ಆಧುನಿಕ ಭಾರತದ ಶಿಲ್ಪಿ ಮನಮೋಹನ್‌ ಸಿಂಗ್‌ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್‌ ಪಡೆದಿದ್ದರು!

First Published | Dec 27, 2024, 7:09 AM IST

ಆರ್ಥಿಕ ತಜ್ಞ, ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಉದಾರೀಕರಣ ನೀತಿಯಿಂದಾಗಿ ಭಾರತ ಭಾರೀ ಪ್ರಮಾಣದಲ್ಲಿ ಆರ್ಥಿಕ ಪ್ರಗತಿ ಸಾಧಿಸಿದೆ. ಇದರ ಫಲವನ್ನು ನಾವು ಇಂದು ಅನುಭವಿಸುತ್ತಿದ್ದೇವೆ. ಉದಾರೀಕರಣಕ್ಕೆ ತೆರೆದುಕೊಳ್ಳದಿದ್ದರೆ ಭಾರತ ಇಂದು ಟಾಪ್‌ 5 ಆರ್ಥಿಕತೆಯ ರಾಷ್ಟ್ರಗಳ ಪಟ್ಟಿಯಲ್ಲಿ ಸೇರಲು ಸಾಧ್ಯವಾಗುತ್ತಿರಲಿಲ್ಲ. ಕನ್ನಡಪ್ರಭ ತನ್ನ ಮಾಸ್ಟ್‌ಹೆಡ್‌ನ್ನು ಕೆಳಗೆ ಇಳಿಸುವ ಮೂಲಕ ಮನಮೋಹನ್‌ ಸಿಂಗ್‌ ಅವರಿಗೆ ಗೌರವ ಸೂಚಿಸಿದೆ.

ಆಧುನಿಕ ಭಾರತದ ಕೀರ್ತಿ ಪತಾಕೆಯನ್ನು ಜಗದೆತ್ತರಕ್ಕೆ ಏರಿಸಿದ್ದ ಆರ್ಥಿಕ ತಜ್ಞ, ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ (92) ಗುರುವಾರ ರಾತ್ರಿ ಇಲ್ಲಿ ನಿಧನರಾದರು. ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸಿಂಗ್‌ ಅವರಿಗೆ ಗುರುವಾರ ಸಂಜೆ ಉಸಿರಾಟದ ಸಮಸ್ಯೆ ಕಾಣಿಸಿ, ಪ್ರಜ್ಞೆ ಕಳೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ದೆಹಲಿಯ ಏಮ್ಸ್‌ಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ರಾತ್ರಿ 9.50ರ ವೇಳೆಗೆ ಅವರು ಕೊನೆಯುಸಿರೆಳೆದಿದ್ದಾರೆ. ಸಿಂಗ್‌, ಪತ್ನಿ ಮತ್ತು ಮೂವರು ಮಕ್ಕಳನ್ನು ಅಗಲಿದ್ದಾರೆ.

ಮಾಜಿ ಪ್ರಧಾನಿ ಸಿಂಗ್‌ ನಿಧನಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ನಾಯಕರಾದ ಸೋನಿಯಾ, ರಾಹುಲ್‌, ಪ್ರಿಯಾಂಕಾ ಆದಿಯಾಗಿ ಗಣ್ಯರು ಕಂಬನಿ ಮಿಡಿದಿದ್ದಾರೆ. ಹಾಲಿ ಪಾಕಿಸ್ತಾನದ ಭಾಗವಾಗಿರುವ ಪಂಜಾಬ್‌ ಪ್ರಾಂತ್ಯದ ಗಾಹ್‌ನಲ್ಲಿ 1932ರ ಸೆ.26ರಂದು ಮನಮೋಹನ್‌ ಸಿಂಗ್‌ ಜನಿಸಿದ್ದರು. 1947ರಲ್ಲಿ ದೇಶ ವಿಭಜನೆ ವೇಳೆ ಮನಮೋಹನ್‌ ಕುಟುಂಬ ಭಾರತಕ್ಕೆ ವಲಸೆ ಬಂದಿತ್ತು.

Tap to resize

ಭಾರತದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪೂರೈಸಿದ್ದ ಸಿಂಗ್‌ ಬಳಿಕ ಆಕ್ಸ್‌ಫಡ್‌ ವಿವಿಯಲ್ಲಿ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್‌ ಪಡೆದು ಭಾರತಕ್ಕೆ ಮರಳಿದ್ದರು. 1966-69ರ ಅವಧಿಯಲ್ಲಿ ವಿಶ್ವಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿದ್ದ ಸಿಂಗ್‌, ಬಳಿಕ ಕೇಂದ್ರ ವಾಣಿಜ್ಯ ಮತ್ತ ಕೈಗಾರಿಕಾ ಸಚಿವಾಲಯದ ಸಲಹೆಗಾರರಾಗಿ ನೇಮಕಗೊಂಡಿದ್ದರು. 1970- 80ರ ಅವಧಿಯಲ್ಲಿ ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿ, ಆರ್‌ಬಿಐ ಗವರ್ನರ್‌ ಆಗಿ, ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಆಧುನಿಕ ಭಾರತದ ಶಿಲ್ಪಿ: ಈ ನಡುವೆ 1991ರಲ್ಲಿ ಭಾರತ ತೀವ್ರ ಆರ್ಥಿಕ ಸಂಕಷ್ಟ ಎದುರಿಸಿದ ಹೊತ್ತಿನಲ್ಲಿ ಅಂದಿನ ಪ್ರಧಾನಿ ನರಸಿಂಹ್‌ ರಾವ್‌, ಮನಮೋಹನ್‌ ಸಿಂಗ್‌ ಅವರನ್ನು ತಮ್ಮ ಸಂಪುಟದಲ್ಲಿ ಹಣಕಾಸು ಸಚಿವರಾಗಿ ನೇಮಿಸಿದ್ದರು. ಈ ಹುದ್ದೆಯಲ್ಲಿದ್ದ ವೇಳೆ ಸ್ವಪಕ್ಷೀಯ ಮತ್ತು ವಿಪಕ್ಷಗಳ ತೀವ್ರ ವಿರೋಧದ ಹೊರತಾಗಿಯೂ ಸಿಂಗ್‌ ಮತ್ತು ರಾವ್‌ ಜೋಡಿ ದೇಶದ ಆರ್ಥಿಕತೆಗೆ ಹೊಸ ರೂಪ ನೀಡಿತ್ತು. ಈ ಜೋಡಿ ದೇಶದ ಆರ್ಥಿಕತೆಯನ್ನು ಉದಾರಿಕರಣಕ್ಕೆ ತೆರೆದಿತ್ತು. ಪರಿಣಾಮ ಭಾರತ ಆರ್ಥಿಕ ದುಸ್ಥಿತಿಯಿಂದ ಹೊರಬಂದಿತ್ತು.

ಪ್ರಧಾನಿ ಹುದ್ದೆ: 2004ರಲ್ಲಿ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ಬಹುಮತದೊಂದಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗ, ಕಾಂಗ್ರೆಸ್‌ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ ತಮಗೆ ಒಲಿದು ಬಂದಿದ್ದ ಪ್ರಧಾನಿ ಹುದ್ದೆ ತಿರಸ್ಕರಿಸಿದರು. ಹೀಗಾಗಿ ಆ ಹುದ್ದೆಗೆ ಮನಮೋಹನ್‌ ಸಿಂಗ್ ಅವರನ್ನು ಆಯ್ಕೆ ಮಾಡಲಾಯಿತು.

ಮಹತ್ವದ ಯೋಜನೆ: ತಮ್ಮ ಮೊದಲ ಅವಧಿಯಲ್ಲೇ ಸಿಂಗ್‌ ಅವರ ಸರ್ಕಾರ, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್‌, ವಿಶಿಷ್ಠ ಗುರುತಿನ ಸಂಖ್ಯೆ ಪ್ರಾಧಿಕಾರ, ಗ್ರಾಮೀನ ಉದ್ಯೋಗ ಖಾತರಿ ಜಾರಿಗೆ ತಂದಿತು. 2008ರಲ್ಲಿ ಮಾಹಿತಿ ಹಕ್ಕು ಕಾಯ್ದೆ, ಅಮೆರಿಕದೊಂದಿಗೆ ನಾಗರಿಕ ಪರಮಾಣು ಒಪ್ಪಂದಕ್ಕೆ ಸಹಿ ಹಾಕಿದ್ದು ಸರ್ಕಾರದ ಸಾಧನೆಯಾಗಿತ್ತು. 2009ರಲ್ಲಿ ಯುಪಿಎ ಸರ್ಕಾರ ಅಧಿಕಾರಕ್ಕೆ ಮರಳಿದಾಗಲೂ ಸಿಂಗ್‌ ಮರಳಿ ಪ್ರಧಾನಿಯಾಗಿ ಆಯ್ಕೆಯಾದರು.

Latest Videos

click me!