ಒಟ್ಟಿಗೆ ಬದುಕಿ, ಒಟ್ಟಿಗೆ ಸತ್ತರು: ಸಾವಿನ ಬಳಿಕ 12 ಮಂದಿಯ ಪ್ರಾಣ ಕಾಪಾಡಿದ ಆಪ್ತ ಸ್ನೇಹಿತರು!

First Published Sep 1, 2021, 4:32 PM IST

ಸಾವಿನ ಬಳಿಕ ಮನುಷ್ಯನ ದೇಹ ಯಾವುದೇ ಪ್ರಯೋಜನಕ್ಕಿಲ್ಲ, ಕೇವಲ ಬೆಂಕಿಯಲ್ಲಿ ಸುಟ್ಟು ಬೂದಿಯಾಗುತ್ತದೆ. ಆದರೆ ಸಾವಿನ ನಂತರ ಯಾರಿಗಾದರೂ ಅಂಗಾಂಗಗಳನ್ನು ದಾನ ಮಾಡಿದರೆ, ಅನೇಕ ಜನರು ಜೀವನ ಬೆಳಗುತ್ತದೆ. ಸದ್ಯ ಗುಜರಾತಿನ ಸೂರತ್‌ನ ಇಬ್ಬರು ಸ್ನೇಹಿತರೂ ಅನೇಕರಿಗೆ ಜೀವದಾನ ಮಾಡಿದ್ದಾರೆ. ಸಾವಿನ ಬಳಿಕ ಈ ಇಬ್ಬರು ಸ್ನೇಹಿತರು 12 ಜನರಿಗೆ ಜೀವ ಕೊಟ್ಟಿದ್ದಾರೆ.

ಸೂರತ್‌ನ 18 ವರ್ಷದ ಮೀತ್ ಪಾಂಡ್ಯ ಮತ್ತು 18 ವರ್ಷದ ಕ್ರಿಶ್ ಗಾಂಧಿ ಇಬ್ಬರು ಬಾಲ್ಯ ಸ್ನೇಹಿತರು. ಆದರೆ ಆಗಸ್ಟ್ 24 ರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಇಬ್ಬರೂ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಗಾಯಗೊಂಡಿದ್ದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಪರಿಶೀಲಿಸಿದ ವೈದ್ಯರು ಬ್ರೈನ್ ಡೆಡ್ ಆಗಿದೆ ಎಂದು ಘೋಷಿಸಿದ್ದಾರೆ. ಇದಾದ ಬಳಿಕ ಕುಟುಂಬ ಸದಸ್ಯರು ಈ ಇವರಿಬ್ಬರ ಅಂಗಾಂಗ ದಾನ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.
 

ಮೃತ ಕ್ರಿಸ್ ಗಾಂಧಿ ಹಾಗೂ ಮೀತ್ ಪಾಂಡ್ಯ ಹೆತ್ತವರು ಮಕ್ಕಳ ಸಾವಿನ ಬಳಿಕ ಸೂರತ್‌ನ ಡೋನೇಟ್ ಲೈಫ್ ಸಂಸ್ಥೆಯನ್ನು ಸಂಪರ್ಕಿಸಿದ್ದಾರೆ ಹಾಗೂ ತಮ್ಮ ಮಕ್ಕಳ ಅಂಗಾಂಗಗಳನ್ನು ದಾನ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಬಳಿಕ ಸಂಸ್ಥೆಯ ಮೂಲಕ ಮೂತ್ರಪಿಂಡ, ಪಿತ್ತಜನಕಾಂಗ, ಹೃದಯ, ಶ್ವಾಸಕೋಶ ಮತ್ತು ಎರಡೆರಡು ಕಣ್ಣುಗಳು ಸೇರಿದಂತೆ ಅಂಗಾಂಗಗಳನ್ನು ದಾನ ಮಾಡಿದ್ದಾರೆ.

ಮೀತ್ ಪಾಂಡ್ಯ ಮತ್ತು ಕ್ರಿಸ್ ಗಾಂಧಿಯವರ ಅಂಗಾಂಗಗಳನ್ನು ದಾನ ಮಾಡುವ ಮೂಲಕ, ಗುಜರಾತಿನ 12 ಜನರು ಹೊಸ ಜೀವನವನ್ನು ಪಡೆದಿದ್ದಾರೆ. ಸೂರತ್‌ನ ಆಸ್ಪತ್ರೆಯಿಂದ ಏಕಕಾಲದಲ್ಲಿ 13 ಅಂಗಾಂಗಗಳನ್ನು ದಾನ ಮಾಡುವುದು ಇಿದೇ ಮೊದಲು. ಅಂಗಾಂಗ ದಾನಗೈದ ಈ ಇಬ್ಬರು ಯುವಕರಿಗೆ ವೈದ್ಯರಿಂದ ಹಿಡಿದು ಜನ ಸಾಮಾನ್ಯರವರೆಗೆ ಎಲ್ಲರೂ ಸೆಲ್ಯೂಟ್ ಹೊಡೆದಿದ್ದಾರೆ.

ಸೂರತ್‌ನ ಖಾಸಗಿ ಆಸ್ಪತ್ರೆಯಲ್ಲಿ, ಎರಡು ಪ್ರತ್ಯೇಕ ಹಸಿರು ಕಾರಿಡಾರ್‌ ಮೂಲಕ ಇಬ್ಬರ ಅಂಗಾಂಗಗಳನ್ನು ಅಹಮದಾಬಾದ್ ಮತ್ತು ಹೈದರಾಬಾದ್‌ಗೆ ಕೊಂಡೊಯ್ಯಲಾಗಿದೆ. ಕೆಲವು ಅಂಗಗಳನ್ನು ಹೈದರಾಬಾದ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, 926 ಕಿಮೀ ದೂರವನ್ನು 180 ನಿಮಿಷಗಳಲ್ಲಿ ತಲುಪಲಾಗಿದೆ. ಇನ್ನ ಇವರ ಹೃದಯ ಮತ್ತು ಲಿವರ್  ಹಾಗೂ ಮೂತ್ರಪಿಂಡಗಳನ್ನು ಅಹಮದಾಬಾದ್‌ಗೆ ಕಳುಹಿಸಲಾಗಿದೆ. ಕೆಲವು ಅಂಗಗಳನ್ನು ರೋಗಿಗಳಿಗೆ ಕಸಿ ಮಾಡಲಾಗಿದ್ದು ಇನ್ನು ಕೆಲವು ಇನ್ನೂ ಮಾಡಬೇಕಾಗಿದೆ.


ಇಬ್ಬರೂ ಸ್ನೇಹಿತರು ಒಂದೇ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದು, ಸದ್ಯ 12 ನೇ ತರಗತಿಯಲ್ಲಿ ಓದುತ್ತಿದ್ದರು. ಸಾಮಾನ್ಯವಾಗಿ ಇಬ್ಬರೂ ಒಟ್ಟಿಗೆ ಸಮಯ ಕಳೆಯುತ್ತಿದ್ದರು. ಆಗಸ್ಟ್ 24 ರಂದು ಮೃತರಲ್ಲಿ ಒಬ್ಬನಾದ ಕ್ರಿಸ್ ಗಾಂಧಿ ಜನ್ಮದಿನವಾಗಿತ್ತು. ಎರಡೂ ಹುಟ್ಟುಹಬ್ಬಗಳನ್ನು ಆಚರಿಸಿದ ಬಳಿಕ ಸ್ಕೂಟಿಯಲ್ಲಿ ರಾತ್ರಿ ತಿರುಗಾಡಲೆಂದು ಹೊರಟಿದ್ದರು. ಆದರೆ ಈ ವೇಳೆ ವೇಗವಾಗಿ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ದುರಾದೃಷ್ಟವಶಾತ್ ಈ ಅಪಘಾತದಲ್ಲಿ ಇಬ್ಬರೂ ಸಾವನ್ನಪ್ಪಿದ್ದಾರೆ. 

click me!