ಭಾರತದ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್, 2014ರಲ್ಲಿ ಅಧಿಕಾರದಿಂದ ಕೆಳಗಿಳಿದ ವೇಳೆ, ತಮ್ಮ ನಾಯಕತ್ವ ದುರ್ಬಲವಾಗಿರಲಿಲ್ಲ ಹಾಗೂ ಇತಿಹಾಸ ನನ್ನ ಮೇಲೆ ದಯೆ ತೋರಲಿದೆ ಎಂದು ಹೇಳುವ ಮೂಲಕ ತಮ್ಮ ಟೀಕಾಕಾರರಿಗೆ ನಯವಾಗಿಯೇ ತಿರುಗೇಟು ನೀಡಿದ್ದರು. 2014ರ ಜನವರಿಯಲ್ಲಿ ಮಾಧ್ಯಮದೊಂದಿಗಿನ ಕೊನೆಯ ಸಂಭಾಷಣೆಯಲ್ಲಿ ತಮ್ಮ ನಾಯಕತ್ವದ ಮೇಲೆ ಎದ್ದ ಪ್ರಶ್ನೆಗಳಿಗೆ ಉತ್ತರಿಸಿದರು.
'ನಾನು ದುರ್ಬಲ ಪ್ರಧಾನಿ ಆಗಿದ್ದೆ ಎಂದು ನಾನು ನಂಬುವುದಿಲ್ಲ. ಈ ವಿಷಯದಲ್ಲಿ ಮಾಧ್ಯಮ ಹಾಗೂ ಸಂಸತ್ತಿನಲ್ಲಿರುವ ವಿಪಕ್ಷಗಳಿಗಿಂತ ಇತಿಹಾಸ ನನ್ನ ಮೇಲೆ ದಯೆ ತೋರಲಿದೆ. ರಾಜಕೀಯ ಪರಿಸ್ಥಿತಿಗಳನುಸಾರ ನಾನು ಕೈಲಾದಷ್ಟನ್ನು ಸಮರ್ಥವಾಗಿ ಮಾಡಿದ್ದೇನೆ. ಇದನ್ನು ನಿರ್ಧರಿಸುವುದು ಇತಿಹಾಸದ ಕೆಲಸ ಎಂದಿದ್ದರು.
ಪಂಜಾಬ್ ವಿವಿಯಲ್ಲಿ ಕಳೆದ ಕ್ಷಣ ಜೀವನದ ಸಂತಸದ ಸಮಯ: ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಯಾಗಿದ್ದರು. ಅಲ್ಲಿನ ಉಪನ್ಯಾಸಕರ ಪ್ರೋತ್ಸಾಹದಿಂದ ಕೇಂಬ್ರಿಡ್ಜ್ ವಿವಿಗೆ ಉನ್ನತ ವಿದ್ಯಾಭ್ಯಾಸಕ್ಕೆ ಕೂಡ ತೆರಳಿದ್ದರು. ಪಂಜಾಬ್ ವಿವಿಯಲ್ಲಿ ಕಳೆದ ಕ್ಷಣವು ತಮ್ಮ ಜೀವನದ ಅತ್ಯಂತ ಸಂತಸದ ಸಮಯ ಎಂದು ಸಿಂಗ್ ಬಣ್ಣಿಸಿದ್ದರು. ಸ್ವಾತಂತ್ರ್ಯ ನಂತರದ ವಿಶ್ವವಿದ್ಯಾನಿಲಯದ ಅತ್ಯಂತ ಹಳೆಯ , ಪ್ರತಿಷ್ಠಿತ ವಿದ್ಯಾರ್ಥಿಯಾಗಿದ್ದ ಸಿಂಗ್ ಅವರಿಗೆ ಗೌರವಿಸಲಾಗಿತ್ತು. ಈ ವೇಳೆ ಸಿಂಗ್ ಕಾಲೇಜಿನಲ್ಲಿ ತಮ್ಮ ದಿನಗಳನ್ನು ನೆನಪಿಸಿಕೊಂಡಿದ್ದರು. ಆ ಬಳಿಕ ವಿವಿಯಲ್ಲಿ ಸಿಂಗ್ ಪ್ರಾಧ್ಯಾಪಕರಾಗಿಯೂ ಕೆಲಸ ಮಾಡಿದ್ದರು.
ಇತಿಹಾಸದ ದಯೆಯ ಮಾತು ನಿಜವಾಗಿತ್ತು: ನನನ್ನು ನಾನು ದುರ್ಬಲ ಎಂದು ನಂಬುವುದಿಲ್ಲ. ಇತಿಹಾಸ ನನ್ನ ಮೇಲೆ ದಯ ತೋರಲಿದೆ ಎಂಬ ಎಂಬ ಮಾಜಿ ಪ್ರಧಾನಿ ಮನಮೋಹನ್ ಅವರ ಮಾತುಗಳು ಅವರ ಜೀವಿತಾವಧಿಯಲ್ಲೇ ನಿಜವಾಗಿತ್ತು. 10 ವರ್ಷಗಳ ಕಾಲ ದೇಶವನ್ನು ಮುನ್ನಡೆಸಿದ್ದ ಅವಧಿಯಲ್ಲಿ ಅವರು ಕೈಗೊಂಡ ಕ್ರಮಗಳು, ಜಾರಿಗೊಳಿಸಿದ ನೀತಿಗಳು ದೇಶದ ಪಾಲಿಗೆ ಎಷ್ಟು ಅನಿವಾರ್ಯ ಮತ್ತು ಅಮೂಲ್ಯವಾಗಿತ್ತು ಎಂಬುದನ್ನು ಅವರ ನಂತರ ಅಧಿಕಾರಕ್ಕೆ ಬಂದ ಪಕ್ಷಗಳು, ಸರ್ಕಾರಗಳು ಕೂಡಾ ಒಪ್ಪಿದ್ದವು.
ಸಿಂಗ್ ಅವರು ವಿತ್ತ ಸಚಿವರ ಹುದ್ದೆಗೇರಿದಾಗ, ದೇಶ ವಿತ್ತೀಯ ಕೊರತೆ, ಪಾವತಿಯ ಸಮತೋಲನ ಕೊರತೆ, ವಿದೇಶಿ ವಿನಿಮಯ ಮೀಸಲು ಕೊರತೆಗಳಂತಹ ಸಮಸ್ಯೆಗಳಲ್ಲಿ ಮುಳುಗಿತ್ತು. ಆದರೆ, ತಾವು ಅಧಿಕಾರದಲ್ಲಿದ್ದ 1991-1996 ಅವಧಿಯಲ್ಲಿ ಅವರು ಸಾರ್ವಜನಿಕ ಉದ್ಯ ಮಗಳ ಖಾಸಗೀಕರಣ, ಉದಾರೀಕರಣದಂತಹ ಕಾರ್ಯಕ್ರಮಗಳನ್ನು ಪರಿಚಯಿಸಿದರು. ಇದರಿಂದ ದೇಶ ಆರ್ಥಿಕವಾಗಿ ಚೇತರಿಕೆ ಕಂಡಿತ್ತು. ಅದರ ಪರಿಣಾಮ ಮತ್ತೆಂದೂ ದೇಶ ಆರ್ಥಿಕವಾಗಿ ಹಿನ್ನಡೆ ಅನುಭವಿಸಲಿಲ್ಲ.
ಅವರು ಅಂದು ಹಾಕಿದ ಅಡಿಪಾಯದ ಪರಿಣಾಮ ಭಾರತ ವಿಶ್ವದ ಅತಿವೇಗದ ಆರ್ಥಿಕತೆಯಾಗಿ ಬೆಳವಣಿಗೆ ಹೊಂದುವುದು ಸಾಧ್ಯವಾಯಿತು. ಸಿಂಗ್ ಭಾರತದಲ್ಲಿ ಮಾತ್ರವಲ್ಲದೇ ಜಾಗತಿಕವಾಗಿಯೂ ಗೌರವಕ್ಕೆ ಪಾತ್ರರಾಗಿದ್ದರು. ಇದಕ್ಕೆ ಉದಾಹರಣೆಯೆಂದರೆ, 'ಸಿಂಗ್‌ರೊಂದಿಗೆ ಕೆಲಸ ಮಾಡುವುದು ನನಗಿಷ್ಟ. ನಾನು ನನ್ನ ಜೀವನದಲ್ಲಿ ಕೆಲವೇ ಕೆಲವರನ್ನು ಮೆಚ್ಚಿರುವುದು' ಎಂಬ ಅಮೆರಿಕ ಅಧ್ಯಕ್ಷರಾಗಿದ್ದ ಬರಾಕ್ ಒಬಾಮಾರ ಮಾತು.