ಗದಗದ ಲಕ್ಕುಂಡಿಯಲ್ಲಿ ಮನೆ ಅಡಿಪಾಯ ತೆಗೆಯುವಾಗ ಸಿಕ್ಕ ಬಂಗಾರದ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ ರಿತ್ತಿ ಕುಟುಂಬದ ಪ್ರಾಮಾಣಿಕತೆಯನ್ನು ಸರ್ಕಾರ ಗೌರವಿಸಿದೆ. ಗಣರಾಜ್ಯೋತ್ಸವದಂದು, ಈ ಕುಟುಂಬಕ್ಕೆ ಮನೆ ನಿವೇಶನ, ₹5 ಲಕ್ಷ ನಗದು ಹಾಗೂ ಕುಟುಂಬದ ಸದಸ್ಯೆಗೆ ಗುತ್ತಿಗೆ ಆಧಾರದ ನೌಕರಿ ನೀಡಿದೆ.
ಗದಗ (ಜ.26): 'ಪ್ರಾಮಾಣಿಕತೆಗಿಂತ ಮಿಗಿಲಾದ ಸಂಪತ್ತು ಬೇರೊಂದಿಲ್ಲ' ಎಂಬ ಮಾತನ್ನು ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದ ರಿತ್ತಿ ಕುಟುಂಬ ಸಾಬೀತುಪಡಿಸಿದೆ. ಮನೆ ಅಡಿಪಾಯ ತೆಗೆಯುವಾಗ ಸಿಕ್ಕ ಅಪಾರ ಪ್ರಮಾಣದ ಬಂಗಾರದ ನಿಧಿಯನ್ನು ಸರ್ಕಾರದ ವಶಕ್ಕೆ ಒಪ್ಪಿಸುವ ಮೂಲಕ ನಾಡಿನ ಗಮನ ಸೆಳೆದಿದ್ದ ಪ್ರಜ್ವಲ್ ರಿತ್ತಿ ಮತ್ತು ಕಸ್ತೂರೆವ್ವ ಕುಟುಂಬಕ್ಕೆ, 77ನೇ ಗಣರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಸರ್ಕಾರವು ಒಂದು ಮನೆ ನಿವೇಶನ, ಮನೆ ನಿರ್ಮಾಣಕ್ಕೆ ₹5 ಲಕ್ಷ ಹಣ, ಸರ್ಕಾರಿ ಹಾಸ್ಟೆಲ್‌ನಲ್ಲಿ ಗುತ್ತಿಗೆ ಆಧಾರದಲ್ಲಿ ನೌಕರಿ ನೀಡಿದೆ.
26
ಗಣರಾಜ್ಯೋತ್ಸವ ವೇದಿಕೆಯಲ್ಲಿ ಸನ್ಮಾನ
ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರು ಧ್ವಜಾರೋಹಣ ನೆರವೇರಿಸಿದರು. ಬಳಿಕ ರಿತ್ತಿ ಕುಟುಂಬದ ಈ ಅದ್ವಿತೀಯ ಪ್ರಾಮಾಣಿಕತೆಯನ್ನು ಶ್ಲಾಘಿಸಿದ ಸಚಿವರು, ಜಿಲ್ಲಾಡಳಿತದ ವತಿಯಿಂದ ನೀಡಲಾದ ವಿಶೇಷ ಸೌಲಭ್ಯಗಳನ್ನು ಅಧಿಕೃತವಾಗಿ ಘೋಷಿಸಿದರು.
36
ಸರ್ಕಾರದಿಂದ ಘೋಷಣೆಯಾದ ಕೊಡುಗೆಗಳು:
ರಿತ್ತಿ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಹಾಗೂ ಅವರ ಪ್ರಾಮಾಣಿಕತೆಯನ್ನು ಗೌರವಿಸಲು ಸಚಿವರು ಈ ಕೆಳಗಿನ ಘೋಷಣೆಗಳನ್ನು ಮಾಡಿದರು.
ನಿವೇಶನ ಮತ್ತು ವಸತಿ: ಕುಟುಂಬಕ್ಕೆ 30/40 ಅಳತೆಯ ನಿವೇಶನ ಮಂಜೂರು ಮಾಡಲಾಗಿದ್ದು, ಮನೆ ನಿರ್ಮಿಸಿಕೊಳ್ಳಲು ಸಚಿವರ ವಿವೇಚನಾ ನಿಧಿಯಿಂದ 5 ಲಕ್ಷ ರೂಪಾಯಿ ನೆರವು ನೀಡಲಾಗಿದೆ.
ಸರ್ಕಾರಿ ಉದ್ಯೋಗ: ಕುಟುಂಬದ ಸದಸ್ಯೆಯಾದ ಕಸ್ತೂರೆವ್ವ ಅವರಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಉದ್ಯೋಗ ನೀಡಲಾಗಿದ್ದು, ವೇದಿಕೆಯಲ್ಲೇ ನೇಮಕಾತಿ ಪತ್ರ ಹಸ್ತಾಂತರಿಸಲಾಯಿತು.
ಗ್ರಾಮ ಪಂಚಾಯ್ತಿ ಬೆಂಬಲ: ಈಗಾಗಲೇ ಲಕ್ಕುಂಡಿ ಗ್ರಾಮ ಪಂಚಾಯ್ತಿಯೂ ಕೂಡ ಕುಟುಂಬಕ್ಕೆ ಅಗತ್ಯ ಸಹಕಾರ ನೀಡುವ ಭರವಸೆ ನೀಡಿದೆ.
ಆದರೆ, ಫಲಾನುಭವಿ ಮಹಿಳೆ ಕಸ್ತೂರೆವ್ವ ಮಾತನಾಡಿ, ಸರ್ಕಾರಿ ನೌಕರಿ ಕೊಡುವ ಭರವಸೆಯಿಂದ ಇಡೀ ಕುಟುಂಬ ಖುಷಿಯಾಗಿದ್ದೆವು. ಆದರೆ, ಜಿಲ್ಲಾಡಳಿತವು ನಮ್ಮ ಕುಟುಂಬಕ್ಕೆ ಗುತ್ತಿಗೆ ಆಧಾರದಲ್ಲಿ ನೌಕರಿ ನೀಡಿದೆ. ಇದು ತಾತ್ಕಾಲಿಕ ಅವಧಿಯಾಗಿದ್ದು, ಯಾವಾಗ ಬೇಕಾದರೂ ನಮ್ಮ ನೌಕರಿ ಹೋಗಬಹುದು ಎಂಬ ಆತಂಕವನ್ನು ವ್ಯಕ್ತಪಡಿಸಿದರು.
56
ಘಟನೆಯ ಹಿನ್ನೆಲೆ:
ಜನವರಿ 10 ರಂದು ಲಕ್ಕುಂಡಿ ಗ್ರಾಮದಲ್ಲಿ ಪ್ರಜ್ವಲ್ ರಿತ್ತಿ ಕುಟುಂಬದವರು ಹಳೆಯ ಮನೆ ಕೆಡವಿ ಅಡಿಪಾಯ ತೆಗೆಯುವಾಗ ಸುಮಾರು 464 ಗ್ರಾಂ ಚಿನ್ನಾಭರಣಗಳಿದ್ದ ಬಿಂದಿಗೆ ಪತ್ತೆಯಾಗಿತ್ತು. 14 ವರ್ಷದ ಬಾಲಕ ಪ್ರಜ್ವಲ್ ರಿತ್ತಿ ಕಿಂಚಿತ್ತೂ ಆಸೆ ಪಡದೇ ತಕ್ಷಣವೇ ಈ ನಿಧಿಯನ್ನು ಸರ್ಕಾರದ ವಶಕ್ಕೆ ಒಪ್ಪಿಸಿದ್ದರು.
66
ಭರವಸೆ ನೀಡಿದ್ದ ಉಸ್ತುವಾರಿ ಸಚಿವರು
ಈ ಸುದ್ದಿ ರಾಜ್ಯಾದ್ಯಂತ ಸಂಚಲನ ಮೂಡಿಸಿತ್ತು. ಅಂದು ಸಚಿವ ಎಚ್.ಕೆ. ಪಾಟೀಲರು ಲಕ್ಕುಂಡಿಗೆ ಭೇಟಿ ನೀಡಿ, 'ಗಣರಾಜ್ಯೋತ್ಸವದ ದಿನದಂದು ನಿಮಗೆ ಸೂಕ್ತ ಗೌರವ ನೀಡಲಾಗುವುದು' ಎಂದು ಮಾತು ನೀಡಿದ್ದರು. ಇಂದು ಆ ಮಾತನ್ನು ಸಚಿವರು ಉಳಿಸಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಸ್.ವಿ. ಸಂಕನೂರು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಪ್ರಾಮಾಣಿಕತೆಗೆ ದೊರೆತ ಈ ಮನ್ನಣೆ ಸಮಾಜಕ್ಕೆ ದೊಡ್ಡ ಸಂದೇಶವನ್ನು ರವಾನಿಸಿದೆ.