ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಇದೀಗ ಟ್ರಾಕ್ಟರ್ ರ್ಯಾಲಿಗೆ ಸಜ್ಜಾಗಿದ್ದಾರೆ.
ಗಣರಾಜ್ಯೋತ್ಸವ ದಿನಾಚರಣೆ(ಜ.26)ಗೆ ರೈತರ ಟ್ರಾಕ್ಟರ್ ರ್ಯಾಲಿ ಹಮ್ಮಕೊಳ್ಳಲಾಗಿದೆ. ಈಗಾಗಲೇ ದೆಹಲಿ ಗಡಿಗೆ 1.25 ಲಕ್ಷ ಟ್ರಾಕ್ಟರ್ ಆಗಮಿಸಿದ್ದು, ಗಣತಂತ್ರ ದಿನ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ.
ಕ್ರಾಂತಿಕಾರಿ ಕಿಸಾನ್ ಸಂಘಟನೆ ನಾಯಕ ದರ್ಶನ್ ಪಾಲ್ ಇದೀಗ ಮತ್ತೊಂದು ರ್ಯಾಲಿ ಘೋಷಣೆ ಮಾಡಿದ್ದಾರೆ. ಬಜೆಟ್ ದಿನ, ಅಂದರೆ ಫೆಬ್ರವರಿ 1 ರಂದು ಸಂಸತ್ ಭವನ ಚಲೋ ರ್ಯಾಲಿ ನಡೆಯಲಿದೆ.
ದೇಶದ ವಿವಿಧ ಮೂಲೆಗಳಿಂದ ರೈತ ಸಂಘಟನೆಗಳು ಸಂಸತ್ ಭವನದತ್ತ ತೆರಳಲಿದ್ದಾರೆ. ಈ ಮೂಲಕ ಸಂಸತ್ ಚಲೋ ರ್ಯಾಲಿ ಚುರುಕುಗೊಳಿಸಲಿದ್ದಾರೆ ಎಂದು ದರ್ಶನ್ ಪಾಲ್ ಹೇಳಿದ್ದಾರೆ.
ಸಂಸತ್ ಚಲೋ ರ್ಯಾಲಿ ಮೂಲಕ ರೈತರ ಹೋರಾಟ ಕೇವಲ ಪಂಜಾಬ್ ಮತ್ತು ಹರ್ಯಾಣಕ್ಕೆ ಮಾತ್ರ ಸೀಮಿತವಾಗಿಲ್ಲ. ದೇಶದ ಎಲ್ಲಾ ಭಾಗದಲ್ಲೂ ಪ್ರತಿಭಟನೆ ಕಾವು ಇದೆ ಅನ್ನೋದನ್ನು ಕೇಂದ್ರಕ್ಕೆ ತೋರಿಸಲಿದ್ದೇವೆ ಎಂದು ರೈತ ಸಂಘಟನೆ ಹೇಳಿದೆ.
ಜನವರಿ 26ರ ಟ್ರಾಕ್ಟರ್ ರ್ಯಾಲಿಗೆ ಎಲ್ಲಾ ತಯಾರಿ ಮಾಡಿಕೊಂಡಿದ್ದೇವೆ. ಯಾವುದೇ ಕಾರಣಕ್ಕೂ ಟ್ರಾಕ್ಟರ್ ರ್ಯಾಲಿ ಹತ್ತಿಕ್ಕಲು ಸಾಧ್ಯವಿಲ್ಲ ಎಂದು ರೈತ ಸಂಘಟನೆ ಹೇಳಿದೆ.
ದೆಹಲಿಯ ಸಿಂಘು, ಟಿಕ್ರಿ ಹಾಗೂ ಗಾಝಿಪುರ್ ಗಡಿಗಳಿಂದ ಸುಮಾರು 2 ಲಕ್ಷ ಟ್ರಾಕ್ಟರ್‌ಗಳು ದೆಹಲಿಯತ್ತ ರ್ಯಾಲಿ ನಡೆಸಲಿದ್ದೇವೆ ಎಂದು ದರ್ಶನ್ ಪಾಲ್ ಹೇಳಿದ್ದಾರೆ
ರೈತರ ಜೊತೆಗೆ ಕೇಂದ್ರ ಸರ್ಕಾರ 11 ಸುತ್ತಿನ ಮಾತುಕತೆ ನಡೆಸಿದೆ. ಆದರೆ 11 ಸುತ್ತಿನ ಮಾತುಕತೆಗಳು ವಿಫಲಗೊಂಡಿದೆ. ಕೇಂದ್ರದ ಯಾವುದೇ ಮಾತಿಗೂ ರೈತರು ಜಗ್ಗಿಲ್ಲ.