ನಾನು ಬಲಿಷ್ಠರಾಗಿಯೇ ಕಮ್‌ಬ್ಯಾಕ್ ಮಾಡ್ತೇವೆ, ಆದ್ರೆ ರೈನಾರನ್ನು ವಾಪಾಸ್ ಕರೆಸಿಕೊಳ್ಳಲ್ಲ: ಸಿಎಸ್‌ಕೆ
ದುಬೈ: 3 ಬಾರಿಯ ಐಪಿಎಲ್ ಚಾಂಪಿಯನ್ ಸೂಪರ್ ಕಿಂಗ್ಸ್ ತಂಡ 13ನೇ ಆವೃತ್ತಿಯಲ್ಲಿ ಕೊಂಚ ದುರ್ಬಲವಾಗಿ ಕಾಣಿಸಲಾರಂಭಿಸಿದೆ. ಐಪಿಎಲ್ ಇತಿಹಾಸದಲ್ಲಿಯೇ ಅತ್ಯಂತ ಸ್ಥಿರ ಪ್ರದರ್ಶನ ತೋರುವ ಮೂಲಕ ಆಡಿದ ಎಲ್ಲಾ ಆವೃತ್ತಿಗಳಲ್ಲೂ ಪ್ಲೇ ಆಫ್ ಹಂತ ಪ್ರವೇಶಿಸಿದ ಏಕೈಕ ತಂಡ ಎನ್ನುವ ಹೆಗ್ಗಳಿಕೆ ಧೋನಿ ತಂಡಕ್ಕಿದೆ.
ಆದರೆ ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮಣಿಸಿ ಶುಭಾರಂಭ ಮಾಡಿದ್ದ ಧೋನಿ ಪಡೆ ಆ ಬಳಿಕ ಎರಡು ಪಂದ್ಯಗಳನ್ನು ಸೋತು ಆತಂಕಕ್ಕೊಳಗಾಗಿದೆ. ಇಂತಹ ಸಂದರ್ಭದಲ್ಲಿ ಸುರೇಶ್ ರೈನಾ ಅವರಿಗೆ ಸಿಎಸ್‌ಕೆ ಮತ್ತೆ ಬುಲಾವ್ ನೀಡುತ್ತಾ ಎನ್ನುವ ಪ್ರಶ್ನೆ ಜೋರಾಗಿ ಕೇಳಿ ಬರುತ್ತಿದೆ.