ಕಾಸರಗೋಡು: ಕುಂಬಳೆ ಟೋಲ್ ವಿವಾದ ಭದ್ರತೆಯಲ್ಲಿ ಹಣ ಸಂಗ್ರಹ, ಪ್ರತಿಭಟಿಸಿದ ಚಾಲಕನನ್ನು ಹೊತ್ತೊಯ್ದ ಪೊಲೀಸ್!

Published : Jan 30, 2026, 01:32 PM IST

ಕೇರಳ ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ಬಾಕಿ ಇರುವಾಗಲೇ ಕುಂಬಳೆ ಟೋಲ್‌ನಲ್ಲಿ ಪೊಲೀಸ್ ಬಂದೋಬಸ್ತ್‌ನೊಂದಿಗೆ ಶುಲ್ಕ ಸಂಗ್ರಹ ಆರಂಭವಾಗಿದೆ. ಈ ವೇಳೆ, ಕಾರಿಗೆ ಬೂಮ್ ತಡೆಗೋಡೆ ತಾಗಿದ ವಿಚಾರವಾಗಿ ಸಂಘರ್ಷ ಉಂಟಾಗಿದ್ದು, ಪೊಲೀಸರು ಚಾಲಕನನ್ನು ಬಲವಂತವಾಗಿ ಹೊರಗೆಳೆದ ಘಟನೆ ತೀವ್ರ ವಿವಾದಕ್ಕೆ ಕಾರಣವಾಗಿದೆ.

PREV
18
ಪೊಲೀಸ್ ಬಂದೋಬಸ್ತ್‌ನೊಂದಿಗೆ ಟೋಲ್ ಸಂಗ್ರಹ

ಕಾಸರಗೋಡು: ಕೇರಳ ಹೈಕೋರ್ಟ್‌ನಲ್ಲಿ ಕುಂಬಳೆ (ಆರಿಕ್ಕಾಡಿ) ಟೋಲ್ ಪ್ಲಾಜಾ ಕುರಿತ ಅರ್ಜಿ ವಿಚಾರಣೆ ಇನ್ನೂ ಬಾಕಿ ಇರುವ ನಡುವೆಯೇ, ಪೊಲೀಸ್ ಬಂದೋಬಸ್ತ್‌ನೊಂದಿಗೆ ಟೋಲ್ ಸಂಗ್ರಹವನ್ನು ಪ್ರಾರಂಭಿಸಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ನಡುವೆಯೇ ಟೋಲ್ ಪ್ಲಾಜಾದಲ್ಲಿ ಸಂಭವಿಸಿದ ಘಟನೆಯೊಂದು ಪೊಲೀಸ್–ಸಾರ್ವಜನಿಕ ಸಂಘರ್ಷಕ್ಕೆ ತಿರುಗಿದ್ದು, ಪೊಲೀಸರ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕುಂಬಳೆ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ಟೋಲ್ ವಸೂಲಿಗೆ ಯತ್ನ ನಡೆದಿದ್ದು, ಈ ವೇಳೆ ವಾಹನ ಮಾಲೀಕರೊಂದಿಗೆ ಸಿಐ ಅವಮಾನಕಾರಿಯಾಗಿ ವರ್ತಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಟೋಲ್ ಪ್ಲಾಜಾದಲ್ಲಿ ಕಾರಿಗೆ ಬೂಮ್ ತಡೆಗೋಡೆ ತಾಗಿದ ವಿಚಾರವಾಗಿ ಉಂಟಾದ ಗಲಾಟೆ ತೀವ್ರ ವಾಗ್ವಾದಕ್ಕೆ ದಾರಿ ಮಾಡಿಕೊಟ್ಟಿದೆ.

28
ಘಟನೆ ವಿವರ

ಬೋವಿಕನಂ ಮೂಲದ ರಿಯಾಜ್ ಎಂಬವರು ತಮ್ಮ ಚಿಕ್ಕಮ್ಮ, ಮಕ್ಕಳು ಹಾಗೂ 6 ತಿಂಗಳ ಮಗು ಜೊತೆ ಬುಧವಾರ ಸಂಜೆ ಸುಮಾರು 5.30ರ ವೇಳೆಗೆ ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಿ ಹಿಂತಿರುಗುತ್ತಿದ್ದರು. ಕುಂಬಳೆ ಟೋಲ್ ಪ್ಲಾಜಾದಲ್ಲಿ ಫಾಸ್ಟ್‌ಟ್ಯಾಗ್ ಮೂಲಕ ಟೋಲ್ ಮೊತ್ತ ಪಾವತಿಸಿದ ಬಳಿಕ ತಡೆಗೋಡೆಯನ್ನು ಎತ್ತಲಾಗಿದ್ದು, ಕಾರು ಮುಂದೆ ಚಲಿಸುವ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಬೂಮ್ ತಡೆಗೋಡೆ ಕೆಳಗೆ ಬಿದ್ದು ಕಾರಿನ ಗಾಜಿಗೆ ಡಿಕ್ಕಿ ಹೊಡೆದಿದೆ ಎಂದು ಆರೋಪಿಸಲಾಗಿದೆ. ಈ ಕುರಿತು ಪ್ರಶ್ನೆ ಮಾಡಿದಾಗ ಟೋಲ್ ಅಧಿಕಾರಿಗಳೊಂದಿಗೆ ರಿಯಾಜ್ ಅವರ ನಡುವೆ ವಾಗ್ವಾದ ನಡೆದಿದೆ. ಟೋಲ್ ಪ್ಲಾಜಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಿಂದಿ ಭಾಷೆಯ ಉದ್ಯೋಗಿಯೊಂದಿಗೆ ಸಂವಹನ ಸಾಧಿಸಲು ತೊಂದರೆಯಾಗಿದ್ದು, ಈ ಕಾರಣದಿಂದ ಸಮಯ ವ್ಯರ್ಥವಾಗಿ ಟೋಲ್ ಲೈನ್‌ನಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗಿದೆ ಎಂದು ತಿಳಿದುಬಂದಿದೆ.

38
ಪೊಲೀಸರ ಮಧ್ಯಪ್ರವೇಶ ಮತ್ತು ಸಂಘರ್ಷ

ಸಂಚಾರ ದಟ್ಟಣೆ ತಪ್ಪಿಸಲು ಸ್ಥಳಕ್ಕೆ ಆಗಮಿಸಿದ ಪೊಲೀಸರು, ರಿಯಾಜ್ ಅವರ ವಾಹನವನ್ನು ಲೈನ್‌ನಿಂದ ಬದಿಗೆ ಸರಿಸುವಂತೆ ಸೂಚಿಸಿದ್ದಾರೆ. ಆದರೆ ತಮ್ಮ ದೂರನ್ನು ಆಲಿಸದೇ ಪೊಲೀಸರು ತಕ್ಷಣ ಮಧ್ಯಪ್ರವೇಶಿಸಿದ್ದಾರೆ ಎಂದು ರಿಯಾಜ್ ಆರೋಪಿಸಿದ್ದಾರೆ. ಈ ವೇಳೆ, “ಇವನೇ ರಾಜನೇ? ದೂರನ್ನು ಕೇಳುತ್ತೇವೆ ಎಂದರೂ ಕಾರನ್ನು ಲೈನ್‌ನಿಂದ ಸರಿಸುತ್ತಿಲ್ಲ” ಎಂದು ಕುಂಬಳೆ ಇನ್ಸ್‌ಪೆಕ್ಟರ್ ಮುಕುಂದನ್ ಟಿ.ಕೆ. ಹೇಳುತ್ತಿರುವುದು ವೈರಲ್ ವಿಡಿಯೋದಲ್ಲಿ ಸ್ಪಷ್ಟವಾಗಿ ಕೇಳಿಸಿಕೊಳ್ಳುತ್ತದೆ.

ಸ್ಟೀರಿಂಗ್ ವೀಲ್ ಹಿಡಿದು ಹಾರ್ನ್ ಮೂಲಕ ಪ್ರತಿಭಟನೆ ನಡೆಸುತ್ತಿದ್ದ ರಿಯಾಜ್ ಅವರನ್ನು ಪೊಲೀಸರು ಬಲವಂತವಾಗಿ ಕಾರಿನಿಂದ ಹೊರಗೆಳೆದು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಪೊಲೀಸರ ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.

48
ರಿಯಾಜ್ ಅವರ ಗಂಭೀರ ಆರೋಪಗಳು

ಪೊಲೀಸರ ಬಲಪ್ರಯೋಗದ ವೇಳೆ ತಡೆಯಲು ಮುಂದಾದ ತಮ್ಮ ಚಿಕ್ಕಮ್ಮಗೆ, ಇತ್ತೀಚೆಗೆ ಶಸ್ತ್ರಚಿಕಿತ್ಸೆ ನಡೆದ ಕೈಗೆ ಗಾಯವಾಗಿದೆ ಎಂದು ರಿಯಾಜ್ ಆರೋಪಿಸಿದ್ದಾರೆ. ಜೊತೆಗೆ, ಪೊಲೀಸರು ತಮ್ಮನ್ನು ಕರೆದುಕೊಂಡು ಹೋಗುವಾಗ ಮಹಿಳೆಯರು ಹಾಗೂ ಆರು ತಿಂಗಳ ಮಗು ಟೋಲ್ ಪ್ಲಾಜಾದಲ್ಲೇ ಒಂಟಿಯಾಗಿ ಉಳಿದಿದ್ದಾರೆ ಎಂದು ಅವರು ದೂರಿದ್ದಾರೆ. ಇದಲ್ಲದೆ, ತಾವು ಶೀಘ್ರದಲ್ಲೇ ಒಮಾನ್‌ಗೆ ಹೊಸ ಉದ್ಯೋಗಕ್ಕಾಗಿ ತೆರಳಬೇಕಿದ್ದು, ಈ ಪ್ರಕರಣದಿಂದ ತಮ್ಮ ಉದ್ಯೋಗ ಭವಿಷ್ಯಕ್ಕೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ರಿಯಾಜ್ ಕಳವಳ ವ್ಯಕ್ತಪಡಿಸಿದ್ದಾರೆ.

58
ಪೊಲೀಸರ ಸ್ಪಷ್ಟನೆ

ಘಟನೆ ಕುರಿತು ಪ್ರತಿಕ್ರಿಯಿಸಿದ ಕುಂಬಳೆ ಇನ್ಸ್‌ಪೆಕ್ಟರ್ ಮುಕುಂದನ್ ಟಿ.ಕೆ., ಚಾಲಕ ವಾಹನವನ್ನು ಬದಿಗೆ ಸರಿಸಲು ನಿರಾಕರಿಸಿದ್ದರಿಂದ ಸಂಚಾರ ದಟ್ಟಣೆ ಉಂಟಾಯಿತು ಎಂದು ತಿಳಿಸಿದ್ದಾರೆ. ದೂರನ್ನು ಆಲಿಸುವುದಾಗಿ ತಿಳಿಸಿದ್ದರೂ ಸಹಕರಿಸದ ಹಿನ್ನೆಲೆಯಲ್ಲಿ ಸ್ವಲ್ಪ ಮಟ್ಟಿನ ಬಲಪ್ರಯೋಗ ಅನಿವಾರ್ಯವಾಯಿತು ಎಂದು ಅವರು ಹೇಳಿದ್ದಾರೆ.

68
ಸೆಕ್ಷನ್ 170 ಅಡಿಯಲ್ಲಿ ಯುವಕನ ವಿರುದ್ಧ ಪ್ರಕರಣ

ಭಾರತೀಯ ನಾಗರಿಕ ಭದ್ರತಾ ಸಂಹಿತೆಯ (BNSS) ಸೆಕ್ಷನ್ 170 ಅಡಿಯಲ್ಲಿ ಯುವಕನ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ನಂತರ ಆತನನ್ನು ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂಚಾರಕ್ಕೆ ಅಡ್ಡಿಯಾಗಿದ್ದ ಕಾರಣ ವಾಹನದಿಂದ ಕೆಳಗಿಳಿಸಲಾಗಿದ್ದು, ಬಳಿಕ ವಾಹನವನ್ನು ಸಹ ಬಿಡುಗಡೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

78
ಟೋಲ್ ಪ್ಲಾಜಾ ವಿವಾದದ ಹಿನ್ನೆಲೆ

22 ಕಿಮೀ ವ್ಯಾಪ್ತಿಯಲ್ಲಿ ಎರಡು ಟೋಲ್‌ ಒಪ್ಪಲು ಸಾಧ್ಯವಿಲ್ಲ ಕುಂಬಳೆ ಟೋಲ್‌ ಗೆ ವ್ಯಾಪಕ ವಿರೋಧ ಇದೆ. ನಿಯಮಗಳ ಪ್ರಕಾರ 60 ಕಿ ಮೀ ಅಂತರದಲ್ಲಿ ಒಂದು ಟೋಲ್ ಇರಬೇಕು. ಹೀಗಾಗಿ ಆರಿಕ್ಕಾಡಿ (ಕುಂಬಳೆ) ಟೋಲ್ ಪ್ಲಾಜಾ ವಿರುದ್ಧ ಕರ್ಮ ಸಮಿತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಕೇರಳ ಹೈಕೋರ್ಟ್ ಫೆಬ್ರವರಿ 11ಕ್ಕೆ ಮುಂದೂಡಿದೆ. ಈ ಹಿನ್ನೆಲೆಯಲ್ಲಿ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಬುಧವಾರದಿಂದ ವಾಹನಗಳಿಂದ ನೇರವಾಗಿ ಟೋಲ್ ಸಂಗ್ರಹ ಆರಂಭಿಸಿದೆ. ಇದುವರೆಗೆ ಕೇವಲ ಫಾಸ್ಟ್‌ಟ್ಯಾಗ್ ಮೂಲಕ ಮಾತ್ರ ಟೋಲ್ ವಸೂಲಿ ನಡೆಯುತ್ತಿತ್ತು. ಜನವರಿ 14ರಂದು ಟೋಲ್ ಪ್ಲಾಜಾದ ತಡೆಗೋಡೆಗಳನ್ನು ಪ್ರತಿಭಟನಾಕಾರರು ಕೆಡವಿದ ಬಳಿಕ, ಸುಮಾರು ಎರಡು ವಾರಗಳ ಕಾಲ ಅವು ಕಾರ್ಯನಿರ್ವಹಿಸಿರಲಿಲ್ಲ. ಬೂಮ್ ತಡೆಗೋಡೆಗಳು ಮರುಸ್ಥಾಪನೆಯಾಗಿ ಕಾರ್ಯಾರಂಭ ಮಾಡಿದ ದಿನವೇ ಈ ವಿವಾದಾತ್ಮಕ ಘಟನೆ ನಡೆದಿದೆ.

88
ಮುಂದಿನ ಕ್ರಮ

ಘಟನೆಯ ಕುರಿತು ರಿಯಾಜ್ ಅವರು ರಾಜ್ಯ ಪೊಲೀಸ್ ಮುಖ್ಯಸ್ಥರು ಹಾಗೂ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಲು ಯೋಜನೆ ರೂಪಿಸಿದ್ದಾರೆ. ಟೋಲ್ ಪ್ಲಾಜಾ ವಿರುದ್ಧ ಈಗಾಗಲೇ ಭಾರೀ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆ, ಈ ಘಟನೆ ಮತ್ತಷ್ಟು ಉದ್ವಿಗ್ನತೆಯನ್ನು ಉಂಟುಮಾಡುವ ಸಾಧ್ಯತೆ ಇದೆ. ಕಾಸರಗೋಡು ಜಿಲ್ಲೆಯ ಕುಂಬಳೆ ಟೋಲ್ ಪ್ಲಾಜಾದಲ್ಲಿ ಹೈಕೋರ್ಟ್ ವಿಚಾರಣೆ ಬಾಕಿ ಇದ್ದರೂ ಟೋಲ್ ವಸೂಲಿ ಆರಂಭಿಸಿರುವುದರ ನಡುವೆಯೇ, ಚಾಲಕನನ್ನು ಪೊಲೀಸರು ಬಲವಂತವಾಗಿ ಕಾರಿನಿಂದ ಹೊರತೆಗೆದಿರುವ ವಿಡಿಯೋ ವೈರಲ್ ಆಗಿದ್ದು, ಪೊಲೀಸರ ನಡೆ ದೊಡ್ಡ ವಿವಾದಕ್ಕೆ ಕಾರಣವಾಗಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories