ಲಂಡನ್‌ನ ಉನ್ನತ ಉದ್ಯೋಗ ತೊರೆದು ತಾಯ್ನಾಡಿನ ಸೇವೆಗಾಗಿ ಐಎಎಸ್ ಆಗಿದ್ದ ದಿವ್ಯಾ ಮಿತ್ತಲ್, 13 ವರ್ಷಗಳ ಸಾರ್ಥಕ ಸೇವೆಯ ನಂತರ ತಮ್ಮ ಹುದ್ದೆಗೆ ಸ್ವಯಂಪ್ರೇರಿತ ರಾಜೀನಾಮೆ ನೀಡಿದ್ದಾರೆ. ಸ್ಥಾನದಿಂದ ಕೆಳಗಿಳಿದರೂ ದೇಶದ ಅಭಿವೃದ್ಧಿಗಾಗಿ ಜನಸೇವೆಯ ಮಿಷನ್ ಎಂದಿಗೂ ನಿಲ್ಲುವುದಿಲ್ಲ ಎಂದಿದ್ದಾರೆ.
ಕೆಲವರು ಹುದ್ದೆಗಾಗಿ ಅಧಿಕಾರ ನಡೆಸುತ್ತಾರೆ, ಇನ್ನು ಕೆಲವರು ಬದಲಾವಣೆಗಾಗಿ ಅಧಿಕಾರ ಬಳಸುತ್ತಾರೆ. ಅಂತಹ ಸಾಲಿನಲ್ಲಿ ನಿಲ್ಲುವವರು ಐಎಎಸ್ ಅಧಿಕಾರಿ ದಿವ್ಯಾ ಮಿತ್ತಲ್. ಐಐಟಿ, ಐಐಎಂ ಪದವಿ ಪಡೆದು ಲಂಡನ್‌ನಲ್ಲಿ ನೆಲೆಸಿದ್ದರೂ, ತಾಯ್ನಾಡಿನ ಸೇವೆಗಾಗಿ ಮರಳಿದ್ದ ಈ ಅಧಿಕಾರಿ ಈಗ ತಮ್ಮ 13 ವರ್ಷಗಳ ಆಡಳಿತಾತ್ಮಕ ಸೇವೆಗೆ ರಾಜೀನಾಮೆ ನೀಡಿದ್ದಾರೆ. ಅವರ ಈ ನಿರ್ಧಾರದ ಹಿಂದೆ ಒಂದು ಅದ್ಭುತವಾದ ಮತ್ತು ಭಾವುಕವಾದ ಕಥೆಯಿದೆ.
26
ಲಂಡನ್‌ನಿಂದ ಭಾರತದ ಹಳ್ಳಿಗಳವರೆಗೆ..
ದಿವ್ಯಾ ಮಿತ್ತಲ್ ಅವರ ಜೀವನದ ಹಾದಿ ಸಾಮಾನ್ಯವಾದುದಲ್ಲ. ಐಐಟಿ ದೆಹಲಿ ಮತ್ತು ಐಐಎಂ ಬೆಂಗಳೂರಿನಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಓದಿ, ಲಂಡನ್‌ನಲ್ಲಿ ಕೈತುಂಬಾ ಸಂಬಳ ಬರುವ ಹಣಕಾಸು ಉದ್ಯೋಗದಲ್ಲಿದ್ದರು. ಜೀವನದಲ್ಲಿ ಎಲ್ಲವನ್ನೂ ಸಾಧಿಸಿದೆ ಎನಿಸಿದಾಗಲೂ ಅವರಿಗೆ ಒಳಗೇನೋ ಒಂದು ಕೊರಗು. ನನ್ನ ದೇಶದ ಮಣ್ಣು ನನಗೆ ನೀಡಿದ ಶಿಕ್ಷಣ ಮತ್ತು ಆತ್ಮವಿಶ್ವಾಸದ ಋಣವನ್ನು ನಾನು ತೀರಿಸಬೇಕು ಎಂಬ ಹಂಬಲ ಅವರಲ್ಲಿತ್ತು. ಇದೇ ಕಾರಣಕ್ಕೆ ಅವರು ಲಂಡನ್ ಕೆಲಸ ಬಿಟ್ಟು ಭಾರತಕ್ಕೆ ಮರಳಿ ಯುಪಿಎಸ್‌ಸಿ ಪರೀಕ್ಷೆ ಎದುರಿಸಿ ಐಎಎಸ್ ಅಧಿಕಾರಿಯಾದರು.
36
ಜನಸಾಮಾನ್ಯರ ಕಣ್ಣೀರು ಒರೆಸಿದ 13 ವರ್ಷಗಳು
ಉತ್ತರ ಪ್ರದೇಶದ ದೇವರಿ ಹಾಗೂ ಮಿರ್ಜಾಪುರದಂತಹ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡುವಾಗ ದಿವ್ಯಾ ಅವರು ಕೇವಲ ಫೈಲುಗಳಿಗೆ ಸಹಿ ಹಾಕಲಿಲ್ಲ. ಬದಲಾಗಿ ಜನರ ಕಷ್ಟಗಳಿಗೆ ಸ್ಪಂದಿಸಿದರು. ಅಸಾಧ್ಯ ಎಂಬುದು ಕೇವಲ ಒಂದು ಅಭಿಪ್ರಾಯವೇ ಹೊರತು ಸತ್ಯವಲ್ಲ ಎಂಬುದನ್ನು ಅವರು ಮಿರ್ಜಾಪುರದಲ್ಲಿ ಸಾಬೀತುಪಡಿಸಿದರು. ಅಶಕ್ತರಿಗೆ ಘನತೆಯ ಬದುಕು ನೀಡಿದಾಗ ರೈತರ ಹೊಲಕ್ಕೆ ನೀರು ತಲುಪಿದಾಗ ಅವರ ಕಣ್ಣಲ್ಲಿ ಕಂಡ ಸಂತೋಷವೇ ನನಗೆ ನಿಜವಾದ ನೆಮ್ಮದಿ ನೀಡಿತು ಎಂದು ದಿವ್ಯಾ ಸ್ಮರಿಸಿದ್ದಾರೆ.
ತಮ್ಮ ರಾಜೀನಾಮೆಯ ಬಗ್ಗೆ ಬರೆಯುತ್ತಾ ದಿವ್ಯಾ ಅವರು ಒಂದು ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಲಾಹುರಿಯಾ ದಿಹ್ ಎಂಬ ಗುಡ್ಡಗಾಡು ಹಳ್ಳಿಗೆ ಮೊದಲ ಬಾರಿಗೆ ನೀರು ಬಂದಾಗ ಅಲ್ಲಿನ ಒಬ್ಬ ವೃದ್ಧೆ ಕಣ್ಣೀರು ಹಾಕುತ್ತಾ ದಿವ್ಯಾ ಅವರ ತಲೆ ಮುಟ್ಟಿ ಆಶೀರ್ವಾದ ಮಾಡಿದ್ದರಂತೆ. ಆ ತಾಯಿಯ ಸ್ಪರ್ಶ ನನ್ನನ್ನು ಸದಾ ಜೀವಂತವಾಗಿರಿಸುತ್ತದೆ. ಹುದ್ದೆ ಇಂದು ಹೋಗಬಹುದು, ಆದರೆ ಆ ಪ್ರೀತಿ ಎಂದಿಗೂ ಮಾಸದು ಎಂದು ಅವರು ಭಾವುಕರಾಗಿ ಬರೆದುಕೊಂಡಿದ್ದಾರೆ.
56
ರಾಜೀನಾಮೆಗೆ ಕಾರಣವೇನು?
ಇಂದು ನನ್ನ ಕಣ್ಣುಗಳು ಕೃತಜ್ಞತೆಯಿಂದ ತುಂಬಿವೆ. ನನ್ನ ದೇಶದ ಮಣ್ಣು ನನಗೆ ನೀಡಿದ ಕನಸುಗಳು ಇನ್ನೂ ಬಾಕಿ ಇವೆ. ಅಧಿಕೃತ ಹುದ್ದೆ ಅಂತ್ಯವಾಗಬಹುದು, ಆದರೆ ದೇಶಕ್ಕಾಗಿ ನಾನು ಕಂಡ ಕನಸು ಮತ್ತು ನನ್ನ ಮಿಷನ್ ಬದಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ. 2013ರ ಬ್ಯಾಚ್‌ನ ಈ ಅಧಿಕಾರಿ ವೈಯಕ್ತಿಕ ಕಾರಣಗಳಿಂದಾಗಿ ಮತ್ತು ದೇಶಕ್ಕಾಗಿ ಮತ್ತಷ್ಟು ವಿಭಿನ್ನವಾಗಿ ಸೇವೆ ಸಲ್ಲಿಸುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
66
ಜನಪರ ಕೆಲಸಗಳು ಮುಂದುವರಿಯಲಿ
ದಿವ್ಯಾ ಮಿತ್ತಲ್ ಅವರ ಈ ನಡೆ ಇಂದಿನ ಯುವಜನತೆಗೆ ಮಾದರಿ. ಅಧಿಕಾರ ಎನ್ನುವುದು ಕೇವಲ ಕುರ್ಚಿಯಲ್ಲ, ಅದು ಜನರ ಸೇವೆ ಮಾಡುವ ಅವಕಾಶ ಎಂಬುದನ್ನು ತೋರಿಸಿಕೊಟ್ಟು ಅವರು ನಿರ್ಗಮಿಸಿದ್ದಾರೆ. ಹುದ್ದೆ ಬಿಟ್ಟರೂ ಅವರ ಜನಪರ ಕೆಲಸಗಳು ಮುಂದುವರಿಯಲಿ ಎಂಬುದೇ ಎಲ್ಲರ ಆಶಯ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ