ಬೆಂಗಳೂರು ಟ್ರಾಫಿಕ್‌ಗೆ ಮುಕ್ತಿ: ಅಂತಿಮ ಹಂತಕ್ಕೆ ತಲುಪಿದ ಈಜೀಪುರ ಮೇಲ್ಸೇತುವೆ ಕಾಮಗಾರಿ, ಅಕ್ಟೋಬರ್‌ಗೆ ಸಂಚಾರ ಆರಂಭ!

Published : May 08, 2026, 08:03 PM IST

ದಶಕದಿಂದ ವಿಳಂಬವಾಗಿದ್ದ ಬೆಂಗಳೂರಿನ ಈಜೀಪುರ ಮೇಲ್ಸೇತುವೆ ಕಾಮಗಾರಿಯು ಈಗ ಅಂತಿಮ ಹಂತ ತಲುಪಿದೆ. ಸೆಂಟ್ ಜಾನ್ಸ್ ಆಸ್ಪತ್ರೆ ಬಳಿಯ ಭೂಸ್ವಾಧೀನ ಸಮಸ್ಯೆ ಬಗೆಹರಿದ ನಂತರ ಕಾಮಗಾರಿ ವೇಗ ಪಡೆದುಕೊಂಡಿದ್ದು, ಅಕ್ಟೋಬರ್ ಅಂತ್ಯದೊಳಗೆ ಪೂರ್ಣಗೊಂಡು, ಹೊಸ ವರ್ಷದ ವೇಳೆಗೆ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆಯಿದೆ.

PREV
15
ಈಜೀಪುರ ಮೇಲ್ಸೇತುವೆ ಕಾಮಗಾರಿ ಅಂತಿಮ ಹಂತ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅತಿ ದೀರ್ಘ ಅವಧಿಯವರೆಗೆ ಯಾವುದಾದರೂ ಒಂದು ಕಾಮಗಾರಿ ನಡೆದಿದೆ ಎಂದರೆ ಅದು ಈಜಿಪುರ ಮೇಲ್ಸೇತುವೆ ಕಾಮಗಾರಿ ಎಂದರೆ ತಪ್ಪಾಗಲಾರದು. ಕೆಲಸ ಆರಂಭವಾಗಿ ದಶಕದ ಹತ್ತಿರ ಬರುತ್ತಿರುವ ಈಜೀಪುರ ಮೇಲ್ಸೇತುವೆ ಕಾಮಗಾರಿ ಕೊನೆಗೂ ಅಂತ್ಯದ ಹಂತಕ್ಕೆ ತಲುಪಿದೆ. 

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೈಗೆತ್ತಿಕೊಂಡಿರುವ ಈ ಪ್ರಮುಖ ಯೋಜನೆಯು ಅಕ್ಟೋಬರ್ ಅಂತ್ಯದೊಳಗಾಗಿ ಪೂರ್ಣಗೊಳ್ಳಲಿದ್ದು, ಇದೇ ವರ್ಷ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಯೋಜನೆಯ ಮುಖ್ಯ ಅಭಿಯಂತರರಾದ ಡಾ. ರಾಘವೇಂದ್ರ ಪ್ರಸಾದ್ ತಿಳಿಸಿದ್ದಾರೆ.

25
ಸೆಂಟ್ ಜಾನ್ಸ್ ಅಡ್ಡಿ ನಿವಾರಣೆ; ವೇಗ ಪಡೆದ ಕಾಮಗಾರಿ

ಕಳೆದ ಹಲವು ವರ್ಷಗಳಿಂದ ಸೆಂಟ್ ಜಾನ್ಸ್ ಆಸ್ಪತ್ರೆ ಸಮೀಪದ ಭೂಸ್ವಾಧೀನ ಪ್ರಕ್ರಿಯೆ ಮತ್ತು 'ಪೋರ್ಟಲ್ ಫ್ರೇಮ್' ನಿರ್ಮಾಣದ ಜಟಿಲತೆಯಿಂದಾಗಿ ಕಾಮಗಾರಿ ಕುಂಟುತ್ತಾ ಸಾಗಿತ್ತು. ಆದರೆ, ಫೆಬ್ರವರಿ 2026ರಲ್ಲಿ ಈ ಸಮಸ್ಯೆಯನ್ನು ಯಶಸ್ವಿಯಾಗಿ ನಿವಾರಿಸಲಾಗಿದೆ. ಉಪ ಮುಖ್ಯಮಂತ್ರಿಗಳು ಹಾಗೂ ಸ್ಥಳೀಯ ಶಾಸಕರಾದ ಸಾರಿಗೆ ಸಚಿವರ ನಿರಂತರ ಮೇಲ್ವಿಚಾರಣೆಯಿಂದಾಗಿ ಸೆಂಟ್ ಜಾನ್ಸ್ ಆಡಳಿತ ಮಂಡಳಿಯು ಜಮೀನು ನೀಡಲು ಒಪ್ಪಿಗೆ ಸೂಚಿಸಿದ್ದು, ಈಗ ಕಾಮಗಾರಿ ಯುದ್ಧೋಪಾದಿಯಲ್ಲಿ ಸಾಗುತ್ತಿದೆ.

35
ವಿಳಂಬಕ್ಕೆ ಕಾರಣವೇನು?

ಈ ಯೋಜನೆಯು ಮೊದಲು ಮೇ 2017ರಲ್ಲಿ 203.20 ಕೋಟಿ ರೂ. ಮೊತ್ತದಲ್ಲಿ ಆರಂಭವಾಗಿತ್ತು. ಆದರೆ, ಮೊದಲ ಗುತ್ತಿಗೆದಾರ ಸಂಸ್ಥೆಯಾದ ಮೆ. ಸಿಂಪ್ಲೆಕ್ಸ್ ಇನ್‌ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ 4 ವರ್ಷಗಳಲ್ಲಿ ಕೇವಲ ಶೇ. 42.80 ರಷ್ಟು ಮಾತ್ರ ಕೆಲಸ ಮಾಡಿತ್ತು. ಇದರಿಂದಾಗಿ ಸಾರ್ವಜನಿಕರು ತೀವ್ರ ಟೀಕೆ ವ್ಯಕ್ತಪಡಿಸಿದ್ದರು. ಹೈಕೋರ್ಟ್ ಮಧ್ಯಪ್ರವೇಶದ ನಂತರ, ಹಳೆಯ ಗುತ್ತಿಗೆ ರದ್ದುಗೊಳಿಸಿ ನವೆಂಬರ್ 2023 ರಲ್ಲಿ ಬಿ.ಎಸ್.ಸಿ.ಪಿ.ಎಲ್ ಇನ್‌ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್‌ಗೆ ಬಾಕಿ ಕೆಲಸವನ್ನು ವಹಿಸಲಾಯಿತು.

45
ಪ್ರಸ್ತುತ ಕಾಮಗಾರಿ ಪ್ರಗತಿ (ಮೇ 2026 ರ ವರದಿ)

ಯೋಜನೆಯು ಈಗ ಅಂತಿಮ ಹಂತಕ್ಕೆ ತಲುಪಿದ್ದು, ಅಂಕಿಅಂಶಗಳು ಹೀಗಿವೆ:

ಅಡಿಪಾಯ: ಎಲ್ಲಾ ಪೈಲ್ಸ್ ಮತ್ತು ಪಿಯರ್ಸ್ (ಕಂಬಗಳು) ನಿರ್ಮಾಣ ಪೂರ್ಣಗೊಂಡಿವೆ.

ಸೆಗ್ಮೆಂಟ್‌ಗಳು: ಒಟ್ಟು 762 ಸೆಗ್ಮೆಂಟ್‌ಗಳಲ್ಲಿ 728 ಈಗಾಗಲೇ ಸಿದ್ಧವಾಗಿವೆ. ಕೇವಲ 15 ಸ್ಪಾನ್‌ಗಳ ಅಳವಡಿಕೆ ಮಾತ್ರ ಬಾಕಿ ಉಳಿದಿದೆ.

ರಸ್ತೆ ಅಗಲೀಕರಣ: ಸೆಂಟ್ ಜಾನ್ಸ್ ಸೇರಿದಂತೆ ಸುಮಾರು 5,998 ಚ.ಮೀ ಜಮೀನು ಹಸ್ತಾಂತರ ಪ್ರಕ್ರಿಯೆ ನಡೆಯುತ್ತಿದ್ದು, ಪಾದಚಾರಿ ಮಾರ್ಗ ಮತ್ತು ರಸ್ತೆ ಅಗಲೀಕರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ.

55
ಅಕ್ಟೋಬರ್ ನಂತರ ಸಂಚಾರ ಶುರು!

ಡಾ. ರಾಘವೇಂದ್ರ ಪ್ರಸಾದ್ ಅವರ ಪ್ರಕಾರ, ಮುಖ್ಯ ಮೇಲ್ಸೇತುವೆ ಕೆಲಸ ಅಕ್ಟೋಬರ್ ಅಂತ್ಯಕ್ಕೆ ಮುಗಿಯಲಿದೆ. ನಂತರ ರ್ಯಾಂಪ್‌ಗಳು ಮತ್ತು ಫಿನಿಶಿಂಗ್ ಕೆಲಸಗಳನ್ನು ಮುಗಿಸಿ, ಹೊಸ ವರ್ಷದ ಹೊತ್ತಿಗೆ ಈಜೀಪುರ ಮತ್ತು ಕೇಂದ್ರೀಯ ಸದನ ನಡುವಿನ ಟ್ರಾಫಿಕ್ ಸಮಸ್ಯೆ ನಿವಾರಿಸಲು ಸಂಚಾರ ಮುಕ್ತಗೊಳಿಸುವ ಗುರಿ ಹೊಂದಲಾಗಿದೆ.

Read more Photos on
click me!

Recommended Stories