ರಾಹುಲ್ ದ್ರಾವಿಡ್ ನನಗೆಲ್ಲಾ ಸ್ವಾತಂತ್ರ್ಯವನ್ನು ನೀಡಿದ್ದರು ಎಂದ ಟೀಂ ಇಂಡಿಯಾ ಯುವ ಪ್ರತಿಭೆ..!

ದುಬೈ: 2008ರಲ್ಲಿ ಆರಂಭವಾದ ಐಪಿಎಲ್ ಟೂರ್ನಿಯಲ್ಲಿ ಶೇನ್‌ ವಾರ್ನ್ ನೇತೃತ್ವದಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇದಾದ ಬಳಿಕ ಮತ್ತೋರ್ವ ಕ್ರಿಕೆಟ್ ದಂತಕಥೆ ರಾಹುಲ್ ದ್ರಾವಿಡ್ ರಾಜಸ್ಥಾನ ರಾಯಲ್ಸ್ ತಂಡದ ಪಾಲಿಗೆ ಮಾರ್ಗದರ್ಶಕರಾಗುವ ಮೂಲಕ ಹಲವಾರು ಯುವ ಪ್ರತಿಭೆಗಳನ್ನು ಬೆಳೆಸುವ ನಿಟ್ಟಿನಲ್ಲಿ ಮಹತ್ವದ ಕೆಲಸ ಮಾಡಿದ್ದಾರೆ. ಈ ಪೈಕಿ ರಾಜಸ್ಥಾನ ರಾಯಲ್ಸ್ ತಂಡದ ಪ್ರತಿಭಾನ್ವಿತ ಕ್ರಿಕೆಟಿಗ ರಾಹುಲ್ ದ್ರಾವಿಡ್ ಹಾಗೂ ಫ್ರಾಂಚೈಸಿ ತಮ್ಮನ್ನು ಹೇಗೆ ನಡೆಸಿಕೊಳ್ಳುತ್ತಿದೆ ಎನ್ನುವುದನ್ನು ಮಾಧ್ಯಮದವರ ಮುಂದೆ ಹಂಚಿಕೊಂಡಿದ್ದಾರೆ. 

ಯುವ ಪ್ರತಿಭೆಗಳ ಪಾಲಿಗೆ ರಾಹುಲ್ ದ್ರಾವಿಡ್ ಮಾರ್ಗದರ್ಶಕರಾಗಿ ಗುರುತಿಸಿಕೊಂಡಿದ್ದಾರೆ.
ಐಪಿಎಲ್, ಭಾರತ 'ಎ' ಹಾಗೂ ಅಂಡರ್ 19 ತಂಡದ ಯುವ ಆಟಗಾರರಿಗೆ ದ್ರಾವಿಡ್ ಗುರುವಾಗಿ ಮಾರ್ಗದರ್ಶನ ಮಾಡಿದ್ದಾರೆ. ಪ್ರಸ್ತುತ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿಯ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕೇರಳ ಮೂಲದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ತಮ್ಮ ಗುರು ರಾಹುಲ್ ದ್ರಾವಿಡ್ ಜತೆಗಿನ ಒಡನಾಟವನ್ನು ಹಂಚಿಕೊಂಡಿದ್ದಾರೆ.
ದ್ರಾವಿಡ್ ರಾಜಸ್ಥಾನದ ಕೋಚ್ ಆಗಿದ್ದಾಗ ತಮಗೆ ತಮ್ಮಿಷ್ಟದಂತೆ ಬ್ಯಾಟಿಂಗ್ ಮಾಡಲು ಸಂಪೂರ್ಣ ಸ್ವಾತಂತ್ರ್ಯ ನೀಡುತ್ತಿದ್ದರು ಎಂದು ಸ್ಯಾಮ್ಸನ್ ಹೇಳಿದ್ದಾರೆ.
ಐಪಿಎಲ್‌ನಲ್ಲಿ ನನಗೆ ಹಲವಾರು ಅವಿಸ್ಮರಣೀಯ ಕ್ಷಣಗಳಿವೆ. ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಪ್ರಯೋಗ ಮಾಡಲು ಹಾಗೆಯೇ ತಪ್ಪು ಮಾಡಲು ಸ್ವತಂತ್ರ್ಯವಿತ್ತು.
ಆರಂಭದಿಂದಲೂ ಜುಬೀನ್ ಭರೂಚ್, ರಾಹುಲ್ ದ್ರಾವಿಡ್, ಪ್ಯಾಡಿ ಆಪ್ಟನ್ ವೈಫಲ್ಯಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ. ನಿನ್ನ ಸ್ವಾಭಾವಿಕ ಆಟವನ್ನು ಆಡು ಎಂದು ಹುರಿದುಂಬಿಸುತ್ತಿದ್ದರು. ಈ ರೀತಿಯ ಪ್ರೇರೇಪಣೆ ನನ್ನ ಬ್ಯಾಟಿಂಗ್ ಮೇಲೆ ಸಕಾರಾತ್ಮಕ ಪರಿಣಾಮ ಬೀರಿತು ಎಂದು ದುಬೈನಲ್ಲಿನ ಗಲ್ಫ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಈ ವರ್ಷ ನಾವು ಪೇಪರ್‌ ಮೇಲೆ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದ್ದೇವೆ. ಇದನ್ನು ಸಾಭೀತು ಮಾಡುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಸಾಕಷ್ಟು ಅಳೆದು, ತೂಗಿಯೇ ಆಟಗಾರರನ್ನು ಹರಾಜಿನಲ್ಲಿ ಖರೀದಿಸಲಾಗಿದೆ. ನಮ್ಮ ಗುರಿ ಏನಿದ್ದರೂ ಈ ಬಾರಿ ಕಪ್‌ ಗೆಲ್ಲುವುದಷ್ಟೇ ಎಂದು ಸಂಜು ಸ್ಯಾಮ್ಸನ್ ಹೇಳಿದ್ದಾರೆ.
ಕೊನೆಗೂ ನಿರೀಕ್ಷೆಯಂತೆಯೇ ಐಪಿಎಲ್ ಆರಂಭವಾಗುತ್ತಿರುವುದಕ್ಕೆ ಸಂತೋಷವಾಗುತ್ತಿದೆ. ದುಬೈನಲ್ಲಿರುವುದಕ್ಕೆ ಯಾವಾಗಲೂ ಖುಷಿಯಾಗುತ್ತದೆ. ಆದರೆ ಈ ಸಲ ನಾವು ದುಬೈನಲ್ಲಿ ಸುತ್ತಲು ಸಾಧ್ಯವಾಗುತ್ತಿಲ್ಲ, ನಾವೆಲ್ಲ ಈಗ ಹೋಟೆಲ್‌ನಲ್ಲೇ ಕ್ವಾರಂಟೈನ್‌ನಲ್ಲಿದ್ದೇವೆ ಎಂದು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಂಜು ಹೇಳಿದ್ದಾರೆ.
ಭಾರತದ ವಾತಾವರಣಕ್ಕೂ ದುಬೈನ ವಾತಾವರಣಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ದುಬೈನಲ್ಲಿ ಸಾಕಷ್ಟು ಬಿಸಿಲಿನ ವಾತಾವರಣವಿರುತ್ತದೆ. ನಾವು ನಮ್ಮ ಯೋಜನೆಯಂತೆ ಆಟವಾಡುತ್ತೇವೆ ಎಂದು ಹೇಳಿದ್ದಾರೆ.
13ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಸೆಪ್ಟೆಂಬರ್ 19ರಿಂದ ಆರಂಭವಾಗಿ ನವೆಂಬರ್ 10ರವರೆಗೆ ಯುಎಇನ ಶಾರ್ಜಾ, ಅಬುದಾಬಿ, ದುಬೈ ಮೈದಾನದಲ್ಲಿ ನಡೆಯಲಿದೆ.

Latest Videos

click me!