ಚುನಾವಣಾ ಬಾಂಡ್‌: ದೇಣಿಗೆ ಕೊಟ್ಟ ಕಂಪೆನಿಗಳ ವಿರುದ್ಧ ತನಿಖೆ ಆರಂಭ, ತ.ನಾಡಿನ ಲಾಟರಿ ಕಿಂಗ್‌ ಅತಿದೊಡ್ಡ ದೇಣಿಗೆದಾರ!

First Published | Mar 16, 2024, 9:21 AM IST

ನವದೆಹಲಿ (ಮಾ.16): ಎಸ್‌ಬಿಐ ಬಿಡುಗಡೆ ಮಾಡಿರುವ ಚುನಾವಣಾ ಬಾಂಡ್‌ ವಿವರ ರಾಜಕೀಯ ಕದನಕ್ಕೆ ಕಾರಣವಾಗಿದೆ. ದೇಣಿಗೆ ನೀಡಿದ ಟಾಪ್‌ 30 ಸಂಸ್ಥೆಗಳ ಪೈಕಿ 15ರ ವಿರುದ್ಧ ಐಟಿ, ಇ.ಡಿ. ತನಿಖೆ ನಡೆಸುತ್ತಿರುವುದು, ಅತಿದೊಡ್ಡ ದೇಣಿಗೆದಾರ ಲಾಟರಿ ಕಿಂಗ್‌ಪಿನ್‌ ಆಗಿರುವುದು ಪ್ರತಿಪಕ್ಷಗಳಿಗೆ ಪ್ರಬಲ ಅಸ್ತ್ರವಾಗಿದೆ.

ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದ ಟಾಪ್‌ 30 ಕಂಪನಿಗಳ ಪೈಕಿ 15 ಕಂಪನಿಗಳ ವಿರುದ್ಧ ಜಾರಿ ನಿದೇಶನಾಲಯ, ಆದಾಯ ತೆರಿಗೆ ಇಲಾಖೆ ಇಲ್ಲವೆ ಸಿಬಿಐನಂಥ ಕೇಂದ್ರೀಯ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿದೆ ಎಂಬ ಅಚ್ಚರಿಯ ಬೆಳಕಿಗೆ ಬಂದಿದೆ. ಈ ಪೈಕಿ ಕೆಲವು ಪ್ರಕರಣಗಳಲ್ಲಿ ಕೇವಲ ದಾಳಿಯಾಗಿದೆ. ಇನ್ನು ಕೆಲವುದರಲ್ಲಿ ಕೇಸು ದಾಖಲಾಗಿದೆ, ಮತ್ತೆ ಕೆಲವು ಕಂಪನಿಗಳ ವಿರುದ್ಧ ಈಗಾಗಲೇ ತನಿಖೆ ಪೂರ್ಣಗೊಂಡು ವಿಚಾರಣೆ ಆರಂಭವಾಗಿದೆ. ಈ ನಡುವೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ತನಿಖಾ ಸಂಸ್ಥೆ ದಾಳಿ ಮತ್ತು ಚುನಾವಣಾ ಬಾಂಡ್‌ ಖರೀದಿಸುವ ಸಂಸ್ಥೆಗಳ ನಡುವಿನ ಸಂಪರ್ಕ ಊಹೆಗಳನ್ನು ಆಧರಿಸಿದೆ ಎಂದು ಹೇಳಿದ್ದಾರೆ.

ರದ್ದಾದ ಚುನಾವಣಾ ಬ್ಯಾಂಡ್ ಮೂಲಕ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದ 30 ಕಂಪನಿ ಪೈಕಿ ಫ್ಯೂಚರ್ ಗೇಮಿಂಗ್ ಮತ್ತು ಹೋಟೆಲ್ ಸರ್ವಿಸಸ್, ಮೇಘಾ ಇಂಜಿನಿಯರಿಂಗ್ ಮತ್ತು ಇನ್‌ಫ್ರಾಸ್ಟ್ರಕ್ಚರ್ ಲಿ., ಹಲ್ದಿಯಾ ಎನರ್ಜಿ ಲಿ., ವೇದಾಂತ ಲಿ., ಯಶೋದಾ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್, ಡಿಎಲ್‌ಎಫ್ ಕಮರ್ಷಿಯಲ್ ಡೆವಲಪರ್ಸ್ ಲಿ., ಜಿಂದಾಲ್ ಸ್ಟೀಲ್ ಮತ್ತು ಪವರ್ ಲಿ., ಚೆನೈ ಗ್ರೀನ್‌ವುಡ್ಸ್, ಡಾ ರೆಡ್ಡೀಸ್ ಲ್ಯಾಬೊರೇಟರೀಸ್ ಲಿ, ಐಎಫ್‌ಬಿ ಆಗ್ರೋ ಲಿ., ಎನ್‌ಸಿಸಿ ಲಿ., ಡಿವಿಎಸ್ ಲ್ಯಾಬೋರೇಟರಿ ಲಿ., ಯುನೈಟೆಡ್ ಫಾಸ್ಫರಸ್ ಇಂಡಿಯಾ ಲಿ., ಮತ್ತು ಅರಬಿಂದೋ ಫಾರ್ಮಾಗಳಲ್ಲಿ ಜಾರಿ ನಿರ್ದೇಶನಾಲಯ (ಇಡಿ), ಸಿಬಿಐ, ಆದಾಯ ತೆರಿಗೆ ಇಲಾಖೆಗಳು ತನಿಖೆ ನಡೆಸುತ್ತಿವೆ. ಕೆಲವು ಸಂಸ್ಥೆಗಳು ಆಸ್ತಿ ವಿವರವನ್ನು ಜಾರಿ ನಿರ್ದೇಶನಾಲಯಕ್ಕೆ ಸಲ್ಲಿಸಿವೆ.

Tap to resize

2019 ಏಪ್ರಿಲ್‌ ಮತ್ತು 2024ರ ಜನವರಿ ನಡುವೆ ಚುನಾವಣಾ ಬಾಂಡ್‌ಗಳ ಮೂಲಕ 22 ಪ್ರಾದೇಶಿಕ ಪಕ್ಷಗಳು ಒಟ್ಟು 5,221 ಕೋಟಿ ರು. ಹೆಚ್ಚು ದೇಣಿಗೆಗಳನ್ನು ಸಂಗ್ರಹಿಸಿವೆ. ವಿಶೇಷವೆಂದರೆ ಈ ಮೊತ್ತ ಇದೇ ಅವಧಿಯಲ್ಲಿ ಬಿಜೆಪಿಗೆ ನೀಡಲಾದ 6060.51 ಕೋಟಿ ರು.ಗಳಿಗಿಂತ ಕಡಿಮೆ. 4 ವರ್ಷಗಳ ಅವಧಿಯಲ್ಲಿ ಚುನಾವಣಾ ಬಾಂಡ್‌ಗಳ ಮೂಲಕ ಸಂಗ್ರಹವಾದ ಒಟ್ಟು 16,518 ಕೋಟಿ ರು. ಗಳಲ್ಲಿ ಬಿಜೆಪಿ 6060 ಕೋಟಿ ರು., ಕಾಂಗ್ರೆಸ್ 1421 ಕೋಟಿ ರು. ಮತ್ತು ಆಪ್‌ 65.45 ಕೋಟಿ ರು. ದೇಣಿಗೆಯನ್ನು ಸಂಗ್ರಹಿಸಿವೆ. 22 ಪ್ರಾದೇಶಿಕ ಪಕ್ಷಗಳಲ್ಲಿ, ಟಿಎಂಸಿ 1,609 ಕೋಟಿ ರು., ಭಾರತ ರಾಷ್ಟ್ರ ಸಮಿತಿ ಪಕ್ಷ 1,214 ಕೋಟಿ ರು., ಬಿಜೆಡಿ 775 ಕೋಟಿ ರು., ಡಿಎಂಕೆ 639 ಕೋಟಿ ರು. ಹಾಗೂ ವೈಎಸ್‌ಆರ್‌ಸಿಪಿ ಪಕ್ಷ 337 ಕೋಟಿ ರು.ಗಳನ್ನು ಸಂಗ್ರಹಿಸಿದೆ.

ತಮಿಳುನಾಡಿನ ಲಾಟರಿ ಕಿಂಗ್ ಎಂದೇ ಕುಖ್ಯಾತಿ ಹೊಂದಿರುವ ಸ್ಯಾಂಟಿಗೋ ಮಾರ್ಟಿನ್‌ ಒಡೆತನದ ಫ್ಯೂಚರ್‌ ಗೇಮಿಂಗ್‌ ಅ್ಯಂಡ್‌ ಹೋಟೆಲ್‌ ಸರ್ವೀಸಸ್ ಪ್ರೈವೆಟ್‌ ಲಿಮಿಟೆಡ್‌, ವಿವಿಧ ರಾಜಕೀಯ ಪಕ್ಷಗಳಿಗೆ ಅತಿ ಹೆಚ್ಚಿನ ದೇಣಿಗೆ ನೀಡಿದ ಸಂಸ್ಥೆಯಾಗಿ ಹೊರಹೊಮ್ಮಿದೆ. ಚುನಾವಣಾ ಆಯೋಗಕ್ಕೆ ಎಸ್‌ಬಿಐ ಸಲ್ಲಿಸಿರುವ ಮಾಹಿತಿಯಲ್ಲಿ ಈ ಅಂಶವಿದೆ. ತಮಿಳುನಾಡಿನಲ್ಲಿ ಲಾಟರಿ ಕಿಂಗ್‌ ಎಂದೇ ಕುಖ್ಯಾತನಾಗಿರುವ ಸ್ಯಾಂಟಿಗೋ ಮಾರ್ಟಿನ್‌ 1988ರಲ್ಲಿ ಮ್ಯಾನ್ಮಾರ್‌ನಿಂದ ತಮಿಳುನಾಡಿಗೆ ಬಂದು ಲಾಟರಿ ವ್ಯವಹಾರ ಆರಂಭಿಸಿದ್ದ. ಕ್ರಮೇಣ ಅದನ್ನು ಕರ್ನಾಟಕ, ಕೇರಳ ಹಾಗೂ ಈಶಾನ್ಯ ರಾಜ್ಯಗಳಿಗೆ ವಿಸ್ತರಿಸಿದ್ದ. 2003ರಲ್ಲಿ ತಮಿಳುನಾಡು ಸರ್ಕಾರ ಲಾಟರಿ ನಿಷೇಧಿಸಿದರೂ ಅಕ್ರಮವಾಗಿ ತನ್ನ ಚಟುವಟಿಕೆ ಮುಂದುವರಿಸಿ ಮಾರ್ಟಿನ್‌ ಲಾಟರಿ ಎಂಬ ಹೆಸರಿನಲ್ಲಿ ಕುಖ್ಯಾತನಾಗಿದ್ದ. ಬಳಿಕ ತನ್ನ ಲಾಟರಿ ಜಾಲವನ್ನು ವ್ಯವಹಾರವನ್ನು ಭೂತಾನ್‌, ನೇಪಾಳಕ್ಕೂ ವಿಸ್ತರಿಸಿ, ಕೆಲ ಸಮಯದಿಂದ ಕ್ಯಾಸಿನೋಗಳನ್ನೂ ನಡೆಸುತ್ತಿದ್ದಾನೆ.

 ಸ್ಯಾಂಟಿಗೋ ಮಾರ್ಟಿನ್‌ ಒಡೆತನದ ಫ್ಯೂಚರ್‌ ಗೇಮಿಂಗ್‌ ಕಂಪನಿ ಸರ್ಕಾರದ ಲಾಟರಿ ಟಿಕೆಟ್‌ಗಳನ್ನು ಅನಧಿಕೃತವಾಗಿ ಪ್ರಿಂಟ್‌ ಮಾಡಿ ನಷ್ಟ ಉಂಟು ಮಾಡುತ್ತಿದ್ದುದರ ಕುರಿತು ಲಾಟರಿ ವ್ಯವಹಾರ ನಡೆಸುತ್ತಿದ್ದ ಎಂಟು ರಾಜ್ಯಗಳಿಗೆ ಕೇಂದ್ರ ಗೃಹ ಸಚಿವಾಲಯ 2019ರಲ್ಲಿ ಎಚ್ಚರಿಸಿತ್ತು. ಅಚ್ಚರಿ ಎಂದರೆ ಈ ಎಚ್ಚರಿಕೆ ಬಳಿಕ ಆತ ಭಾರೀ ಪ್ರಮಾಣದಲ್ಲಿ ಬಾಂಡ್‌ ಖರೀದಿ ಮಾಡಿ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದ್ದಾನೆ. ಹೀಗಾಗಿ ಆತ ತನಿಖೆಯಿಂದ ತಪ್ಪಿಸಿಕೊಳ್ಳಲು ದೇಣಿಗೆ ನೀಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಇ.ಡಿ. ಈತನ ಸಲ್ಲಿಸಿರುವ ಚಾರ್ಜ್‌ಶೀಟ್‌ನಂತೆ ಈತ ಸಿಕ್ಕಿಂ ಸರ್ಕಾರಕ್ಕೆ ಲಾಟರಿ ಟಿಕೆಟ್‌ ಮಾರಾಟ ಮಾಡುವ ಮೂಲಕ 910 ಕೋಟಿ ರು. ನಷ್ಟ ಉಂಟು ಮಾಡಿದ್ದ.

ರಾಜಕೀಯ ಪಕ್ಷಗಳಿಗೆ ಅತಿ ಹೆಚ್ಚಿನ ದೇಣಿಗೆ ನೀಡಿದ ಕಂಪನಿಗಳ ಪೈಕಿ 3ನೇ ಸ್ಥಾನದಲ್ಲಿರುವ ಕ್ವಿಕ್‌ ಸಪ್ಲೈ ಚೈನ್‌ ಪ್ರೈವೇಟ್‌ ಲಿ. ಕುರಿತು ಸಾಕಷ್ಟು ಚರ್ಚೆಗಳು ನಡೆದಿದ್ದವು. ಆದರೆ ಇದೀಗ ಈ ಕಂಪನಿಗೆ ರಿಲಯನ್ ಇಂಡಸ್ಟ್ರೀಸ್‌ನ ನಂಟಿರುವ ಸುದ್ದಿ ಹೊರಬಿದ್ದಿದೆ. ಕ್ವಿಕ್‌ ಸಪ್ಲೈ ಚೈನ್‌ 2000ರಲ್ಲಿ ಸ್ಥಾಪನೆಯಾಗಿದ್ದು, ಉಗ್ರಾಣಗಳನ್ನು ನಿರ್ಮಿಸಿಕೊಡುವಲ್ಲಿ ಖ್ಯಾತಿ ಗಳಿಸಿದೆ. ಇದರ ನಿರ್ದೇಶಕರೆಲ್ಲರೂ ಸಹ ರಿಲಯನ್ಸ್‌ ಸಮೂಹದಲ್ಲಿ ಬಹುತೇಕ ಕಂಪನಿಗಳ ಆಡಳಿತ ಮಂಡಳಿಯ ನಿರ್ದೇಶಕರೇ ಅಗಿದ್ದಾರೆ. ಆದರೆ ರಿಲಯನ್ಸ್‌ ವಕ್ತಾರರು ಸ್ಪಷ್ಟನೆ ನೀಡಿದ್ದು, ಕ್ವಿಕ್‌ ಸಪ್ಲೈ ಚೈನ್‌ ರಿಲಯನ್ಸ್‌ನ ಅಂಗಸಂಸ್ಥೆಯಲ್ಲ ಎಂದು ತಿಳಿಸಿದ್ದಾರೆ.

ಐಟಿ, ಇ.ಡಿ. ದಾಳಿಗೆ ಒಳಗಾದವರೇ ಬಿಜೆಪಿಗೆ ಚುನಾವಣಾ ಬಾಂಡ್‌ ಮೂಲಕ ದೇಣಿಗೆ ನೀಡಿದ್ದಾರೆ. ಇ.ಡಿ. ದಾಳಿ ನಡೆಸಿ ಬಿಜೆಪಿಗರು ಹೆಚ್ಚಿನ ದೇಣಿಗೆಗೆ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆಗ್ರಹಿಸಿದ್ದಾರೆ.
 

 ಚುನಾವಣಾ ಬಾಂಡ್ ಯೋಜನೆ ಭಾರತದ ಅತಿದೊಡ್ಡ ಹಗರಣವಾಗಿದ್ದು, ಚುನಾವಣಾ ಆಯೋಗ (ಇಸಿ) ಹಂಚಿಕೊಂಡ ಮಾಹಿತಿ ಅಪೂರ್ಣವಾಗಿರುವುದರಿಂದ ಜನತಾ ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ. ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಾಡಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ವಿದ್ಯುನ್ಮಾನ ಮತಯಂತ್ರ (ಇವಿಎಂ) ವಿರೋಧಿಯಲ್ಲ, ಆದರೆ ಮತವನ್ನು ಸರಿಯಾಗಿ ಚಲಾಯಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಮತದಾನ ಪ್ರಕ್ರಿಯೆಯಲ್ಲಿ ಮತದಾರ ಪರಿಶೀಲಿಸಬಹುದಾದ ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ) ಬಳಕೆಯನ್ನು ಬಯಸುತ್ತದೆ ಎಂದರು.

ಚುನಾವಣಾ ಬಾಂಡ್ ಯೋಜನೆ ವಿಶ್ವದ ಅತಿದೊಡ್ಡ ಸುಲಿಗೆ ದಂಧೆಯಾಗಿದೆ ಮತ್ತು ಇದು ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಕೂಸಾಗಿದೆ. ಚುನಾವಣಾ ಬಾಂಡ್ ಮೂಲಕ ಪಡೆದ ಹಣವನ್ನು ಶಿವಸೇನೆ, ಎನ್‌ಸಿಪಿಯಂತಹ ಪಕ್ಷ ವಿಭಜಿಸಲು, ಸರ್ಕಾರ ಉರುಳಿಸಲು ಬಳಸಲಾಗಿದೆ. ಚುನಾವಣಾ ಬಾಂಡ್‌ ಕಾರ್ಪೊರೇಟ್ ವಲಯಕ್ಕೆ ಬೆದರಿಕೆ ಹಾಕುವ ಉದ್ದೇಶ ಹೊಂದಿದೆ. ಈ ಕುರಿತು ತನಿಖೆಯಾಗಬೇಕು ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

ಚುನಾವಣಾ ಬಾಂಡ್‌ ಕೊಟ್ಟು ಪಡೆಯುವ ಸ್ಕೀಂ ಆಗಿದ್ದು, ಕಂಪನಿಗಳು ಭವಿಷ್ಯದಲ್ಲಿ ತಮಗೆ ಲಾಭವಾಗುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳಿಗೆ ಹಣ ನೀಡುವ ಸಲುವಾಗಿ ಚುನಾವಣಾ ಬಾಂಡ್‌ ಖರೀದಿಸುತ್ತವೆ. ನಾನೂ ತಿನ್ನುವುದಿಲ್ಲ, ತಿನ್ನುವವರಿಗೂ ಬಿಡುವುದಿಲ್ಲ ಎನ್ನುವ ಪ್ರಧಾನಿ ಮೋದಿಯವರ ಬಿಜೆಪಿಯೇ 6 ಸಾವಿರ ಕೋಟಿ ರು. ಚುನಾವಣಾ ಬಾಂಡ್‌ ದೇಣಿಗೆ ಸ್ವೀಕರಿಸುವ ಮೂಲಕ ಅವರು ಮಹಾ ಸುಳ್ಳುಗಾರ ಎಂಬುದನ್ನು ಸಾಬೀತು ಮಾಡಿದ್ದಾರೆ. -ಅಸಾದುದ್ದೀನ್‌ ಒವೈಸಿ, ಎಂಐಎಂ ಮುಖಂಡ

ಚುನಾವಣಾ ಬಾಂಡ್‌ಗಳಲ್ಲಿ ದೇಣಿಗೆಯಾಗಿ ಬಿಜೆಪಿಗೆ 6 ಸಾವಿರ ಕೋಟಿ ರು. ಸಂದಾಯವಾಗಿದ್ದರೆ ಪ್ರತಿಪಕ್ಷಗಳಿಗೆ ಬರೋಬ್ಬರಿ 14 ಸಾವಿರ ಕೋಟಿ ರು. ಸಂದಾಯವಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಗೆ ಚುನಾವಣಾ ಬಾಂಡ್‌ ಸ್ಕೀಂನಿಂದ ಗರಿಷ್ಠ ಪ್ರಮಾಣದ ಲಾಭವಾಗಿದೆ ಎಂದು ಸುಳ್ಳು. ಪ್ರತಿಪಕ್ಷಗಳಿಗೂ ಸಹ 14 ಸಾವಿರ ಕೋಟಿ ರು. ಮೌಲ್ಯದ ಹಣ ಸಂದಾಯವಾಗಿರುವ ಕಾರಣ ನಮ್ಮ(ಬಿಜೆಪಿ) ಮೇಲೆ ಅವರಿಗೆ ಟೀಕೆ ಮಾಡುವ ಯಾವುದೇ ನೈತಿಕ ಹಕ್ಕು ಇಲ್ಲ. -ಅಮಿತ್‌ ಶಾ, ಕೇಂದ್ರ ಗೃಹ ಸಚಿವ 

Latest Videos

click me!