ಬೆಂಗಳೂರು ದಕ್ಷಿಣ ನಗರ ಪಾಲಿಕೆಯು, ಉತ್ತರಹಳ್ಳಿ ಉಪವಿಭಾಗದ ಗುಬ್ಬಲಾಳ ಗ್ರಾಮದಲ್ಲಿ ಪಾರ್ಕ್‌ಗಾಗಿ ಮೀಸಲಿಟ್ಟಿದ್ದ ಜಾಗದ ಒತ್ತುವರಿ ತೆರವುಗೊಳಿಸಿದೆ. ಸುಮಾರು 3,000 ಚದರ ಮೀಟರ್ ವಿಸ್ತೀರ್ಣದ, 3 ಕೋಟಿ ರೂಪಾಯಿ ಮೌಲ್ಯದ ಜಾಗವನ್ನು ಅನಧಿಕೃತ ಬೇಲಿ ತೆಗೆದುಹಾಕುವ ಮೂಲಕ ವಶಕ್ಕೆ ಪಡೆಯಲಾಗಿದೆ.
ಬೆಂಗಳೂರು (ಫೆ.10): ನಗರದಲ್ಲಿ ಸರ್ಕಾರಿ ಹಾಗೂ ಸಾರ್ವಜನಿಕ ಆಸ್ತಿಗಳ ರಕ್ಷಣೆಗೆ ಮುಂದಾಗಿರುವ ಬೆಂಗಳೂರು ದಕ್ಷಿಣ ನಗರ ಪಾಲಿಕೆಯು, ಇಂದು ಕೋಟ್ಯಂತರ ರೂಪಾಯಿ ಮೌಲ್ಯದ ಪಾರ್ಕ್ ಜಾಗವನ್ನು ಒತ್ತುವರಿದಾರರಿಂದ ಮುಕ್ತಗೊಳಿಸಿದೆ. ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಉತ್ತರಹಳ್ಳಿ ಉಪವಿಭಾಗದ ಗುಬ್ಬಲಾಳ ಗ್ರಾಮದಲ್ಲಿ ಈ ಮಹತ್ವದ ಕಾರ್ಯಾಚರಣೆ ನಡೆದಿದೆ.
25
ಒತ್ತುವರಿ ಹಿನ್ನೆಲೆ
ಗುಬ್ಬಲಾಳ ಗ್ರಾಮದ ಸರ್ವೆ ನಂಬರ್ 01ರಲ್ಲಿರುವ ಜಯನಗರ ಕೋ-ಆಪರೇಟಿವ್ ಸೊಸೈಟಿ 1ನೇ ಹಂತದ ವಿನ್ಯಾಸದಲ್ಲಿ ಒಟ್ಟು 26,831 ಚದರ ಮೀಟರ್ ಪ್ರದೇಶವನ್ನು ಪಾರ್ಕ್ (ಉದ್ಯಾನವನ) ಉದ್ದೇಶಕ್ಕಾಗಿ ಮೀಸಲಿಡಲಾಗಿತ್ತು. ಆದರೆ, ಈ ವಿಶಾಲವಾದ ಪಾರ್ಕ್ ಜಾಗದ ಪೈಕಿ ಸುಮಾರು 3,000 ಚದರ ಮೀಟರ್ ಪ್ರದೇಶವನ್ನು ಕೆಲವು ಪ್ರಭಾವಿಗಳು ಕಾನೂನುಬಾಹಿರವಾಗಿ ಒತ್ತುವರಿ ಮಾಡಿಕೊಂಡಿದ್ದರು. ಸಾರ್ವಜನಿಕ ಉದ್ದೇಶದ ಜಾಗಕ್ಕೆ ಅನಧಿಕೃತವಾಗಿ ಕಲ್ಲುಕುಚ್ಚು ಬೇಲಿಯನ್ನು ನಿರ್ಮಿಸಿ, ಅದನ್ನು ತಮ್ಮ ಸ್ವಂತ ಲಾಭಕ್ಕೆ ಬಳಸಿಕೊಳ್ಳಲು ಪ್ರಯತ್ನಿಸಲಾಗಿತ್ತು.
35
ಕಾರ್ಯಾಚರಣೆಯ ವಿವರ
ಒತ್ತುವರಿ ಬಗ್ಗೆ ಖಚಿತ ಮಾಹಿತಿ ಮತ್ತು ದೂರುಗಳು ಬಂದ ಹಿನ್ನೆಲೆಯಲ್ಲಿ, ಪಾಲಿಕೆಯ ಅಧಿಕಾರಿಗಳು ಇಂದು (ಫೆಬ್ರವರಿ 10) ಬೆಳಿಗ್ಗೆ 9:00 ಗಂಟೆಗೆ ಕಾರ್ಯಾಚರಣೆ ಆರಂಭಿಸಿದರು. ಉತ್ತರಹಳ್ಳಿ ಉಪವಿಭಾಗದ ಕಛೇರಿಯ ಅಧಿಕಾರಿಗಳು ಪೊಲೀಸ್ ಬಂದೋಬಸ್ತಿನೊಂದಿಗೆ ಸ್ಥಳಕ್ಕೆ ಆಗಮಿಸಿ, ಜೆಸಿಬಿ ಮೂಲಕ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಕಲ್ಲುಕುಚ್ಚು ಬೇಲಿ ಹಾಗೂ ಇನ್ನಿತರ ಅಡೆತಡೆಗಳನ್ನು ತೆರವುಗೊಳಿಸಿದರು. ಈ ಮೂಲಕ ಸುಮಾರು 3,000 ಚದರ ಮೀಟರ್ ವಿಸ್ತೀರ್ಣದ ಜಾಗವನ್ನು ಪಾಲಿಕೆಯ ವಶಕ್ಕೆ ಪಡೆಯಲಾಯಿತು.
ವಶಪಡಿಸಿಕೊಳ್ಳಲಾದ ಈ ಜಾಗದ ಪ್ರಸ್ತುತ ಮಾರುಕಟ್ಟೆ ಮೌಲ್ಯ ಸುಮಾರು 3.00 ಕೋಟಿ ರೂಪಾಯಿಗಳಿಗೂ ಅಧಿಕ ಎಂದು ಅಂದಾಜಿಸಲಾಗಿದೆ. 'ಸಾರ್ವಜನಿಕರ ಹಿತದೃಷ್ಟಿಯಿಂದ ಮೀಸಲಿಟ್ಟಿರುವ ಪಾರ್ಕ್ ಜಾಗವನ್ನು ರಕ್ಷಿಸುವುದು ನಮ್ಮ ಆದ್ಯತೆಯಾಗಿದೆ. ಯಾವುದೇ ಕಾರಣಕ್ಕೂ ಸಾರ್ವಜನಿಕ ಆಸ್ತಿಯನ್ನು ಖಾಸಗಿಯವರು ಲಪಟಾಯಿಸಲು ಬಿಡುವುದಿಲ್ಲ' ಎಂದು ಅಧಿಕಾರಿಗಳು ಈ ಸಂದರ್ಭದಲ್ಲಿ ತಿಳಿಸಿದರು.
55
ಕಾರ್ಯಾಚರಯಲ್ಲಿ ಪಾಲ್ಗೊಂಡ ಅಧಿಕಾರಿಗಳು
ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಉತ್ತರಹಳ್ಳಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು, ಕಂದಾಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು. ಪಾಲಿಕೆಯ ಈ ನಿರ್ಣಾಯಕ ಕ್ರಮಕ್ಕೆ ಸ್ಥಳೀಯ ನಿವಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂಬರುವ ದಿನಗಳಲ್ಲಿಯೂ ಇಂತಹ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಪಾಲಿಕೆಯ ಪ್ರಮುಖರಾದ ಕೆ.ಎನ್ ರಮೇಶ್ ಅವರು ಮಾಹಿತಿ ನೀಡಿದ್ದಾರೆ.