ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನ ಯುವ ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅನೇಕ ಪ್ರಶ್ನೆಗಳಿಗೆ ಉತ್ತರ ಇನ್ನೂ ಸಿಕ್ಕಿಲ್ಲ.
ಕೋಲ್ಕತ್ತಾ ಹೈಕೋರ್ಟ್ ಆದೇಶದ ಮೇರೆಗೆ ಈ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ (CBI) ಹಲವು ಆಘಾತಕಾರಿ ಮಾಹಿತಿಗಳನ್ನು ಬಹಿರಂಗಪಡಿಸಿದೆ.
ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ವಿದ್ಯಾರ್ಥಿನಿಯ ಮೃತದೇಹ ಪತ್ತೆಯಾಗಿತ್ತು. ಆಕೆ ಧರಿಸಿದ್ದ ಬಟ್ಟೆಗಳು ಅಸ್ತವ್ಯಸ್ತವಾಗಿದ್ದವು.
ಸೆಮಿನಾರ್ ಹಾಲ್‌ನಲ್ಲಿ ಯಾವುದೇ ಸಿಸಿಟಿವಿ ಕ್ಯಾಮೆರಾಗಳು ಇರಲಿಲ್ಲ. ಆದರೆ ಯುವತಿ ಸೆಮಿನಾರ್ ಹಾಲ್‌ನಲ್ಲಿ ಏಕೆ ಮಲಗಿದ್ದರು? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ರಾತ್ರಿ ಪಾಳಿಯಲ್ಲಿದ್ದಾಗ ಯುವ ವೈದ್ಯೆಯ ಮೃತದೇಹ ಪತ್ತೆಯಾಗಿದ್ದು, ಆಕೆಯ ಎರಡೂ ಕಣ್ಣು ಮತ್ತು ಬಾಯಿಯಿಂದ ರಕ್ತಸ್ರಾವವಾಗುತ್ತಿತ್ತು.
ಆಕೆಯ ಜನನಾಂಗ ಮತ್ತು ಕುತ್ತಿಗೆಯ ಮೇಲೆ ಗಾಯಗಳಾಗಿತ್ತು. ಮುಖ, ಕಾಲು, ಉಗುರು, ಹೊಟ್ಟೆ, ಕೈ, ತುಟಿಗಳ ಮೇಲೆ ಗಾಯವಾಗಿತ್ತು.
ವೈದ್ಯರ ಮರಣೋತ್ತರ ಪರೀಕ್ಷೆಯ ವರದಿಯು ಅತ್ಯಾಚಾರ ಮತ್ತು ಕೊಲೆಯನ್ನು ಸ್ಪಷ್ಟಪಡಿಸಿದೆ. ಯುವ ವೈದ್ಯೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ.
ಈ ಪ್ರಕರಣದಲ್ಲಿ ಪೊಲೀಸರು ಈಗಾಗಲೇ ಸಿವಿಕ್ ಸ್ವಯಂಸೇವಕನನ್ನು ಬಂಧಿಸಿದ್ದಾರೆ. ಈ ಕೊಲೆಯಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂದು ತನಿಖೆ ನಡೆಯುತ್ತಿದೆ.
ಇತ್ತ ಕೋಲ್ಕತ್ತಾ ಹೈಕೋರ್ಟ್‌ನಿಂದ ಆರ್‌ಜಿ ಕರ್ ಪ್ರಕರಣವನ್ನು ಸುಪ್ರೀಂ ಕೋರ್ಟ್ ಸ್ವೀಕರಿಸಿದೆ. ಗುರುವಾರದೊಳಗೆ ಆರ್‌ಜಿ ಕರ್ ಪ್ರಕರಣದ ಸ್ಥಿತಿಗತಿ ವರದಿಯನ್ನು ಸಿಬಿಐ (CBI) ಸುಪ್ರೀಂ ಕೋರ್ಟ್‌ಗೆ ಸಲ್ಲಿಸುವಂತೆ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಪೀಠವು ಸೂಚಿಸಿದೆ.
ಆ 'ಶಾಪಗ್ರಸ್ತ' ರಾತ್ರಿ ಸ್ಲೀಪಿಂಗ್ ವಾರ್ಡ್‌ನಲ್ಲಿ (ಸ್ಲೀಪ್ ಅಪ್ನಿಯಾ ರೋಗಿಗಳು ಇರುವ ಸ್ಥಳ) ಹಲವಾರು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ. ನಿದ್ರೆಯ ಸ್ಥಿತಿಯಲ್ಲಿರುವ ರೋಗಿಯನ್ನು ರಾತ್ರಿ ಅಲ್ಲಿಯೇ ಇದ್ದು ಗಮನಿಸಬೇಕಾಗುತ್ತದೆ.
ಹಲವು ದಿನಗಳಿಂದ ಆ ವಾರ್ಡ್‌ನಲ್ಲಿ ಹೆಚ್ಚಿನ ರೋಗಿಗಳು ಇರುವುದಿಲ್ಲವಾದ್ದರಿಂದ, ಜವಾಬ್ದಾರಿಯುತ ವೈದ್ಯರು ಅಲ್ಲಿಯೇ ಮಲಗುತ್ತಿದ್ದರು ಅಥವಾ ವಿಶ್ರಾಂತಿ ಪಡೆಯಲು ಹೋಗುತ್ತಿದ್ದರು.
ಆದರೆ ಆ ರಾತ್ರಿ ಆ ವಾರ್ಡ್‌ನಲ್ಲಿ ರೋಗಿಗಳು ಇದ್ದರು. ಜಾಗ ಇಲ್ಲದ ಕಾರಣಕ್ಕೆ ಯುವ ವೈದ್ಯೆ ಸೆಮಿನಾರ್ ಹಾಲ್‌ನಲ್ಲಿ ಸ್ವಲ್ಪ ಹೊತ್ತು ಮಲಗಲು ಹೋದರು. ಈ ವೇಳೆ ಘಟನೆ ನಡೆದಿದೆ ಎಂಬುದು ಬಹಿರಂಗವಾಗಿದೆ.