ಕಲಬುರಗಿ: ಅಫಜಲಪುರ ಮಾಜಿ ತಹಶೀಲ್ದಾರ್‌ಗೆ 4 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್‌

Published : Jul 10, 2026, 03:43 PM IST

ಕಲಬುರಗಿಯ ಅಫಜಲಪುರದಲ್ಲಿ 1 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಮಾಜಿ ತಹಶೀಲ್ದಾರ್ ಶಶಿಕಲಾ ಪಾದಗಟ್ಟಿ ಮತ್ತು ಮತ್ತೊಬ್ಬರಿಗೆ ವಿಶೇಷ ನ್ಯಾಯಾಲಯವು ನಾಲ್ಕು ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ. 

PREV
15
ತಹಶೀಲ್ದಾರ್ ಸೇರಿ ಇಬ್ಬರಿಗೆ 4 ವರ್ಷ ಜೈಲು ಮತ್ತು ದಂಡ

ಕಲಬುರಗಿ ಜಿಲ್ಲೆಯ ಅಫಜಲಪುರದಲ್ಲಿ 1 ಲಕ್ಷ ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದ ಮಾಜಿ ತಹಶೀಲ್ದಾರ್ ಶಶಿಕಲಾ ಪಾದಗಟ್ಟಿ ಹಾಗೂ ಅವರಿಗೆ ಲಂಚದ ಹಣ ತಲುಪಿಸಿದ್ದ ಶಿವಾನಂದ ಜಮಖಂಡಿಗೆ ಕಲಬುರಗಿಯ ಪ್ರಧಾನ ಜಿಲ್ಲಾ ಮತ್ತು ವಿಶೇಷ ನ್ಯಾಯಾಲಯವು ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಇದರೊಂದಿಗೆ ಇಬ್ಬರಿಗೂ ತಲಾ 20 ಸಾವಿರ ರೂಪಾಯಿ ದಂಡವನ್ನು ವಿಧಿಸಿ ನ್ಯಾಯಾಧೀಶರಾದ ಜಿ.ಎಲ್. ಲಕ್ಷ್ಮೀನಾರಾಯಣ ಅವರು ಮಹತ್ವದ ಆದೇಶ ನೀಡಿದ್ದಾರೆ.

25
ಪ್ರಕರಣದ ಹಿನ್ನೆಲೆ ಮತ್ತು ಲಂಚಕ್ಕೆ ಬೇಡಿಕೆ

2017ರಲ್ಲಿ ಅಫಜಲಪುರ ತಾಲ್ಲೂಕಿನ ಕರಜಗಿ ನಾಡ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಡೇಟಾ ಎಂಟ್ರಿ ಆಪರೇಟರ್ ಆಗಿ ಶಿವಲಿಂಗಯ್ಯ ಬಸಯ್ಯ ಮಠ ಅವರು ಕೆಲಸ ಮಾಡುತ್ತಿದ್ದರು. ಇವರು ಸಾರ್ವಜನಿಕರಿಂದ ಹಣ ಪಡೆಯುತ್ತಿದ್ದಾರೆ ಎಂಬ ದೂರು ತಹಶೀಲ್ದಾರ್ ಶಶಿಕಲಾ ಅವರಿಗೆ ಬಂದಿತ್ತು. ಈ ಪ್ರಕರಣದಲ್ಲಿ ತಮಗೆ ಸಹಾಯ ಮಾಡುವಂತೆ ಶಿವಲಿಂಗಯ್ಯ ಅವರು ಕೋರಿದಾಗ, ತಹಶೀಲ್ದಾರ್ ಶಶಿಕಲಾ ಅವರು 1 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅಲ್ಲದೆ, ಹಣವನ್ನು ಶಿವಾನಂದ ಜಮಖಂಡಿಗೆ ತಲುಪಿಸಬೇಕು, ಇಲ್ಲದಿದ್ದರೆ ಕೆಲಸಕ್ಕೆ ಬೇರೆಯವರನ್ನು ನೇಮಿಸಿಕೊಳ್ಳಲಾಗುವುದು ಎಂದು ಬೆದರಿಕೆ ಹಾಕಿದ್ದರು.

35
ಲೋಕಾಯುಕ್ತ ಪೊಲೀಸರ ದಾಳಿ ಮತ್ತು ಬಂಧನ

ಲಂಚದ ಬೇಡಿಕೆಯಿಂದ ಬೇಸತ್ತ ಶಿವಲಿಂಗಯ್ಯ ಅವರು ಈ ಕುರಿತು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ, 2017ರ ಆಗಸ್ಟ್ 31ರಂದು ಶಿವಲಿಂಗಯ್ಯ ಅವರಿಂದ ಲಂಚದ ಹಣವನ್ನು ಪಡೆದ ಶಿವಾನಂದ ಜಮಖಂಡಿ, ಅದನ್ನು ತಹಶೀಲ್ದಾರ್ ಶಶಿಕಲಾ ಅವರಿಗೆ ತಲುಪಿಸಲು ಹೋಗಿದ್ದಾಗ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನೂ ರೆಡ್‌ಹ್ಯಾಂಡ್ ಆಗಿ ಬಂಧಿಸಿದ್ದರು. ಲೋಕಾಯುಕ್ತ ಡಿವೈಎಸ್‌ಪಿ ಸಂತೋಷ ಬನ್ನಟ್ಟಿ ಪ್ರಕರಣ ದಾಖಲಿಸಿಕೊಂಡಿದ್ದರು.

45
ಕಡ್ಡಾಯ ನಿವೃತ್ತಿ ನೀಡಿದ್ದ ಸರ್ಕಾರ

ಲೋಕಾಯುಕ್ತ ಬಲೆಗೆ ಬಿದ್ದಿದ್ದ ತಹಶೀಲ್ದಾರ್ ಶಶಿಕಲಾ ಪಾದಗಟ್ಟಿ ಅವರು ಪ್ರಸ್ತುತ ಯಾದಗಿರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ, ಈ ಭ್ರಷ್ಟಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಕಳೆದ ವಾರವಷ್ಟೇ ರಾಜ್ಯ ಸರ್ಕಾರ ಅವರಿಗೆ ಕಡ್ಡಾಯ ನಿವೃತ್ತಿಗೆ (Compulsory Retirement) ಸೂಚಿಸಿ, ಕೆಲಸದಿಂದ ಬಿಡುಗಡೆ ಮಾಡಿ ಆದೇಶ ಹೊರಡಿಸಿತ್ತು.

55
ತನಿಖೆ ಮತ್ತು ನ್ಯಾಯಾಲಯದ ಅಂತಿಮ ತೀರ್ಪು

ಈ ಗಂಭೀರ ಪ್ರಕರಣದ ತನಿಖೆ ನಡೆಸಿದ್ದ ಲೋಕಾಯುಕ್ತ ಅಧಿಕಾರಿ ಕೃಷ್ಣಪ್ಪ ಕಲ್ಲದೇವರ ಅವರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರಾದ (SPP) ಅಶೋಕ ಎಸ್. ಚಾಂದಕವಠ ಅವರು ಸರ್ಕಾರದ ಪರವಾಗಿ ಪ್ರಬಲ ವಾದ ಮಂಡಿಸಿದ್ದರು. ಸುದೀರ್ಘ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ವಿಶೇಷ ನ್ಯಾಯಾಲಯವು ಇಬ್ಬರೂ ಆರೋಪಿಗಳು ಅಪರಾಧಿಗಳು ಎಂದು ತೀರ್ಪು ನೀಡಿ ಜೈಲು ಶಿಕ್ಷೆ ಪ್ರಕಟಿಸಿದೆ.

Read more Photos on
click me!

Recommended Stories