ಮಾಜಿ ಆರ್‌ಜೆ ಹಾಗೂ ಇನ್‌ಫ್ಲುಯೆನ್ಸರ್ ಸಿಮ್ರನ್ ಸಿಂಗ್ ಗುರುಗ್ರಾಮದ ಸೆಕ್ಟರ್ 47ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಮ್ಮು ಕಿ ಧಡ್ಕನ್ ಎಂದೇ ಫೇಮಸ್ ಆಗಿದ್ದ ಆರ್‌ಜೆ ಸಿಮ್ರನ್ ಸಿಂಗ್ ಅವರಿಗೆ ಇನ್ಸ್‌ಟಾಗ್ರಾಮ್‌ನಲ್ಲಿ 6.82 ಲಕ್ಷ ಫಾಲೋವರ್ಸ್‌ಗಳಿದ್ದರು. ಪೊಲೀಸರು ಇದನ್ನು ಆತ್ಮಹತ್ಯೆ ಎಂದು ಶಂಕಿಸಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಶವವನ್ನು ಕುಟುಂಬಕ್ಕೆ ಹಸ್ತಾಂತರ ಮಾಡಿದ್ದಾರೆ.
ಆಕೆಯ ಜೊತೆ ಅಪಾರ್ಟ್‌ಮೆಂಟ್‌ನಲ್ಲಿ ವಾಸ ಮಾಡುತ್ತಿದ್ದ ಸ್ನೇಹಿತೆಯೊಬ್ಬರು ಆತ್ಮಹತ್ಯೆಯ ಬಗ್ಗೆ ಪೊಲೀಸರಿಗೆ ತಿಳಿಸಿದ್ದು, 25 ವರ್ಷದ ಆರ್‌ಜೆಯ ಅಕಾಲಿಕ ನಿಧನ ಅಭಿಮಾನಿಗಳು ಹಾಗೂ ಫಾಲೋವರ್ಸ್‌ಗೆ ಅಚ್ಚರಿ ತಂದಿದೆ.
ಇನ್ಸ್‌ಟಾಗ್ರಾಮ್‌ನಲ್ಲೂ ಭಾರೀ ಜನಪ್ರಿಯತೆ ಹೊಂದಿದ್ದ ಮಾಜಿ ರೇಡಿಯೋ ಜಾಕಿ ಸಿಮ್ರನ್ ಸಿಂಗ್ ಸಾವಿನ ತನಿಖೆಯನ್ನು ನಡೆಸುತ್ತಿದ್ದೇವೆ ಎಂದು ಗುರುಗ್ರಾಮ ಪೊಲೀಸರು ತಿಳಿಸಿದ್ದಾರೆ.
ತನಿಖೆ ನಡೆಸುತ್ತಿರುವ ತನಿಖಾಧಿಕಾರಿ ಎಎಸ್‌ಐ ಪ್ರದೀಪ್ ಕುಮಾರ್ ಹೇಳುವ ಪ್ರಕಾರ, ಸಿಮ್ರನ್ ಸಿಂಗ್ ಅವರ ಕುಟುಂಬ ಈವರೆಗೂ ಯಾರ ಮೇಲೂ ದೂರು ದಾಖಲು ಮಾಡಿಲ್ಲ ಎಂದು ತಿಳಿಸಿದ್ದಾರೆ.
ಸಿಮ್ರನ್ ಕೆಲವು ಸಮಯದಿಂದ ಸಮಸ್ಯೆಗಳನ್ನು ಎದುರಿಸುತ್ತಿದ್ದರು ಮತ್ತು ಅದರಿಂದಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಮತ್ತು ಇದಕ್ಕೆ ಯಾರನ್ನೂ ಹೊಣೆಗಾರರನ್ನಾಗಿ ಮಾಡಲಿಲ್ಲ ಎಂದು ಕುಟುಂಬ ಹೇಳಿದೆ.
ಕುಟುಂಬಸ್ಥರು ನೀಡಿದ ಲಿಖಿತ ದೂರಿನ ಮೇರೆಗೆ ಕ್ರಮ ಕೈಗೊಂಡು ಗುರುವಾರ ಬೆಳಗ್ಗೆ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಮ್ರಾನ್ ಅವರ ಮನೆಯ ಬಾಗಿಲು ಒಳಗಿನಿಂದ ಲಾಕ್ ಆಗಿದ್ದು, ಘಟನಾ ಸ್ಥಳದಲ್ಲಿ ಯಾವುದೇ ಸೂಸೈಡ್ ನೋಟ್ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಮರಣೋತ್ತರ ಪರೀಕ್ಷೆ ಮುಗಿಸಿದ ಬಳಿಕ ಆಕೆಯ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು.
ಜಮ್ಮು ಪ್ರದೇಶದ ಮೂಲದವರಾದ ಸಿಮ್ರನ್ ಸಿಂಗ್ ಅವರು ತಮ್ಮ ಅಭಿಮಾನಿಗಳಿಗೆ 'ಜಮ್ಮು ಕಿ ಧಡ್ಕನ್' (ಜಮ್ಮುವಿನ ಹೃದಯ ಬಡಿತ) ಎಂದು ಪ್ರೀತಿಯಿಂದ ಹೇಳುತ್ತಿದ್ದರು.
Instagram ನಲ್ಲಿ ಸಿಮ್ರನ್ ಸಾಕಷ್ಟು ಸಕ್ರಿಯರಾಗಿದ್ದರು, ಅವರ ಕೊನೆಯ ಪೋಸ್ಟ್ ಡಿಸೆಂಬರ್ 13ರಂದು ಬಂದಿತ್ತು. ಇದರಲ್ಲಿ ಖುಷಿ ಖಷಿಯಾಗಿಯೇ ಅವರು ಡಾನ್ಸ್ ಮಾಡಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದರು.
ಆಗಸ್ಟ್ 2023 ರಲ್ಲಿ, ಸಿಮ್ರಾನ್ ಅವರು ನಟರಾದ ಅಭಿಷೇಕ್ ಬಚ್ಚನ್ ಮತ್ತು ಸೈಯಾಮಿ ಖೇರ್ ಅನ್ನು ಒಳಗೊಂಡಿರುವ ವೀಡಿಯೊವನ್ನು ಹಂಚಿಕೊಂಡಿದ್ದರು. ಅದು ಅವರ ಘೂಮರ್ ಚಿತ್ರದ ಪ್ರಚಾರದ ಸಮಯದಲ್ಲಿ ತೆಗೆದ ಚಿತ್ರವಾಗಿತ್ತು.