Chirag Paswan Warning For BJP: ಬಿಹಾರದಲ್ಲಿ ಬಿಜೆಪಿ-ಜೆಡಿಯು ಮೈತ್ರಿ ಸರ್ಕಾರದ ಕ್ಷೇತ್ರ ಹಂಚಿಕೆ ಕಗ್ಗಂಟಾಗಿದೆ. ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ತಮ್ಮ ಲೋಕ ಜನಶಕ್ತಿ ಪಕ್ಷಕ್ಕೆ ಹೆಚ್ಚಿನ ಹಾಗೂ ಗುಣಮಟ್ಟದ ಕ್ಷೇತ್ರಗಳನ್ನು ಕೇಳುತ್ತಿದ್ದಾರೆ
ಇಡೀ ದೇಶದ ಕಣ್ಣು ಬಿಹಾರ ಚುನಾವಣೆಯತ್ತ ನೆಟ್ಟಿದೆ. ಚುನಾವಣೆ ದಿನಾಂಕ ಪ್ರಕಟಕ್ಕೂ ಮೊದಲೇ ಎಲ್ಲಾ ರಾಜಕೀಯ ಪಕ್ಷಗಳು ಪ್ರಚಾರದಲ್ಲಿ ತೊಡಗಿಕೊಂಡಿದ್ದು, ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿಕೊಂಡಿವೆ. ಸದ್ಯ ಬಿಹಾರದಲ್ಲಿ ಬಿಜೆಪಿ-ಜೆಡಿಯು ಮೈತ್ರಿ ಸರ್ಕಾರವಿದೆ. ಇನ್ನು ಬಿಹಾರದಲ್ಲಿ ತನ್ನದೇ ಸಾಮರ್ಥ್ಯ ಹೊಂದಿರುವ ಲೋಕ್ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ಅಧ್ಯಕ್ಷರಾಗಿರು ಚಿರಾಗ್ ಪಾಸ್ವಾನ್ ಕೇಂದ್ರದ ಮೋದಿ ಸಂಪುಟದಲ್ಲಿದ್ದಾರೆ. ಹಾಗಾಗಿ ಬಿಹಾರ ಚುನಾವಣೆಯಲ್ಲಿ ಬಿಜೆಪಿ ಈ ಎರಡು ಪಕ್ಷಗಳೊಂದಿಗೆ ಕ್ಷೇತ್ರಗಳನ್ನು ಹಂಚಿಕೊಳ್ಳಬೇಕಾಗುತ್ತದೆ.
25
ಪಕ್ಷದ ಶಕ್ತಿ ಪ್ರದರ್ಶನ
ಇದೀಗ ಕೇಂದ್ರ ಸಚಿವರಾಗಿರುವ ಚಿರಾಗ್ ಪಾಸ್ವಾನ್, ತಮ್ಮ ಪಕ್ಷದ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಈ ಮೂಲಕ ಕಡಿಮೆ ಕ್ಷೇತ್ರಗಳಿಗೆ ತಮ್ಮ ಒಪ್ಪಿಗೆ ಇಲ್ಲ ಎಂಬ ಸಂದೇಶವನ್ನು ಸೂಕ್ಷ್ಮವಾಗಿ ಬಿಜೆಪಿಗೆ ರವಾನಿಸುವ ಕೆಲಸವನ್ನು ಚಿರಾಗ್ ಪಾಸ್ವಾನ್ ಮಾಡಿದ್ದಾರೆ. ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ 20 ರಿಂದ 25 ಸಾವಿರ ಮತಗಳನ್ನು ನಮ್ಮ ಪಕ್ಷ ಹೊಂದಿದೆ ಎಂದಿದ್ದಾರೆ.
35
ನನಗೆ ಕ್ವಾಲಿಟಿ ಕ್ಷೇತ್ರಗಳು ಬೇಕು
ಖಾಸಗಿ ವಾಹಿನಿಗೆ ಸಂದರ್ಶನ ನೀಡಿರುವ ಚಿರಾಗ್ ಪಾಸ್ವಾನ್, ಬಿಹಾರದ ಬಿಜೆಪಿ-ಜೆಡಿಯು ಮೈತ್ರಿ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ. ನನಗೆ ಕ್ವಾಲಿಟಿ ಕ್ಷೇತ್ರಗಳು ಬೇಕು, ಇದಕ್ಕಾಗಿ ನಾನು ಕಠಿಣ ಹೋರಾಟ ಮಾಡಲು ಸಿದ್ಧವಾಗಿದ್ದೇನೆ. ಕಡಿಮೆ ಅಥವಾ ಅವರು ಸೂಚಿಸಿದ ಕ್ಷೇತ್ರದಲ್ಲಿ ಸ್ಪರ್ಧೆಗೆ ನಮ್ಮ ಪಕ್ಷ ಒಪ್ಪಲ್ಲ ಎಂದಿದ್ದಾರೆ. ಚಿರಾಗ್ ಪಾಸ್ವಾನ್ ಸುಮಾರು 40 ಕ್ಷೇತ್ರಗಳನ್ನು ಕೇಳುತ್ತಿದ್ದಾರೆ ಎನ್ನಲಾಗಿದೆ. ಆದ್ರೆ ಈ ಸಂಖ್ಯೆ ಬಗ್ಗೆ ಚಿರಾಗ್ ಪಾಸ್ವಾನ್ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.
ಸಂದರ್ಶನದಲ್ಲಿ ಮುಂದುವರಿದು ಮಾತನಾಡಿರುವ ಚಿರಾಗ್ ಪಾಸ್ವಾನ್, ನಾನು ಅಡುಗೆಯಲ್ಲಿನ ಉಪ್ಪು ಇದ್ದಂತೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಲೋಕ್ ಜನಶಕ್ತಿ ಪಕ್ಷ ಕನಿಷ್ಠ 20-25 ಸಾವಿರ ನಿರ್ಣಾಯಕ ಮತಗಳನ್ನು ಹೊಂದಿದೆ ಎಂದು ಹೇಳಿದ್ದಾರೆ. ಈ ಮೂಲಕ ಬಿಜೆಪಿ ಮತ್ತು ಜೆಡಿಯುಗೆ ಗೆಲ್ಲಲು ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಬೆಂಬಲ ಬೇಕಾಗುತ್ತೆ ಎಂಬ ಮಹತ್ವದ ಸಂದೇಶ ರವಾನಿಸಿದ್ದಾರೆ.
55
ಮೂರು ಪಕ್ಷಗಳ ನಡುವೆ ಕ್ಷೇತ್ರ ಹಂಚಿಕೆ
ಕೆಲ ಮಾಧ್ಯಮಗಳ ವರದಿ ಪ್ರಕಾರ, ಚಿರಾಗ್ ಪಾಸ್ವಾನ್ ಪಕ್ಷಕ್ಕೆ ಬಿಜೆಪಿ ಕೇವಲ 25 ಕ್ಷೇತ್ರಗಳನ್ನು ನೀಡಲು ಮುಂದಾಗಿದೆಯಂತೆ. ಆದ್ರೆ ಪಾಸ್ವಾನ್ ಮಾತ್ರ ಈ ಹಂಚಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ ಸಿಎಂ ನಿತೀಶ್ ಕುಮಾರ್ ಹೆಚ್ಚಿನ ಪಾಲು ಜೆಡಿಯು ಪಕ್ಷದ್ದಾಗಿರಬೇಕು ಎಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಹಾಗಾಗಿ ಮೂರು ಪಕ್ಷಗಳ ನಡುವೆ ಕ್ಷೇತ್ರ ಹಂಚಿಕೆ ಕಗ್ಗಂಟಾಗಿ ಪರಿಣಮಿಸಿದೆ.