IPL 2020: ಪ್ಲೇ ಆಫ್‌ & ಫೈನಲ್‌ ಪಂದ್ಯದ ವೇಳಾಪಟ್ಟಿ ಪ್ರಕಟ..!

First Published | Oct 26, 2020, 1:40 PM IST

ದುಬೈ: ಈಗಾಗಲೇ ಸಾಕಷ್ಟು ರೋಚಕತೆಯಿಂದ ಕೂಡಿರುವ 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಇದೀಗ 45 ಪಂದ್ಯಗಳು ಮುಕ್ತಾಯವಾಗಿವೆ. ಹೀಗಿದ್ದು ಯಾವ ತಂಡವೂ ಅಧಿಕೃತವಾಗಿ ಪ್ಲೇ ಆಫ್‌ ಸ್ಥಾನವನ್ನು ಖಚಿತಪಡಿಸಿಕೊಂಡಿಲ್ಲ.

ಹೀಗಿರುವಾಗಲೇ ಬಿಸಿಸಿಐ ಈ ಆವೃತ್ತಿಯ ಐಪಿಎಲ್ ಟೂರ್ನಿಯ ಪ್ಲೇ ಆಫ್ ಹಾಗೂ ಫೈನಲ್ ಪಂದ್ಯದ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಪ್ಲೇ ಆಫ್‌ ಪಂದ್ಯಗಳು ಯಾವ ಮೈದಾನದಲ್ಲಿ ನಡೆಯಲಿದೆ ಹಾಗೂ ಫೈನಲ್‌ ಪಂದ್ಯಕ್ಕೆ ಯಾವ ಮೈದಾನ ಆತಿಥ್ಯವನ್ನು ವಹಿಸಲಿದೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

ಈ ಮೊದಲು ಬಿಸಿಸಿಐ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಲೀಗ್‌ ಹಂತದ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಿತ್ತು.
ಫೈನಲ್ ಪಂದ್ಯ ನವೆಂಬರ್ 10ರಂದು ನಡೆಯಲಿದೆ ಎಂದು ಈ ಮೊದಲೇ ಖಚಿತ ಪಡಿಸಿದ್ದರು, ಪ್ಲೇ ಆಫ್‌ ಹಾಗೂ ಫೈನಲ್ ಪಂದ್ಯಕ್ಕೆ ಯಾವ ಮೈದಾನಗಳು ಆತಿಥ್ಯ ವಹಿಸಲಿದೆ ಎನ್ನುವ ಗುಟ್ಟನ್ನು ಬಿಸಿಸಿಐ ಬಿಟ್ಟುಕೊಟ್ಟಿರಲಿಲ್ಲ.
Tap to resize

13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲೀಗ್‌ ಹಂತದ ಪಂದ್ಯಾವಳಿಗಳು ನವೆಂಬರ್ 03ಕ್ಕೆ ಮುಕ್ತಾಯವಾಗಲಿದೆ. ಇದರ ಬೆನ್ನಲ್ಲೇ ಪ್ಲೇ ಆಫ್‌ ಪಂದ್ಯಾವಳಿಗಳ ವೇಳಾಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ.
ಹೌದು, ನವೆಂಬರ್ 05ರಿಂದ ಪ್ಲೇ ಆಫ್‌ ಪಂದ್ಯಾವಳಿಗಳು ಆರಂಭವಾಗಲಿದ್ದು, ಮೊದಲ ಕ್ವಾಲಿಫೈಯರ್ ಪಂದ್ಯಕ್ಕೆ ದುಬೈನ ಅಂತಾರಾಷ್ಟ್ರೀಯ ಮೈದಾನ ಆತಿಥ್ಯ ವಹಿಸಲಿದೆ.
ಅಂಕಪಟ್ಟಿಯಲ್ಲಿ ಲೀಗ್‌ ಹಂತದಲ್ಲಿ ಮೊದಲೆರಡು ಸ್ಥಾನ ಹೊಂದಿರುವ ತಂಡಗಳು ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಗೆದ್ದಂತಹ ತಂಡ ನೇರವಾಗಿ ಈ ಆವೃತ್ತಿಯ ಫೈನಲ್ ಪ್ರವೇಶಿಸಲಿದೆ. ಇನ್ನು ಪಂದ್ಯದಲ್ಲಿ ಮುಗ್ಗರಿಸಿದ ತಂಡಕ್ಕೆ ಫೈನಲ್‌ಗೇರಲು ಇನ್ನೊಂದು ಅವಕಾಶವಿರಲಿದೆ.
ಇನ್ನು ನವೆಂಬರ್ 06ರಂದು ಎಲಿಮಿನೇಟರ್ ಪಂದ್ಯ ನಡೆಯಲಿದ್ದು, ಈ ಪಂದ್ಯಕ್ಕೆ ಅಬುಧಾಬಿಯ ಶೇಕ್ ಜಾಯೆದ್ ಮೈದಾನ ಆತಿಥ್ಯ ವಹಿಸಲಿದೆ.
ಎಲಿಮಿನೇಟರ್ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿರುವ ತಂಡಗಳು ಕಾದಾಡಲಿವೆ. ಈ ಪಂದ್ಯದಲ್ಲಿ ಮುಗ್ಗರಿಸುವ ತಂಡ ಟೂರ್ನಿಯಿಂದ ಹೊರಬಿದ್ದರೆ, ಗೆಲುವು ಸಾಧಿಸಿದ ತಂಡ ಎರಡನೇ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಗಿಟ್ಟಿಸಿಕೊಳ್ಳಲಿದೆ.
2ನೇ ಕ್ವಾಲಿಫೈಯರ್ ಪಂದ್ಯ ನವೆಂಬರ್ 08ರಂದು ನಡೆಯಲಿದ್ದು, ಈ ಪಂದ್ಯಕ್ಕೂ ಅಬುಧಾಬಿಯ ಶೇಕ್ ಜಾಯೆದ್ ಮೈದಾನ ಆತಿಥ್ಯ ವಹಿಸಲಿದೆ.
2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮೊದಲ ಕ್ವಾಲಿಫೈಯರ್‌ನಲ್ಲಿ ಸೋತ ತಂಡ ಹಾಗೂ ಎಲಿಮಿನೇಟರ್‌ ಪಂದ್ಯದಲ್ಲಿ ಗೆದ್ದ ತಂಡ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿದ ತಂಡ ಫೈನಲ್‌ಗೆ ಲಗ್ಗೆಯಿಟ್ಟರೆ, ಸೋತ ತಂಡ ತನ್ನ ಅಭಿಯಾನ ಅಂತ್ಯಗೊಳಿಸಿಕೊಳ್ಳಲಿದೆ.
ಅಂತಿಮವಾಗಿ ಫೈನಲ್ ಪಂದ್ಯ ನವೆಂಬರ್ 10ರಂದು ನಡೆಯಲಿದ್ದು, ಈ ಪಂದ್ಯಕ್ಕೆ ದುಬೈನ ಅಂತಾರಾಷ್ಟ್ರೀಯ ಮೈದಾನ ಆತಿಥ್ಯ ವಹಿಸಲಿದೆ. ಫೈನಲ್‌ ಪಂದ್ಯದಲ್ಲಿ ಗೆದ್ದ ತಂಡ 13ನೇ ಆವೃತ್ತಿಯ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಲಿದೆ.

Latest Videos

click me!