ಆಸ್ಟ್ರೇಲಿಯಾದಲ್ಲಿ ಚಿಗುರಿದ ಪ್ರೀತಿಯೊಂದು ಚಿಕ್ಕಮಗಳೂರಿನಲ್ಲಿ ಮದುವೆಯಾಗಿ ಫಲಿಸಿದೆ. ಚೀನಾ ಮೂಲದ ಯುವತಿ 'ಜಡೆ' ಅವರನ್ನು ಕಾಫಿನಾಡಿನ ಯುವಕ ರೂಪಕ್ ಭಾರತೀಯ ಸಂಪ್ರದಾಯದಂತೆ ವಿವಾಹವಾಗಿದ್ದು, ಈ ಅಂತರಾಷ್ಟ್ರೀಯ ವಿವಾಹಕ್ಕೆ ಎರಡೂ ಕುಟುಂಬಗಳು ಸಾಕ್ಷಿಯಾಗಿವೆ.
ಚಿಕ್ಕಮಗಳೂರು (ಜ.23): ಪ್ರೀತಿಗೆ ಯಾವುದೇ ದೇಶ, ಭಾಷೆ ಅಥವಾ ಗಡಿಯ ಹಂಗಿಲ್ಲ ಎಂಬುದನ್ನು ಕಾಫಿನಾಡಿನ ಯುವಕನೊಬ್ಬ ಸಾಬೀತುಪಡಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ಚಿಗುರಿದ ಪ್ರೇಮಕ್ಕೆ ಮಲೆನಾಡಿನ ಮಣ್ಣಿನಲ್ಲಿ ಅಧಿಕೃತ ಮುದ್ರೆ ಬಿದ್ದಿದ್ದು, ಚೀನಾದ ಹುಡುಗಿ ಈಗ ಚಿಕ್ಕಮಗಳೂರಿನ ಸೊಸೆಯಾಗಿ ಗೃಹಪ್ರವೇಶ ಮಾಡಿದ್ದಾರೆ.
25
ಆಸ್ಟ್ರೇಲಿಯಾದಲ್ಲಿ ಪ್ರೇಮಾಂಕುರ
ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್ ನಿವಾಸಿ ರೂಪಕ್ ಅವರು ಉನ್ನತ ವ್ಯಾಸಂಗಕ್ಕಾಗಿ ಆಸ್ಟ್ರೇಲಿಯಾಕ್ಕೆ ತೆರಳಿದ್ದರು. ಅಲ್ಲಿ ಅವರಿಗೆ ಚೀನಾ ಮೂಲದ ಯುವತಿ 'ಜಡೆ' (Jade) ಪರಿಚಯವಾಗಿದ್ದರು. ಆ ಪರಿಚಯ ಕಾಲಕ್ರಮೇಣ ಪ್ರೇಮಕ್ಕೆ ತಿರುಗಿದ್ದು, ಇಬ್ಬರೂ ಸಪ್ತಪದಿ ತುಳಿಯಲು ನಿರ್ಧರಿಸಿದರು. ಇಬ್ಬರ ಪ್ರೀತಿಗೂ ಎರಡು ಕುಟುಂಬದ ಹಿರಿಯರು ಹಸಿರು ನಿಶಾನೆ ತೋರಿಸಿದ್ದರಿಂದ ಈಗ ಭಾರತೀಯ ಸಂಪ್ರದಾಯದಂತೆ ವಿವಾಹ ನೆರವೇರಿದೆ.
35
ಅದ್ಧೂರಿ ಮದುವೆ ಸಂಭ್ರಮ
ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಇಂದು ನಡೆದ ಈ ವಿವಾಹ ಮಹೋತ್ಸವ ಅತ್ಯಂತ ಅದ್ಧೂರಿಯಾಗಿತ್ತು. ಚೀನಾದಿಂದ ಆಗಮಿಸಿದ್ದ ಜಡೆ ಅವರ ಪೋಷಕರು, ಭಾರತೀಯ ಸಂಪ್ರದಾಯದಂತೆ ಮಗಳ ಧಾರೆಯೆರೆದು ಸಂಭ್ರಮಿಸಿದರು. ಚೀನಾ ಮತ್ತು ಭಾರತೀಯ ಸಂಪ್ರದಾಯಗಳು ಹೆಚ್ಚು ಕಡಿಮೆ ಒಂದೇ ರೀತಿ ಇವೆ ಎಂದು ನವವಧು ಖುಷಿ ಹಂಚಿಕೊಂಡಿದ್ದಾರೆ. ಇನ್ನು ಮಲೆನಾಡಿನ ಹಸಿರು ಮತ್ತು ಚಿಕ್ಕಮಗಳೂರಿನ ಸೌಂದರ್ಯಕ್ಕೆ ವಿದೇಶಿ ಮಗಳೂ ಫಿದಾ ಆಗಿದ್ದಾರೆ.
ಮದುವೆಗೆ ಆಗಮಿಸಿದ್ದ ಅತಿಥಿಗಳು ಕೂಡ ಚೀನಾ ಮೂಲದ ಯುವತಿ ನಮ್ಮ ಸಂಸ್ಕೃತಿಗೆ ಹೊಂದಿಕೊಂಡು ಮದುವೆಯಾಗುತ್ತಿರುವುದನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. ರೂಪಕ್ ಮತ್ತು ಜಡೆ ಇಬ್ಬರೂ ಆಸ್ಟ್ರೇಲಿಯಾದಲ್ಲೇ ಉದ್ಯೋಗದಲ್ಲಿದ್ದು, ಅಲ್ಲಿಯೇ ನೆಲೆಸಲಿದ್ದಾರೆ.
55
ಮಲೆನಾಡಿನ ಶೈಲಿಯಲ್ಲಿ ವಿವಾಹ
ತಮ್ಮ ಬಂಧು-ಮಿತ್ರರನ್ನೆಲ್ಲಾ ಕರೆದು ರೂಪಕ್ ಮಲೆನಾಡಿನ ಶೈಲಿಯಲ್ಲಿ ವಿವಾಹವಾಗುವ ಮೂಲಕ ಅಂತರಾಷ್ಟ್ರೀಯ ಮಟ್ಟದ ಸಂಬಂಧವನ್ನು ಗಟ್ಟಿಗೊಳಿಸಿದ್ದಾರೆ. ಈ ಸುಂದರ ಪ್ರೇಮ ವಿವಾಹ ಈಗ ಕಾಫಿನಾಡಿನಾದ್ಯಂತ ಸಂಚಲನ ಮೂಡಿಸಿದೆ.