ಪ್ರಧಾನಿ ನರೇಂದ್ರ ಮೋದಿ ಗುಜರಾತಿನ ಗಾಂಧಿನಗರದಿಂದ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಹೊಸ ಮತ್ತು ನವೀಕರಿಸಿದ ರೈಲನ್ನು ಉದ್ಘಾಟಿಸಿದರು. ಪ್ರಧಾನಿ ಮೋದಿ ಆಗಮಿಸುತ್ತಿದ್ದಂತೆ ಮೋದಿ ಮೋದಿ ಘೋಷಣೆಗಳು ಮೊಳಗಿತ್ತು. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಚಾಲನೆ ಮಾಡುತ್ತಿದ್ದಂತೆ ವಂದೇ ಭಾರತ್ ಘೋಷಣೆ ಮೊಳಗಿತು.
ಉದ್ಘಾಟನೆ ಬಳಿಕ ಪ್ರಧಾನಿ ಮೋದಿ ಗಾಂಧಿನಗರದಿಂದ ಅಹಮದಾಬಾದ್‌ನ ಕಲುಪುರ್ ರೈಲು ನಿಲ್ದಾಣದವರೆಗೆ ರೈಲಿನಲ್ಲಿ ಪ್ರಯಾಣಿಸಿದರು. ರೈಲಿನಲ್ಲಿ ಪ್ರಧಾನಿ ಮೋದಿ, ವಂದೇ ಭಾರತ್ ರೈಲು ತಯಾರಿಕೆಯಲ್ಲಿ ದುಡಿದ ಕಾರ್ಮಿಕರು, ಇಂಜಿನೀಯರ್ಸ್ ಹಾಗೂ ಇತರ ಸಿಬ್ಬಂದಿಗಳ ಜೊತೆ ಸಂವಾದ ನಡೆಸಿದರು.
ಗಾಂಧಿನಗರದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಉದ್ಘಾಟನಾ ಸಮಾರಂಭದಲ್ಲಿ ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ್, ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ, ರೈಲ್ವೇ ಸಚಿವ ಅಶ್ವಿನ್ ವೈಷ್ಣವ್, ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಸೇರಿದಂತೆ ಹಲವು ಹಣ್ಯರು ಹಾಜರಿದ್ದರು.
ವಂದೇ ಭಾರತ್ ರೈಲಿನಲ್ಲಿ ಪ್ರಯಾಣದ ವೇಳೆ ಮೋದಿ ಮಹಿಳಾ ಉದ್ಯಮಿಗಳು, ಸಂಶೋಧಕರು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರೊಂದಿಗೆ ಮಾತುಕತೆ ನಡೆಸಿದರು. ಗಾಂಧಿನಗರದಿಂದ ರೈಲಿನಲ್ಲಿ ಪ್ರಯಾಣಿಸಿದ ಮೋದಿ ಅಹಮ್ಮದಾಬಾದ್‌ಗೆವರೆಗೆ ಪ್ರಯಾಣಿಸಿದರು.
ಪ್ರಧಾನಿ ಮೋದಿ ಉದ್ಘಾಟಿಸಿರುವ ಈ ಸೆಮಿ-ಹೈ ಸ್ಪೀಡ್ ರೈಲು ಗಾಂಧಿನಗರ ಮತ್ತು ಮುಂಬೈ - ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳ ರಾಜಧಾನಿಗಳನ್ನು ಸಂಪರ್ಕಿಸುತ್ತದೆ. ರೈಲು ಅಕ್ಟೋಬರ್ 1 ರಂದು ಕಾರ್ಯಾಚರಣೆಯನ್ನು ಪ್ರಾರಂಭಿಸಲಿದ್ದು ಭಾನುವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ಪ್ರಯಾಣ ಬೆಳಸಲಿದೆ.