ಗಡಿಯಲ್ಲಿ ದೀಪಾವಳಿ ಆಚರಣೆ, ಚೀನಾ ಸೈನಿಕರಿಗೆ ಸಿಹಿ ಹಂಚಿದ ಭಾರತೀಯ ಯೋಧರು!

First Published | Oct 31, 2024, 3:06 PM IST

ತೀವ್ರಗೊಂಡಿದ್ದ ಭಾರತ ಹಾಗೂ ಚೀನಾ ನಡುವಿನ ಗಡಿ ಬಿಕ್ಕಟ್ಟು 4 ವರ್ಷದ ಬಳಿಕ ತಿಳಿಗೊಂಡಿದೆ. ಹೆಚ್ಚುವರಿ ಸೇನಾ ತುಕಡಿಗಳನ್ನು ಉಭಯ ದೇಶಗಳು ಹಿಂಪಡೆದ ಬೆನ್ನಲ್ಲೇ ಇದೀಗ ಇಂಡೋ-ಚೀನಾ ಗಡಿಯಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಚೀನಾ ಯೋಧರಿಗೆ ಭಾರತ ದೀಪಾವಳಿ ಸಿಹಿ ಹಂಚಿದೆ.

 ಭಾರತ ಹಾಗೂ ಚೀನಾ ನಡುವಿನ 2020ರ ಗಲ್ವಾನ್ ಸಂಘರ್ಷದಿಂದ ಉಭಯ ದೇಶಗಳ ನಡುವಿನ ಸಂಬಂಧ ಹಳಸಿತ್ತು. ಈ ಬಾರಿ ಭಾರತದ ನಿಲುವು ಹಾಗೂ ಪ್ರತಿರೋಧಕ್ಕೆ ಚೀನಾ ಬೆಚ್ಚಿ ಬಿದ್ದಿತ್ತು. ಕಳೆದ ನಾಲ್ಕು ವರ್ಷಗಳಿಂದ ಸತತ ಮಾತುಕತೆ ನಡೆಸಿದ ಭಾರತ ಗಡಿ ಬಿಕ್ಕಟ್ಟನ್ನು ಪರಿಹರಿಸಿದೆ. ಇದೀಗ ಉಭಯ ದೇಶಗಳು ಗಡಿಯಲ್ಲಿ ನಿಯೋಜಿಸಿದ ಹೆಚ್ಚುವರಿ ಸೇನಾ ತುಕಡಿಯನ್ನು ಹಿಂಪಡೆದುಕೊಂಡಿದೆ. ಇಷ್ಟೇ ಅಲ್ಲ ಗಡಿಯಲ್ಲಿ ಪ್ಯಾಟ್ರೋಲಿಂಗ್ ನಡೆಸಲು ಅನುಮತಿಸಿದೆ. ಇದರ ಬೆನ್ನಲ್ಲೇ ಗಡಿಯಲ್ಲಿ ಭಾರತ ಚೀನಾ ದೀಪಾವಳಿ ಹಬ್ಬ ಆಚರಿಸಿದೆ. ಭಾರತೀಯ ಯೋಧರು, ದೀಪಾವಳಿ ಹಬ್ಬದ ಸಿಹಿಯನ್ನು ಚೀನಾ ಸೈನಿಕರಿಗೆ ಹಂಚಿದ್ದಾರೆ.

ಈ ಸಾಂಪ್ರದಾಯಿಕ ಪದ್ಧತಿಯು ಐದು ಗಡಿ ಸಿಬ್ಬಂದಿ ಸಭೆ (BPM) ಪಾಯಿಂಟ್‌ಗಳಲ್ಲಿ ನಡೆದಿದೆ ಎಂದು ಸೇನಾ ಮೂಲಗಳು ದೃಢಪಡಿಸಿವೆ. 5 ಸೇನಾ ಪಾಯಿಂಟ್ಸ್‌ಗಳಲ್ಲಿ ಭಾರತೀಯ ಸೇನಾ ದೀಪಾವಳಿ ಸಿಹಿಯನ್ನು ಚೀನಾ ಸೈನಿಕರಿಗೆ ಹಂಚಿದೆ. 

Tap to resize

ಚಿತ್ರ ಕೃಪೆ: ಭಾರತೀಯ ಸೇನೆ

ದೇಮ್ಚೋಕ್ ಮತ್ತು ಡೆಪ್ಸಾಂಗ್ ಬಯಲು ಪ್ರದೇಶಗಳಲ್ಲಿನ ಎರಡು ವಿವಾದಿತ ಸ್ಥಳಗಳಲ್ಲಿ ಎರಡೂ ರಾಷ್ಟ್ರಗಳು ಡಿಸ್‌ಎಂಗೇಜ್‌ಮೆಂಟ್ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಕೇವಲ ಒಂದು ದಿನದ ನಂತರ ಸಿಹಿ ವಿನಿಮಯ ನಡೆಯಿತು.2024 ರ ದೀಪಾವಳಿ ಹಬ್ಬದಂದು ಗುರುವಾರ ಹಾಟ್ ಸ್ಪ್ರಿಂಗ್ಸ್, ಕೆಕೆ ಪಾಸ್, ದೌಲತ್ ಬೇಗ್ ಓಲ್ಡಿ, ಕೊಂಗ್ಕ್ಲಾ ಮತ್ತು ಚುಶುಲ್ ಮೊಲ್ಡೊದಲ್ಲಿ ಸಿಹಿ ವಿನಿಮಯ ನಡೆಯಿತು. ಇದೇ ವೇಳೆ ಭಾರತೀಯ ಯೋಧರು ಚೀನಾಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದೆ. 

ಈ ಡಿಸ್‌ಎಂಗೇಜ್‌ಮೆಂಟ್ 2020 ರಿಂದ ಮುಂದುವರಿದಿರುವ ಉದ್ವಿಗ್ನತೆಯನ್ನು ಪರಿಹರಿಸುವಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ. ವಿವಾದಿತ ಗಡಿಯಲ್ಲಿನ ಉದ್ವಿಗ್ನತೆಯನ್ನು ಕಡಿಮೆ ಮಾಡುವ ನಿರ್ಣಾಯಕ ಕ್ರಮವೆಂದು ಪರಿಗಣಿಸಲಾಗಿದೆ ಮತ್ತು ಪ್ರದೇಶದಲ್ಲಿ ನಿಯಮಿತ ಗಸ್ತುಗಳನ್ನು ಪುನರಾರಂಭಿಸಲು ಅನುವು ಮಾಡಿಕೊಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ಚಿತ್ರ ಕೃಪೆ: ಭಾರತೀಯ ಸೇನೆ

ಡಿಸ್‌ಎಂಗೇಜ್‌ಮೆಂಟ್ ಪ್ರಕ್ರಿಯೆಯು ಬುಧವಾರ ಪೂರ್ಣಗೊಂಡಿದೆ ಎಂದು ಸೇನಾ ಮೂಲವೊಂದು ವರದಿ ಮಾಡಿದೆ. ಡಿಸ್‌ಎಂಗೇಜ್‌ಮೆಂಟ್ ನಂತರದ ಪರಿಶೀಲನಾ ಪ್ರಯತ್ನಗಳು ಪ್ರಸ್ತುತ ನಡೆಯುತ್ತಿವೆ.ಭಾರತ ಮತ್ತು ಚೀನಾ ನಡುವೆ ಒಂದು ಪ್ರಮುಖ ಒಪ್ಪಂದ ಅಂತಿಮಗೊಂಡ ನಂತರ, ಎರಡೂ ರಾಷ್ಟ್ರಗಳು ಅಕ್ಟೋಬರ್ 2 ರಂದು ಪೂರ್ವ ಲಡಾಖ್‌ನ ದೇಮ್ಚೋಕ್ ಮತ್ತು ಡೆಪ್ಸಾಂಗ್ ಬಯಲು ಪ್ರದೇಶಗಳಲ್ಲಿನ ಎರಡು ಘರ್ಷಣಾ ಸ್ಥಳಗಳಲ್ಲಿ ಸೈನ್ಯ ಡಿಸ್‌ಎಂಗೇಜ್‌ಮೆಂಟ್ ಅನ್ನು ಪ್ರಾರಂಭಿಸಿದವು.

ಚಿತ್ರ ಕೃಪೆ: ಭಾರತೀಯ ಸೇನೆ

ಜೂನ್ 2020 ರಲ್ಲಿ ಗಾಲ್ವಾನ್ ಕಣಿವೆಯಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಯ ನಂತರ ಭಾರತ ಮತ್ತು ಚೀನಾ ನಡುವಿನ ಸಂಬಂಧಗಳು ಗಣನೀಯವಾಗಿ ಹದಗೆಟ್ಟಿತ್ತು. ಇದೀಗ ಪರಿಸ್ತಿತಿ ತಿಳಿಗೊಂಡಿದೆ. ಅಕ್ಟೋಬರ್ 21 ರಂದು, ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ನವದೆಹಲಿಯಲ್ಲಿ 2020 ದಿಂದ ಹೊರಹೊಮ್ಮಿದ ಸಮಸ್ಯೆಗಳನ್ನು ಪರಿಹರಿಸಲು ಮಹತ್ವದ ಮಾತುಕತೆ ನಡೆಸಿ ಪರಿಹಾರ ಸೂಚಿಸಿತು. 

ಚಿತ್ರ ಕೃಪೆ: ಭಾರತೀಯ ಸೇನೆ

ಎರಡು ದಿನಗಳ ನಂತರ, ಅಕ್ಟೋಬರ್ 23 ರಂದು, ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ರಷ್ಯಾದ ಕಜಾನ್‌ನಲ್ಲಿ ನಡೆದ BRICS ಶೃಂಗಸಭೆಯಲ್ಲಿ ದ್ವಿಪಕ್ಷೀಯ ಸಭೆಯ ಸಂದರ್ಭದಲ್ಲಿ ಪೂರ್ವ ಲಡಾಖ್‌ನಲ್ಲಿನ LAC ಉದ್ದಕ್ಕೂ ಡಿಸ್‌ಎಂಗೇಜ್‌ಮೆಂಟ್ ಮತ್ತು ಗಸ್ತು ಒಪ್ಪಂದವನ್ನು ಅನುಮೋದಿಸಿದರು.

ಚಿತ್ರ ಕೃಪೆ: ಭಾರತೀಯ ಸೇನೆ

ಎರಡೂ ಕಡೆಯ ಸ್ಥಳೀಯ ಕಮಾಂಡರ್‌ಗಳು LAC ಉದ್ದಕ್ಕೂ ಶಾಂತಿಯುತ ಮತ್ತು ಸ್ಥಿರ ವಾತಾವರಣವನ್ನು ಖಚಿತಪಡಿಸಿಕೊಳ್ಳಲು ಚರ್ಚೆಗಳನ್ನು ಮುಂದುವರಿಸುವ ನಿರೀಕ್ಷೆಯಿದೆ.

Latest Videos

click me!