ಭಾರತದಲ್ಲಿ ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಳ್ಳುವುದು ಎಲ್ಲ ಯುವಕರ ಪಾಲಿನ ದೊಡ್ಡ ಕನಸಾಗಿರುತ್ತದೆ. ಯಾಕೆಂದರೆ ಸರ್ಕಾರಿ ಉದ್ಯೋಗದಲ್ಲಿ ಹೆಚ್ಚಿನ ಭದ್ರತೆ ಹಾಗೂ ಅನುಕೂಲಗಳು ಇರುತ್ತವೆ. ಇದಷ್ಟೇ ಅಲ್ಲದೇ ಕೈತುಂಬ ಸಂಬಳ ಕೂಡಾ ಸಿಗುತ್ತದೆ. ಸರ್ಕಾರಿ ಉದ್ಯೋಗ ಪಡೆದವರಿಗೆ ಸಮಾಜದಲ್ಲಿ ಒಳ್ಳೆಯ ಗೌರವ ಕೂಡಾ ಸಿಗುತ್ತದೆ. ಹೀಗಾಗಿ ಖಾಸಗಿ ಉದ್ಯೋಗಕ್ಕಿಂತ ಸರ್ಕಾರಿ ಉದ್ಯೋಗದತ್ತ ಹೆಚ್ಚಿನ ಯುವ ಜನತೆ ಒಲವು ಹೊಂದಿರುತ್ತಾರೆ. ಬನ್ನಿ ನಾವಿಂದು ನಮ್ಮ ದೇಶದಲ್ಲಿ ಅತಿ ಸಂಬಳ ಪಡೆಯುವ ಸರ್ಕಾರಿ ಉದ್ಯೋಗಗಳು ಯಾವುವು ನೋಡೋಣ
IAS ಅಧಿಕಾರಿಗಳ ಸಂಬಳ ₹56,100 ನಿಂದ ಹಿಡಿದು ₹2,50,000 ಸಂಬಳವನ್ನು ಪ್ರತಿ ತಿಂಗಳು ಪಡೆಯುತ್ತಾರೆ. ಭಾರತೀಯ ಲೋಕ ಸೇವಾ ಅಧಿಕಾರಿಗಳು ಸರ್ಕಾರದ ಕೆಲಸವನ್ನು ಮಾಡುತ್ತಾರೆ. ಇವರ ಪ್ರಮುಖ ಕೆಲಸ ಸರ್ಕಾರದ ನೀತಿ ನಿರೂಪಣೆಗಳನ್ನು ರೂಪಿಸುವುದು ಹಾಗೂ ಜಾರಿಗೆ ತರುವುದಾಗಿದೆ. ಇವರೆಲ್ಲಾ ಸರ್ಕಾರದ ವಿವಿಧ ಇಲಾಖೆಗಳ ಸಂಪೂರ್ಣ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಇವರೆಲ್ಲರ ಉತ್ತಮ ಕಾರ್ಯದಿಂದಲೇ ದೇಶ ಅಭಿವೃದ್ದಿಯತ್ತ ಸಾಗುತ್ತದೆ.
IPS ಅಧಿಕಾರಿಗಳ ಸಂಬಳ ₹56,100 ನಿಂದ ಹಿಡಿದು ₹2,25,000 ಸಂಬಳವನ್ನು ಪ್ರತಿ ತಿಂಗಳು ಪಡೆಯುತ್ತಾರೆ. ಐಪಿಎಸ್ ಅಧಿಕಾರಿಗಳ ಪ್ರಮುಖ ಕೆಲಸವೆಂದರೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದು ಹಾಗೂ ಅಪರಾಧ ಪ್ರಕರಣಗಳನ್ನು ಕಡಿಮೆ ಮಾಡುವುದಾಗಿದೆ. ಐಪಿಎಸ್ ಅಧಿಕಾರಿಗಳು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಾರೆ ಹಾಗೂ ಸಮಾಜದಲ್ಲಿ ಸುರಕ್ಷತೆಯ ವಾತಾವರಣ ಕಲ್ಪಿಸುವ ಜವಾಬ್ದಾರಿ ಹೊಂದಿರುತ್ತಾರೆ.
IFS: ಇಂಡಿಯನ್ ಫಾರಿನ್ ಸರ್ವೀಸ್ ಅಧಿಕಾರಿಗಳ ಪ್ರತಿ ತಿಂಗಳ ಸಂಬಳ ₹56,100 ನಿಂದ ಹಿಡಿದು ₹2,50,000 ಆಗಿರುತ್ತದೆ. ಈ ಐಎಫ್ಎಸ್ ಅಧಿಕಾರಿಗಳು ವಿದೇಶಗಳಲ್ಲಿ ಭಾರತವನ್ನು ಪ್ರತಿನಿಧಿಸುತ್ತಾರೆ. ಅವರ ಪ್ರಮುಖ ಕೆಲಸವೆಂದರೇ ಇತರ ದೇಶಗಳ ನಡುವಿನ ಉತ್ತಮ ಬಾಂಧವ್ಯ ಬೆಳೆಸುವುದು ಹಾಗೂ ರಾಜತಾಂತ್ರಿಕ ಬಿಕ್ಕಟ್ಟುಗಳನ್ನು ಚಾಣಾಕ್ಷವಾಗಿ ನಿಭಾಯಿಸುವುದಾಗಿದೆ. ಇದರ ಜತೆಗೆ ವಿದೇಶದಲ್ಲಿದ್ದುಕೊಂಡೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶದ ಹಿತಾಸಕ್ತಿಯನ್ನು ಕಾಪಾಡಬೇಕಾದ ಮಹತ್ವದ ಜವಾಬ್ದಾರಿ ಐಎಫ್‌ಎಸ್ ಅಧಿಕಾರಿಗಳಿಗಿದೆ.
ಭಾರತೀಯ ಸೇನಾ ಮುಖ್ಯಸ್ಥರು:
ಭಾರತದ ವಾಯು ಸೇನಾ, ಭೂ ಸೇನಾ ಹಾಗೂ ನೌಕಾ ಸೇನಾ ಮುಖ್ಯಸ್ಥರ ತಿಂಗಳ ಸಂಬಳ ₹56,100 ನಿಂದ ಹಿಡಿದು ₹2,50,000. ಈ ಪಡೆಗಳ ಮುಖ್ಯಸ್ಥರ ಮುಖ್ಯ ಕೆಲಸ ದೇಶವನ್ನು ಬಾಹ್ಯ ಶತ್ರುಗಳಿಂದ ಕಾಪಾಡುವುದು ಹಾಗೂ ವಿವಿಧ ಮಿಲಿಟರಿ ಕಾರ್ಯಾಚರಣೆ ನಡೆಸುವುದಾಗಿದೆ. ದೇಶದ ಮೂರು ಪಡೆಗಳ ಮುಖ್ಯಸ್ಥರ ಪ್ರಮುಖ ಕೆಲಸವೆಂದರೇ ದೇಶದ ಭದ್ರತೆಯನ್ನು ನಿಭಾಯಿಸುವುದಾಗಿದೆ.
ONGC ಆಯಿಲ್ & ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ ಅಧಿಕಾರಿಗಳ ಸಂಬಳ ₹60,000 ನಿಂದ ಹಿಡಿದು ₹2,80,000 ತಿಂಗಳಿಗೆ ಪಡೆಯುತ್ತಾರೆ. ಇಲ್ಲಿ ಕೆಲಸ ಮಾಡುವವರು ಎನರ್ಜಿ, ಮ್ಯಾನ್ಯುಫ್ಯಾಕ್ಚರ್ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ದಿಯ ಕುರಿತಂತೆ ಕೆಲಸ ಮಾಡುತ್ತಾರೆ. ಈ ಸಂಸ್ಥೆಯ ಉದ್ಯೋಗಿಗಳ ಗುರಿಯೆಂದರೆ ದೇಶವನ್ನು ಅಭಿವೃದ್ದಿಯತ್ತ ಕೊಂಡೊಯ್ಯುವುದಾಗಿದೆ.
IRS: ಇಂಡಿಯನ್ ರೆವಿನ್ಯೂ ಸರ್ವೀಸ್ ಅಧಿಕಾರಿಗಳ ತಿಂಗಳ ಸಂಬಳ ₹56,100 ನಿಂದ ಹಿಡಿದು ₹2,25,000ದ ವರೆಗೂ ಇದೆ. ಈ ಅಧಿಕಾರಿಗಳ ಕೆಲಸ ತೆರಿಗೆ ಸಂಗ್ರಹಿಸುವುದು ಹಾಗೂ ಜನರು ತೆರಿಗೆ ಕಾನೂನುಗಳನ್ನು ಸರಿಯಾಗಿ ಪಾಲಿಸುತ್ತಿದ್ದಾರಾ ಎನ್ನುವುದನ್ನು ನೋಡಿಕೊಳ್ಳುವುದಾಗಿದೆ. ಇವರ ಪ್ರಮುಖ ಕೆಲಸ ದೇಶದ ಅಭಿವೃದ್ದಿ ಕೆಲಸಗಳಿಗೆ ಹಣಕಾಸಿನ ಸಂಪನ್ಮೂಲ ಒದಗಿಸುವುದಾಗಿದೆ.
ಭಾರತೀಯ ರೈಲ್ವೇ ಸೇವೆ ಅಧಿಕಾರಿಗಳ ತಿಂಗಳ ಸಂಬಳ ₹56,100 ನಿಂದ ಹಿಡಿದು ₹2,25,000 ಆಗಿದೆ. ಇಂಡಿಯನ್ ರೈಲ್ವೇ ಸರ್ವೀಸ್ ಅಧಿಕಾರಿಗಳು, ರೈಲ್ವೇ ಚಟುವಟಿಕೆಗಳು, ರೈಲ್ವೇ ಪ್ರಯಾಣಿಕರ ಸುರಕ್ಷತೆಯನ್ನು ನೋಡಿಕೊಳ್ಳುವುದಾಗಿದೆ. ಇದರ ಜತೆಗೆ ರೈಲ್ವೇ ಚಟುವಟಿಕೆಗಳು ಯಾವುದೇ ಅಡಚಣೆಯಿಲ್ಲದೇ ಸುಸೂತ್ರವಾಗಿ ಸಾಗುವಂತೆ ನೋಡಿಕೊಳ್ಳುವುದಾಗಿದೆ.
IAAS: ಇಂಡಿಯನ್ ಆಡಿಟ್ & ಅಕೌಂಟ್ಸ್ ಡಿಪಾರ್ಟ್‌ಮೆಂಟ್ ಅಧಿಕಾರಿಗಳು ತಿಂಗಳಿಗೆ ₹56,100 ನಿಂದ ಹಿಡಿದು ₹2,25,000 ಸಂಬಳ ಪಡೆಯುತ್ತಾರೆ. ಈ ಅಧಿಕಾರಿಗಳು ಸರ್ಕಾರದ ಖರ್ಚುವೆಚ್ಚಗಳು ಸರಿಯಾದ ರೀತಿಯಲ್ಲಿ ಮಾಡಲಾಗಿದೆಯೇ ಎನ್ನುವುದನ್ನು ಖಚಿತಪಡಿಸುತ್ತವೆ. ಈ ಉದ್ಯೋಗಿಗಳ ಪ್ರಮುಖ ಗುರಿ ಸರ್ಕಾರ ಸಾರ್ವಜನಿಕ ಹಣವನ್ನು ಸರಿಯಾಗಿ ಬಳಕೆ ಮಾಡುತ್ತಿದೆಯೇ ಎನ್ನುವುದನ್ನು ಪರೀಕ್ಷಿಸುವುದಾಗಿದೆ.
KPSC
ರಾಜ್ಯ ಲೋಕಸೇವಾ ಆಯೋಗ: ರಾಜ್ಯ ಲೋಕಸೇವಾ ಆಯೋಗದ ಅಧಿಕಾರಿಗಳು ತಿಂಗಳಿಗೆ ₹56,100 ನಿಂದ ಹಿಡಿದು ₹2,25,000 ಸಂಬಳ ಪಡೆಯುತ್ತಾರೆ. ಈ ಅಧಿಕಾರಿಗಳು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳ ಆಡಳಿತಾತ್ಮಕ ಪಾತ್ರಗಳನ್ನು ನಿಭಾಯಿಸುತ್ತಾರೆ. ಇವರ ಪ್ರಮುಖ ಕೆಲಸವೆಂದರೆ, ರಾಜ್ಯ ಸರ್ಕಾರಗಳು ಜಾರಿಗೆ ತರುವ ಜನಪರ ಕಲ್ಯಾಣ ಯೋಜನೆಗಳು ಸರಿಯಾದ ರೀತಿಯಲ್ಲಿ ಜನರಿಗೆ ತಲುಪುತ್ತಿದೆಯೇ ಎನ್ನುವುದನ್ನು ನೋಡಿಕೊಳ್ಳುವುದಾಗಿದೆ.
ಸುಪ್ರೀಂ ಕೋರ್ಟ್ ಜಡ್ಜ್‌ಗಳ ಪ್ರತಿ ತಿಂಗಳ ಸಂಬಳ ₹2,50,000 ಆಗಿರುತ್ತದೆ. ಇನ್ನು ಹೈಕೋರ್ಟ್ ಜಡ್ಜ್‌ಗಳ ಸಂಬಳ ₹2,24,000 ಆಗಿದೆ. ಈ ನ್ಯಾಯಾದೀಶರು ನ್ಯಾಯಾಂಗದ ಕೆಲಸಗಳನ್ನು ಮಾಡುತ್ತಾರೆ. ಕಾನೂನು ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ವಾದ-ವಿವಾದಗಳನ್ನು ಆಲಿಸಿ ತೀರ್ಪು ನೀಡುತ್ತಾರೆ. ನ್ಯಾಯಾದೀಶರ ಪ್ರಮುಖ ಕೆಲಸವೆಂದರೇ ನೆಲದ ಕಾನೂನನ್ನು ಕಾಪಾಡುವುದಾಗಿದೆ.