ಚೆನ್ನೈ ಸೂಪರ್ ಕಿಂಗ್ಸ್ ತಂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರಿಂದ ಕಳೆದೆರಡು ಪಂದ್ಯಗಳನ್ನು ಹೀನಾಯವಾಗಿ ಕೈಚೆಲ್ಲಿದೆ.
ಟೂರ್ನಿ ಆರಂಭಕ್ಕೂ ಮುನ್ನವೇ ಸುರೇಶ್ ರೈನಾ ಐಪಿಎಲ್‌ನಿಂದ ಹಿಂದೆ ಸರಿದಿದ್ದು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ದೊಡ್ಡ ಹೊಡೆತ ನೀಡಿತ್ತು.
ಸುರೇಶ್ ರೈನಾ ಅನುಪಸ್ಥಿತಿ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟಿಂಗ್ ಕ್ರಮಾಂಕವನ್ನೇ ಅಲುಗಾಡಿಸಿಬಿಟ್ಟಿದೆ.
ಸುರೇಶ್ ರೈನಾ ಅನುಪಸ್ಥಿತಿಯಲ್ಲಿ ಋತುರಾಜ್ ಗಾಯಕ್ವಾಡ್ ಹಾಗೂ ಮುರುಳಿ ವಿಜಯ್ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ.
ಇವೆಲ್ಲದರ ಹೊರತಾಗಿಯೂ ಮೊದಲ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ಎದುರು ಫಾಫ್ ಡುಪ್ಲೆಸಿಸ್ ಹಾಗೂ ಅಂಬಟಿ ರಾಯುಡು ದಿಟ್ಟ ಬ್ಯಾಟಿಂಗ್ ನಡೆಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು.
ಆದರೆ ಅಂಬಟಿ ರಾಯುಡು ಗಾಯದ ಸಮಸ್ಯೆಯಿಂದಾಗಿ ಎರಡು ಹಾಗೂ ಮೂರನೇ ಪಂದ್ಯಕ್ಕೆ ಅಲಭ್ಯರಾಗಿದ್ದರು. ಹೀಗಾಗಿ ಈ ಎರಡೂ ಪಂದ್ಯಗಳಲ್ಲೂ ಚೆನ್ನೈ ಮುಗ್ಗರಿಸಿತ್ತು.
ಕಳೆದೆರಡು ವರ್ಷಗಳಲ್ಲಿ ಅಂಬಟಿ ರಾಯುಡು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಧಾರಸ್ತಂಭವಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಕಳೆದೆರಡು ಪಂದ್ಯಗಳಲ್ಲಿ ರಾಯುಡು ಅನುಪಸ್ಥಿತಿ ಚೆನ್ನೈ ತಂಡವನ್ನು ಕಾಡಿದೆ.
ಇದೀಗ ಸಿಎಸ್‌ಕೆ ನಾಯಕ ಧೋನಿ ತಂಡದ ನಂಬಿಕಸ್ಥ ಬ್ಯಾಟ್ಸ್‌ಮನ್ ಮುಂದಿನ ಪಂದ್ಯದ ವೇಳೆಗೆ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎನ್ನುವ ಶುಭ ಸುದ್ದಿಯೊಂದನ್ನು ಅಭಿಮಾನಿಗಳಿಗೆ ನೀಡಿದ್ದಾರೆ.
ಅಕ್ಟೋಬರ್ 02ರಂದು ಸಿಎಸ್‌ಕೆ ತಂಡವು ತನ್ನ ಮುಂದಿನ ಪಂದ್ಯವನ್ನು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲಿದ್ದು, ಈ ವೇಳೆಗೆ ರಾಯುಡು ತಂಡ ಸೇರಿಕೊಳ್ಳಲಿದ್ದಾರೆ ಎಂದು ಧೋನಿ ತಿಳಿಸಿದ್ದಾರೆ.
ಸದ್ಯ ತಂಡದ ಕಾಂಬಿನೇಷನ್ ಬಗ್ಗೆ ಯೋಚನೆ ಮಾಡುತ್ತಿದ್ದು, ರಾಯುಡು ಒಬ್ಬರು ತಂಡ ಕೂಡಿಕೊಂಡರೆ ಎಲ್ಲವೂ ಸರಿಯಾಗುತ್ತದೆ ಎಂದು ಡೆಲ್ಲಿ ವಿರುದ್ಧ ಸೋಲಿನ ಬಳಿಕ ಧೋನಿ ಮಾತನಾಡಿದ್ದಾರೆ.