ಲೋಕಸಭಾ ಚುನಾವಣೆಯ ಭರ್ಜರಿ ಪ್ರಚಾರದಲ್ಲಿ ತೊಡಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬಿಹಾರದ ಪಾಟ್ನಾದಲ್ಲಿರುವ ಸಿಖ್ ಗುರುದ್ವಾರಕ್ಕೆ ಭೇಟಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಪಾಟ್ನಾದಲ್ಲಿರುವ ತಾಕತ್ ಶ್ರೀ ಪಾಟ್ನಾ ಸಾಹಿಬ್ ಜೀ ಗುರುದ್ವಾರದ ದರ್ಬಾರ್ ಸಾಹೀಬ್‌ಗೆ ಇಂದು ಮುಂಜಾನೆ ಭೇಟಿ ನೀಡಿದ ಪ್ರಧಾನಿ ಅಲ್ಲಿ ಸಿಖ್ ಗುರುವಿಗೆ ನಮನ ಸಲ್ಲಿಸಿದರು. ದರ್ಬಾರ್ ಸಹೀಬ್ ಶ್ರೀ ಗುರು ಗೋವಿಂದ್ ಸಿಂಗ್ ಜೀ ಅವರ ಜನ್ಮಸ್ಥಳವಾಗಿದ್ದು, ಇಲ್ಲಿಗೆ ಭೇಟಿ ನೀಡಿದ ಪ್ರಧಾನಿ ಅಲ್ಲಿ ಅರ್ದಾಸ್‌ನಲ್ಲಿ ಭಾಗಿಯಾದರು.
ಅಲ್ಲದೇ ಲೈವ್ ಆಗಿ ಕೀರ್ತನೆಯನ್ನು ಕೇಳಿದರು. ಜೊತೆಗೆ ಶ್ರೀ ಗುರು ಗೋವಿಂದ ಸಿಂಗ್ ಜೀ ಬಳಸುತ್ತಿದ್ದ ಅಪರೂಪದ ಶಸ್ತ್ರಗಳ ವೀಕ್ಷಣೆ ಮಾಡಿದರು. ನಂತರ ಛುರ್ ಸಾಹೀಬ್ ಸೇವಾ ಪೂರೈಸಿದ ಪ್ರಧಾನಿ, ಸರ್ಬತ್ ದ ಭಾಲದಲ್ಲಿ ಕೆಲ ಕಾಲ ಕುಳಿತು ಧ್ಯಾನಸ್ತರಾಗಿದ್ದರು.
ಇದಾದ ಬಳಿಕ ಪ್ರಧಾನಿ ಲಂಗರ್ ಕಿಚನ್( ಸಮುದಾಯ ಭೋಜನ ಕೊಠಡಿ) ಗೆ ಭೇಟಿ ನೀಡಿ ಅಲ್ಲಿ ದಾಲ್ ತಯಾರಿಸಿ ಗುರುದ್ವಾರದಲ್ಲಿ ಉಪಸ್ಥಿತರಿದ್ದ ಭಕ್ತರಿಗೆ ಸ್ವತಃ ಆಹಾರವನ್ನು ಬಡಿಸಿದರು.
ಇದಾದ ಬಳಿಕ ಖಾರ ಪ್ರಸಾದ ಸ್ವೀಕರಿಸಿದ ಪ್ರಧಾನಿ ಅಲ್ಲಿ ಡಿಜಿಟಲ್ ಪೇಮೆಂಟ್ ಮೂಲಕ ಹಣ ಪಾವತಿ ಮಾಡಿದರು. ಈ ವೇಳೆ ಗುರುದ್ವಾರದ ಸಮಿತಿಯವರು ಪ್ರಧಾನಿಯವರಿಗೆ ಸನ್ಮಾನ ಪತ್ರದ ಜೊತೆ ಮಾತಾ ಗುಜ್ರಿ ಜೀ ಅವರ ಫೋಟೋವನ್ನು ಉಡುಗೊರೆಯಾಗಿ ನೀಡಿದರು.
ಸತತ ಮೂರನೇ ಬಾರಿಗೆ ಪ್ರಧಾನಿ ಹುದ್ದೆ ಏರುವ ನಿರೀಕ್ಷೆಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಉತ್ತರಪ್ರದೇಶದ ವಾರಾಣಸಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ
ಈ ಹಿಂದಿನ ಎರಡು ಚುನಾವಣೆಯಲ್ಲೂ ಮೋದಿ ಇದೇ ಕ್ಷೇತ್ರದಿಂದಲೇ ಲೋಕಸಭೆಗೆ ಆಯ್ಕೆಯಾಗಿದ್ದರು. ಇತ್ತೀಚೆಗೆ ಅಯೋಧ್ಯೆ ರಾಮಮಂದಿರದಲ್ಲಿ ನಡೆದ ಬಾಲಕ ರಾಮನ ಪ್ರಾಣಪ್ರತಿಷ್ಠಾಪನೆ ನೆರವೇರಿಸಿದ ಗಣೇಶ್ವರ ಶಾಸ್ತ್ರಿಗಳು ಪ್ರಧಾನಿ ನರೇಂದ್ರ ಮೋದಿ ನಾಮಪತ್ರಕ್ಕೆ ಸೂಚಕರಾಗಿ ಸಹಿ ಹಾಕಲಿದ್ದಾರೆ ಎನ್ನಲಾಗಿದೆ.
ಇವರ ಜೊತೆಗೆ ಪಶ್ಚಿಮ ಬಂಗಾಳದ ಖ್ಯಾತ ಕಲಾವಿದೆ, ಪದ್ಮಶ್ರೀ ಪುರಸ್ಕೃತ ಸೊಮಾ ಘೋಷ್ ಅವರು ಮತ್ತೊಬ್ಬ ಸೂಚಕರಾಗಲಿದ್ದಾರೆ ಎನ್ನಲಾಗಿದೆ. ಮಂಗಳವಾರ ಬೆಳಗ್ಗೆ ಪ್ರಧಾನಿ ಮೋದಿ ಕಾಲಭೈರವನ ದರ್ಶನ ಪಡೆದು ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರೊಂದಿಗೆ ಸಭೆ ನಡೆಸಲಿದ್ದಾರೆ.
ಕಾಲಭೈರವನ ದರ್ಶನ ಪಡೆದು ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರೊಂದಿಗೆ ಸಭೆ ನಡೆಸಿದ ನಂತರ ಪ್ರಧಾನಿ ಬಳಿಕ 11:40ಕ್ಕೆ ಸಲ್ಲುವ ಶುಭ ಅಭಿಜಿತ್ ಮುಹೂರ್ತದಲ್ಲಿ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲಿದ್ದಾರೆ.
ಇವರಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಾಥ್ ನೀಡಲಿದ್ದಾರೆ. ವಾರಾಣಸಿಯಲ್ಲಿ ಜೂ 1ರಂದು ನಡೆಯುವ ಕಡೆಯ ಹಂತದಲ್ಲಿ ಮತದಾನ ನಡೆಯಲಿದ್ದು, ಜೂ 4ರಂದು ಫಲಿತಾಂಶ ಹೊರಬರಲಿದೆ.
ಸಂಜೆ 5 ಗಂಟೆಗೆ ಪ್ರಧಾನಿ ಮೋದಿ ವಾರಾಣಸಿಯಲ್ಲಿ ಮೆಗಾ ರೋಡ್‌ಶೋ ನಡೆಸಲಿದ್ದು, 5 ಕಿ.ಮೀ ಉದ್ದಕ್ಕೂ ಜನಸ್ತೋಮದತ್ತ ಕೈ ಬೀಸುತ್ತಾ ಕಾಶಿ ವಿಶ್ವನಾಥನ ಸನ್ನಿಧಾನ ತಲುಪಲಿದ್ದಾರೆ. ಬಳಿಕ ಅಲ್ಲಿ ಪೂಜೆ ಮತ್ತು ಗಂಗಾರತಿಯಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ.
ವಾರಾಣಸಿಯಲ್ಲಿ ಮೋದಿ 2014ರಲ್ಲಿ 3.7 ಲಕ್ಷ ಹಾಗೂ 2019ರಲ್ಲಿ 4.8 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಬಾರಿ 7 ಲಕ್ಷ ಮತಗಳ ಅಂತರದಲ್ಲಿ ಗೆಲ್ಲಿಸುವ ಪಣವನ್ನು ಪಕ್ಷದ ಕಾರ್ಯಕರ್ತರ ತೊಟ್ಟಿದ್ದಾರೆ. ಮೋದಿಗೆ ಎದುರಾಳಿಯಾಗಿ ಕಾಂಗ್ರೆಸ್‌ನಿಂದ ಅಜಯ್ ರಾಯ್ ಕಣಕ್ಕೆ ಇಳಿದಿದ್ದಾರೆ.