಾಗಲಿದೆ. ಆಲಮಟ್ಟಿ ಜಲಾಶಯವನ್ನ 524 ಮೀಟರ್ ಎತ್ತರ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

click me!