Bharat Jodo Yatra: 136 ದಿನ, 3570 ಕಿಲೋಮೀಟರ್‌ ದೇಶದ ಗಮನಸೆಳೆದ ರಾಹುಲ್‌ ಗಾಂಧಿಯ ಚಿತ್ರಗಳು..!

First Published | Jan 30, 2023, 8:41 PM IST

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ತಮ್ಮ ಮಹತ್ವಾಕಾಂಕ್ಷೆಯ ಭಾರತ್‌ ಜೋಡೋ ಯಾತ್ರೆಯನ್ನು ಸಮಾಪ್ತಿ ಮಾಡಿದ್ದಾರೆ. 136 ದಿನಗಳ ಕಾಲ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗಿನ 3570 ಕಿಲೋಮೀಟರ್‌ ಪ್ರಯಾಣದ ಮುಕ್ತಾಯದಲ್ಲಿ ರಾಹುಲ್‌ ಗಾಂಧಿಯ ವರ್ಣರಂಜಿತ ವ್ಯಕ್ತಿತ್ವ ಬಿತ್ತರವಾದವು. ಅದರ ಚಿತ್ರ ಹೂರಣ ಇಲ್ಲಿದೆ.

ಸೆಪ್ಟೆಂಬರ್‌ 7 ರಂದು ಕನ್ಯಾಕುಮಾರಿಯಿಂದ ರಾಹುಲ್‌ ಗಾಂಧಿಯವರ ಭಾರತ್‌ ಜೋಡ ಯಾತ್ರೆ ಆರಂಭವಾಗಿತ್ತು. ಶ್ರೀಪರಂಬದೂರಿನಲ್ಲಿ ತಂದೆ ರಾಜೀವ್‌ ಗಾಂಧಿ ಅವರ ಸ್ಮಾರಕಕ್ಕೆ ನಮನ ಸಲ್ಲಿಸಿ ರಾಹುಲ್‌ ಗಾಂಧಿ ಸುದೀರ್ಘ ಪಾದಯಾತ್ರೆ ಆರಂಭ ಮಾಡಿದ್ದರು.

ಕನ್ಯಾಕುಮಾರಿಯಿಂದ ಆರಂಭವಾದ ರಾಹುಲ್ ಗಾಂಧಿ ಅವರ ‘ಭಾರತ್ ಜೋಡೋ ಯಾತ್ರೆ’ ಸೋಮವಾರ (ಜನವರಿ 30) ಶ್ರೀನಗರದಲ್ಲಿ ಕೊನೆಗೊಂಡಿತು. ಈ ಪ್ರಯಾಣವು 12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳ ಮೂಲಕ ಹಾದುಹೋಯಿತು. ಈ ವೇಳೆ ರಾಹುಲ್ ಗಾಂಧಿ 3 ಸಾವಿರದ 570 ಕಿಲೋಮೀಟರ್ ಪಾದಯಾತ್ರೆ ಮಾಡಿದ್ದಾರೆ.

Tap to resize

ಕನ್ಯಾಕುಮಾರಿಯ ಬಳಿಕ ತಿರುವನಂತಪುರಂ (ಕೇರಳ), ಕೊಚ್ಚಿ (ಕೇರಳ), ನಿಲಂಬೂರ್ (ಕೇರಳ), ಮೈಸೂರು (ಕರ್ನಾಟಕ), ಬಳ್ಳಾರಿ (ಕರ್ನಾಟಕ), ರಾಯಚೂರು (ಕರ್ನಾಟಕ), ವಿಕಾರಾಬಾದ್ (ತೆಲಂಗಾಣ), ನಾಂದೇಡ್ (ಮಹಾರಾಷ್ಟ್ರ), ಜಲಗಾಂವ್ ಜಾಮೋದ್ (ಮಹಾರಾಷ್ಟ್ರ). ), ಇಂದೋರ್ (ಮಧ್ಯಪ್ರದೇಶ), ಕೋಟಾ (ರಾಜಸ್ಥಾನ), ದೌಸಾ (ರಾಜಸ್ಥಾನ), ಅಲ್ವಾರ್ (ರಾಜಸ್ಥಾನ), ಬುಲಂದ್‌ಶಹರ್ (ಉತ್ತರ ಪ್ರದೇಶ), ದೆಹಲಿ, ಅಂಬಾಲಾ (ಹರಿಯಾಣ), ಪಠಾಣ್‌ಕೋಟ್ (ಪಂಜಾಬ್), ಜಮ್ಮು (ಜಮ್ಮು-ಕಾಶ್ಮೀರ) ಮತ್ತು ಶ್ರೀನಗರ ( ಜಮ್ಮು-ಕಾಶ್ಮೀರ) ಸ್ಥಳದೊಂದಿಗೆ ಮುಕ್ತಾಯ ಕಂಡಿತು.

ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ್ದರು. ಯಾತ್ರೆ ಕರ್ನಾಟಕದ ಮಂಡ್ಯ ತಲುಪಿದಾಗ ಸೋನಿಯಾ ಗಾಂಧಿ ಭಾಗವಹಿಸಿದ್ದರು. ಆ ವೇಳೆ ಸೋನಿಯಾ ಗಾಂಧಿ ಅವರ ಶೂ ಲೇಸ್‌ ಬಿಚ್ಚಿ ಹೋದಾಗ, ರಾಹುಲ್ ಗಾಂಧಿ ಅದನ್ನು ಕಟ್ಟಿದ ಚಿತ್ರ ವೈರಲ್‌ ಆಗಿತ್ತು.

ಕರ್ನಾಟಕದಲ್ಲಿ ಭಾರತ್‌ ಜೋಡೋ ಯಾತ್ರೆ ನಡೆಯುವ ವೇಳೆ ರಾಹುಲ್‌ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೊಂದಿಗೆ ಹೆಜ್ಜೆ ಹಾಕಿದ ಚಿತ್ರಗಳೂ ಗಮನಸೆಳೆದಿದ್ದವು.

ಯಾತ್ರೆಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಅವರು ಲಕ್ಷಗಟ್ಟಲೆ ಜನರನ್ನು ಭೇಟಿ ಮಾಡಿದ್ದೇನೆ, ಅವರೊಂದಿಗೆ ಮಾತನಾಡಿದ್ದೇನೆ ಎಂದು ಹೇಳಿದರು. ಈ ಅನುಭವವನ್ನು ನಿಮಗೆ ವಿವರಿಸಲು ನನ್ನ ಬಳಿ ಪದಗಳಿಲ್ಲ ಎಂದಿದ್ದಾರೆ.
 

ಭಾರತ್‌ ಜೋಡೋ ಯಾತ್ರೆಯ ಉದ್ದೇಶ ದೇಶವನ್ನು ಒಗ್ಗೂಡಿಸುವುದು. ಈ ಯಾತ್ರೆಯು ದೇಶದಾದ್ಯಂತ ಹರಡಿರುವ ಹಿಂಸಾಚಾರ ಮತ್ತು ದ್ವೇಷದ ವಿರುದ್ಧವಾಗಿತ್ತು. ಅದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ನಾವು ಭಾರತದ ಜನರ ತಾಳ್ಮೆಯನ್ನು ಅವರ  ಶಕ್ತಿಯನ್ನು ನೇರವಾಗಿ ನೋಡಿದ್ದೇವೆ ಎಂದು ಹೇಳಿದ್ದಾರೆ.

136 ದಿನಗಳ ಈ ಪಯಣದಲ್ಲಿ ರಾಹುಲ್ ಗಾಂಧಿ 12 ಸಭೆಗಳನ್ನು ಉದ್ದೇಶಿಸಿ ಮಾತನಾಡಿದರು. ಅದೇ ಸಮಯದಲ್ಲಿ, 100 ಕ್ಕೂ ಹೆಚ್ಚು ಕಾರ್ನರ್ ಸಭೆಗಳು ಮತ್ತು 13 ಪತ್ರಿಕಾಗೋಷ್ಠಿಗಳನ್ನು ನಡೆಸಿದರು.

ಅದರೊಂದಿಗೆ ರಾಹುಲ್‌ 275ಕ್ಕೂ ಅಧಿಕ ವಾಕಿಂಗ್‌ ಸಂವಾದಗಳು, 100ಕ್ಕೂ ಅಧಿಕ ಬೈಠಕ್‌ಗಳನ್ನು ರಾಹುಲ್‌ ಗಾಂಧಿ ನಡೆಸಿದ್ದಾರೆ. ಬಾಕ್ಸರ್‌ ವಿಜೇಂದರ್‌ ಸಿಂಗ್‌ ಕೂಡ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಭಾರತ್ ಜೋಡೋ ಯಾತ್ರೆ ಮಧ್ಯಪ್ರದೇಶದ ಇಂದೋರ್ ತಲುಪಿದಾಗ ಕೆಲವರು 'ಮೋದಿ-ಮೋದಿ' ಎಂದು ಘೋಷಣೆಗಳನ್ನು ಕೂಗುತ್ತಿದ್ದರು. ಇದಕ್ಕೆ ರಾಹುಲ್ ಗಾಂಧಿ ಫ್ಲೈಯಿಂಗ್ ಕಿಸ್ ನೀಡಿದ್ದರು. ಈ ಘಟನೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಮಧ್ಯಪ್ರದೇಶದ ಉಜ್ಜಯಿನಿ ಮಹಾಕಾಲೇಶ್ವರ ದೇವಸ್ಥಾನಕ್ಕೆ ಮಧ್ಯಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ತೆರಳಿದ್ದರು. ಈ ವೇಳೆ ಅವರು ದೇವರಿಗೆ ಉದ್ದಂಡ ನಮಸ್ಕಾರ ಮಾಡಿದ ಚಿತ್ರ ಕೂಡ ಗಮನಸೆಳೆದಿತ್ತು.

ಭಾರತ್ ಜೋಡೋ ಯಾತ್ರೆ ರಾಜಸ್ಥಾನದ ದೌಸಾ ತಲುಪಿದಾಗ, ರಾಹುಲ್ ಗಾಂಧಿ ರೈತರ ಮನೆಯಲ್ಲಿ ತಂಗಿದ್ದರು. ಇಲ್ಲಿ ಅವರು ಹುಲ್ಲು ಕತ್ತರಿಸುವ ಯಂತ್ರದ ಅನುಭವ ಪಡೆದುಕೊಂಡಿದ್ದರು.. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕೂಡ ಹುಲ್ಲು ಕತ್ತರಿಸಲು ಪ್ರಯತ್ನಿಸಿದರು.

ಮೈಸೂರಿನಲ್ಲಿ ರಾಹುಲ್‌ ಗಾಂದಿ ಭಾರತ್‌ ಜೋಡೋ ಪಾದಯಾತ್ರೆ ಸಾಗುತ್ತಿದ್ದ ವೇಳೆ ರಾಹುಲ್‌ ಗಾಂಧಿ ಭಾರೀ ಮಳೆಯ ನಡುವೆಯೂ ಜನರನ್ನು ಉದ್ದೇಶಿಸಿ ಮಾತನಾಡಿದ್ದರು. ಇದರ ಚಿತ್ರಗಳು ಕೆಲ ಕಾಲ ಕಾಂಗ್ರೆಸ್‌ ಕಾರ್ಯಕರ್ತರ ಡಿಪಿ ಆಗಿದ್ದದ್ದು ಸುಳ್ಳಲ್ಲ.

ಉತ್ತರ ಭಾರತದ ಪ್ರಯಾಣದ ವೇಳೆ ರಾಹುಲ್ ಗಾಂಧಿ ಬಿಳಿ ಟೀ ಶರ್ಟ್ ಧರಿಸಿದ್ದರು. ಚಳಿಯಲ್ಲೂ ಬರೀ ಟೀ ಶರ್ಟ್ ಹಾಕಿಕೊಂಡು ರಾಹುಲ್‌ ಪಾದಯಾತ್ರೆ ಮಾಡಿದ್ದ ಅಚ್ಚರಿ ನೀಡಿತ್ತು. ರಾಹುಲ್ ಗಾಂಧಿಗೆ ಚಳಿ ಆಗೋದಿಲ್ಲವೇ ಎನ್ನುವ ಪ್ರಶ್ನೆಯೂ ಎದುರಾಗಿತ್ತು ಅದಕ್ಕೆ ಸಭೆಯಲ್ಲಿ ಉತ್ತರಿಸಿದ್ದ ಅವರು, 'ಒಂದು ದಿನ ಬೆಳಿಗ್ಗೆ 6 ಗಂಟೆಗೆ ಯಾತ್ರೆಯ ವೇಳೆ ಮೂವರು ಮಕ್ಕಳು ತಮ್ಮ ಬಳಿಗೆ ಬಂದರು, ಅವರು ಫೋಟೋ ತೆಗೆಯಲು ಬಯಸಿದ್ದರು ಎಂದು ರಾಹುಲ್ ಗಾಂಧಿ ಹೇಳಿದ್ದರು.  ನಾನು ಆ ಮಕ್ಕಳನ್ನು ಹಿಡಿದಾಗ, ಅವರು ಚಳಿಯಿಂದ ನಡುಗುತ್ತಿದ್ದರು' ಎಂದರು

ಅದೇ ದಿನ ಚಳಿ ಅಸಹನೀಯವಾಗುವವರೆಗೆ, ಚಳಿಯಿಂದ ನಡುಗುವವರೆಗೆ ಸ್ವೆಟರ್ ಧರಿಸುವುದಿಲ್ಲ ಎಂದು ನಾನು ನಿರ್ಧರಿಸಿದ್ದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ನಿಮಗೆ ಚಳಿಯಾಗುತ್ತಿದ್ದರೆ ನನಗೂ ಆ ಅನುಭವವಾಗುತ್ತಿದೆ ಮತ್ತು ನೀವು ಸ್ವೆಟರ್ ಧರಿಸಿದ ದಿನ ರಾಹುಲ್ ಗಾಂಧಿ ಸ್ವೆಟರ್ ಧರಿಸುತ್ತಾರೆ ಎಂಬ ಮಾತನ್ನು ಆ ಮಕ್ಕಳಿಗೆ ಹೇಳಿದ್ದೆ ಎಂದರು.

ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಭಾರತ್‌ ಜೋಡೀ ಯಾತ್ರೆ ಸಾಗಿದಾಗ ಪ್ರಿಯಾಂಕಾ ವಾದ್ರಾ ಕೂಡ ಭಾಗಿಯಾಗಿದ್ದರು. ಈ ವೇಳೆ ಪ್ರಿಯಾಂಕ ಅವರನ್ನು ಹಿಡಿದು ರಾಹುಲ್‌ ಮುತ್ತು ನೀಡಿದ್ದರು.

ಹರಿಯಾಣದ ಕುರುಕ್ಷೇತ್ರಕ್ಕೆ ಯಾತ್ರೆ ಬಂದಾಗ ರಾಹುಲ್‌ ಗಾಂಧಿ ಅಲ್ಲಿನ ಬ್ರಹ್ಮ ಸರೋವರದಲ್ಲಿ ಧಾರ್ಮಿಕ ವಿಧಿವಿಧಾನ ನಡೆಸಿದ್ದರು. 

ಪಂಜಾಬ್‌ನ ಫತೇಗರ್‌ ಸಾಹಿಬ್‌ಗೆ ಯಾತ್ರೆ ತೆರಳಿದಾಗ, ಅಲ್ಲಿನ ಫತೇಗರ್‌ ಸಾಹಿಬ್‌ ಗುರುದ್ವಾರಕ್ಕೆ ರಾಹುಲ್‌ ಗಾಂಧಿ ಭೇಟಿ ನೀಡಿದ್ದರು. ಸಾಂಪ್ರದಾಯಿಕ ಸಿಖ್‌ ಪೇಟವನ್ನು ಅವರು ಈ ವೇಳೆ ಧರಿಸಿದ್ದರು.

ಭಾರತ್‌ ಜೋಡೋ ಯಾತ್ರೆಯ ವೇಳೆ ಸಾಕಷ್ಟು ಸೆಲಿಬ್ರಿಟಿಗಳು ಕೂಡ ಭಾಗವಹಿಸಿದ್ದರು. ಬಾಕ್ಸರ್‌ ವಿಜೇಂದರ್‌ ಸಿಂಗ್‌, ಮಾಜಿ ಆರ್‌ಬಿಐ ಗವರ್ನರ್‌ ರಘುರಾಮ್‌ ರಾಜನ್‌, ಚಿತ್ರನಟಿಯರಾದ ರಿಯಾ ಸೆನ್‌, ಸ್ವರ ಭಾಸ್ಕರ್‌ ಸೇರಿದಂತೆ ಹಲವರು ಭಾಗವಹಿಸಿದ್ದರು.

ಶ್ರೀನಗರದಲ್ಲಿ ಸೋಮವಾರ ಭಾರತ್‌ ಜೋಡೋ ಯಾತ್ರೆ ಅಂತ್ಯಗೊಳ್ಳುವ ಮುನ್ನ ಅಕ್ಕ ಪ್ರಿಯಾಂಕಾ ವಾದ್ರಾ ಜೊತೆ ರಾಹುಲ್‌ ಗಾಂಧಿ ಹಿಮದಲ್ಲಿ ಆಟವಾಡಿದರು. ಬಳಿಕ ರಾಷ್ಟ್ರಧ್ವಜ ಹಾರಿಸಿ ಯಾತ್ರೆ ಸಮಾಪ್ತಿ ಮಾಡಲಾಯಿತು.

ನಾನು ಈ ಯಾತ್ರೆಯನ್ನು ನನಗಾಗಲಿ, ಕಾಂಗ್ರೆಸ್‌ ಪಕ್ಷಕ್ಕಾಗಲಿ ಮಾಡಿಲ್ಲ. ದೇಶದ ಜನರಿಗೋಸ್ಕರ ಈ ಯಾತ್ರೆ ಮಾಡಿದ್ದೇನೆ. ದೇಶದ ಆಧಾರಸ್ತಂಭವನ್ನು ಉರುಳಿಸುವ ಶಕ್ತಿಗಳ ವಿರುದ್ಧ ಒಟ್ಟಾಗಲು ಈ ಯಾತ್ರೆ ಮಾಡಿದ್ದೇನೆ ಎಂದು ಶ್ರೀನಗರದಲ್ಲಿನ ಸಮಾರೋಪ ಕಾರ್ಯಕ್ರಮದಲ್ಲಿ ರಾಹುಲ್‌ ಗಾಂಧಿ ಹೇಳಿದ್ದಾರೆ.

Latest Videos

click me!