ತಮಿಳುನಾಡು ಸರ್ಕಾರದ ನೂತನ ಸಚಿವರ ಖಾತೆ ಹಂಚಿಕೆ ಮಾಡಿದ ಸಿಎಂ ವಿಜಯ್‌, ಬಲಿಷ್ಠ ಖಾತೆ ತನ್ನಲ್ಲೇ ಇರಿಸಿಕೊಂಡ ದಳಪತಿ!

Published : May 16, 2026, 06:41 PM IST

ತಮಿಳುನಾಡಿನಲ್ಲಿ ನಟ ವಿಜಯ್ ನೇತೃತ್ವದ 'ತಮಿಳಗ ವೆಟ್ರಿ ಕಳಗಂ' ಸರ್ಕಾರದ ನೂತನ ಸಚಿವ ಸಂಪುಟದ ಖಾತೆ ಹಂಚಿಕೆ ಅಧಿಕೃತವಾಗಿ ಪ್ರಕಟವಾಗಿದೆ. ಮುಖ್ಯಮಂತ್ರಿ ವಿಜಯ್ ಗೃಹ, ಪೊಲೀಸ್ ಸೇರಿದಂತೆ ಪ್ರಮುಖ ಖಾತೆಗಳನ್ನು ಉಳಿಸಿಕೊಂಡಿದ್ದು, ಒಟ್ಟು 10 ಸಚಿವರಿಗೆ ಜವಾಬ್ದಾರಿಗಳನ್ನು ವಹಿಸಲಾಗಿದೆ.

PREV
16

ತಮಿಳುನಾಡಿನಲ್ಲಿ ಇತ್ತೀಚೆಗಷ್ಟೇ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ಇತಿಹಾಸ ನಿರ್ಮಿಸಿದ್ದ ನಟ, ರಾಜಕಾರಣಿ ಸಿ. ಜೋಸೆಫ್ ವಿಜಯ್ ನೇತೃತ್ವದ ನೂತನ ಸರ್ಕಾರದ ಸಚಿವ ಸಂಪುಟದ ಖಾತೆ ಹಂಚಿಕೆಯನ್ನು ಶನಿವಾರ ಅಧಿಕೃತವಾಗಿ ಪ್ರಕಟಿಸಲಾಗಿದೆ. ತಮಿಳುನಾಡು ಲೋಕ ಭವನ ಈ ಕುರಿತು ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ.

26

ರಾಜ್ಯದಲ್ಲಿ ದಶಕಗಳ ಕಾಲ ಆಳ್ವಿಕೆ ನಡೆಸಿದ್ದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳ ಪರ್ಯಾಯ ಆಡಳಿತಕ್ಕೆ ಪೂರ್ಣವಿರಾಮ ಹಾಡಿ ಅಧಿಕಾರಕ್ಕೆ ಬಂದಿರುವ 'ತಮಿಳಗ ವೆಟ್ರಿ ಕಳಗಂ' (TVK) ಸರ್ಕಾರದ ಈ ಖಾತೆ ಹಂಚಿಕೆ ಪ್ರಕ್ರಿಯೆಯು ತಮಿಳುನಾಡು ರಾಜಕಾರಣದ ಅತ್ಯಂತ ಪ್ರಮುಖ ಆಡಳಿತಾತ್ಮಕ ಬೆಳವಣಿಗೆಯಾಗಿದೆ. ನೂತನ ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿ ವಿಜಯ್ ಸೇರಿದಂತೆ ಒಟ್ಟು 10 ಸಚಿವರಿಗೆ ಜವಾಬ್ದಾರಿಗಳನ್ನು ವಹಿಸಲಾಗಿದೆ.

36

ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಅತ್ಯಂತ ಪ್ರಮುಖವಾದ ಗೃಹ, ಪೊಲೀಸ್, ಸಾರ್ವಜನಿಕ ಆಡಳಿತ ಮತ್ತು ಸಾಮಾನ್ಯ ಆಡಳಿತ ಇಲಾಖೆಗಳನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಇದರೊಂದಿಗೆ ಮಹಿಳಾ ಕಲ್ಯಾಣ ಮತ್ತು ಯುವ ಸಬಲೀಕರಣ ಖಾತೆಗಳೂ ಸಿಎಂ ವಶದಲ್ಲಿವೆ. ಹಿಂದಿನ ಡಿಎಂಕೆ ಸರ್ಕಾರದ ರಚನೆಗಿಂತ ಭಿನ್ನವಾಗಿ, ಈ ಬಾರಿ ಕ್ರೀಡಾ ಅಭಿವೃದ್ಧಿ ಇಲಾಖೆಯನ್ನು ಸ್ವತಂತ್ರ ಸಚಿವಾಲಯವಾಗಿ ಪ್ರತ್ಯೇಕಿಸಿರುವುದು ವಿಜಯ್ ಅವರ ಆಡಳಿತ ಶೈಲಿಯ ಹೊಸ ಬದಲಾವಣೆಗೆ ಸಾಕ್ಷಿಯಾಗಿದೆ.

46

ನೂತನ ಸಚಿವ ಸಂಪುಟದಲ್ಲಿ ಹಿರಿಯ ನಾಯಕರು ಹಾಗೂ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಹೊಸ ಮುಖಗಳಿಗೆ ಆದ್ಯತೆ ನೀಡಲಾಗಿದ್ದು, ಶಿಕ್ಷಣ, ವಿದ್ಯುತ್, ನಗರಾಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆಗಳನ್ನು ಹಂಚಿಕೆ ಮಾಡಲಾಗಿದೆ. ಜೋಸೆಫ್ ವಿಜಯ್ (ಮುಖ್ಯಮಂತ್ರಿ): ಸಾರ್ವಜನಿಕ ಆಡಳಿತ, ಸಾಮಾನ್ಯ ಆಡಳಿತ, ಪೊಲೀಸ್ (ಗೃಹ ಇಲಾಖೆ), ಮಹಿಳಾ ಕಲ್ಯಾಣ ಮತ್ತು ಯುವ ಅಭಿವೃದ್ಧಿ ಇಲಾಖೆಯ ನೇತೃತ್ವ ವಹಿಸಿದ್ದಾರೆ.

56

ಆದವ್ ಅರ್ಜುನ ಅವರಿಗೆ ಸಾರ್ವಜನಿಕ ಲೋಕೋಪಯೋಗಿ ಇಲಾಖೆ (PWD) ಮತ್ತು ಕ್ರೀಡಾ ಅಭಿವೃದ್ಧಿ, ಎನ್.ಆನಂದ್‌ಗೆ ಗ್ರಾಮೀಣಾಭಿವೃದ್ಧಿ ಇಲಾಖೆ, ಟಿವಿಕೆ ಹಿರಿಯ ಕೆ. ಎ. ಸೆಂಗೊಟ್ಟೈಯನ್ ಅವರಿಗೆ ಹಣಕಾಸು ಇಲಾಖೆ ನೀಡಲಾಗಿದೆ.

66

ಉಳಿದಂತೆ ಕೆ. ಜಿ. ಅರುಣ್‌ರಾಜ್ (ಆರೋಗ್ಯ ಇಲಾಖೆ), ಸಿಟಿಆರ್ ನಿರ್ಮಲ್ ಕುಮಾರ್ (ಇಂಧನ ಸಂಪನ್ಮೂಲ ಮತ್ತು ಕಾನೂನು ಇಲಾಖೆ), ರಾಜಮೋಹನ್ (ಶಾಲಾ ಶಿಕ್ಷಣ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಹಾಗೂ ತಮಿಳು ಅಭಿವೃದ್ಧಿ-ಪುರಾತತ್ವ ಇಲಾಖೆ ಒಳಗೊಂಡಂತೆ), ರಾಜ್ಯದ ಅತ್ಯಂತ ಕಿರಿಯ ಸಚಿವೆ ಎಸ್ ಕೀರ್ತನಾ (ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಇಲಾಖೆ), ಪಿ. ವೆಂಕಟರಾಮನ್ (ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ) ಹಾಗೂ ಟಿ. ಕೆ. ಪ್ರಭು (ನೈಸರ್ಗಿಕ ಸಂಪನ್ಮೂಲ ಇಲಾಖೆ) ಅವರಿಗೆ ಖಾತೆ ಹಂಚಿಕೆ ಮಾಡಲಾಗಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories