ಬೆಂಗಳೂರಲ್ಲಿ ಮನೆ ಕಟ್ಟಿಸಿ, ಮದುವೆಯ ಸಿದ್ಧತೆಯಲ್ಲಿದ್ದ ಪ್ರಶಾಂತ್, ಕ್ರಿಕೆಟ್ ಕಿರಿಕ್‌ನಲ್ಲಿ ಮಸಣ ಸೇರಿದ!

Published : Jan 26, 2026, 02:30 PM IST

ಬೆಂಗಳೂರಿನಲ್ಲಿ ಕ್ರಿಕೆಟ್ ಪಂದ್ಯದ ನಂತರ ನಡೆದ ಸಣ್ಣ ಜಗಳವೊಂದು ಯುವಕನ ಕೊಲೆಯಲ್ಲಿ ಅಂತ್ಯಗೊಂಡಿದೆ. ಸಿಗರೇಟ್ ಲೈಟರ್ ವಿಚಾರಕ್ಕೆ ಶುರುವಾದ ಗಲಾಟೆಯಲ್ಲಿ, ಆರೋಪಿಯು ಕಾರಿಗೆ ನೇತಾಡುತ್ತಿದ್ದ ಯುವಕನನ್ನು ಮರಕ್ಕೆ ಗುದ್ದಿ ಸಾಯಿಸಿದ್ದಾನೆ.

PREV
16
ಆರಂಭದಲ್ಲಿ ಆಕ್ಸಿಡೆಂಟ್, ನಂತರ ಕೊಲೆಗೆ ಟ್ವಿಸ್ಟ್

ಬೆಂಗಳೂರು (ಜ.26): ಸಿಲಿಕಾನ್ ಸಿಟಿಯ ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರವಿವಾರ ರಾತ್ರಿ ಭೀಕರ ಘಟನೆಯೊಂದು ನಡೆದಿದೆ. ಆರಂಭದಲ್ಲಿ ಅಪಘಾತ ಎಂದು ಬಿಂಬಿತವಾಗಿದ್ದ ಪ್ರಕರಣಕ್ಕೆ ಈಗ 'ಕೊಲೆ'ಯ ಟ್ವಿಸ್ಟ್ ಸಿಕ್ಕಿದೆ. ಕ್ರಿಕೆಟ್ ಪಂದ್ಯದ ವೇಳೆ ನಡೆದ ಸಣ್ಣ ಜಗಳವೊಂದು ವಿಕೋಪಕ್ಕೆ ಹೋಗಿ, ಅಂತಿಮವಾಗಿ ಓರ್ವ ಯುವಕನ ಬಲಿ ಪಡೆದಿದೆ.

26
ಘಟನೆಯ ಹಿನ್ನೆಲೆ: ಸಿಗರೇಟ್ ಲೈಟರ್ ವಿಚಾರಕ್ಕೆ ಶುರುವಾದ ಗಲಾಟೆ

ವೀರಸಂದ್ರ ನಿವಾಸಿ ಪ್ರಶಾಂತ್ (28) ಕೊಲೆಯಾದ ದುರ್ದೈವಿ. ಕೆ.ಆರ್.ಪುರಂ ನಿವಾಸಿ ರೋಷನ್ ಹೆಗಡೆ ಎಂಬಾತ ಕೊಲೆ ಆರೋಪಿಯಾಗಿದ್ದಾನೆ. ಕಮ್ಮಸಂದ್ರದ ಎಂ5 ಮಾಲ್ ಹಿಂಭಾಗದ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಪ್ರಶಾಂತ್ ತಂಡ ಈ ಪಂದ್ಯದಲ್ಲಿ ಸೋತಿದ್ದರಿಂದ ಆತ ಬೇಸರದಲ್ಲಿದ್ದ ಎನ್ನಲಾಗಿದೆ. ಪಂದ್ಯದ ನಂತರ ಮೈದಾನದಲ್ಲೇ ಬಿಯರ್ ಪಾರ್ಟಿ ನಡೆದಿದ್ದು, ಈ ವೇಳೆ ಸಿಗರೇಟ್ ಲೈಟರ್ ವಿಚಾರಕ್ಕೆ ಪ್ರಶಾಂತ್ ಮತ್ತು ರೋಷನ್ ನಡುವೆ ಕಿರಿಕ್ ಶುರುವಾಗಿದೆ.

36
ಬಿಯರ್ ಬಾಟಲಿಗಳಿಂದ ಹಲ್ಲೆ

ಗಲಾಟೆ ವಿಕೋಪಕ್ಕೆ ಹೋದಾಗ ಪರಸ್ಪರ ಬಿಯರ್ ಬಾಟಲಿಗಳಿಂದ ಹಲ್ಲೆ ಮಾಡಿಕೊಂಡಿದ್ದಾರೆ. ಈ ಘರ್ಷಣೆಯಲ್ಲಿ ಆರೋಪಿ ರೋಷನ್ ನಾಲಗೆಗೆ ತೀವ್ರ ಗಾಯವಾಗಿತ್ತು. ಇದರಿಂದ ಆಕ್ರೋಶಗೊಂಡ ರೋಷನ್ ಅಲ್ಲಿಂದ ತಪ್ಪಿಸಿಕೊಳ್ಳಲು ತನ್ನ ಕಾರು ಹತ್ತಿದ್ದಾನೆ. ಆದರೆ, ಪ್ರಶಾಂತ್ ಆತನನ್ನು ಬಿಡದೆ ಕಾರಿನ ಎಡಭಾಗದ ಕಿಟಕಿಯನ್ನು ಹಿಡಿದು ನೇತಾಡುತ್ತಾ ಕಾರು ನಿಲ್ಲಿಸುವಂತೆ ಕಿರುಚಿದ್ದಾನೆ.

46
ಕೊಲೆ ಮಾಡಲು ಮರಕ್ಕೆ ಡಿಕ್ಕಿ ಹೊಡೆಸಿದ ಕಿರಾತಕ!

ಕಾರಿನ ಕಿಟಕಿಗೆ ಪ್ರಶಾಂತ್ ನೇತಾಡುತ್ತಿದ್ದರೂ ಲೆಕ್ಕಿಸದ ರೋಷನ್, ಸುಮಾರು ದೂರದವರೆಗೆ ಅತಿವೇಗವಾಗಿ ಕಾರನ್ನು ಚಲಾಯಿಸಿದ್ದಾನೆ. ಪ್ರಶಾಂತ್ ಬಾಗಿಲು ಬಿಡದಿದ್ದಾಗ, ಆತನನ್ನು ಸಾಯಿಸುವ ಉದ್ದೇಶದಿಂದಲೇ ರಸ್ತೆಯ ಪಕ್ಕದಲ್ಲಿದ್ದ ಮರ ಮತ್ತು ಕಾಂಪೌಂಡ್ ನಡುವೆ ಕಾರನ್ನು ಗುದ್ದಿಸಿದ್ದಾನೆ. ಡಿಕ್ಕಿಯ ರಭಸಕ್ಕೆ ಮರ ಮತ್ತು ಕಾರಿನ ನಡುವೆ ಸಿಲುಕಿದ ಪ್ರಶಾಂತ್ ಅವರ ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಭೀಕರ ದೃಶ್ಯ ಕಾರಿನಲ್ಲಿದ್ದ ಡ್ಯಾಶ್ ಕ್ಯಾಮೆರಾ ಹಾಗೂ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

56
ಅಪಘಾತವಲ್ಲ ಇದು ಕೊಲೆ: ಡಿಸಿಪಿ ಸ್ಪಷ್ಟನೆ

ಘಟನೆ ನಡೆದ ತಕ್ಷಣ 112 ಸಹಾಯವಾಣಿಗೆ ಅಪಘಾತ ಎಂದು ಕರೆ ಬಂದಿತ್ತು. ಆದರೆ ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಡಿಸಿಪಿ ನಾರಾಯಣ್ ನೇತೃತ್ವದಲ್ಲಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದಾಗ ಮತ್ತು ಡ್ಯಾಶ್ ಕ್ಯಾಮೆರಾ ದೃಶ್ಯಾವಳಿಗಳನ್ನು ನೋಡಿದಾಗ ಇದು ಉದ್ದೇಶಪೂರ್ವಕವಾಗಿ ಮಾಡಿದ ಕೊಲೆ ಎಂದು ತಿಳಿದುಬಂದಿದೆ. ಕೃತ್ಯ ನಡೆದ ಕೇವಲ ಒಂದು ಗಂಟೆಯಲ್ಲೇ ಆರೋಪಿ ರೋಷನ್ ಹೆಗಡೆಯನ್ನು ಪೊಲೀಸರು ಬಂಧಿಸಿದ್ದಾರೆ. ರೋಷನ್‌ಗೂ ಗಾಯಗಳಾಗಿದ್ದು, ಆತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

66
ಮಗನ ಮದುವೆ ಕನಸು ಕಂಡಿದ್ದ ತಾಯಿಯ ಕಣ್ಣೀರು

'ಮಗನಿಗೆ 33 ವರ್ಷ ವಯಸ್ಸಾಗುತ್ತಿತ್ತು, ಇನ್ನೆರಡು ತಿಂಗಳಲ್ಲಿ ಮದುವೆ ಮಾಡಬೇಕೆಂದು ಹೊಸ ಮನೆ ಕಟ್ಟಿಸಿದ್ದೆವು. ತಪ್ಪು ಮಾಡಿದ್ದರೆ ನಾಲ್ಕು ಏಟು ಹೊಡೆದು ಬುದ್ಧಿ ಕಲಿಸಬೇಕಿತ್ತು, ಆದರೆ ಹೀಗೆ ಕೊಲೆ ಮಾಡಬಾರದಿತ್ತು' ಎಂದು ಮೃತ ಪ್ರಶಾಂತ್ ತಾಯಿ ಅನು ಅವರು ಕಣ್ಣೀರಿಡುತ್ತಾ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಮೃತರ ತಾಯಿಯ ದೂರಿನ ಮೇರೆಗೆ ಹೆಬ್ಬಗೋಡಿ ಪೊಲೀಸರು ಕೊಲೆ (Section 302) ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read more Photos on
click me!

Recommended Stories