ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 78ನೇ ಜನ್ಮಜಯಂತಿಯಂದು ಕಾಂಗ್ರೆಸ್ ನಾಯಕ ಹಾಗೂ ಪುತ್ರ ರಾಹುಲ್ ಗಾಂಧಿ ಹಾಗೂ ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ ನವದೆಹಲಿಯ ವೀರಭೂಮಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು.
ವೀರಭೂಮಿಗೆ ಬರುವ ಮುನ್ನ ತಂದೆಯ ಕುರಿತಾಗಿ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ, "ಅಪ್ಪಾ, ನೀನು ಪ್ರತಿ ಕ್ಷಣವೂ ನನ್ನೊಂದಿಗಿರುವೆ, ನನ್ನ ಹೃದಯದಲ್ಲಿ. ದೇಶಕ್ಕಾಗಿ ನೀವು ಕಂಡ ಕನಸನ್ನು ನನಸಾಗಿಸಲು ನಾನು ಯಾವಾಗಲೂ ಪ್ರಯತ್ನಿಸುತ್ತೇನೆ' ಎಂದು ಬರೆದುಕೊಂಡಿದ್ದಾರೆ.
ವೀರಭೂಮಿಯಲ್ಲಿ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಪುಷ್ಪನಮನ ಸಲ್ಲಿಸುವ ವೇಳೆ ಅಳಿಯ ರಾಬರ್ಟ್ ವಾದ್ರಾ ಕೂಡ ಜೊತೆಯಾಗಿದ್ದರು.ರಾಜೀವ್ ಗಾಂಧಿ ಅವರು 1991 ರಲ್ಲಿ ಎಲ್‌ಟಿಟಿಇ ಭಯೋತ್ಪಾದಕರಿಂದ ಹತ್ಯೆಯಾಗುವ ಮೊದಲು 1984 ರಿಂದ 1989 ರ ನಡುವೆ ಭಾರತದ ಆರನೇ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು.
ಪುಷ್ಪನಮನ ಸಲ್ಲಿಸಿದ್ದ ಬಳಿಕ, ಅಲ್ಲಿಯೇ ಕೆಲ ಹೊತ್ತು ಕುಳಿತುಕೊಂಡಿದ್ದ ರಾಹುಲ್ ಗಾಂಧಿ, ರಾಬರ್ಟ್ ವಾದ್ರಾ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಕೂಡ ಜೊತೆಯಾದರು.
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಇತ್ತೀಚೆಗೆ ಭಿನ್ನಾಭಿಪ್ರಾಯಗಳಿಂದಲೇ ಸುದ್ದಿಯಾಗಿರುವ ಜಮ್ಮು ಕಾಶ್ಮೀರದ ನಾಯಕ ಗುಲಾಂ ನಬಿ ಆಜಾದ್ ಕೂಡ ವೀರಭೂಮಿಗೆ ಬಂದು ನಮನ ಸಲ್ಲಿಸಿದರು.
ಕಾಂಗ್ರೆಸ್‌ನ ಮತ್ತೊಬ್ಬ ಹಿರಿಯ ನಾಯಕ ಹಾಗೂ ಮಾಜಿ ಗೃಹ ಸಚಿವ ಪಿ.ಚಿದಂಬರಂ ಕೂಡ ವೀರಭೂಮಿಯಲ್ಲಿ ರಾಜೀವ್ ಗಾಂಧಿಗೆ ನಮನ ಸಲ್ಲಿಸಿದರು. ಕೆಸಿ ವೇಣುಗೋಪಾಲ್ ಸೇರಿದಂತೆ ಇನ್ನಿತರ ಪ್ರಮುಖ ನಾಯಕರು ಈ ವೇಳೆ ಹಾಜರಿದ್ದರು.
ವೀರಭೂಮಿಯಲ್ಲಿ ರಾಜೀವ್ ಗಾಂಧಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಬಂದಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಕೂಡ ರಾಹುಲ್ ಗಾಂಧಿ ಈ ವೇಳೆ ಭೇಟಿ ಮಾಡಿದರು.
ರಾಜೀವ್ ಗಾಂಧಿ ಅವರ ಜನ್ಮಜಯಂತಿಯಂದು ವೀರಭೂಮಿಗೆ ಬಂದಿದ್ದ ಕಾಂಗ್ರೆಸ್ ಕಾರ್ಯಕರ್ತರು. 15 ಎಕರೆ ಪ್ರದೇಶದಲ್ಲಿ ಇದು ವ್ಯಾಪಿಸಿದ್ದು, ಅವರು ಬದುಕಿದ್ದ ವರ್ಷಗಳನ್ನು ಸೂಚಿಸಲು 46 ಸಣ್ಣ ಕಮಲಗಳಿಂದ ಸುತ್ತುವರಿದ ಕಲ್ಲಿನಿಂದ ಕೆತ್ತಿದ ಪೂರ್ಣ ಅರಳಿದ ದೊಡ್ಡ ಕಮಲವನ್ನು ನಿರ್ಮಿಸಲಾಗಿದೆ. ಭಾರತದ ಎಲ್ಲಾ ರಾಜ್ಯಗಳ ಕಲ್ಲುಗಳು ವೀರಭೂಮಿಯ ಸುತ್ತಲೂ ಹರಡಿಕೊಂಡಿವೆ.
ವೀರಭೂಮಿಗೆ ಬಂದಿದ್ದ ಕಾಂಗ್ರೆಸ್ ಕಾರ್ಯಕರ್ತರಿಗೆ ನಮಸ್ಕರಿಸಿದ ರಾಹುಲ್ ಗಾಂಧಿ. ದೇಶಾದ್ಯಂತ ಕಾಂಗ್ರೆಸ್ ನಾಯಕರು ಟ್ವಿಟರ್‌ನಲ್ಲಿ ರಾಜೀವ್ ಗಾಂಧಿ ಜನ್ಮಜಯಂತಿಯನ್ನು ಟ್ವೀಟ್ ಮಾಡುವ ಮೂಲಕ ಸ್ಮರಿಸಿಕೊಡಿದ್ದಾರೆ.