ಮಗ ಪ್ರೀತಿಸಿದ್ದ ಮಾಡೆಲ್ ಮನೇಕಾರನ್ನ ಸಂಜಯ್‌ ಗಾಂಧಿ ಸತ್ತ ಬಳಿಕ ಮಧ್ಯರಾತ್ರಿ ಹೊರದಬ್ಬಿದ ಇಂದಿರಾಗಾಂಧಿ!

First Published Mar 25, 2024, 6:38 PM IST

ಭಾರತದ ರಾಜಕೀಯದಲ್ಲಿ ಪ್ರಾಬಲ್ಯ ಸಾಧಿಸಿರುವ ಗಾಂಧಿ ಕುಟುಂಬದ ಭಾಗವಾಗಿರುವಾಗ ಮನೇಕಾ ಗಾಂಧಿ ಅವರು ಇಂದಿರಾ ಗಾಂಧಿ ಅವರ ಕಿರಿಯ ಮಗ ಸಂಜಯ್ ಗಾಂಧಿ ಅವರನ್ನು ಪ್ರೀತಿಸಿ ಮದುವೆಯಾದವರು. ಆದರೆ ಇಂದಿರಾ ಗಾಂಧಿ ಅವರೊಂದಿಗಿನ ಮನಸ್ತಾಪದಿಂದ ಮಧ್ಯರಾತ್ರಿ ಮನೆ ಬಿಟ್ಟು ಹೊರಬಂದರು. ಇದು ವಿಶ್ವಮಟ್ಟದ ಸುದ್ದಿಯಾಗಿತ್ತು.

ದೆಹಲಿಯ ಸಫ್ದರ್‌ಜಂಗ್‌ನಲ್ಲಿರುವ ಪ್ರಧಾನ ಮಂತ್ರಿ ಕಚೇರಿಯಲ್ಲಿ ಗಾಂಧಿ ಕುಟುಂಬವು ಒಂದು ಮನೆಯಲ್ಲಿ ವಾಸಿಸುತ್ತಿತ್ತು. ರಾಹುಲ್ ಗಾಂಧಿ ಜೂನ್ 19, 1970 ರಂದು ಜನಿಸಿದರೆ, ವರುಣ್ ಗಾಂಧಿ ಮಾರ್ಚ್ 13, 1980 ರಂದು ಜನಿಸಿದರು. 1980 ರಲ್ಲಿ ಸಂಜಯ್ ಗಾಂಧಿಯವರ ಮರಣದವರೆಗೂ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಬಳಿಕ  ಎಲ್ಲವನ್ನೂ ಬದಲಾಯಿಸಿತು. ಇದ್ದಕ್ಕಿದ್ದಂತೆ 1980ರ ಅಪಘಾತದಲ್ಲಿ ಸಂಜಯ್ ನಿಧನರಾದರು. ಆ ಸಮಯದಲ್ಲಿ ಮಗ ವರುಣ್ ಗಾಂಧಿಗೆ ಕೇವಲ 3 ತಿಂಗಳು.  ಅವರ ವಿಧವೆ ಪತ್ನಿ ಮೇನಕಾ ಗಾಂಧಿಗೆ ಆ ಸಮಯದಲ್ಲಿ ಕೇವಲ 25 ವರ್ಷವಾಗಿತ್ತಷ್ಟೇ.

ಇಂದಿರಾ  ಸಂಜಯ್ ಗಾಂಧಿಯವರ ಪರಂಪರೆಯನ್ನು ಸಹೋದರನ ಮಗ ರಾಹುಲ್ ಗಾಂಧಿಗೆ ವರ್ಗಾಯಿಸಲು ತೀರ್ಮಾನಿಸಿದರಂತೆ. ಇದು ಅತ್ತೆ -ಸೊಸೆ ಮಧ್ಯೆ ಕಂದಕಕ್ಕೆ ಕಾರಣವಾಯಿತು ಎನ್ನಲಾಗುತ್ತದೆ. ಇನ್ನೊಂದು ಸುದ್ದಿ ಪ್ರಕಾರ ಪತಿಯ ಮರಣದ ತನ್ನ ಕಾರ್ಯದರ್ಶಿಯಾಗಿ ಕೆಲಸ ಮಾಡುವಂತೆ ಇಂದಿರಾ ಹೇಳಿದ್ದರಂತೆ. ಇದಕ್ಕೆ ಹಿರಿಯ ಸೊಸೆ ಸೋನಿಯಾ ಗಾಂಧಿ ಅಡ್ದಗಾಲು ಹಾಕಿ ಒಂದು ವೇಳೆ ಮನೇಕಾಳನ್ನು  ಕಾರ್ಯದರ್ಶಿಯಾಗಿ ಮಾಡಿದರೆ ನಾನು ಮರಳಿ ಇಟಲಿಗೆ ತೆರಳುವುದಾಗಿ ಬೆದರಿಸಿದ್ದರು. ಈ ಕಾರಣಕ್ಕೆ ಇಂದಿರಾ  ತಮ್ಮ ನಿರ್ಧಾರದಿಂದ ಹೊರಬಂದರು ಎನ್ನಲಾಗಿದೆ. ಈ ಎಲ್ಲಾ ಬೆಳವಣಿಗೆ ಅತ್ತೆ ಮತ್ತು ಸೊಸೆ ಮತ್ತಿ ಓರಗಿತ್ತಿಯರ ನಡುವೆ ಜಗಳಕ್ಕೆ ಕಾರಣವಾಯ್ತು ಎಂದು ಕೂಡ ಹೇಳಲಾಗುತ್ತದೆ.

ಸೋನಿಯಾ ಗಾಂಧಿಗೆ ಅತ್ತೆಯ ಮೇಲೆ ಅಗಾಧ ಸಿಟ್ಟಿತ್ತು. ತನ್ನ ಮೊದಲ ಗರ್ಭಾವಸ್ಥೆಯಲ್ಲಿ ದಪ್ಪಗಿದ್ದಾಳೆಂದು ಅತ್ತೆ ಇಂದಿರಾ ವ್ಯಾಯಾಮ ಮಾಡುವಂತೆ ಒತ್ತಡ ಹೇರಿದ್ದರಿಂದ ಐದು ತಿಂಗಳ ಗಂಡು ಭ್ರೂಣವನ್ನು ಸೋನಿಯಾ ಕಳೆದುಕೊಂಡಿದ್ದರಂತೆ. ಹೀಗಾಗಿ ಸೋನಿಯಾರಿಗೆ ಅತ್ತೆ ಕೋಪ ಇದೆ ಎಂಬ ಈ ವಿಚಾರವನ್ನು ಮನೇಕಾ ನಂಬಿದ್ದರು. ಆದರೆ  ಈ ಮನಸ್ತಾಪದ ಬಗ್ಗೆ ಮನೇಕಾ ಹೇಳಿರುವುದನ್ನು ನಂಬುವುದು ಕಷ್ಟ. ಏಕೆಂದರೆ ಸಂಜಯ್ ಬದುಕಿದ್ದಾಗಲೇ ಹಿರಿಯ ಸೊಸೆಗೆ ಇಂದಿರಾ ಬೆಲೆಬಾಳುವ ಉಡುಗೊರೆಗಳನ್ನು ನೀಡಿದ್ದರು. ವಾಸ್ತವವಾಗಿ ಇಂದಿರಾ ಹೆಚ್ಚು ಒಲವು ತೋರಿದಾಕೆ ವಿದೇಶಿ ಸೊಸೆ ಸೋನಿಯಾ. ಹೆಚ್ಚು ಒಲವು ತೋರಿದ ಮಗ ಸಂಜಯ್ ಎಂಬುದು ಬಹಿರಂಗ ಸತ್ಯ. 

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ  ಕಿರಿಯ ಸಹೋದರ ಸಂಜಯ್ ಗಾಂಧಿ  ರಾಜಕೀಯದಲ್ಲಿ ಬಹಳ ವೇಗವಾಗಿ ಬೆಳೆದ ವ್ಯಕ್ತಿ. 1974ರಲ್ಲಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದ ಸಂಜಯ್ ಬಹಳ ಬೇಗ ಜನಪ್ರಿಯರಾದರು. ಮದುವೆ ಬಳಿಕ ಪತ್ನಿ ಮನೇಕಾ ಕೂಡ ಸಂಜಯ್‌ ಅವರ ರಾಜಕೀಯ ಪ್ರವಾಸಗಳಲ್ಲಿ ಜೊತೆಗೆ ಹೋಗುತ್ತಿದ್ದರು. ಆ ಸಮಯದಲ್ಲಿ ಅವರು ನ್ಯೂಸ್‌ನ ಹೆಡ್‌ಲೈನ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದರು.

ಸಂಜಯ್ ಗಾಂಧಿ ಹಾಗೂ ಮೇನಕಾರದ್ದು ಲವ್‌ ಮ್ಯಾರೇಜ್‌. 1973ರಲ್ಲಿ ಪಾರ್ಟಿಯೊಂದರಲ್ಲಿ ಇಬ್ಬರೂ ಭೇಟಿಯಾಗಿ ಮೊದಲು ಸ್ನೇಹಿತರಾದರು ನಂತರ, ಅವರು ಫೋನ್‌ನಲ್ಲಿ ಗಂಟೆಗಟ್ಟಲೆ ಮಾತನಾಡಲು ಪ್ರಾರಂಭಿಸಿದರು. ಬಳಿಕ ಇಬ್ಬರೂ ಪ್ರೀತಿಯಲ್ಲಿ ಬಿದ್ದರು. ಆ ಸಮಯದಲ್ಲಿ, ಮನೇಕಾ ಮಾಡೆಲಿಂಗ್‌ನಲ್ಲಿ  ವೃತ್ತಿ ಜೀವನ ಮಾಡುತ್ತಿದ್ದರು. 

ಆದರೆ ಸಂಜಯ್ ಅವರ ತಾಯಿ ಇಂದಿರಾ ಗಾಂಧಿ ಈ ಸಂಬಂಧವನ್ನು ಇಷ್ಟಪಟ್ಟಿರಲಿಲ್ಲ ಎಂದು ಹೇಳಲಾಗುತ್ತದೆ. ಅಂತಿಮವಾಗಿ ಇಬ್ಬರೂ 1974ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡು ಕೆಲವು ತಿಂಗಳ ನಂತರ ವಿವಾಹವಾದರು. ಮೇನಕಾ ಮದುವೆಯಾದಾಗ ಆಕೆಗೆ ಕೇವಲ 18 ವರ್ಷ ಮತ್ತು ಸಂಜಯ್ ಅವರಿಗಿಂತ ಸುಮಾರು 10 ವರ್ಷ ಹಿರಿಯರು. ಮೇನಕಾರ ಕಸಿನ್‌ ವೀನು ಕಪೂರ್ ಹಾಗೂ ಸಂಜಯ್ ಗಾಂಧಿ  ಫ್ರೆಂಡ್ಸ್ ಆಗಿದ್ದರು‌. ಹೀಗಾಗಿ ಇವರಿಬ್ಬರು ಪರಿಚಯವಾಗಿದ್ದರು.

1973ರಲ್ಲಿ ದೆಹಲಿಯ ಲೇಡಿ ಶ್ರೀ ರಾಮ್ ಕಾಲೇಜಿನಲ್ಲಿ 'ಮಿಸ್ ಲೇಡಿ' ಆಗಿ ಆಯ್ಕೆಯಾಗಿದ್ದ ಮೇನಕಾಗೆ ಹೆಚ್ಚು ಮಾಡೆಲಿಂಗ್ ಆಫರ್‌ಗಳು ಬರಲು ಪ್ರಾರಂಭಿಸಿದವು. ಇದರ ಜೊತೆಗೆ ಮನೇಕಾ ಅವರ ಜನಪ್ರಿಯತೆ ಹೆಚ್ಚಾಗ ತೊಡಗಿತು. ದೆಹಲಿಯಿಂದ ಮುಂಬೈವರೆಗೆ ಅನೇಕ ಜಾಹೀರಾತುಗಳಲ್ಲಿ ಮನೇಕಾದ್ದೇ ಹೆಚ್ಚು ಫೋಟೋಗಳು ಇರುತ್ತಿತ್ತು. ಸಂಜಯ್ ಗಾಂಧಿ ಈ ಜಾಹೀರಾತನ್ನು ನೋಡಿಯೇ ಮೇನಕಾಗೆ ಮನಸೋತಿದ್ದು ಎಂದು ಹೇಳಲಾಗುತ್ತದೆ.
 

ಮನೇಕಾ ತಂದೆ ಕರ್ನಲ್ ಆನಂದ್ ಆರ್ಮಿಯಲ್ಲಿದ್ದರು. ಸರ್ ದಾತಾರ್ ಸಿಂಗ್ ಅವರ ಪುತ್ರಿ ಅಮರದೀಪ್ ಕೌರ್  ಇವರ ತಾಯಿ. 26 ಆಗಸ್ಟ್ 1956 ರಂದು ಭಾರತದ ದೆಹಲಿಯಲ್ಲಿ ಸಿಖ್ ಕುಟುಂಬದಲ್ಲಿ ಜನಿಸಿದ ಮನೇಕಾ  ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯಲ್ಲಿ ಪದವಿ ಪಡೆದಿದ್ದಾರೆ.

ಖ್ಯಾತ ಲೇಖಕ ಖುಷ್ವಂತ್ ಸಿಂಗ್ ಅವರು ತಮ್ಮ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿರುವಂತೆ. ಸಂಜಯ್ ಅವರ ಮರಣದ ನಂತರ ಇಂದಿರಾ ಗಾಂಧಿ ಮತ್ತು ಮನೇಕಾ  ನಡುವಿನ ಬಿರುಕು ಎಷ್ಟು ಹೆಚ್ಚಾಯಿತು ಎಂದರೆ ಇಬ್ಬರೂ ಒಂದೇ ಸೂರಿನಡಿ ಬದುಕುವುದು ತೀರಾ ಕಷ್ಟವಾಯಿತು. ಹೀಗಾಗಿ ಮಾರ್ಚ್ 28, 1982 ರಂದು, ಮಾಧ್ಯಮ ಪ್ರತಿನಿಧಿಗಳು ಮತ್ತು ಪೊಲೀಸ್ ಸಿಬ್ಬಂದಿಗಳ ಮುಂದೆಯೇ ಮೇನಕಾ ಅವರು ಮಗ ವರುಣ್ ಗಾಂಧಿಯವರೊಂದಿಗೆ ಪ್ರಧಾನಿ ನಿವಾಸದಿಂದ ಹೊರಟರು. ಘಟನೆ ನಡೆದು ಈಗ 42 ವರ್ಷಗಳಾಗಿವೆ.

ಸ್ಪ್ಯಾನಿಷ್ ಬರಹಗಾರ ಜೇವಿಯರ್ ಮೊರೊ ಅವರು ತಮ್ಮ ಪುಸ್ತಕ 'ದಿ ರೆಡ್ ಸ್ಯಾರಿ' ನಲ್ಲಿ ರಾತ್ರಿಯ ಘಟನೆಗಳನ್ನು ವಿವರಿಸುತ್ತಾ ಗಂಡನ ಪರಂಪರೆಯನ್ನು ಅವನ ಸಹೋದರ ತನ್ನಿಂದ ಹೇಗೆ ಕಸಿದುಕೊಂಡಿದ್ದಾನೆ ಎಂಬ ಅಸಮಾಧಾನ ಮನೇಕಾರನ್ನು ಕೊರೆಯುತ್ತಿತ್ತು. ಇದು ಅತ್ತೆಯ ವಿರುದ್ಧ ಮನೇಕಾ ಗುಡುಗಲು ಮೂಲ ಕಾರಣವಾಗಿತ್ತು. 

ಮನೇಕಾ ಮತ್ತು ಇಂದಿರಾ ನಡುವಿನ ಘರ್ಷಣೆ ಉತ್ತುಂಗದ ಹಂತಕ್ಕೆ ತಲುಪಿತು. ಸೊಸೆ ಮನೇಕಾ ತನ್ನ ಪತಿ ಸಂಜಯ್ ಅನುಯಾಯಿಗಳೊಂದಿಗೆ ಲಕ್ನೋದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ, ತೀಕ್ಷ್ಣವಾದ ಭಾಷಣ ಮಾಡಿದರು. ಆ ಸಮಯದಲ್ಲಿ ಇಂದಿರಾ ಗಾಂಧಿ ಲಂಡನ್‌ನಲ್ಲಿದ್ದರು. ಮಾರ್ಚ್ 28, 1982 ರಂದು ಬೆಳಿಗ್ಗೆ ಇಂದಿರಾ ಮನೆಗೆ ಬಂದರು. ಮನೇಕಾ ಬಳಿ ಸಮಸ್ಯೆ ಬಗೆಹರಿಸಿಕೊಳ್ಳಲು ಮುಂದಾಗಲಿಲ್ಲ. ಆಕೆಯನ್ನು ಕುಟುಂಬದ ಯಾರೊಂದಿಗೂ ಬೆರೆತು ಊಟ ಮಾಡಲು ಕೂಡ ಬಿಡಲಿಲ್ಲ. ಮನೇಕಾ ಕೋಣೆಗೆ ಸರ್ವೆಂಟ್‌ ಊಟ ತೆಗೆದುಕೊಂಡು ಹೋಗಿ ಕೊಟ್ಟು ಇಂದಿರಾಗೆ ಕೋಪ ಇರುವ ಬಗ್ಗೆ ಹೇಳಿದ್ದ.

ಕಾರಿಡಾರ್‌ನಲ್ಲಿ ಹೋಗುವಾಗ ಅತ್ತೆಗೆ ಹೆದರಿ ಮನೇಕಾಳ ಕಾಲುಗಳು ನಡುಗುತ್ತಿದ್ದವು. ತಿರುಗಿ ನೋಡಿದರೆ ಇಂದಿರಾ ಗಾಂಧಿ ಕೋಣೆಯಲ್ಲಿ ಪ್ರತ್ಯಕ್ಷವಾಗಿ ಮನೇಕಾ ಕಡೆಗೆ ಬೆರಳು ತೋರಿಸಿ ಮನೆಬಿಟ್ಟು ಹೋಗುವಂತೆ ಕಿರುಚಿದ ಧ್ವನಿಯಲ್ಲಿ ಆದೇಶಿಸಿದರು. ನೀನು ಮಾಡಿದ ಭಾಷಣ ಕೇಳಿದೆ. ಪ್ರತೀ ಪದದಲ್ಲಿ ವಿಷವಿತ್ತು. ನೀನು ಈಗಿಂದೀಗಲೇ ಮನೆಬಿಟ್ಟು ತೊಲಗು ಅದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಲಾಯ್ತು. ಜೋರಾಗಿ ಗಲಾಟೆ ನಡೆಯುತ್ತಿದ್ದಾಗ  ಬಟ್ಟೆ ಬಿಟ್ಟು ಮನೆಯಿಂದ ಏನನ್ನೂ ತೆಗೆದುಕೊಂಡು ಹೋಗದಂತೆ ಇಂದಿರಾ ಖಡಕ್ ಎಚ್ಚರಿಕೆ ಕೊಟ್ಟರು.

ಮನೇಕಾ ತನ್ನ ಸಹೋದರಿ ಅಂಬಿಕಾಗೆ ಕರೆ ಮಾಡಿ ನಡೆದ ವಿಷಯ ತಿಳಿಸಿದಳು. ಆ ರಾತ್ರಿ ಸುಮಾರು ಒಂಬತ್ತು ಗಂಟೆಗೆ, ಛಾಯಾಗ್ರಾಹಕರು ಮತ್ತು ವರದಿಗಾರರು, ಅಂತರರಾಷ್ಟ್ರೀಯ ವರದಿಗಾರರ ದೊಡ್ಡ ಗುಂಪು ಸೇರಿದಂತೆ ಮನೆಯ ಪ್ರವೇಶದ್ವಾರದ ಗೇಟ್‌ನಲ್ಲಿ ಹಲವು ಮಂದಿ ಜಮಾಯಿಸಿದ್ದರು. ಅಂಬಿಕಾ ಇಂದಿರಾ ಗಾಂಧಿ ಮನೆಗೆ ಬಂದಳು. ಆದರೆ ಆಕೆಗೆ ಪ್ರವೇಶ ನಿರಾಕರಿಸಲಾಯ್ತು. ಮನೇಕಾ ಎಲ್ಲಿಗೂ ಹೋಗುವುದಿಲ್ಲ ಇದು ಅವಳ ಮನೆ ಎಂದು ಅಂಬಿಕಾ ಹೇಳಿದಳು. ಇದಕ್ಕೆ ಏರುದನಿಯಲ್ಲಿ  ಕೆಂಗಣ್ಣಿನಿಂದ ಉತ್ತರಿಸಿದ ಇಂದಿರಾ ಇದು ಭಾರತದ ಪ್ರಧಾನ ಮಂತ್ರಿಯ ಮನೆ ಎಂದರು. ಗಲಾಟೆಗಳು ಜೋರಾಗಿ ಸಹೋದರಿ ಅಂಬಿಕಾ ಮನೇಕಾರ ಎಲ್ಲಾ ವಸ್ತುಗಳನ್ನು ಪ್ಯಾಕ್ ಮಾಡಿದರು.

ಒಂದೆರಡು ಗಂಟೆಗಳ ನಂತರ ವಸ್ತುಗಳನ್ನೆಲ್ಲ ವಾಹನಕ್ಕೆ ತುಂಬಿಸುತ್ತಿದ್ದಂತೆಯೇ ಗಲಾಟೆ ಮತ್ತೆ ಆರಂಭವಾಯ್ತ. ಅದು ವರುಣ್‌ ಗಾಂಧಿಗಾಗಿ. ಇಂದಿರಾ ತನ್ನ 2 ವರ್ಷದ ಮೊಮ್ಮಗನನ್ನು ಬಿಡಲು ಸಿದ್ಧರಿರಲಿಲ್ಲ. ಮನೇಕಾ  ಮಗನನ್ನು ಬಿಡಲು ಸಿದ್ದರಿರಲಿಲ್ಲ. ಈ ವಿಚಾರದಲ್ಲಿ ಇಂದಿರಾ ಹೋರಾಟ ಹತಾಶವಾಗಿತ್ತು. ತಮ್ಮ ಮುಖ್ಯ ಅಧಿಕೃತ ಕಾರ್ಯದರ್ಶಿಯಾದ ಪಿ.ಸಿ. ಅಲೆಕ್ಸಾಂಡರ್ ಗೆ ವಕೀಲರ ಬಳಿ ಮಾತನಾಡುವಂತೆ ಕೇಳಿಕೊಂಡರು. ಆದರೆ, ಮೊಮ್ಮಗನನ್ನು ಉಳಿಸಿಕೊಳ್ಳಲು ಏನನ್ನೂ ಮಾಡಲಾಗದು ಎಂದು ವಕೀಲರ ತಂಡ ಇಂದಿರಾಗೆ ಹೇಳಿತು. ಕೊನೆಗೂ ಅರೆನಿದ್ರಾವಸ್ಥೆಯಲ್ಲಿದ್ದ ವರುಣ್‌ನನ್ನು ತನ್ನ ತೋಳುಗಳಲ್ಲಿ ಹೊತ್ತು ಸುಮಾರು 11 ಗಂಟೆಯ ರಾತ್ರಿ ಮೇನಕಾ ತನ್ನ ಸಹೋದರಿಯ ಜೊತೆ ಕಾರು ಹತ್ತಿ ಮನೆ ತೊರೆದರು. ಈ ಎಲ್ಲಾ ಫೋಟೋಗಳು ಮರುದಿನ ಅಂತರಾಷ್ಟ್ರೀಯ ಮಾಧ್ಯಮದಲ್ಲಿ, ಭಾರತದ ಎಲ್ಲಾ ಪತ್ರಿಕೆಗಳಲ್ಲಿ ಪ್ರಕಟವಾಯ್ತು. 

ಇದಾದ ನಂತರ ಮೇನಕಾ ಅವರು ಅಕ್ಬರ್ ಅಹ್ಮದ್ ಅವರೊಂದಿಗೆ ರಾಷ್ಟ್ರೀಯ ಸಂಜಯ್ ಮಂಚ್ ಅನ್ನು ಸ್ಥಾಪಿಸಿದರು. ಆದರೆ ಪಕ್ಷ ಬೆಳೆಯಲಿಲ್ಲ.  1984 ರ ಲೋಕಸಭಾ ಚುನಾವಣೆಯಲ್ಲಿ ರಾಜೀವ್ ಗಾಂಧಿ ವಿರುದ್ಧ ಅಮೇಥಿಯಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತರು. 1988ರಲ್ಲಿ ಜನತಾ ದಳ ಸೇರಿದರು. 1989 ರಲ್ಲಿಇದೇ ಪಕ್ಷದಿಂದ ಪಿಲಿಭಿತ್ ನಿಂದ ಸ್ಪರ್ಧಿಸಿ ಸಂಸದರಾದರು. 1991 ರ ಚುನಾವಣೆಯಲ್ಲಿ ಪಿಲಿಭಿತ್‌ ನಿಂದ ಸೋತರು.

2004 ರಲ್ಲಿ ಪಿಲಿಭಿತ್‌ ನಿಂದ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ಗೆಲುವು ಕಂಡರು. ಅಲ್ಲಿಂದ ಕೇಸರಿ ಪಾಳಯದ ಸಂಬಂಧ ಆರಂಭವಾಯ್ತು. 2009 ರಲ್ಲಿ ಮಗ ವರುಣ್ ಗಾಂಧಿಯನ್ನು ಪಿಲಿಭಿತ್‌ನಿಂದ ನಿಲ್ಲಿಸಿತು. ಭಾರೀ ಗೆಲುವಿನೊಂದಿಗೆ ವರುಣ್ ಸಂಸತ್ ಸದಸ್ಯರಾದರು. 2013ರಲ್ಲಿ ವರುಣ್ ಗಾಂಧಿ ಬಿಜೆಪಿಯ ಅತ್ಯಂತ ಕಿರಿಯ ಪ್ರಧಾನ ಕಾರ್ಯದರ್ಶಿಯಾದರು. 2014 ರಲ್ಲಿ, ಮೇನಕಾ ಮತ್ತೆ ಪಿಲಿಭಿತ್‌ನಿಂದ ಬಿಜೆಪಿ ಟಿಕೆಟ್‌ನಲ್ಲಿ ಗೆದ್ದರು ಮತ್ತು ವರುಣ್ ಸುಲ್ತಾನ್‌ಪುರದಿಂದ ಗೆದ್ದು ಸಂಸತ್ತನ್ನು ತಲುಪಿದರು. 2024ರ ಲೋಕಸಭಾ ಚುನಾವಣೆಯಲ್ಲಿ ಮಗನಿಗೆ ಪಿಲಿಭಿತ್‌ ನಿಂದ ಟಿಕೆಟ್‌ ಕೊಡದಿರುವ ಬಿಜೆಪಿ ಮನೇಕಾರಿಗೆ ಸುಲ್ತಾನ್ ಪುರದಿಂದ ಟಿಕೆಟ್‌ ಘೋಷಿಸಿದೆ.

click me!